ಮಂಗಳವಾರ, ಏಪ್ರಿಲ್ 13, 2021
23 °C

ಬೇಸಿಗೆಯಲ್ಲಿ ವ್ಯಾಯಾಮ: ಹೀಗೆ ಮಾಡಿ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Getty Images

ಇಂದಿನ ಹಲವಾರು ಆರೋಗ್ಯ ಸಮಸ್ಯೆಗಳಿಗೆ ಮೂಲಕಾರಣ ವ್ಯಕ್ತಿಯ ಜಡ ಜೀವನಶೈಲಿ. ಆದ್ದರಿಂದಲೇ ಎಲ್ಲ ವಯೋಮಾನದವರೂ ಒಂದಲ್ಲ ಒಂದು ಬಗೆಯ ವ್ಯಾಯಾಮವನ್ನು ದಿನಚರಿಯಲ್ಲಿ ರೂಢಿಸಿಕೊಳ್ಳುವುದು ಅತ್ಯವಶ್ಯ. ನಮ್ಮ ಎತ್ತರ ಹಾಗೂ ವಯಸ್ಸಿಗೆ ತಕ್ಕ ದೇಹತೂಕವನ್ನು ಹೊಂದುವುದರ ಜೊತೆಯಲ್ಲಿಯೇ ಫಿಟ್‍ನೆಸ್ ಕೂಡ ಅಷ್ಟೇ ಮುಖ್ಯ. ಈ ಗುರಿಯನ್ನು ತಲುಪುವ ಸಲುವಾಗಿಯೇ ಪ್ರತಿಯೊಬ್ಬರೂ ಯಾವುದಾದರೂ ಬಗೆಯ ವ್ಯಾಯಾಮದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು. ಯೋಗ, ನೃತ್ಯ, ಸರಳ ವ್ಯಾಯಾಮ, ಬಿರುಸಿನ ವ್ಯಾಯಾಮ (ಜಿಮ್), ನಡಿಗೆ, ಓಡುವುದು, ಈಜು – ಹೀಗೆ ತಮಗೆ ಸರಿ ಹೊಂದುವ ದೇಹದಂಡನೆಗೆ ಜನರು ಹೊಂದಿಕೊಂಡಿದ್ದಾರೆ.

ನೆನಪಿಡಿ, ವ್ಯಾಯಾಮ ಯಾವ ಬಗೆಯದ್ದಾದರೂ ಸರಿ, ಆದರೆ ನಿಯಮಿತವಾಗಿ ಮಾಡಿದಾಗ ಮಾತ್ರವೇ ಅದರ ಗರಿಷ್ಠ ಪ್ರಯೋಜನ ಪಡೆಯಲು ಸಾಧ್ಯ. ಆದ್ದರಿಂದಲೇ ಎಲ್ಲ ಕಾಲದಲ್ಲಿಯೂ, ಎಲ್ಲ ದಿನಗಳಲ್ಲಿಯೂ ತಪ್ಪದೇ ವ್ಯಾಯಾಮ ಮಾಡುವುದು ಮುಖ್ಯ. ಇದು ಬೇಸಿಗೆ ಕಾಲ. ವಾತಾವರಣದ ಉಷ್ಣಾಂಶ ಹೆಚ್ಚುತ್ತಲಿರುವ ಈ ದಿನಗಳಲ್ಲಿ ವ್ಯಾಯಾಮ ಮಾಡುವಾಗ ಕೆಲವು ಮುನ್ನೆಚ್ಚರಿಕೆಗಳನ್ನು ವಹಿಸಬೇಕಾಗುತ್ತದೆ.

ವ್ಯಾಯಾಮ ಮಾಡಲು ಸಾಕಷ್ಟು ಸ್ವಾಭಾವಿಕ ಗಾಳಿ ಬೆಳಕಿರುವ ಕೊಠಡಿಯನ್ನೇ ಆಯ್ಕೆ ಮಾಡಿಕೊಳ್ಳಿ.

ಬೆಳಗಿನ ಹತ್ತರಿಂದ ನಾಲ್ಕು ಗಂಟೆಯವರೆಗಿನ ಸಮಯದಲ್ಲಿ ವ್ಯಾಯಾಮ ಮಾಡುವುದು ಬೇಡ. ನಸುಕಿನ ಅಥವಾ ಸೂರ್ಯಾಸ್ತದ ನಂತರ ತಂಪಾಗಿರುವ ಸಮಯವೇ ದೇಹದಂಡನೆಗೆ ಸೂಕ್ತ. ಏಕೆಂದರೆ, ಏರಿದ ಉಷ್ಣತೆಯು ದೇಹವನ್ನು ಬಲು ಬೇಗ ಆಯಾಸಗೊಳಿಸಿ ಕಾರ್ಯಕ್ಷಮತೆಯನ್ನು ಕಡಿಮೆ ಮಾಡಬಹುದು. ವ್ಯಕ್ತಿಯು ನಿರ್ಜಲೀಕರಣಕ್ಕೂ ಒಳಗಾಗಬಹುದು.

ಬೇರೆ ದಿನಗಳಿಗಿಂತ ವ್ಯಾಯಾಮದ ಕಾಲಾವಧಿಯನ್ನು ತುಸು ಕಡಿಮೆ ಮಾಡಿದರೂ ಸರಿಯೇ. ದಿನವೂ ಇಪ್ಪತ್ತರಿಂದ ಮೂವತ್ತು ನಿಮಿಷಗಳ ವ್ಯಾಯಾಮ ಕೂಡ ದೇಹ-ಮನಸ್ಸುಗಳನ್ನು ಸುಸ್ಥಿತಿಯಲ್ಲಿಡಬಲ್ಲದು.

ವ್ಯಾಯಾಮದ ವೇಳೆಯಲ್ಲಿ ಹಗುರವಾದ, ತಿಳಿಯಾದ ಬಣ್ಣದ, ಸಡಿಲವಾದ ಉಡುಪುಗಳನ್ನೇ ಧರಿಸಿರಿ. ಗಾಢಬಣ್ಣದ ಉಡುಪುಗಳು ಸೂರ್ಯನ ಶಾಖವನ್ನು ಹೆಚ್ಚು ಹೀರಿಕೊಳ್ಳುವುದರಿಂದ, ಬಿಗಿಯಾದ ಮತ್ತು ಭಾರವಾದ ಉಡುಪುಗಳು ದೇಹ ಬೆವರಲು ಅಣಿವು ಮಾಡಿಕೊಡದೇ ಇರುವುದರಿಂದ ದೇಹದ ಶಾಖವು ಬೇಗನೇ ಹೆಚ್ಚುತ್ತದೆ. ಇದರಿಂದ ವ್ಯಕ್ತಿ ಬೇಗ ದಣಿಯುತ್ತಾನೆ.

ಅತಿ ಬಿರುಸಾದ ವ್ಯಾಯಾಮ ಮಾಡುವವರು ತಾವು ಸರಿಯಾದ ಪ್ರಮಾಣದಲ್ಲಿ ನೀರು ಹಾಗೂ ನೀರಿನಾಂಶದ ಪದಾರ್ಥಗಳನ್ನು ಸೇವಿಸುತ್ತಿರುವುದನ್ನು ಖಚಿತಪಡಿಸಿಕೊಳ್ಳಿ. ವ್ಯಾಯಾಮ ಮಾಡುವಾಗ ಮಧ್ಯದಲ್ಲಿ ಸ್ವಲ್ಪ ಸ್ವಲ್ಪವೇ (ಒಂದೊಂದೇ ಗುಟುಕು) ನೀರನ್ನು ಕುಡಿಯಬೇಕು. ವ್ಯಾಯಾಮದ ನಂತರ ಪ್ರತಿ ಒಂದು ಗಂಟೆಯ ಅಂತರದಲ್ಲಿ ಅರ್ಧ ಲೀಟರ್‌ನಂತೆ ಕನಿಷ್ಠ ಎರಡು ಲೀಟರ್ ನೀರನ್ನು ಕುಡಿದರೆ ಉತ್ತಮ. ಬೇಸಿಗೆಯಲ್ಲಿ ದಿನಕ್ಕೆ ಸಾಮಾನ್ಯಕ್ಕಿಂತಲೂ ಎರಡು ಲೀಟರ್ ಹೆಚ್ಚು ನೀರನ್ನು ಕುಡಿಯುವ ಅಗತ್ಯ ಇರುತ್ತದೆ. ವ್ಯಾಯಾಮತಜ್ಞರು ಹೇಳುವಂತೆ ಬೇಸಿಗೆಯ ದಿನಗಳು ತೂಕ ಇಳಿಸಲು ಹೆಚ್ಚು ಸೂಕ್ತ. ಬೇರೆ ದಿನಗಳಿಗಿಂತ ಬೆವರಿನ ಉತ್ಪಾದನೆಯು ಹೆಚ್ಚಿರುವ ಈ ದಿನಗಳಲ್ಲಿ ಕ್ಯಾಲೊರಿಗಳನ್ನು ವೇಗವಾಗಿ ಹಾಗೂ ಸುಲಭವಾಗಿ ಇಳಿಸುವುದು ಸಾಧ್ಯ. ಆದರೆ ನಿರ್ಜಲೀಕರಣಕ್ಕೆ ಒಳಗಾಗದಂತೆ ನೀರು ಹಾಗೂ ಲವಣಾಂಶಗಳಿರುವ ಹಣ್ಣು-ತರಕಾರಿಗಳನ್ನು ಯಥೇಚ್ಛವಾಗಿ ಸೇವಿಸುವುದನ್ನು ಮರೆಯಬಾರದು.

ಬೇಸಿಗೆಯಲ್ಲಿ ದೇಹದಂಡನೆ ಮಾಡುವವರಲ್ಲಿ ಮಾಂಸಖಂಡಗಳಲ್ಲಿ ತೀವ್ರತರವಾದ ನೋವು ಕಾಣಿಸಿಕೊಳ್ಳುವುದು ಸಾಮಾನ್ಯ. ನೀರು ಹಾಗೂ ಲವಣಾಂಶಗಳ ಕೊರತೆಯೇ ಇದಕ್ಕೆ ಕಾರಣ. ಇದನ್ನು ತಪ್ಪಿಸಲು ಬಾಯಾರಿಕೆಯಾಗುವ ಮೊದಲೇ ನೀರು ಕುಡಿಯುವುದನ್ನು ರೂಢಿ ಮಾಡಿಕೊಳ್ಳಬೇಕು. ನೀರಿನ ಜೊತೆಯಲ್ಲಿಯೇ ಮಾಂಸಖಂಡಗಳ ಕಾರ್ಯಕ್ಷಮತೆಗೆ ಅತ್ಯಗತ್ಯವಾದ ಮೆಗ್ನಿಸಿಯಂ, ಕ್ಯಾಲ್ಸಿಯಂ, ಸೋಡಿಯಂ, ಪೋಟ್ಯಾಸಿಯಂ ಮೊದಲಾದ ಲವಣಾಂಶಗಳು ಹೇರಳವಾಗಿರುವ ಎಳನೀರು, ಹಣ್ಣು, ತರಕಾರಿಗಳನ್ನೂ ಸೇವಿಸಬೇಕು.

ಬೇಸಿಗೆಯ ದಿನಗಳಲ್ಲಿ ವ್ಯಾಯಾಮ ಮಾಡುವವರು ನಿರ್ಜಲೀಕರಣದ ಮುನ್ಸೂಚನಾ ಚಿಹ್ನೆಗಳ ಬಗ್ಗೆ ತಿಳಿದಿರಬೇಕು. ಆಯಾಸ, ತಲೆಸುತ್ತುವಿಕೆ, ತಲೆನೋವು, ಚರ್ಮ ಬಿಳಿಚಿಕೊಳ್ಳುವುದು, ಮಾಂಸಖಂಡಗಳಲ್ಲಿ ನೋವು, ಹೃದಯದ ಬಡಿತ ಹೆಚ್ಚಾಗುವುದು, ವಾಕರಿಕೆ, ವಾಂತಿ ಮೊದಲಾದ ಗುಣಲಕ್ಷಣಗಳು ಕಂಡ ಕೂಡಲೇ ವ್ಯಾಯಾಮ ಮಾಡುವುದನ್ನು ನಿಲ್ಲಿಸಬೇಕು. ಕೂಡಲೇ ಗಾಳಿ- ಬೆಳಕಿರುವ ತಂಪಾದ ಸ್ಥಳಕ್ಕೆ ತೆರಳಿ, ನೀರು ಅಥವಾ ಹಣ್ಣಿನ ರಸವನ್ನು ಕುಡಿದು ವಿಶ್ರಾಂತಿ ಪಡೆಯಬೇಕು. ಒಂದು ವೇಳೆ ಗುಣಲಕ್ಷಣಗಳು ಮುಂದುವರಿದಲ್ಲಿ ಕೂಡಲೇ ವೈದ್ಯರ ಸಲಹೆಯನ್ನು ಪಡೆಯಬೇಕು.

ಬೇಸಿಗೆಯಲ್ಲಿ ಬೆಳಗಿನ ಅಥವಾ ಸಂಜೆಯ ವೇಳೆ ವಾಕ್ ಮಾಡುವವರು ಕೂಡ ಹೆಚ್ಚು ಜಾಗ್ರತೆ ವಹಿಸಬೇಕು. ಆದಷ್ಟೂ ಗಿಡ ಮರಗಳಿರುವ ತಂಪಾದ ಸ್ಥಳವನ್ನೇ ವಾಕಿಂಗ್‍ಗೆ ಆರಿಸಿಕೊಳ್ಳಿ. ನಡಿಗೆಯ ವೇಗ ಹಾಗೂ ದೂರವನ್ನು ಬೇರೆ ದಿನಗಳಿಗಿಂತ ತುಸು ಕಡಿಮೆ ಮಾಡಿಕೊಂಡರೆ ಉತ್ತಮ. ಏಕೆಂದರೆ ವಾತಾವರಣದ ಏರಿದ ಉಷ್ಣತೆಯಿಂದಾಗಿ ವ್ಯಕ್ತಿ ಒಮ್ಮೊಮ್ಮೆ ಸೂರ್ಯಾಘಾತಕ್ಕೆ (ಹೀಟ್ ಸ್ಟ್ರೋಕ್) ತುತ್ತಾಗಬಹುದು. ಉಸಿರಾಟದ ತೊಂದರೆ, ಏರುವ ದೇಹದ ಉಷ್ಣತೆ, ವೇಗಗೊಳ್ಳುವ ನಾಡಿಮಿಡಿತ, ಮಾನಸಿಕ ಗೊಂದಲ, ವಿಚಿತ್ರವಾದ ವರ್ತನೆ ಮೊದಲಾದವು ಸೂರ್ಯಾಘಾತದ ಕೆಲವು ಲಕ್ಷಣಗಳು. ಈ ರೀತಿಯ ಲಕ್ಷಣಗಳು ಕಂಡುಬಂದಲ್ಲಿ ಕೂಡಲೇ ವೈದ್ಯರನ್ನು ಸಂಪರ್ಕಿಸಬೇಕು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು