ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒನಿಕೊಫೇಜಿಯಾ | ಉಗುರು ಕಚ್ಚುವ ಗೀಳು ತಪ್ಪಿಸುವುದು ಹೇಗೆ ?

Last Updated 20 ಮೇ 2022, 19:30 IST
ಅಕ್ಷರ ಗಾತ್ರ

ಹನ್ನೊಂದು ವರ್ಷದ ಸೌಮ್ಯ ಪದೇ ಪದೇ ಉಗುರು ಕಚ್ಚುತ್ತಲೇ ಇರುತ್ತಾಳೆ. ತಂದೆ ತಾಯಿ ಅದೆಷ್ಟೇ ಬಾರಿ ಹೇಳಿದರೂ ಈ ಅಭ್ಯಾಸ ಬಿಡುತ್ತಿಲ್ಲ. ಇದರಿಂದಾಗಿ ಉಗುರಿನ ಬುಡದಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಊಟ ಮಾಡುವಾಗ ಬೆರಳು ಉರಿಯುತ್ತಿವೆ ಎಂದು ಕೈಯಿಂದ ಊಟಮಾಡದೇ ಚಮಚ ಬಳಸುತ್ತಾಳೆ. ಪೋಷಕರಿಗೆ ಇದೊಂದು ದೊಡ್ಡ ತಲೆನೋವಾಗಿದೆ.

ಸೌಮ್ಯಳಷ್ಟೇ ಅಲ್ಲ, ಹಲವು ಮಕ್ಕಳಲ್ಲಿ ಈ ಗೀಳು ಇದೆ. ಇದು ವಯಸ್ಕರಲ್ಲೂ ಇದೆ. ಉಗುರು ಕಚ್ಚುವಿಕೆಯನ್ನು ಮನೋವಿಜ್ಞಾನದಲ್ಲಿ ‘ಒನಿಕೊಫೇಜಿಯಾ’ ಎನ್ನುತ್ತಾರೆ. ಇದು ತಾತ್ಕಾಲಿಕ ಹಾಗೂ ಅನಪೇಕ್ಷಿತ ನಡವಳಿಕೆ. ವೃತ್ತಿಪರ ಆರೋಗ್ಯ ಕಾರ್ಯಕರ್ತರ ಮಾರ್ಗಸೂಚಿಗಳ ಪ್ರಕಾರ ಇದೊಂದು ಮಾನಸಿಕ ಗೀಳು.

ಯಾವ ಕಾರಣಕ್ಕೆ ಈ ಗೀಳು
* ಒತ್ತಡ ಮತ್ತು ಆತಂಕ ಉಂಟಾಗುವ ಸಮಯದಲ್ಲಿ, ಆ ಸನ್ನಿವೇಶದಿಂದ ಪಾರಾಗಲು ಉಗುರು ಕಚ್ಚುತ್ತಿರುತ್ತಾರೆ. ಬಾಲ್ಯದಲ್ಲಿ ಬೆರಳು ಚೀಪುವ ಅಭ್ಯಾಸ ಕ್ರಮೇಣವಾಗಿ, ಉಗುರು ಕಚ್ಚುವ ಚಟವಾಗಿ ಮಾರ್ಪಾಡಾಗಿರುತ್ತದೆ.

* ಕೆಲವರು ಏಕತಾನತೆಯಿಂದ ಹೊರಬರಲು ಈ ಗೀಳು ಅಂಟಿಸಿಕೊಂಡಿರುತ್ತಾರೆ. ಮನೆಯಲ್ಲಿ ಜಗಳದ ವಾತಾವರಣ, ತಮ್ಮೊಳಗಿನ ನೋವನ್ನು ಮರೆ ಮಾಚಲೂ ಈ ಅಭ್ಯಾಸ ಮಾಡಿಕೊಂಡಿರುತ್ತಾರೆ.

* ಈ ಗೀಳು ಒಂದಷ್ಟು ಮಂದಿಗೆ ಹಿತವಾದ ಭಾವ ನೀಡುತ್ತದೆ. ಇನ್ನೂ ಕೆಲವರು ಬೇರೆಯವರನ್ನು ಅನುಕರಿಸುತ್ತಾ ಅಭ್ಯಾಸ ಮಾಡಿಕೊಂಡಿರುತ್ತಾರೆ.

ಇವಿಷ್ಟೇ ಅಲ್ಲ. ಇನ್ನೂ ಅನೇಕ ಕಾರಣಗಳಿವೆ. ಅವು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತವೆ.

ಪರಿಣಾಮಗಳು
ಉಗುರು ಕಚ್ಚುವಿಕೆಯಿಂದ ಭೌತಿಕ ಪರಿಣಾಮಗಳ ಜೊತೆಗೆ ಮಾನಸಿಕ ಪರಿಣಾಮಗಳೂ ಉಂಟಾಗುತ್ತದೆ ಎನ್ನುತ್ತಾರೆ ಮನೋರೋಗ ತಜ್ಞರು. ಉಗುರು ಕಚ್ಚವಿಕೆಯು ತೀವ್ರವಾಗಿದ್ದಾಗ ಬೆರಳಿನ ತುದಿಗಳ ಅಂಗಾಂಶಕ್ಕೆ ಹಾನಿಯಾಗಿ ರಕ್ತಸ್ರಾವ ಆಗುತ್ತದೆ. ಇದರಿಂದ ಅಂಗಿಯ ಬಟನ್ ಹಾಕಿಕೊಳ್ಳುವುದು, ಊಟ ಮಾಡುವುದು ಸೇರಿದಂತೆಬೆರಳು ಬಳಸಿ ಮಾಡುವ ಚಿಕ್ಕ ಚಿಕ್ಕ ಕೆಲಸಗಳಿಗೂ ತೊಂದರೆಯಾಗುತ್ತದೆ. ಮಾತ್ರವಲ್ಲ, ದಂತ ಮತ್ತು ದಂತಕವಚಕ್ಕೆ ಹಾನಿಯಾಗುತ್ತದೆ. ಈ ಗೀಳು ಅತಿಯಾದರೆ ಮಾನಸಿಕ ಹಿಂಸೆಯು ಪ್ರತೀಕಾರವಾಗಿ ಹೊರಹೊಮ್ಮಬಹುದು ಎನ್ನುತ್ತಾರೆ ಮನಃಶಾಸ್ತ್ರಜ್ಞರು.

ಪರಿಹಾರವೇನು
ಈ ಗೀಳನ್ನು ನಿವಾರಿಸಲು ನಿಗದಿತ ಔಷಧಗಳಿಲ್ಲ. ಈ ಅಭ್ಯಾಸದ ಹಿಂದಿನ ಕಾರಣ ಪತ್ತೆ ಮಾಡಿ, ಅದಕ್ಕೆ ಪರಿಹಾರ ಕಂಡು ಹಿಡಿಯುವುದೊಂದೇ ಇರುವ ದಾರಿ ಎಂಬುದು ಮನಃಶಾಸ್ತ್ರಜ್ಞರ ಅಭಿಪ್ರಾಯ. ಈ ಗೀಳು ಹೆಚ್ಚಾಗಿ ಕಾಣವುದು ಮಕ್ಕಳಲ್ಲಿ (ಕೆಲವರಲ್ಲಿ ದೊಡ್ಡವರಾದ ಮೇಲೂ ಇದು ಮುಂದುವರಿದಿರುತ್ತದೆ). ಆದ್ದರಿಂದ ಈ ಚಟವನ್ನು ‘ಚಿಗುರಿ’ ನಲ್ಲೇ ಚಿವುಟಿ ಹಾಕಬೇಕು. ಈ ವಿಷಯದಲ್ಲಿ ಪೋಷಕರು ಮತ್ತು ಶಿಕ್ಷಕರು ಹೆಚ್ಚು ಮುತುವರ್ಜಿ ವಹಿಸಬೇಕು. ಮೊದಲಿಗೆ ಗೀಳಿಗೆ ಕಾರಣಗಳನ್ನು ಅರ್ಥ ಮಾಡಿಕೊಳ್ಳಬೇಕು. ಇದು ಪರಿಹಾರದ ಮೊದಲ ಹೆಜ್ಜೆ.

ಪೋಷಕರು ಏನು ಮಾಡಬಹುದು?
*
ಆಗಾಗ್ಗೆ ಮಕ್ಕಳ ಉಗುರುಗಳನ್ನು ಕತ್ತರಿಸಿ.

* ಯಾವ ಸಂದರ್ಭದಲ್ಲಿ ಮಕ್ಕಳು ಉಗುರು ಕಚ್ಚುತ್ತಾರೆಂದು ಗಮನಿಸಿ, ಆ ಸಮಯದಲ್ಲಿ ಅವರ ಮನಸ್ಸನ್ನು ಬೇರೆಡೆಗೆ ತಿರುಗಿಸಲು ಪ್ರಯತ್ನಿಸಿ. ‘ಇದೊಂದು ದುರಾಭ್ಯಾಸ. ಇದರಿಂದ ಮನಸ್ಸು–ದೇಹ ಎರಡೂ ಹಾಳಾಗುತ್ತದೆ‘ ಎಂದು ಮಕ್ಕಳಲ್ಲಿ ಅರಿವು ಮೂಡಿಸಬೇಕು.

* ಬೆರಳು ಚೀಪುವ ಅಭ್ಯಾಸವಿರುವ ಮಕ್ಕಳ ಉಗುರುಗಳಿಗೆಕಹಿ ರುಚಿಯ ಉತ್ಪನ್ನಗಳನ್ನು ಲೇಪಿಸಿ, ಈ ಅಭ್ಯಾಸ ತಪ್ಪಿಸಬಹುದು. ಚಿಕ್ಕ ಮಕ್ಕಳಿಗಾದರೆ ಕೈಗವಸುಗಳನ್ನು ಹಾಕಬೇಕು.

* ಉಗುರಿನ ಕೆಳಗೆ ಕೊಳೆ, ಬ್ಯಾಕ್ಟೀರಿಯಾಗಳು ಸೇರದಂತೆ ಎಚ್ಚರಿಕೆ ವಹಿಸುವುದು. ಆಗಾಗ ಬಿಸಿ ನೀರಿನಿಂದ ಬೆರಳುಗಳನ್ನು ಸ್ವಚ್ಛವಾಗಿಸಬೇಕು.

ಶಿಕ್ಷಕರ ಪಾತ್ರವೂ ಮುಖ್ಯ
* ಶಾಲೆಗಳಲ್ಲಿ ಶಿಕ್ಷಕರು ಇಂಥ ಗೀಳು ಬೆಳೆಸಿಕೊಂಡಿರುವ ಮಕ್ಕಳನ್ನು ಗುರುತಿಸಬೇಕು. ಅವರು ಯಾವ ಸಂದರ್ಭದಲ್ಲಿ ಹೀಗೆ ನಡೆದು ಕೊಳ್ಳುತ್ತಾರೆಂದು ಪತ್ತೆ ಮಾಡಿ, ಅದಕ್ಕೆ ತಕ್ಕಂತೆ ಪರಿಹಾರ ಸೂಚಿಸಬೇಕು.

* ಪರೀಕ್ಷೆ ಭಯ, ಏಕತಾನತೆಯ ಬೇಸರ ಇಂಥವುಗಳಿಂದ ಹೊರಬರಲು ಮಕ್ಕಳು ಉಗುರು ಕಚ್ಚುವ ಅಭ್ಯಾಸ ಬೆಳೆಸಿಕೊಂಡಿರುತ್ತಾರೆ. ಅಂಥ ಮಕ್ಕಳನ್ನು ಎಲ್ಲರೊಂದಿಗೆ ಬೆರೆಯುವಂತೆ ಮಾಡಬೇಕು. ಅದಕ್ಕಾಗಿ ಪಠ್ಯದ ಜೊತೆಗೆ ಹೆಚ್ಚು ಪಠ್ಯೇತರ ಚಟುವಟಿಕೆ(ಮಕ್ಕಳಿಗೆ ಇಷ್ಟವಾದದ್ದು)ಗಳಲ್ಲಿ ಭಾಗವಹಿಸುವಂತೆ ಅವರನ್ನು ಉತ್ತೇಜಿಸಬೇಕು.

* ಉಗುರು ಕಚ್ಚುವುದನ್ನು ಕಂಡಾಕ್ಷಣ ಸ್ನೇಹಿತರು ಎಚ್ಚರಿಸುವಂತೆ ಹೇಳುವುದು ಒಂದು ಸೂಕ್ತ ವಿಧಾನ.

***

ಆತಂಕ ಮನೋವೇದನೆಯ ಸಾಮಾನ್ಯ ಲಕ್ಷಣವಾದ ಈ ಗೀಳನ್ನು ಹೋಗಲಾಡಿಸಲು ಯಾವುದೇ ಸಿದ್ಧ ಔಷಧಗಳಿಲ್ಲ. ಆತಂಕ ನಿವಾರಿಸುವ ತಂತ್ರಗಳಿಂದ ಮಾತ್ರ ಇದನ್ನು ಹೋಗಲಾಡಿಸಲು ಸಾಧ್ಯವಿದೆ.
ಡಾ. ಅರುಣಾ ಯಡಿಯಾಳ್, ಮನೋವೈದ್ಯೆ, ಮಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT