ಶುಕ್ರವಾರ, ಆಗಸ್ಟ್ 6, 2021
25 °C

ಪ್ರಶ್ನೋತ್ತರ: ಪ್ರೀತಿಯನ್ನು ಮರೆಯಲಿ ಹ್ಯಾಂಗ..

ನಡಹಳ್ಳಿ ವಸಂತ್‌ Updated:

ಅಕ್ಷರ ಗಾತ್ರ : | |

ಬಿಇ ಓದುವಾಗ ಹುಡುಗಿಯೊಬ್ಬಳ ಮೇಲೆ ಪ್ರೀತಿ ಹುಟ್ಟಿತ್ತು. ಆದರೆ ನಾಲ್ಕು ವರ್ಷಗಳಲ್ಲಿ ಸಂಕೋಚ ಮತ್ತು ಭಯದಿಂದ ಅವಳ ಜೊತೆ ಮಾತನಾಡಲಿಲ್ಲ. ಸರ್ಕಾರಿ ಕೆಲಸ ಸಿಕ್ಕಿದ ಮೇಲೆ ವಾಟ್ಸ್‌ಆ್ಯಪ್ ಸಂದೇಶದ ಮೂಲಕ ಪ್ರೀತಿಯನ್ನು ಹೇಳಿಕೊಂಡೆ. ಆದರೆ ಅವಳು ಬೇರೆಯವರನ್ನು ಇಷ್ಟಪಡುತ್ತಿರುವುದು ತಿಳಿಯಿತು. ಇದಾಗಿ ಎರಡು ವರ್ಷಗಳಾದರೂ ಅವಳನ್ನು ಮರೆಯಲಾಗದೆ ಒಂಟಿತನ ಕಾಡುತ್ತಿದೆ. ಸಲಹೆ ನೀಡಿ.

ಹೆಸರು, ಊರು ಇಲ್ಲ.

–ಈಗಿನ ಒಂಟಿತನವನ್ನು ಹೋಗಲಾಡಿಸಿಕೊಳ್ಳಲು ಹೊಸ ಸ್ನೇಹಿತೆಯನ್ನು ಹುಡುಕಬೇಕಲ್ಲವೇ? ಆದರೆ ಹಳೆಯ ನೆನಪುಗಳು ಅದಕ್ಕೆ ಅಡ್ಡಿಯಾಗುತ್ತಿವೆ. ನಿಮ್ಮ ದುಃಖ, ಬೇಸರಗಳಿಗೆ ಮಾತನಾಡುವ ಶಕ್ತಿಯಿದ್ದರೆ ಅದು ನಿಮ್ಮ ಕುರಿತು ಏನೇನು ಹೇಳುತ್ತಿರಬಹುದು? ‘ಇಷ್ಟವಾಗಿರುವವರೆದುರು ನಿನ್ನ ಭಾವನೆಗಳನ್ನು ಹೇಳಿಕೊಳ್ಳಲು ಹಿಂಜರಿಯುತ್ತೀಯಾ, ಹೇಳಿಕೊಂಡರೆ ತಿರಸ್ಕೃತನಾಗಬಹುದೇ ಎನ್ನುವ ಹಿಂಜರಿಕೆ ನಿನ್ನಲ್ಲಿದೆ. ಹಾಗಾಗಿ ನಿನಗೆ ಮುಂದೆ ಕೂಡ ಯಾರದ್ದಾದರೂ ಪ್ರೀತಿಯನ್ನು ಗಳಿಸಿಕೊಳ್ಳುವುದು ಸಾಧ್ಯವಾಗದಿರಬಹದು. ಜೀವನವೆಲ್ಲಾ ಇದೇ ಹಿಂಜರಿಕೆಯಿಂದ ಮತ್ತೆಮತ್ತೆ ಕಳೆದುಕೊಂಡು ಒಂಟಿಯಾಗುತ್ತೀಯಾ’- ಇಂತಹ ಹಲವಾರು ಸೂಚನೆಗಳನ್ನು ಇದು ನೀಡುತ್ತಿರಬಹುದು. ಇವೆಲ್ಲವನ್ನೂ ಬರೆದಿಟ್ಟುಕೊಂಡು ಅವುಗಳಿಂದ ಹೊರಬರುವುದು ಹೇಗೆ ಎಂದು ಯೋಚಿಸಿ.

ಆಕರ್ಷಣೆಯನ್ನು ಪ್ರೀತಿಯಾಗಿ ಬದಲಾಯಿಸಲು ಮೊದಲು ಅದನ್ನು ಹೇಳಿಕೊಳ್ಳಲೇಬೇಕಲ್ಲವೇ? ಹೇಳಿಕೊಂಡಾಗ ಕೆಲವೊಮ್ಮೆ ತಿರಸ್ಕೃತರಾಗಬಹುದು. ಇದನ್ನು ತಿರಸ್ಕಾರವಲ್ಲ, ಅವರವರ ಆಯ್ಕೆಯ ಸ್ವಾತಂತ್ರ್ಯಎಂದುಕೊಳ್ಳಿ. ಹೀಗೆ ತಿರಸ್ಕಾರದ ಹಿಂಜರಿಕೆಯನ್ನು ಮೀರಿದರೆ ಮುಂದಿನ ಹಲವಾರು ಪ್ರಯತ್ನಗಳಲ್ಲಿ ಒಂದರಲ್ಲಾದರೂ ಯಶಸ್ವಿಯಾಗುತ್ತೀರಿ.

***

ವಯಸ್ಸು 28, ಸರ್ಕಾರಿ ನೌಕರ, 2 ವರ್ಷಗಳ ಹಿಂದೆ ಒಬ್ಬ ಹುಡುಗಿಯನ್ನು ಮದುವೆಯಾಗುವ ನಂಬಿಕೆಯಿಂದ ಇಷ್ಟಪಟ್ಟಿದ್ದೆ. ನನ್ನ ಕುಟುಂಬ ಒಪ್ಪದ ಕಾರಣ ಅವಳಿಗೆ ಮದುವೆಯಾಯಿತು. ಹಾಗಾಗಿ ಕುಟುಂಬದ ಯಾವೊಬ್ಬ ಸದಸ್ಯರೊಡನೆ ವಿಶ್ವಾಸದಿಂದ ಮಾತನಾಡಲು ಮನಸ್ಸು ಒಪ್ಪುತ್ತಿಲ್ಲ. ನಾನು ಜೀವನದಲ್ಲಿ ಪಡೆದುಕೊಂಡಿದ್ದು ಏನೂ ಇಲ್ಲ, ಕಳೆದುಕೊಂಡಿದ್ದೇ ಜಾಸ್ತಿ ಅನಿಸ್ತಿದೆ. ಅವಳ ನೆನಪಲ್ಲಿ ಕೆಲವೊಮ್ಮೆ ಮೂರ್ಖನ ತರಹ ಆಲೋಚಿಸಿ ಹುಚ್ಚನಂತಾಗಿದ್ದೇನೆ. ನಾನೀಗ ಏನು ಮಾಡಬಹುದು?

ಹೆಸರು, ಊರು ಬೇಡ.

–ನಿಮಗಿಷ್ಟವಾದ ಹುಡುಗಿಯನ್ನು ಮದುವೆಯಾಗಲು ಮನೆಯವರು ಅವಕಾಶ ಕೊಡಲಿಲ್ಲ ಎಂದು ಯೋಚಿಸಿದಾಗಲೆಲ್ಲಾ ಅವರು ಶತ್ರುಗಳಂತೆ ಕಾಣಿಸುತ್ತಿರಬೇಕಲ್ಲವೇ? ಹಾಗಾಗಿ ಅವರ ಜೊತೆ ಸಹಜವಾಗಿ ಬೆರೆಯಲು ಸಾಧ್ಯವಾಗುತ್ತಿಲ್ಲ. ವಯಸ್ಕರಾಗಿ ಆರ್ಥಿಕವಾಗಿ ಸ್ವಾವಲಂಬಿಯಾಗಿದ್ದರೂ ಇಷ್ಟವಾದವಳನ್ನು ವರಿಸದೆ ಹಿಂಜರಿದವರು ನೀವೇ ಅಲ್ಲವೇ?

ಮನೆಯವರನ್ನು ಪ್ರೀತಿಸುತ್ತಲೇ, ಗೌರವಿಸುತ್ತಲೇ ಅವರನ್ನು ಮೀರಿ ನಿಮ್ಮ ಸ್ವಂತ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳುವುದು ಹೇಗೆ ಎಂದು ಯೋಚಿಸಿ. ಆರಂಭದಲ್ಲಿ ಭಿನ್ನಾಭಿಪ್ರಾಯಗಳು ಸಹಜ. ಅಂತಹ ಸಮಯದಲ್ಲಿ ನಿಮ್ಮ ಮನಸ್ಸಿನ ಸಮತೋಲನವನ್ನು ಕಾಯ್ದುಕೊಳ್ಳುವುದರ ಜೊತೆಗೆ ಅವರ ಒತ್ತಡಗಳಿಗೆ ಮಣಿಯದೆ ಇರುವ ಗಟ್ಟಿತನ ಬೆಳೆಸಿಕೊಳ್ಳುತ್ತಾ ಹೋಗಿ. ನಿಧಾನವಾಗಿ ಸ್ವಂತಿಕೆಯನ್ನು ಕಳೆದುಕೊಳ್ಳದೆ ಎಲ್ಲರೊಡನೆ ಪ್ರೀತಿಯಿಂದ ಬದುಕುವ ಹದವನ್ನು ಕಲಿಯುತ್ತೀರಿ. ಆಗ ನಾನು ಜೀವನದಲ್ಲಿ ಕಳೆದುಕೊಂಡದ್ದೇ ಹೆಚ್ಚು ಎನ್ನುವ ಬೇಸರದಿಂದ ಹೊರಬಂದು ನಿಮಗೆ ಬೇಕಾದ್ದನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ.

(ಅಂಕಣಕಾರ ಶಿವಮೊಗ್ಗದಲ್ಲಿ ಮನೋಚಿಕಿತ್ಸಕರು)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು