ಭಾನುವಾರ, ಆಗಸ್ಟ್ 1, 2021
27 °C

ಶರೀರ ಬೆಚ್ಚಗಿಟ್ಟುಕೊಳ್ಳುವುದು ಹೇಗೆ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶುಂಠಿ ಪುಡಿ

ಮಳೆಗಾಲ ಆರಂಭವಾಗಿದೆ. ಹೊತ್ತು ಗೊತ್ತಿಲ್ಲದೇ ಮಳೆ ಬರುತ್ತಿದೆ. ಮಳೆ ಬಂದಾಗ ಶೀತದ ವಾತಾವರಣ ನಿರ್ಮಾಣವಾಗುತ್ತದೆ. ಇದರಿಂದ ದೇಹ ಥಂಡಿಯಾಗಿ, ಕೆಲವರಿಗೆ ಶೀತ, ನೆಗಡಿ ಬರಬಹುದು.

ಇಂತಹ ಕಾಲದಲ್ಲಿ ದೇಹವನ್ನು ಸದಾ ಬೆಚ್ಚಗೆ ಇಟ್ಟುಕೊಳ್ಳಬೇಕು. ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಬೇಕು. ಹಾಗಾದರೆ, ದೇಹವನ್ನು ಬೆಚ್ಚಗೆ ಇಟ್ಟುಕೊಳ್ಳಲು ಏನು ಮಾಡಬೇಕು? ಇದಕ್ಕೆ ಆಯುರ್ವೇದ ವೈದ್ಯೆ ಡಾ. ವಸುಂಧರಾ ಭೂಪತಿ ಅವರು ಒಂದಷ್ಟು ಟಿಪ್ಸ್ ಕೊಟ್ಟಿದ್ದಾರೆ.   

ಶುಂಠಿ, ಕಾಳುಮೆಣಸು ಹೆಚ್ಚು ಬಳಸಿ:

*ನಿಮ್ಮ ನಿತ್ಯದ ಆಹಾರದಲ್ಲಿ ಎಲ್ಲೆಲ್ಲಿ ಶುಂಠಿ ಬಳಸಲು ಸಾಧ್ಯವೋ ಅಲ್ಲೆಲ್ಲ ಉಪಯೋಗಿಸಿ.  

*ಒಂದು ಲೀಟರ್‌ ನೀರಿಗೆ, ಒಂದು ಚೂರನ್ನು (ಗೆಡ್ಡೆಯಲ್ಲಿ ತೆಳುವಾದ ಒಂದು ಭಾಗ) ಜಜ್ಜಿ ಹಾಕಿ, ಚೆನ್ನಾಗಿ ಕುದಿಸಿ. ಶುಂಠಿ ಮಿಶ್ರಿತ ನೀರನ್ನು ಆಗಾಗ್ಗೆ ಕುಡಿಯುತ್ತಿರಿ.

ಕಷಾಯಗಳನ್ನು ಮಾಡಿಕೊಳ್ಳಿ  

*ಶುಂಠಿ, ಧನಿಯಾ, ಜೀರಿಗೆ, ಜೇಷ್ಟಮಧು ಎಲ್ಲವೂ ತಲಾ 20 ಗ್ರಾಂ, ಕಾಳುಮೆಣಸು 10 ಗ್ರಾಂ – ಎಲ್ಲವನ್ನೂ ಪುಡಿ ಮಾಡಿಟ್ಟುಕೊಳ್ಳಿ. ಒಂದು ಲೋಟ ನೀರಿಗೆ ಅರ್ಧ ಚಮಚದಂತೆ ಈ ಪುಡಿಯನ್ನು ಬೆರೆಸಿ. ನೀರನ್ನು ಕುದಿಸಿ, ತಣ್ಣಗಾಗಿಸಿ. ನಂತರ ಅದಕ್ಕೆ ಹಾಲು, ಬೆಲ್ಲ ಸೇರಿಸಿ ಕುಡಿಯಬಹುದು.  

*ಶುಂಠಿ ಮತ್ತು ಬೆಲ್ಲವನ್ನು ಕುಟ್ಟಿ ಪುಡಿ ಮಾಡಿಟ್ಟುಕೊಳ್ಳಿ. ಒಂದು ಚಿಟಿಕೆ ಪುಡಿಯನ್ನು ನಿತ್ಯ ಎರಡು ಸಾರಿ ತಿನ್ನಬಹುದು.  

*ಶುಂಠಿ ಬಳಸಿ ಕಾಫಿ, ಟೀ ಮಾಡಿ ಕುಡಿಯಿರಿ.

*ಶುಂಠಿ ಹುರಿದು, ಅದಕ್ಕೆ ಬೆಲ್ಲ ಮತ್ತು ಹುಣಸೆಹಣ್ಣು ಹಾಕಿ ಚಟ್ನಿ ತಯಾರಿಸಿ. ಮೊಸರನ್ನ, ಮಜ್ಜಿಗೆ ಅನ್ನದ ಜತೆ ಈ ಚಟ್ನಿಯನ್ನು ಸೇರಿಸಿ ತಿನ್ನಬಹುದು.

*ಮೊಸರಿಂದ ಮಾಡುವ ತಂಬುಳಿಗಳಿಗೆ, ಮಜ್ಜಿಗೆ ಹುಳಿಗೂ ಶುಂಠಿ ಸೇರಿಸಿದರೆ ದೇಹಕ್ಕೆ ಥಂಡಿಯಾಗುವುದಿಲ್ಲ.

ಸೂಪ್‌, ಚಟ್ನಿಯೂ ಇರಲಿ

*ಈ ಶೀತ ಕಾಲದಲ್ಲಿ ಚಟ್ನಿಗೆ ಹಸಿರು ಮೆಣಸಿನಕಾಯಿ, ಒಣಮೆಣಸಿನಕಾಯಿ ಬಳಸುವ ಬದಲಿಗೆ ಕಾಳುಮೆಣಸನ್ನು ಬಳಸಬಹುದು.

*ಬೆಳ್ಳುಳ್ಳಿಯನ್ನು ಎಣ್ಣೆ ಹಾಕದೇ ಹುರಿದು, ಸಿಪ್ಪೆ ಬಿಡಿಸಿ ತಿನ್ನಬಹುದು. ಇದರಿಂದ ಶೀತ ಬೇಗ ನಿಯಂತ್ರಣಕ್ಕೆ ಬರುತ್ತದೆ. ದೇಹವನ್ನು ಬಿಸಿಯಾಗಿಡುತ್ತದೆ.

*ಯಾವುದೇ ಸೂಪ್‌ ತಯಾರಿಸಿದರೂ, ಅದಕ್ಕೆ ಮೆಣಸಿನಪುಡಿಯನ್ನು ಬಳಸಿ.

*ನಿತ್ಯ ಹಾಲಿಗೆ ಒಂದು ಚಿಟಿಕೆ ಅರಿಶಿಣ ಹಾಕಿಕೊಂಡು ಕುಡಿಯಿರಿ.

*ನುಗ್ಗೆ ಸೊಪ್ಪನ್ನು ಪಲ್ಯ ಮಾಡಿಕೊಂಡು ತಿನ್ನಬಹುದು.

*ಒಂದು ಹಿಡಿ ನುಗ್ಗೆ ಸೊಪ್ಪನ್ನು ಬಿಸಿನೀರಿನಲ್ಲಿ ಹಾಕಿ, ಸಣ್ಣಗೆ ಉರಿ ಮಾಡಿ ಕುದಿಸಿ, ಶೋಧಿಸಿ ಕುಡಿಯಬಹುದು. ನುಗ್ಗೆ ಸೊಪ್ಪಿನಲ್ಲಿ ಹೆಚ್ಚು ಕ್ಯಾಲ್ಸಿಯಂ, ಕಬ್ಬಿಣದ ಅಂಶವಿದೆ. ಇದು ದೇಹದ ಉಷ್ಣತೆ ಹೆಚ್ಚಿಸುವ ಜತೆಗೆ, ರೋಗ ನಿರೋಧಕ ಶಕ್ತಿಯನ್ನೂ ವೃದ್ಧಿಸುತ್ತದೆ.

ನೆನಪಿರಲಿ; ಉಷ್ಣದೇಹ ಪ್ರಕೃತಿ ಇರುವವರು ದಿನಕ್ಕೆ ಒಂದು ಸಾರಿ ಶುಂಠಿ ಬೆರೆಸಿದ ಆಹಾರ, ಪಾನೀಯಗಳನ್ನು ಸೇವಿಸಿದರೆ ಸಾಕು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು