ಶನಿವಾರ, ಮೇ 30, 2020
27 °C

ಕೊರೊನಾ ಭಯ: ನಿಭಾಯಿಸುವುದು ಹೇಗೆ?

ಡಾ.ಬ್ರಹ್ಮಾನಂದ ನಾಯಕ Updated:

ಅಕ್ಷರ ಗಾತ್ರ : | |

Prajavani

ಕೊರೊನಾ ಸೋಂಕು ವೇಗವಾಗಿ ಹರಡುತ್ತಿರುವ ಇಂತಹ ಸಂದರ್ಭದಲ್ಲಿ ಜನರಲ್ಲಿ ಒಂದು ರೀತಿಯ ತೀವ್ರ ಆತಂಕ ಸೃಷ್ಟಿಯಾಗಿರುವುದು ಸಹಜವೇ. ಸೂಕ್ತವಾದ ಮುಂಜಾಗ್ರತೆ ಕೈಗೊಳ್ಳುವುದಕ್ಕೆ ಇಂತಹ ಆತಂಕ ಮುನ್ನೆಚ್ಚರಿಕೆ ಗಂಟೆಯಾದರೆ ಅದು ಒಳ್ಳೆಯದೇ. ಆದರೆ ಆತಂಕ ಎನ್ನುವುದು ಕೊರೊನಾ ಕುರಿತ ದಿಗಿಲಾ (ಪ್ಯಾನಿಕ್‌)ಗಿ ಅಥವಾ ತೀವ್ರ ಗಾಬರಿಯಾಗಿ ಬದಲಾದರೆ ಬೇರೆ ರೀತಿಯ ಸಮಸ್ಯೆಗಳು ಶುರುವಾಗಬಹುದು.

ದಿಗಿಲಾದರೆ ಜನ ಹೆಚ್ಚು ಹೆಚ್ಚು ತಪ್ಪುಗಳನ್ನು ಎಸಗುತ್ತ ಹೋಗುತ್ತಾರೆ. ಮುಖಗವಸು, ಸ್ಯಾನಿಟೈಜರ್‌ನಂತಹ ವಸ್ತುಗಳನ್ನು ಅಗತ್ಯಕ್ಕಿಂತ ಹೆಚ್ಚು ಸಂಗ್ರಹಿಸಿ ಕೊರತೆಯನ್ನು ಸೃಷ್ಟಿಸುವುದು, ನಗರಗಳಲ್ಲಿ ಅಥವಾ ಬೇರೆ ಊರಿಗೆ ಓಡಾಡಿ ಅಪಾಯ ತಂದುಕೊಳ್ಳುವುದು, ವೈದ್ಯರ ಬಳಿಗೆ ಅನವಶ್ಯಕ ಹೋಗಿ ಇಲ್ಲದ ಸಮಸ್ಯೆ ಹೇಳಿಕೊಳ್ಳುವುದು ಇವುಗಳಲ್ಲಿ ಕೆಲವು. ಹೀಗಾಗಿ ಗಾಬರಿಪಡದೆ ಮುನ್ನೆಚ್ಚರಿಕೆ ತೆಗೆದುಕೊಳ್ಳುವುದು ಅವಶ್ಯಕ.

ದಿಗಿಲಿಗೆ ಕಾರಣಗಳು

ಚೀನಾ, ಇಟಲಿ, ಸ್ಪೇನ್‌, ಅಮೆರಿಕ, ಇರಾನ್‌ನಲ್ಲಿ ಸಂಭವಿಸುತ್ತಿರುವ ಸಾವು

ಭಾರತದಲ್ಲೂ ಹೆಚ್ಚುತ್ತಿರುವ ಸೋಂಕಿನ ಪ್ರಕರಣಗಳು

ಕೊರೊನಾ ಹೆಚ್ಚು ವೇಗವಾಗಿ ಹರಡುವ ವೈರಸ್‌.

ಇದು ಸುಲಭವಾಗಿ ಹರಡುವಂತಹದ್ದು ಹಾಗೂ ಅಪಾಯಕಾರಿ.

ಸಾವಿನ ಸಾಧ್ಯತೆ ಯಾವುದೇ ಶೀತಜ್ವರಕ್ಕಿಂತ 20– 30 ಪಟ್ಟು ಜಾಸ್ತಿ.

ಹಿಂದೆ ಇಂತಹ ಪ್ರಕರಣಗಳು ಸಂಭವಿಸಿದ್ದಾಗಲಿ ಅಥವಾ ಲಸಿಕೆಯಾಗಲಿ ಇದಕ್ಕಿಲ್ಲ.

ಕೊರೊನಾ ದಿಗಿಲನ್ನು ನಿಯಂತ್ರಿಸುವ ಬಗೆ ಹೇಗೆ?

ಇಂತಹ ಸಂದರ್ಭದಲ್ಲಿ ಸೂಕ್ತ ಮುನ್ನೆಚ್ಚರಿಕೆಯೇ ಎಲ್ಲದಕ್ಕೂ ಪರಿಹಾರ. ಹೀಗಾಗಿ ಆದಷ್ಟು ಸಮಾಧಾನದಿಂದ ಇರಲು ಯತ್ನಿಸಿ. ಬರದಂತೆ ತಡೆಯಲು ಕ್ರಮಗಳನ್ನು ಕೈಗೊಳ್ಳಿ. ಸುಳ್ಳು ಸುದ್ದಿಗಳಿಂದ ದೂರವಿರಿ. ಕ್ಷಣಕ್ಷಣಕ್ಕೂ ಇದರ ಬಗ್ಗೆ ಮಾಹಿತಿ ಪಡೆಯುವುದನ್ನು ನಿಲ್ಲಿಸಿ.

ಸಾಮಾಜಿಕ ಜಾಲತಾಣದ ಮೇಲೆ ಕಣ್ಣಾಡಿಸುವುದನ್ನು ನಿಲ್ಲಿಸಿ. ಈ ಜಾಲತಾಣಗಳಲ್ಲಿ ಬಹಳಷ್ಟು ಸಲ ಮಾಹಿತಿಯನ್ನು ತಿರುಚುವುದು ಹಾಗೂ ವೈಭವೀಕರಿಸುವುದು ಸಾಮಾನ್ಯ. ಹೀಗಾಗಿ ಯಾವುದಾದರೂ ಒಂದು ನಂಬಲರ್ಹ ಮಾಹಿತಿ ಮೂಲವನ್ನು ಅವಲಂಬಿಸಿ ಮತ್ತು ದಿನದಲ್ಲಿ ಒಂದು ಸಲ ಮಾತ್ರ ನಿಗದಿತ ಸಮಯಕ್ಕೆ ಪರಿಶೀಲಿಸಿ ಸುದ್ದಿ ತಿಳಿದುಕೊಳ್ಳಿ.

ಈಗಾಗಲೇ ಆತಂಕಗೊಂಡಿದ್ದರೆ ಸುದ್ದಿಯಿಂದ ಸಂಪೂರ್ಣ ದೂರವಿರಿ. ಉದ್ವೇಗಗೊಂಡ ಮನಸ್ಸು ಮತ್ತೆ ಮತ್ತೆ ಸುದ್ದಿಯನ್ನು ಕೇಳಲು ಹಾತೊರೆದು ಇನ್ನಷ್ಟು ಗಾಬರಿಗೊಳ್ಳುತ್ತದೆ. ಕೊರೊನಾ ಬಗ್ಗೆ ಮಾತನಾಡುವುದು, ಚರ್ಚಿಸುವುದು ನಿಮ್ಮ ಸಮಯ ಹಾಳು ಮಾಡುವುದಲ್ಲದೇ, ಮನಸ್ಸಿನಲ್ಲಿ ದಿಗಿಲು ಹುಟ್ಟು ಹಾಕುತ್ತದೆ. ಸೋಂಕಿನ ವಿರುದ್ಧ ಮುನ್ನೆಚ್ಚರಿಕೆ ವಹಿಸಿ. ಮನಸ್ಸನ್ನು ಉಪಯುಕ್ತ ಕೆಲಸಗಳಲ್ಲಿ ತೊಡಗಿಸಿಕೊಳ್ಳಿ. ಪುಸ್ತಕ ಓದುವುದು, ಅಡುಗೆ ಮಾಡುವುದು, ಆನ್‌ಲೈನ್‌ನಲ್ಲಿ ಕೌಶಲ ತರಬೇತಿ ಪಡೆಯುವುದು.. ನಿಮ್ಮ ಮನಸ್ಸನ್ನು ಭೀತಿಯಿಂದ ಬೇರೆಡೆ ತಿರುಗಿಸುತ್ತದೆ.

ನಿಮ್ಮಲ್ಲೇನಾದರೂ ಸಾಮಾನ್ಯಕ್ಕಿಂತ ಬೇರೆ ತರಹದ ಲಕ್ಷಣಗಳಿದ್ದರೆ, ಗೂಗಲ್‌ನಲ್ಲಿ ಹುಡುಕಾಡುವುದನ್ನು ನಿಲ್ಲಿಸಿ. ಗೂಗಲ್‌ ವೈದ್ಯನಂತೂ ಅಲ್ಲ. ನಿಮ್ಮ ಹಿತೈಷಿಯಂತೂ ಅಲ್ಲವೇ ಅಲ್ಲ. ಮೊದಲೇ ಆರೋಗ್ಯದ ಕುರಿತು ಗಾಬರಿಗೊಂಡವರು ಇನ್ನೊಂದಿಷ್ಟು ಆತಂಕಕ್ಕೀಡು ಮಾಡುವ ಮಾಹಿತಿಯನ್ನೇ ತಡಕಾಡುತ್ತಾರೆ. ವೈಭವೀಕರಿಸಿದ ಲೇಖನಗಳು, ನಂಬಲರ್ಹವಲ್ಲದ ಅಂಕಿಅಂಶಗಳು, ಹೆದರಿಸುವಂತಹ ಬ್ಲಾಗ್‌ ಬರಹಗಳು, ಮಾರುಕಟ್ಟೆ ಪ್ರಚಾರಕ್ಕಾಗಿ ಹೆದರಿಸುವಂತಹ ಮಾಹಿತಿಗಳೇ ನಿಮ್ಮನ್ನು ಸೆಳೆಯಬಹುದು.

ಹೀಗಾಗಿ ಭಯದ ಜಾಲದಲ್ಲಿ ಸಿಲುಕಿಕೊಳ್ಳುವುದರಿಂದ ಪಾರಾಗಿ. ನಿಜವಾದ ಮಾಹಿತಿಯನ್ನು ಅವಲಂಬಿಸಿ. ಲಕ್ಷಣಗಳನ್ನು ಹುಡುಕಾಡುವುದು ಹಾಗೂ ಅದನ್ನು ವಿನಾಕಾರಣ ವಿಶ್ಲೇಷಿಸುವುದನ್ನು ನಿಲ್ಲಿಸಿ. ನಿಮ್ಮ ಅನುಮಾನಗಳಿಗೆ ಬಲವಾದ ಕಾರಣಗಳಿದ್ದರೆ ಸಮೀಪದ ವೈದ್ಯರನ್ನು ಭೇಟಿ ಮಾಡಿ.

ಮುನ್ನೆಚ್ಚರಿಕೆ ವಹಿಸಿ: ನಿಮ್ಮ ಉದ್ವೇಗವನ್ನು ಕಡಿಮೆ ಮಾಡಲು ಇರುವ ಮಾರ್ಗವೆಂದರೆ ಸುರಕ್ಷತೆ. ಮಾರ್ಗದರ್ಶಿ ಸೂತ್ರಗಳನ್ನು ಅನುಸರಿಸಿ. ಕೈಗಳನ್ನು ತೊಳೆದುಕೊಳ್ಳಿ. ಸ್ವಚ್ಛತೆ ಬಗ್ಗೆ ಮುತುವರ್ಜಿ ವಹಿಸಿ. ಈ ವಿಷಯದಲ್ಲಿ ಯಾವುದೇ ಹಿಂಜರಿಕೆ ಬೇಡ.

ಧ್ಯಾನ ಮತ್ತು ಯೋಗ: ಉದ್ವೇಗ ಮತ್ತು ದಿಗಿಲನ್ನು ಕಡಿಮೆ ಮಾಡಿಕೊಳ್ಳಲು ಅತ್ಯಂತ ಹಳೆಯ ಹಾಗೂ ಸೂಕ್ತ ವಿಧಾನವೆಂದರೆ ಯೋಗ ಮತ್ತು ಧ್ಯಾನ. ಇದು ನಿಮ್ಮ ಮೆದುಳನ್ನು ಶಮನಗೊಳಿಸುತ್ತದೆ. ಮನಸ್ಸು ಮತ್ತು ದೇಹವನ್ನು ಸಮೀಕರಿಸುತ್ತದೆ. ನಿಮ್ಮಲ್ಲಿರುವ ಸಕಾರಾತ್ಮಕ ಭಾವನೆಗಳನ್ನು ಉದ್ದೀಪಿಸುತ್ತದೆ. ನಿಯಮಿತವಾಗಿ ಯೋಗ ಮತ್ತು ಧ್ಯಾನ ಮಾಡಿದರೆ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ ಎಂಬುದನ್ನು ಅಧ್ಯಯನಗಳೂ ಸಾಬೀತುಪಡಿಸಿವೆ. ಇದು ನಕಾರಾತ್ಮಕ ಆಲೋಚನೆಗಳು ಮನಸ್ಸಿನಲ್ಲಿ ಹುಟ್ಟುವುದಕ್ಕೆ ತಡೆ ಹಾಕುತ್ತದೆ.

ಯೋಗ ನಿಮ್ಮ ದೇಹದ ಆರೋಗ್ಯವನ್ನು ಕಾಪಾಡುತ್ತದೆ. ಇವೆರಡೂ ಅಂದರೆ ಯೋಗ ಮತ್ತು ಧ್ಯಾನ ಭಯ, ಆತಂಕ, ಉದ್ವೇಗ ಹಾಗೂ ದಿಗಿಲನ್ನು ಶಮನಗೊಳಿಸುತ್ತವೆ. ಹಾರ್ವರ್ಡ್‌ ವೈದ್ಯಕೀಯ ಕಾಲೇಜ್‌ ಕೂಡ ಇದರಲ್ಲಿರುವ ಶಕ್ತಿಯನ್ನು ಪ್ರತಿಪಾದಿಸಿದೆ. ಕೊರೊನಾ ಕುರಿತ ಉದ್ವೇಗವನ್ನು ಹೋಗಲಾಡಿಸಲು ಯೋಗ ಮತ್ತು ಧ್ಯಾನ ಮಾಡುವಂತೆ ಶಿಫಾರಸ್ಸು ಮಾಡಿದೆ.

ವ್ಯಾಯಾಮ ಮಾಡಿ: ವ್ಯಾಯಾಮವು ಚಯಾಪಚಯ ಕ್ರಿಯೆ ಹಾಗೂ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ ಎಂಬುದು ಗೊತ್ತೇ ಇದೆ. ಜೊತೆಗೆ ನಿಮ್ಮಲ್ಲಿ ಸಂತಸದ ಭಾವವನ್ನು ಉಕ್ಕಿಸುತ್ತದೆ. ಉದಾಹರಣೆಗೆ ವ್ಯಾಯಾಮದಿಂದ ಹೊಟ್ಟೆ ಸಣ್ಣದಾದರೆ, ಸೊಂಟ ಬಳುಕುವಂತಾದರೆ ಖುಷಿಯಾಗುವುದು ಸಹಜವೇ. ಈ ವ್ಯಾಯಾಮ ಎಂಬುದು ಸಂತಸದ ಹಾರ್ಮೋನ್‌ ಬಿಡುಗಡೆಯಾಗುವಂತೆ ಪ್ರೇರೇಪಿಸುತ್ತದೆ. ಅದು ಎಂಡೊರ್ಫಿನ್‌ ಬಿಡುಗಡೆಯಾಗುವಂತೆ ಮಾಡಿ ಸಕಾರಾತ್ಮಕ ಭಾವನೆಗಳನ್ನು ಹೊರಹೊಮ್ಮಿಸುತ್ತದೆ.

ಈ ಬಿಕ್ಕಟ್ಟಿನ ಸಂದರ್ಭದಲ್ಲಿ ಪ್ರಕಾಶಮಾನವಾದ ಬೆಳಕನ್ನು ಕಾಣಲು ಯಾರಿಗೆ ತಾನೇ ಆಸೆಯಿರಲ್ಲ ಹೇಳಿ. ಸಣ್ಣ ಸಣ್ಣ ವಿಷಯದಲ್ಲೂ ಖುಷಿಯನ್ನು ಅನುಭವಿಸಿ ಸಮಾಧಾನಚಿತ್ತರಾಗಿರುವುದೇ ಮುಖ್ಯ.

ಕುಟುಂಬದ ಜೊತೆ ಕಾಲ ಕಳೆಯಿರಿ. ಫಿಟ್‌ನೆಸ್‌ ಬಗ್ಗೆ ಗಮನ ನೀಡಿ. ಮನೆಯಡುಗೆ ಎಂದಿಗೂ ಆರೋಗ್ಯಕರ. ಚೆನ್ನಾಗಿ ನಿದ್ರೆ ಮಾಡಿ.

ಭಯವಾಗುವುದು, ಒತ್ತಡ ಎನಿಸುವುದು, ಉದ್ವೇಗಗೊಳ್ಳುವುದು ಇವೆಲ್ಲ ಇಂತಹ ಸಂದರ್ಭದಲ್ಲಿ ಮಾನವರಲ್ಲಾಗುವ ಸಹಜ ಪ್ರಕ್ರಿಯೆಗಳು. ಇಂತಹ ಭಾವನೆಗಳನ್ನು ಸಕಾರಾತ್ಮಕ ಆಲೋಚನೆಗಳಿಂದ ನಿಯಂತ್ರಿಸಿಕೊಳ್ಳಲು ಯತ್ನಿಸಿ. ಈ ಮೇಲಿನ ವಿಧಾನಗಳಿಂದ ನಿಯಂತ್ರಣಕ್ಕೆ ಬರದಿದ್ದರೆ, ಆಪ್ತ ಸಮಾಲೋಚಕರ ನೆರವು ಪಡೆಯಿರಿ.ಕೊರೊನಾ ಸೋಂಕು ಗಂಭೀರ ಸಮಸ್ಯೆಯೇ. ಆದರೆ ದಿಗಿಲಾಗುವ ಅವಶ್ಯಕತೆಯಿಲ್ಲ. ದೃಢ ಮನಸ್ಸಿನಿಂದ ಯತ್ನಿಸಿದರೆ, ಮುನ್ನೆಚ್ಚರಿಕೆ ಕೈಗೊಂಡರೆ ನಿಶ್ಚಿತವಾಗಿಯೂ ಸುರಕ್ಷಿತರಾಗಿರಬಹುದು.

ಪ್ರಾಣಾಯಾಮ

ವ್ಯವಸ್ಥಿತವಾದ ಉಸಿರಾಟದ ಕ್ರಿಯೆ ಒತ್ತಡ, ಉದ್ವೇಗ ಹಾಗೂ ದಿಗಿಲನ್ನು ಶಮನಗೊಳಿಸುತ್ತದೆ. ಪ್ರಾಣಾಯಾಮದಿಂದ ಮನಸ್ಸು ಶಾಂತಗೊಳ್ಳುತ್ತದೆ. ಪ್ರಾಣಾಯಾಮವನ್ನು ಬೆಳಿಗ್ಗೆ ಅಭ್ಯಾಸ ಮಾಡಿ. ಉಸಿರನ್ನು ನಿಧಾನವಾಗಿ ಒಳಗೆಳೆದುಕೊಂಡು ಕೆಲ ಕ್ಷಣ ನಿಲ್ಲಿಸಿ, ನಿಧಾನಕ್ಕೆ ಹೊರಗೆ ಬಿಡಿ. ಇದರಿಂದ ರೋಗ ನಿರೋಧಕ ಶಕ್ತಿಯನ್ನು ಕಡಿಮೆ ಮಾಡುವ ಒತ್ತಡದಿಂದ ಪಾರಾಗಬಹುದು. ಹಾಗೆಯೇ ನಿದ್ರಾಹೀನತೆಯನ್ನೂ ಇದು ಕಡಿಮೆ ಮಾಡುತ್ತದೆ. ಈ ಸಂದರ್ಭದಲ್ಲಿ ಹೆಚ್ಚಿನ ಮಟ್ಟದಲ್ಲಿರುವ ಖಿನ್ನತೆ, ಉದ್ವೇಗ ಕಡಿಮೆ ಮಾಡಲು ಇದು ರಾಮಬಾಣ.

(ಲೇಖಕರು ಆಯುರ್ವೇದ ವೈದ್ಯ, ಆಯುರ್ವೇದಿಸಂ, ಬೆಂಗಳೂರು)

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು