ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೊತ್ತಿದ್ದರಷ್ಟೇ ಸಾಲದು!

Last Updated 3 ಜುಲೈ 2018, 20:27 IST
ಅಕ್ಷರ ಗಾತ್ರ

ನಮಗೆ ಬಹಳಷ್ಟು ವಿಷಯಗಳು ಗೊತ್ತಿರುತ್ತವೆ. ಗೊತ್ತಿದ್ದ ಮಾತ್ರಕ್ಕೆ ಅವುಗಳಿಂದ ನಮಗೆ ಪ್ರಯೋಜನವಾಗಿದೆ ಎಂದೇನಿಲ್ಲ! ನಮ್ಮ ಬದುಕಿನ ಸಂತೋಷಕ್ಕೆ ಪ್ರಯೋಜನವಾಗದಿರುವ ವಿಷಯಗಳನ್ನು ತಿಳಿದುಕೊಂಡಿದ್ದರೂ ಏನು ಪ್ರಯೋಜನ, ಅಲ್ಲವೆ?

ನಮಗೆ ಪ್ರತಿದಿನ ಬೆಳಿಗ್ಗೆ ಅರುಣೋದಯಕ್ಕೆ ಏಳಬೇಕು ಎನ್ನುವುದು ಗೊತ್ತಿದೆ. ಆದರೆ ಏನೇನೋ ಕಾರಣಗಳಿಂದ ಎಚ್ಚರಾಗುವುದು ತಡವಾಗಿಬಿಡುತ್ತದೆ. ಅಲ್ಲಿಂದಲೇ ಮನಸ್ಸಿನಲ್ಲಿ ಒಂದಿಷ್ಟು ಕಿರಿಕಿರಿಯಾಗಲಿಕ್ಕೆ ಶುರುವಾಗಿಬಿಟ್ಟಿರುತ್ತದೆ. ಬೆಳಿಗ್ಗೆ ಬೇಗ ಏಳಬೇಕು, ಎದ್ದ ನಂತರ ನೀರು ಕುಡಿಯಬೇಕು, ವಾಕಿಂಗ್‌ ಹೋಗಬೇಕು, ವ್ಯಾಯಾಮ ಮಾಡಬೇಕು, ಸ್ನಾನ ಮಾಡಬೇಕು, ಪೂಜೆ ಮಾಡಬೇಕು, ಉಪಹಾರವನ್ನು ಸೇವಿಸಬೇಕು, ಪ್ರತಿದಿನ ತೊಳೆದು, ಸ್ವಚ್ಛವಾದ ಬಟ್ಟೆಯನ್ನು ಧರಿಸಬೇಕು, ಪ್ರತಿದಿನವೂ ಶೇವ್ ಮಾಡಬೇಕು, ಯಾವುದನ್ನೂ ಚಟವಾಗಿ ಅಂಟಿಸಿಕೊಳ್ಳಬಾರದ,. ಸಾಧ್ಯವಾದಷ್ಟೂ ಮನೆಯಲ್ಲಿ ಮಾಡಿದ ಊಟ ತಿಂಡಿಗಳನ್ನು ಸೇವಿಸಬೇಕು, ರಾತ್ರಿ ಬೇಗನೆ ಮಲಗಬೇಕು, ಬೇಗ ಮಲಗಿ ಬೇಗ ಏಳಬೇಕು, ಕೋಪವನ್ನು ಮಾಡಿಕೊಳ್ಳಬಾರದ, ದ್ವೇಷವನ್ನು ಸಾಧಿಸಬಾರದು, ...

ಹೀಗೇ ಪಟ್ಟಿ ಮಾಡುತ್ತ ಹೋಗಬಹುದು. ಇವೆಲ್ಲವೂ ನಮಗೆಲ್ಲರಿಗೂ ಗೊತ್ತಿರುವ ವಿಷಯಗಳೇ ಆಗಿವೆ. ಇವುಗಳಿಂದ ನಮ್ಮ ದೈಹಿಕ, ಮಾನಸಿಕ, ಸಾಮಾಜಿಕ ಆರೋಗ್ಯ ಸಿದ್ಧಿಸುತ್ತದೆ. ಎಲ್ಲರಿಗೂ ಎಲ್ಲರೂ ಒಳ್ಳೆಯವರಾಗಿ ಎಲ್ಲರೂ ಆರಾಮಗಿ ಬದುಕಬಹುದಾಗಿದೆ.

ಆದರೂ ನಮ್ಮ ಇಂದಿನ ನಮ್ಮ ಬದುಕು ಆರೋಗ್ಯದಿಂದ ಇಲ್ಲ. ನಮ್ಮ ಮನಸ್ಸಿಗೆ ಸುಖ, ಶಾಂತಿ, ನೆಮ್ಮದಿ ಇಲ್ಲ. ಎಷ್ಟೇ ಗಳಿಸಿದರೂ ಇನ್ನೂ ಬೇಕೆನ್ನುವ ಹಪಾಹಪಿ ತಣಿಯುವುದಿಲ್ಲ. ವಯಸ್ಸು ಹೆಚ್ಚಿದಂತೆಯೇ ಸೈಟುಗಳ ಸಂಖ್ಯೆಯನ್ನೂ ಹೆಚ್ಚಿಸಿಕೊಳ್ಳುವ ಆಸೆ. ಯಾರೊಂದಿಗೋ ಸ್ಪರ್ಧೆಗಿಳಿದವರಂತೆ, ಯಾರಿಗಿಂತಲೋ ಹೆಚ್ಚು ಗಳಿಸಬೇಕು ಎಂತಲೋ, ಅವರಿಗಿಂತ ಮುಂದಿರಬೇಕೆಂತಲೋ ಅವಸರಿಸುತ್ತಿರುತ್ತಾರೆ. ಹೆಚ್ಚೆಚ್ಚು ಹಣ ಗಳಿಸಬೇಕೆಂದು ಹೆಚ್ಚೆಚ್ಚು ಕೆಲಸ ಮಾಡುತ್ತಾರೆ. ಆರೋಗ್ಯವನ್ನು ಅಲಕ್ಷಿಸುತ್ತಾ, ಹಗಲಿರುಳೆನ್ನದೇ ದುಡಿಯುತ್ತಾರೆ. ಹೀಗೆ ದುಡಿಯುತ್ತಾ ದುಡಿಯುತ್ತಾ ಆರೋಗ್ಯವನ್ನು ಕಳೆದುಕೊಳ್ಳುತ್ತಾರೆ. ಕೊನೆಗೆ ಗಳಿಸಿದ ಹಣವನ್ನು ಕಳೆಯುತ್ತಾ ಆರೋಗ್ಯವನ್ನು ಪಡೆದುಕೊಳ್ಳಲಿಕ್ಕಾಗಿ ಆಸ್ಪತ್ರೆಗಳಿಗೆ ಅಲೆದಾಡುತ್ತಾರೆ. ಇದು ಆಧುನಿಕ ಜಗತ್ತಿನ ಪರಿಸ್ಥಿತಿಯಾಗಿದೆ. ಇಲ್ಲಿ ಯಾರಿಗೂ ಯಾವುದೇ ವಿಷಯದ ಬಗ್ಗೆ ಗೊತ್ತಿರಲಿಲ್ಲ ಎನ್ನುವಂತಿಲ್ಲ. ಎಲ್ಲರಿಗೂ ಬಹಳಷ್ಟು ವಿಷಯಗಳು ಗೊತ್ತಿದ್ದೇ ಇವೆ.

ಆದರೂ ಇಲ್ಲಿ ಎಲ್ಲರೂ ಏನೇನೂ ಗೊತ್ತಿಲ್ಲದವರಂತೆ ಬದುಕುತ್ತಿದ್ದಾರೆ. ಗೊತ್ತಿರುವುದನ್ನು ರೂಢಿಸಿಕೊಳ್ಳಲಾಗದೇ ಒದ್ದಾಡುತ್ತಿದ್ದಾರೆ. ಬದುಕಿನಲ್ಲಿ ಅಶಾಂತರಾಗಿದ್ದಾರೆ. ಇಂಥ ಸಾಲಿನಲ್ಲಿ ನಾವೂ ಇದ್ದೇವೆಯೆ - ಎನ್ನುವುದನ್ನು ನೋಡಿಕೊಳ್ಳಬೇಕು. ನಮಗೆ ನಿಜಕ್ಕೂ ಏನು ಬೇಕು, ಎಷ್ಟು ಬೇಕು, ಏಕೆ ಬೇಕು – ಎನ್ನುವುದನ್ನು ಆಲೋಚಿಸಲಿಕ್ಕೆ ಒಂದಿಷ್ಟು ಸಮಯವನ್ನು ಕೊಡಬೇಕು. ನಮಗೆ ಗೊತ್ತಿರುವುದರಲ್ಲಿ ನಮ್ಮ ಬದುಕನ್ನು ಸುಂದರವಾಗಿ ಬದುಕಲಿಕ್ಕೆ ಎಷ್ಟು ಸಹಾಯವಾಗಿದೆ ಎನ್ನುವುದನ್ನು ಅವಲೋಕಿಸಬೇಕು. ಗೊತ್ತಿರುವುದು ಬೇರೆ. ಗೊತ್ತಿರುವಂತೆಯೇ ನಡೆಯುವುದು ಬೇರೆ. ನಮಗೆ ಗೊತ್ತಿರುವಂತೆ ನಡೆಯಲಾಗದೇ, ನಾವು ನರಳುವ ಪರಿಸ್ಥಿತಿ ಬಂದಾಗ, ನಮ್ಮನ್ನು ನಾವೇ ಹಳಿದುಕೊಳ್ಳುತ್ತೇವೆ.

ವಿವೇಕಿಗಳು ‘Knowing is knowing. Doing is doing’ ಎಂದಿದ್ದಾರೆ. ನಮಗೆ ಏನನ್ನು ಮಾಡಬೇಕು ಎಂದು ಅನ್ನಿಸುತ್ತದೆಯೋ, ಅದನ್ನು ಮಾಡುವುದರಿಂದ ನಮಗೆಷ್ಟು ಪ್ರಯೋಜನವಾಗುತ್ತದೆ ಎನ್ನುವುದನ್ನು ಆಲೋಚಿಸಬೇಕು; ಆಮೇಲಷ್ಟೆ ಆ ಕೆಲಸವನ್ನು ಮಾಡಬೇಕು. ಮನಸ್ಸಿಗೆ ಹೊಸ ಹೊಸ ಆಲೋಚನೆಗಳು ಬರುತ್ತಲೇ ಇರುತ್ತವೆ. ನಾವು ಮಾಡಲಿಕ್ಕೆ ಪ್ರಾರಂಭಿಸಿರುವ ಕೆಲಸವನ್ನು ಯಶಸ್ವಿಯಾಗಿ ಮಾಡುವುದಕ್ಕೆ ನಮ್ಮ ಸಮಯ ಮತ್ತು ಶ್ರಮವನ್ನು ಉಪಯೋಗಿಸಬೇಕು. ಆ ಕೆಲಸದಲ್ಲಿ ಯಶಸ್ಸನ್ನು ಗಳಿಸಿದ ನಂತರ ಇನ್ನೊಂದು ಅಲೋಚನೆಯನ್ನು ಕಾರ್ಯಗತ ಮಾಡಲಿಕ್ಕೆ ಮುನ್ನುಗ್ಗಬಹುದು. ಕೆಲವರು ಹೊಸ ಹೊಸ ಆಲೋಚನೆ, ಐಡಿಯಾಗಳನ್ನು ಹೇಳುತ್ತಲೇ ಇರುತ್ತಾರೆ. ಆದರೆ ಅವರು ಯಾವುದೇ ಕೆಲಸವನ್ನಾದರೂ ಪ್ರಾರಂಭಿಸಿರುವದೇ ಇಲ್ಲ. ಅವರ ತಲೆಯಲ್ಲಿ ವಿಚಿತ್ರವಾದ ಐಡಿಯಾಗಳು ಬರುತ್ತ ಇರುತ್ತವೆಯೇ ಹೊರತೂ ಯಾವುದೇ ಆಲೋಚನೆಯೂ ಕೂಡ ಕಾರ್ಯಗತವಾಗುವುದೇ ಇಲ್ಲ! ಆದರೂ ಅವರು ಕನಸು ಕಾಣುತ್ತಲೇ ಇರುತ್ತಾರೆ. ಕಾಲಕ್ರಮೇಣ ಅವರು ಮಾನಸಿಕವಾಗಿ ಅವರು ಕುಗ್ಗುತ್ತಾರೆ. ಕೀಳರಿಮೆ ಬೆಳೆಯುತ್ತದೆ. ಭವಿಷ್ಯತ್ತಿನ ಭಯ ಕಾಡತೊಡಗುತ್ತದೆ. ಮನಸ್ಸು ದ್ವಂದ್ವದ ಗೂಡಾಗುತ್ತದೆ. ವಿನಾಕಾರಣ ಕೋಪ ಬರುತ್ತದೆ. ಹೀಗೇಯೇ ದಿನಗಳು ಉರುಳುತ್ತವೆ..

ನಮಗೆ ಗೊತ್ತಿರುವುದನ್ನು ಅನುಷ್ಠಾನ ಮಾಡಲಿಕ್ಕೆ ಏನೇನು ಸಮಸ್ಯೆ ಬರುತ್ತಿವೆ ಎನ್ನುವುದನ್ನು ಮೊದಲು ಗುರುತಿಸಿಕೊಳ್ಳಬೇಕು. ಅವುಗಳಿಂದ ಹೊರಗೆ ಬರಲಿಕ್ಕೆ ಪ್ರಾಮಾಣಿಕವಾಗಿ ಪ್ರಯತ್ನಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT