ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಯಾಸ.. ದೈಹಿಕ ಎಷ್ಟು? ಮಾನಸಿಕ ಎಷ್ಟು?: ಆಯಾಸವಾದಾಗ ಏನು ಮಾಡಬೇಕು?

Last Updated 28 ಫೆಬ್ರುವರಿ 2022, 21:30 IST
ಅಕ್ಷರ ಗಾತ್ರ

ದೇಹ ಮತ್ತು ಮನಸ್ಸಿನ ನಡುವಿನ ಸಂಬಂಧ ಒಮ್ಮೊಮ್ಮೆ ನಿಗೂಢವೂ, ನಾವು ಊಹಿಸಲೂ ಸಾಧ್ಯವಿಲ್ಲದಷ್ಟು ನಿಕಟವೂ, ಅನ್ವೇಷಿಸಿದಷ್ಟೂ ಗಹನವೂ, ಹಾಗೇ ಕೆಲವೊಮ್ಮೆ ಒಂದಕ್ಕೊಂದು ವಿರುದ್ಧವೂ ಹೌದು.

ದೇಹವು ಪ್ರಕೃತಿಯಾದರೆ ಮನಸ್ಸು ಸಂಸ್ಕೃತಿ. ಮನಸ್ಸಿನ ಎಲ್ಲ ಆಕೃತಿಗೂ ವಿಕೃತಿಗೂ ದೇಹ ತನ್ನದೇ ರೀತಿಯಲ್ಲಿ ಸ್ಪಂದಿಸುತ್ತದೆ. ದೇಹದ ಮಾತಿಗೆ ಮನಸ್ಸು ಕೂಡ ತನ್ನ ಮಾತುಗಳನ್ನು ಸೇರಿಸುತ್ತಲಿರುತ್ತದೆ. ಪ್ರತಿಯೊಂದು ಭಾವವೂ, ಪ್ರತಿಯೊಂದು ಆಲೋಚನೆಯೂ ನಮ್ಮ ದೇಹದ ಮೇಲೆ ತನ್ನ ಹೆಜ್ಜೆಗುರುತುಗಳನ್ನು ಮೂಡಿಸುತ್ತಲೇ ಸಾಗುತ್ತದೆ.

ಬುದ್ಧಿಗೆ ನಿಲುಕುವ ಎಷ್ಟೋ ವಿಷಯಗಳನ್ನು ದೇಹ ನಿರಾಕರಿಸುತ್ತದೆ, ದೇಹಕ್ಕಾಗುವ ಸಂವೇದನೆಗಳನ್ನು ಸರಿಯಾಗಿ ಅರ್ಥೈಸುವಲ್ಲಿ ಬುದ್ಧಿಯೂ ಹಲವು ಬಾರಿ ಸೋಲುತ್ತದೆ. ದೇಹ, ಬುದ್ಧಿ, ಮನಸ್ಸು, ಆತ್ಮ ಎಲ್ಲವೂ ಒಂದಕ್ಕೊಂದು ಹೊಂದಿಕೊಂಡು ಲಯಬದ್ಧವಾಗಿ ಸಾಗುವಾಗ ಉಂಟಾಗುವ ಶಾಂತಿ, ಸ್ಥಿರತೆ, ನೆಮ್ಮದಿ ಆರೋಗ್ಯಪೂರ್ಣ ಜೀವನಕ್ಕೆ ಅತ್ಯಾವಶ್ಯಕ. ಮನಸ್ಸಿಗೆ ಉಲ್ಲಾಸ ನೀಡುವ ದೈಹಿಕ ಕೆಲಸಗಳು, ದೇಹಕ್ಕೂ ನವಚೈತನ್ಯ ತುಂಬುವ ಮಾನಸಿಕ/ಬೌದ್ಧಿಕ ಚಟುವಟಿಕೆಗಳು ದೇಹ ಮತ್ತು ಮನಸ್ಸಿನ ನಡುವಿನ ಈ ಅವಿನಾಭಾವ ಸಂಬಂಧವನ್ನು ಸಾರುತ್ತದೆ.

ಸುಂದರವಾದ ಬೆಟ್ಟಗುಡ್ಡಗಳಲ್ಲಿ ಅಲೆಯುತ್ತಾ ಹೂವು, ಹಣ್ಣು, ಗಿಡ, ಮರ, ಹಕ್ಕಿಗಳನ್ನು ಕಾಣುತ್ತ ತಂಗಾಳಿಯನ್ನು ಸವಿಯುತ್ತಾ ಇಡೀ ದಿನ ಓಡಾಡಿದರೂ ದೇಹಕ್ಕೆ ಆಯಾಸವಾದ ಅನುಭವವಾಗುತ್ತಿದ್ದರೂ, ಮನಸ್ಸಿನ ಬೆಂಬಲದಿಂದ ‘ಮತ್ತಷ್ಟು ನಡೆಯೋಣ, ಮತ್ತಷ್ಟು ಪ್ರಕೃತಿಯ ಸೌಂದರ್ಯವನ್ನು ಅನುಭವಿಸೋಣ’ ಎಂದು ಅನಿಸುತ್ತದೆ.

ಅದೇ ಮನಸ್ಸು ಮುನಿದಾಗ ನಮ್ಮ ದೇಹವೇ ಹೊರಲಾರದ ಹೊರೆಯಂತೆ, ಹೊತ್ತು ತಿರುಗಬೇಕಾದ ಅನಿವಾರ್ಯ ಕರ್ಮದಂತೆ ಕಾಣಿಸುತ್ತದೆ. ದೇಹ ಆರೋಗ್ಯವಾಗಿದ್ದಾಗ ಮಾನಸಿಕ ಒತ್ತಡವನ್ನು ತಕ್ಕಮಟ್ಟಿಗೆ ಸಹಿಸಬಹುದು, ಒತ್ತಡವನ್ನು ನೀಗಿಸಿಕೊಳ್ಳುವ ಪ್ರಯತ್ನವನ್ನೂ ಮಾಡಬಹುದು, ದೇಹಕ್ಕೆ ಜಾಡ್ಯವಂಟಿದಾಗ ಆರೋಗ್ಯವಾಗಿದ್ದಾಗಿನ ನಮ್ಮೆಲ್ಲಾ ಹವ್ಯಾಸ, ಅಭ್ಯಾಸ, ಆಸೆಪಟ್ಟು ಮಾಡುತ್ತಿದ್ದ ಕೆಲಸಗಳಲ್ಲಿ ಆಸಕ್ತಿ ಉಳಿಯುವುದಿಲ್ಲ.

ಕೆಲವೊಮ್ಮೆ ಏನೂ ಮಾಡುವುದೇ ಬೇಡ, ಯಾಕಾದರೂ ಬೆಳಗ್ಗೆ, ರಾತ್ರಿಗಳಾಗುತ್ತವೆಯೋ, ಯಾಕಾದರೂ ಯಾವುದಾದರೂ ಕೆಲಸ ಮಾಡಬೇಕೋ ಎನಿಸುವಷ್ಟು ಜಡತ್ವ ನಮ್ಮನ್ನಾವರಿಸುತ್ತದೆ. ಎಲ್ಲದರಲ್ಲೂ ಇದ್ದಕಿದ್ದಂತೆ ಆಸಕ್ತಿ ಕಳೆದುಹೋದಂತನಿಸಿ, ಮನಸ್ಸಿಗಂಟಿದ ಆಲಸ್ಯ ತೊಳೆಯಬಲ್ಲ ನವೋಲ್ಲಾಸದ ಚಿಲುಮೆಯೊಂದು ಇರಬಹುದೆನ್ನುವ ಸಣ್ಣ ನಂಬಿಕೆಯೂ ಅಳಿದುಬಿಡುವಷ್ಟು ಬೇಸರವಾಗುತ್ತದೆ. ಕಣ್ಣ ಮುಂದೆ ಮಸುಕು ಕವಿದು, ಬುದ್ಧಿ ಮಂಕಾಗಿ, ಉಸಿರು ಕಟ್ಟಿದಂತೆ ಒದ್ದಾಡಲು ಶುರುಮಾಡುತ್ತೇವೆ.

ಇಂತಹ ಎಷ್ಟೋ ಆಯಾಸಪರ್ವಗಳನ್ನು ದಾಟಿ ಚೇತರಿಸಿಕೊಂಡ ಅನುಭವವಿದ್ದರೂ ಈ ಬಾರಿಯ ಆಯಾಸ ನಮ್ಮನ್ನು ನುಂಗಿಯೇ ಬಿಡುತ್ತದೇನೋ ಎನ್ನುವ ಸಂಶಯವೂ ಕಾಡುತ್ತದೆ. ಮಾನಸಿಕ ಯಾತನೆ ದೈಹಿಕ ಆಯಾಸದಂತೆಯೇ ನಮ್ಮನ್ನು ಕಂಗೆಡಿಸುತ್ತದೆ. ಜ್ವರದಿಂದ ಕಹಿಯಾದ ನಾಲಗೆ ತನ್ನ ರುಚಿಗ್ರಹಣದ ಶಕ್ತಿಯನ್ನು ಕಳೆದುಕೊಂಡಂತೆ, ಮನಸ್ಸಿಗೆ ಹಿಡಿದ ಜ್ವರ ಜೀವನದ ರಸಗ್ರಹಣದ ಶಕ್ತಿಯನ್ನು ಕುಂದಿಸುತ್ತದೆ. ರೋಗವು ಹಸಿವನ್ನು ಕಡಿಮೆ ಮಾಡುವಂತೆ, ಚಿಂತೆ–ಬೇಸರಗಳು ಜೀವನಪ್ರೀತಿಯನ್ನು ಕಸಿದುಕೊಂಡುಬಿಡುತ್ತವೆ.

ಮಾನಸಿಕ ಆಯಾಸಕ್ಕೆ ಕಾರಣಗಳು ಹಲವಿರಬಹುದು. ದೈಹಿಕ ಅನಾರೋಗ್ಯ, ಸಂಬಂಧಗಳಲ್ಲಿನ ವಿರಸ, ಲೋಕ ಗ್ರಹಿಕೆಯ ರೀತಿ, ಒಂಟಿತನ, ಅಸಹಾಯಕತೆ, ಸೋಲು – ಇನ್ನೂ ಹಲವು. ಮನಸ್ಸು ಸುಖದಲ್ಲಿದ್ದಾಗ ದೈಹಿಕ ಆಯಾಸದಿಂದ ಆವರಿಸುವ ನಿದ್ದೆಯೂ ಚೇತೋಹಾರಿ. ವಿಶ್ರಾಂತಿಯಿಂದ ಪರಿಹಾರವಾಗುವ ದೈಹಿಕ ಆಯಾಸದಷ್ಟು ಸುಲಭೋಪಾಯಗಳಿಗೆ ಮಾನಸಿಕ ಆಯಾಸ ಬಗ್ಗದಿರಬಹುದು. ಏಕೆಂದರೆ ದೈಹಿಕ ಆಯಾಸವನ್ನು ಗುರುತಿಸಿದಷ್ಟು ಸುಲಭವಲ್ಲ ಮಾನಸಿಕ ಆಯಾಸವನ್ನು ಗುರುತಿಸುವುದು. ಆತಂಕ, ಖಿನ್ನತೆ, ಸಿಟ್ಟು, ಸೋಮಾರಿತನ, ಸಾಮಾಜಿಕ ಜಾಲತಾಣಗಳಲ್ಲಿ ಹೊತ್ತು ಗೊತ್ತಿಲ್ಲದೆ ಮುಳುಗಿರುವುದು, ಯಾವುದಕ್ಕೂ ಸ್ಪಂದಿಸಲಾರದ ನಿರ್ಭಾವುಕತನ, ನಿಷ್ಕ್ರಿಯತೆ – ಎಲ್ಲವೂ ಮಾನಸಿಕ ಆಯಾಸದ ವಿವಿಧ ಮುಖಗಳು.

ಬೇಡದ ಆಲೋಚನೆಗಳು, ಕಹಿನೆನಪುಗಳು, ಆಗಿಹೋದ ಕೆಟ್ಟ ಘಟನೆಗಳ, ಮನಸ್ತಾಪಗಳ ವಿವರಗಳು, ಚಿತ್ರಗಳು ಪದೇ ಪದೇ ಮನಸ್ಸಿಗೆ ಬಂದು ಅತಿಯಾದ ಮಾನಸಿಕ ಆಯಾಸವನ್ನುಂಟು ಮಾಡಿ ದೇಹದ ಮೇಲೂ ಪರಿಣಾಮ ಬೀರುತ್ತದೆ. ಇಂತಹ ಆಯಾಸವು ತರ್ಕಬದ್ಧವಾಗಿ ಆಲೋಚಿಸುವ, ಸಹಾನುಭೂತಿಯಿಂದ ಸ್ಪಂದಿಸುವ ನಮ್ಮ ಸಾಮರ್ಥ್ಯವನ್ನು ಕಡಿಮೆ ಮಾಡುತ್ತದೆ.

ಪ್ರವಾಸ ನಿಜಕ್ಕೂ ಮಾನಸಿಕ ಆಯಾಸಕ್ಕೆ ಅತ್ಯುತ್ತಮ ಮದ್ದು ಎನ್ನುವುದನ್ನು ಅಲ್ಲಗೆಳೆಯುವವರು ಯಾರಿದ್ದಾರೆ? ಪ್ರವಾಸದ ಕುರಿತಾಗಿ ಆಲೋಚಿಸುವುದು, ಮಾತನಾಡುವುದು, ಒಳ್ಳೆಯ ಪ್ರವಾಸ ಕಥನಗಳನ್ನೋದುವುದೂ ಒಂದು ಕ್ಷಣಕ್ಕೆ ನಮ್ಮನ್ನು ಯಾವುದೋ ಬಂಧನದಿಂದ ಬಿಡುಗಡೆಗೊಳಿಸುತ್ತದೆ. ಹಾಗೆಯೇ ಪ್ರೀತಿ ಎನ್ನುವುದೂ ಎಂತಹ ಜಾಡ್ಯಕ್ಕೂ ಸಂಜೀವಿನಿಯೇ ಹೌದು. ಪ್ರೀತಿಯ ಮಾತು, ಪ್ರೀತಿಯ ನೆನಪೂ, ಪ್ರೀತಿಪಾತ್ರರ ಒಡನಾಟವೂ ಬಾಡಿಹೋದ ಬದುಕಿನ ಬಳ್ಳಿಯಲ್ಲಿ ಹೊಸಚಿಗುರನ್ನು ಹುಟ್ಟಿಸಬಲ್ಲದು. ಸದಾ ವಟಗುಡುವ ಹೇಳಿದ್ದನ್ನೇ ಹೇಳಿ ಹೇಳಿ ಜೀವ ತಿನ್ನುವ, ಚಿಂತೆಯ ವಿಷವರ್ತುಲದಲ್ಲಿ ನಮ್ಮನ್ನು ಸಿಕ್ಕಿಸಿಬಿಡುವ ನಾವೇ ಕಟ್ಟಿಕೊಂಡಿರುವ ಆಲೋಚನೆಗಳ ಕೋಟೆಯಾದ ನಮ್ಮ ಮನಸ್ಸಿನಿಂದಲೇ ಕೆಲಕಾಲ ತಪ್ಪಿಸಿಕೊಂಡು ಹೊಸತನದ ಹುಡುಕಾಟದಲ್ಲಿ ನಮ್ಮನ್ನು ನಾವು ಹೊಸದಾಗಿ ಕಂಡುಕೊಳ್ಳುವುದೇ ದೈಹಿಕ, ಮಾನಸಿಕ ಆಯಾಸಕ್ಕೆ ನಾವು ಕೊಡಬಹುದಾದ ಉತ್ತರ.

ಇದುವರೆಗೆ ಕೇಳಿಲ್ಲದ ರಾಗಗಳನ್ನು, ಅರ್ಥವೇ ಆಗದ ಭಾಷೆಯ ಹಾಡುಗಳನ್ನು ಕೇಳುತ್ತಾ, ಹಿಂದೆಂದೂ ಓದಿಲ್ಲದ ಜಗತ್ತಿನ ಯಾವುದೋ ಮೂಲೆಯ ಲೇಖಕರನ್ನು ಓದುತ್ತಾ, ಎಂದೂ ಮಾತನಾಡಿಸದ ಅಪರಿಚಿತರನ್ನು ಮಾತನಾಡಿಸುತ್ತಾ, ಹೆಸರೇ ಕೇಳಿ ಗೊತ್ತಿಲ್ಲದ ಹಾದಿಗಳಲ್ಲಿ ಅಲೆಯುತ್ತಾ ಹೋದರೆ ಆಯಾಸ ಕಳೆದು ಉತ್ಸಾಹ ಮೂಡುವುದು ಖಂಡಿತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT