ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Explainer: ಸೋಂಕಿನ ವಿರುದ್ಧದ ಲಸಿಕೆಗಳು ಮಕ್ಕಳ ಮೇಲೆ ಹೇಗೆ ಪರಿಣಾಮ ಬೀರುತ್ತವೆ?

Last Updated 10 ಜೂನ್ 2021, 11:09 IST
ಅಕ್ಷರ ಗಾತ್ರ

ಮುಂಬೈ: ಕೊರೊನಾ ಸೋಂಕಿನ ಮೊದಲ ಮತ್ತು ಎರಡನೇ ಅಲೆ ರಾಷ್ಟ್ರದಾದ್ಯಂತ ಅಪಾರ ಪ್ರಮಾಣದ ಜೀವ ಹಾನಿಗೆ ಕಾರಣವಾಗಿದೆ. ಕೋವಿಡ್ ಚಿಕಿತ್ಸೆ ಇದುವರೆಗೆ ಯಾವುದೇ ಮಾನ್ಯತೆ ಹೊಂದಿದ ಔಷಧಿ ಲಭ್ಯವಿರದಿದ್ದರೂ ಲಸಿಕೆಗಳ ಅಭಿವೃದ್ಧಿಯಿಂದ ಕೊಂಚ ನಿರಾಳತೆ ಸಿಕ್ಕಿದೆ. ಆದರೆ ಮೂರನೇ ಕೋವಿಡ್‌ ಅಲೆಯ ಮುನ್ಸೂಚನೆ ಈಗಾಗಲೇ ಲಭ್ಯವಾಗಿದ್ದು ಮಹಾಮಾರಿಯ ಕುರಿತು ಜನತೆಯಲ್ಲಿ ಭೀತಿ ಹೆಚ್ಚಾಗಿದೆ. ಮಕ್ಕಳ ಮೇಲೆ ಮೂರನೇ ಅಲೆ ಹೆಚ್ಚು ಪರಿಣಾಮ ಬೀರುವ ಸಾಧ್ಯತೆ ಇದೆ ಎಂಬುದು ಪೋಷಕರ ಆತಂಕ ಹೆಚ್ಚಲು ಕಾರಣವಾಗಿದೆ.

ಈಗಾಗಲೇ ಕೇಂದ್ರ ಸರ್ಕಾರ 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರಿಗೂ ಉಚಿತ ಲಸಿಕೆ ಘೋಷಣೆ ಮಾಡಿದೆ. ಆದರೆ ಮಕ್ಕಳಿಗೆ ಕೋವಿಡ್‌ ಲಸಿಕೆ ನೀಡುವ ಕುರಿತಾಗಿ ಇನ್ನೂ ಯಾವುದೇ ಅಂತಿಮ ನಿರ್ಧಾರ ತೆಗೆದುಕೊಂಡಿಲ್ಲ.

ರಾಷ್ಟ್ರದಲ್ಲಿ ಮೂರನೇ ಅಲೆ ಯಾವಾಗ ಅಪ್ಪಳಿಸುತ್ತದೆ ಎಂಬುದಕ್ಕೆ ಇದುವರೆಗೆ ಯಾವುದೇ ನಿಖರತೆ ಸಿಕ್ಕಿಲ್ಲ. ಆದರೆ ವೈದ್ಯರು, ಆರೋಗ್ಯ ತಜ್ಞರು ಮಕ್ಕಳನ್ನು ಮನೆಯಲ್ಲಿ ಅತ್ಯಂತ ಸುರಕ್ಷಿತವಾಗಿ ನೋಡಿಕೊಳ್ಳಿ ಎಂಬ ಸಲಹೆಗಳನ್ನು ನೀಡಿದ್ದಾರೆ. ಇದರ ಬೆನ್ನಲ್ಲೇ ಸರ್ಕಾರಗಳು 10ನೇ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಗಳನ್ನು ರದ್ದು ಪಡಿಸಿದೆ.

ಜ್ವರದ ವಿರುದ್ಧ ಲಸಿಕೆ ಹಾಕಿಸಿಕೊಳ್ಳುವುದರಿಂದ ಮಕ್ಕಳು ಕೊರೊನಾ ಮೂರನೇ ಅಲೆ ವಿರುದ್ಧ ಪರಿಣಾಮಕಾರಿಯಾಗಿ ಹೋರಾಡಬಹುದು ಎಂದು ಮುಂಬೈನ ಮುಲುಂದ್‌ನಲ್ಲಿರುವಫೋರ್ಟಿಸ್‌ ಆಸ್ಪತ್ರೆಯ ಮಕ್ಕಳ ವೈದ್ಯಕೀಯ ವಿಭಾಗದ ಹಿರಿಯ ಸಲಹೆಗಾರ ಡಾ. ಜೆಸಾಲ್‌ ಸೇತ್‌ ವಿಶ್ವಾಸದ ಮಾತುಗಳನ್ನಾಡಿದ್ದಾರೆ.

ಇತ್ತೀಚಿನ ಅಧ್ಯಯನದ ಪ್ರಕಾರ ಅಮೆರಿಕದ ಮಿಚಿಗನ್‌ ಮತ್ತು ಮಿಸೌರಿ ಪ್ರದೇಶಗಳಲ್ಲಿ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ನೀಡಲಾದ ಲಸಿಕೆಯನ್ನು ಹಾಕಿಸಿಕೊಂಡ ಮಕ್ಕಳಲ್ಲಿ ಕೋವಿಡ್‌ ಸೋಂಕಿನ ವಿರುದ್ಧ ಪರಿಣಾಮಕಾರಿಯಾಗಿ ಹೋರಾಡುವ ಶಕ್ತಿ ಇರುವುದು ಕಂಡುಬಂದಿದೆ. 2019-20ರ ಅವಧಿಯಲ್ಲಿ, ಕೋವಿಡ್‌ನ ಮೊದಲ ಅಲೆ ವ್ಯಾಪಿಸಿದ್ದ ಸಂದರ್ಭ ಶೀತ ಮತ್ತು ಜ್ವರ ನಿಷ್ಕ್ರಿಯಗೊಳಿಸುವ 'ಇನ್‌ಆ್ಯಕ್ಟಿವೇಟೆಡ್‌ ಇನ್‌ಫ್ಲೂವೆಂಜಾ ವ್ಯಾಕ್ಸಿನ್‌' ಅನ್ನು ಪಡೆದಿದ್ದ ಮಕ್ಕಳ ಮೇಲೆ ಕೊರೊನಾ ಸೋಂಕು ಅಷ್ಟೇನು ಪರಿಣಾಮ ಬೀರದಿರುವುದು ಅಧ್ಯಯನದಲ್ಲಿ ಕಂಡುಬಂದಿದೆ. ಹೆಚ್ಚಿನದಾಗಿ ಸೋಂಕು ಮಕ್ಕಳ ಸ್ಥಿತಿ ಗಂಭೀರವಾಗದಂತೆ ರಕ್ಷಣೆ ನೀಡಿದೆ ಎಂದು ಡಾ. ಜೆಸಾಲ್‌ ಸೇತ್‌ ಹೇಳಿದ್ದಾರೆ.

ಮಕ್ಕಳಿಗೆ ಲಸಿಕೆ ನೀಡುವುದು ಸುರಕ್ಷಿತವೇ?
ಸಾರ್ಸ್‌-ಕೋವ್-2 ಮತ್ತು ಇನ್‌ಫ್ಲೂವೆಂಜಾ ಎರಡೂ ಒಂದೇ ಸಮನಾದ ಸಾಂಕ್ರಾಮಿಕ ರೋಗದ ಗುಣಲಕ್ಷಣಗಳನ್ನು ಹೊಂದಿವೆ. ಕೊರೊನಾ ಸೋಂಕು ಇರುವಾಗ ಹೆಚ್ಚುವರಿ ಇನ್‌ಫ್ಲೂವೆಂಜಾ ಸೋಂಕು ಸೇರಿ ಅವಳಿ ಸೋಂಕಾಗಿ (ಟ್ವಿನ್‌ಡೆಮಿಕ್‌) ಪರಿಣಾಮ ಬೀರುವ ಸಾಧ್ಯತೆ ಇದೆ. ಹಾಗಾಗಿ ಕೋವಿಡ್‌ 3ನೇ ಅಲೆಗೆ ಲಸಿಕೆಯ ಅಸ್ತ್ರ ಬಳಸಬಹುದು. ಸೋಂಕು ಹರಡುವುದನ್ನು, ಗಂಭೀರ ಸ್ಥಿತಿಗೆ ತಲುಪುವುದನ್ನು ತಪ್ಪಿಸಬಹುದು ಎಂದು ಜೆಸಾಲ್‌ ಸೇತ್‌ ವಿವರಿಸಿದ್ದಾರೆ.

ಮಕ್ಕಳಿಗೆ ಲಸಿಕೆ ನೀಡುವಾಗ ಎರಡು ಡೋಸ್‌ಗಳ ನಡುವೆ ನಾಲ್ಕು ವಾರಗಳ ಅಂತರ ಬೇಕು. ಇದರಿಂದ ಮಕ್ಕಳ ದೇಹದಲ್ಲಿ ರೋಗನಿರೋಧಕ ಶಕ್ತಿ ವೃದ್ಧಿಸಲು ಮತ್ತು ಸೋಂಕಿನ ವಿರುದ್ಧ ಹೋರಾಡುವ ಶಕ್ತಿಯನ್ನು ಕ್ರೋಢಿಕರಿಸಿಕೊಳ್ಳಲು ಸಹಾಯಕ ಎಂದು ಸೇತ್‌ ಸಲಹೆ ನೀಡಿದ್ದಾರೆ.

ಮುಖ್ಯವಾಗಿ ಗಮನಿಸ ಬೇಕಾದ ವಿಚಾರ, ಡಾ. ಸೇತ್‌ ಹೇಳಿರುವ ಶೀತ, ಜ್ವರದ ಲಸಿಕೆ ಮತ್ತು ಕೋವಿಡ್‌ ಲಸಿಕೆ ಬೇರೆ ಬೇರೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT