ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಪಂದನ: ಪಿಸಿಒಡಿಯಿಂದ ಮಕ್ಕಳಾಗಲು ಸಮಸ್ಯೆಯೇ?

Last Updated 27 ಆಗಸ್ಟ್ 2021, 19:30 IST
ಅಕ್ಷರ ಗಾತ್ರ

ಪ್ರಶ್ನೆ: ನನಗೆ 23 ವರ್ಷ. ಮುಟ್ಟು ತಿಂಗಳು ತಿಂಗಳಿಗೆ ಸರಿಯಾಗಿ ಆಗುವುದಿಲ್ಲ. ಪಿಸಿಒಡಿ ಸಮಸ್ಯೆ ಇದೆ. ವೈದ್ಯರಿಗೆ ತೋರಿಸಿದ್ದು, ಕಳೆದ ಆರು ವರ್ಷಗಳಿಂದ ಔಷಧ ತೆಗೆದುಕೊಳ್ಳುತ್ತಿದ್ದೇನೆ. ಮುಂದೆ ಮದುವೆ ಆದ ಮೇಲೆ ಮಕ್ಕಳಾಗೋಕೆ ಸಮಸ್ಯೆ ಆಗುತ್ತದೆಯೇ? ಸಹಜ ಪರಿಹಾರವಿದೆಯೇ?
-ಪೂಜಾ, ಕಲಬುರ್ಗಿ

ಪೂಜಾ, ನಿಮಗಿರುವುದು ಪಿಸಿಒಡಿ ಸಮಸ್ಯೆ. ನೀವು ಈಗಾಗಲೇ ವೈದ್ಯರ ಸಲಹೆಯ ಮೇರೆಗೆ ಚಿಕಿತ್ಸೆ ಪಡೆದುಕೊಂಡಿದ್ದರೂ ನಿಮ್ಮ ಸಮಸ್ಯೆ ಬಗೆಹರಿದಿಲ್ಲ. ನೀವು ನಿಮ್ಮ ತೂಕವನ್ನು ಸರಿಯಾಗಿರುವ ಹಾಗೇ ನಿರ್ವಹಣೆ ಮಾಡಿದ್ದೀರಾ? ನಿಮ್ಮ ಜೀವನಶೈಲಿ ಬದಲಿಸಿಕೊಂಡಿರುವಿರೇ? ಪಿಸಿಒಡಿ ಸಮಸ್ಯೆ ಮುಂದುವರಿದರೆ ಮುಂದೆ ಮದುವೆ ಆದ ಮೇಲೆ ಮಕ್ಕಳಾಗುವುದು ಕಷ್ಟವಾಗಬಹುದು. ಆದರೂ ಸೂಕ್ತ ಚಿಕಿತ್ಸೆ ಹಾಗೂ ಜೀವನಶೈಲಿ ಸುಧಾರಣೆಯಿಂದ ಅಸಾಧ್ಯವೇನೂ ಅಲ್ಲ. ತೂಕ ಹೆಚ್ಚಿದ್ದರೆ ಕನಿಷ್ಠ ಶೇ 10ರಷ್ಟು ತೂಕ ಕಡಿಮೆ ಮಾಡಿಕೊಳ್ಳದಿದ್ದರೆ, ವೈದ್ಯರು ಕೊಟ್ಟ ಔಷಧಿ ಪರಿಣಾಮ ಬೀರುವುದಿಲ್ಲ. ಶೇ 20ರಷ್ಟು ಮಂದಿಯಲ್ಲಿ ತೆಳ್ಳಗಿದ್ದರೂ ಪಿಸಿಒಡಿ ಇರುತ್ತದೆ. ಇದರಲ್ಲಿ ಕೇವಲ ಮುಟ್ಟಿನ ಸಮಸ್ಯೆ, ಬಂಜೆತನವಷ್ಟೇ ಅಲ್ಲ ಹಾಗೆಯೇ ಮುಂದುವರೆದರೆ ಧೀರ್ಘಾವಧಿ ಆರೋಗ್ಯ ಸಮಸ್ಯೆ, ಟೈಪ್2 ಮಧುಮೇಹ, ಏರು ರಕ್ತದೊತ್ತಡ, ಹೃದಯ ಹಾಗೂ ರಕ್ತಸಂಬಂಧಿ ಕಾಯಿಲೆಗಳು, ಖಿನ್ನತೆ, ನಿದ್ರೆಯಲ್ಲಿ ಉಸಿರಾಟದ ತೊಂದರೆ, ಎಂಡೋಮೆಟ್ರಿಯಲ್ ಕ್ಯಾನ್ಸರ್ ಇತ್ಯಾದಿ ಸಮಸ್ಯೆ ಕಾಣಿಸಿಕೊಳ್ಳಬಹುದು. ನೀವು ತಜ್ಞ ವೈದ್ಯರ ಚಿಕಿತ್ಸೆ ಹಾಗೂ ಸಲಹೆ ಮುಂದುವರಿಸಿ.

ಸಹಜ ಪರಿಹಾರಕ್ರಮ ಎಂದರೆ ಜೀವನಶೈಲಿ ಬದಲಾವಣೆ. ನಮ್ಮ ಆಹಾರಕ್ರಮ, ದೈಹಿಕ ಚಟುವಟಿಕೆ, ನಿದ್ರೆ, ದುಶ್ಚಟಕ್ಕೆ ಒಳಗಾಗಿದ್ದೇವೆಯೇ, ಎಂಬುದನ್ನು ಒಳಗೊಳ್ಳುತ್ತದೆ. ಆಹಾರ ಪದ್ಧತಿಗಳು ಹಲವಾರು ಇದ್ದರೂ ದೀರ್ಘಕಾಲದವರೆಗೆ ಅನುಸರಿಸಬಲ್ಲ ಸರಳ ಡಯೆಟ್ ಪದ್ಧತಿ ಅನುಸರಿಸುವುದು ಬಹಳ ಮುಖ್ಯವಾಗುತ್ತದೆ. ಕಡಿಮೆ ಕ್ಯಾಲೊರಿ, ಕಡಿಮೆ ಶರ್ಕರ– ಪಿಷ್ಟ, ಕಡಿಮೆ ಕೊಬ್ಬಿನಾಂಶ, ಹೆಚ್ಚು ಪ್ರೊಟೀನ್ ಅಂಶವುಳ್ಳ ಆಹಾರಸೇವನೆ ಮುಖ್ಯ. ಜಂಕ್‌ಫುಡ್ ಸೇವನೆ ಬೇಡವೇ ಬೇಡ. ಹಸಿರು ಸೊಪ್ಪು, ತರಕಾರಿಗಳು ಅದರಲ್ಲೂ ಎಲೆಕೋಸು, ಬಸಳೆ, ಪಾಲಕ್, ಮೂಲಂಗಿ- ಇನ್ನಿತರ ಸೊಪ್ಪು– ತರಕಾರಿಗಳನ್ನು ಹೇರಳವಾಗಿ ಸೇವಿಸಬೇಕು. ಒಮೆಗಾ–3 ಹೆಚ್ಚಿರುವ ವಾಲ್‌ನಟ್, ಆಲಿವ್ ಎಣ್ಣೆ, ಒಮೆಗಾ–6 ಅಂಶ ಹೆಚ್ಚಿರುವ ಸ್ಯಾಮನ್‌ ಮೀನು ಇತ್ಯಾದಿ ಸೇವಿಸಿ. ಕೆಂಪಕ್ಕಿ, ಸಿರಿಧಾನ್ಯಗಳ ಸೇವನೆ ರಕ್ತದಲ್ಲಿ ಸಕ್ಕರೆ ಪ್ರಮಾಣ ಕಾಯ್ದುಕೊಳ್ಳಲು ಸಹಾಯಕ. ಒಟ್ಟಾರೆ ದೀರ್ಘಾವಧಿಯವರೆಗೆ ಅನುಸರಿಸಬಲ್ಲ ಸರಳ, ಸುಲಭ, ಪ್ರಕೃತಿದತ್ತ, ಸುಲಭವಾಗಿ ಜೀರ್ಣವಾಗುವ ಸಾತ್ವಿಕ ಆಹಾರ ಹಾಗೂ ಋತುಗನುಗುಣವಾಗಿ ಸ್ಥಳಿಯವಾಗಿ ಸಿಗುವ ತಾಜಾ ಆಹಾರಗಳ ಸೇವನೆ ಬಹುಮುಖ್ಯ. ಜೊತೆಗೆ ಟಿ.ವಿ ವೀಕ್ಷಣೆ ಮಾಡುತ್ತ, ವೃತ್ತಪತ್ರಿಕೆ ಓದುತ್ತಾ, ತಿನ್ನುವುದನ್ನು ಬಿಟ್ಟು ಮನವಿಟ್ಟು ಆಹಾರ ಸೇವನೆ ಮಾಡಬೇಕು (ಮೈಂಡ್ ಫುಲ್ ಈಟಿಂಗ್). ಪ್ರತಿದಿನ ಕನಿಷ್ಠ ಒಂದು ಗಂಟೆ ದೈಹಿಕ ಚಟುವಟಿಕೆ ಅತ್ಯವಶ್ಯಕ. ಯೋಗಾಸನ, ಧ್ಯಾನ, ಪ್ರಾಣಾಯಾಮ ಸಹಾಯಕ. ವೈದ್ಯರ ಸಲಹೆಯ ಮೇರೆಗೆ ಉಳಿದ ಚಿಕಿತ್ಸೆ ಪಡೆದರೆ ನಿಮಗೆ ಮಕ್ಕಳಾಗುತ್ತದೆ. ಚಿಂತಿಸಬೇಡಿ.

***

ಪ್ರಶ್ನೆ: ನನಗೆ ಮದುವೆಯಾಗಿ ಒಂದೂವರೆ ವರ್ಷ ಆಗಿದೆ. ಮಗುವಿಗೆ ಪ್ರಯತ್ನ ಮಾಡುತ್ತಿದ್ದೇವೆ, ಮಕ್ಕಳಾಗಿಲ್ಲ. ಮುಟ್ಟು ಸರಿಯಾದ ಸಮಯಕ್ಕೆ ಆಗುತ್ತಿಲ್ಲ. 2–3 ತಿಂಗಳಿಗೆ, ಅದೂ ವೈದ್ಯರ ಹತ್ತಿರ ತೋರಿಸಿ ಔಷಧಿಯನ್ನು ತೆಗೆದುಕೊಂಡಾಗ ಆಗುತ್ತದೆ. ಪರಿಹಾರ ತಿಳಿಸಿ.
-ರಾಧಿಕಾ, ಊರಿನ ಹೆಸರು ತಿಳಿಸಿಲ್ಲ

ನಿಮಗೆ ಪಿಸಿಓಡಿ ಸಮಸ್ಯೆ ಇದೆ ಎಂದೆನಿಸುತ್ತದೆ. ನೀವು ಸೂಕ್ತ ತಜ್ಞವೈದ್ಯರ ಚಿಕಿತ್ಸೆಯನ್ನು ಮುಂದುವರೆಸಿ. ನಿಯಮಿತ ಋತುಚಕ್ರ ಆಗಲು, ಅಂಡೋತ್ಪತ್ತಿಯನ್ನು ನಿಯಮಿತವಾಗಿ ಪ್ರಚೋದಿಸಲು, ಬಂಜೆತನವನ್ನು ನೀಗಿಸಲು ಹಲವು ಪರಿಣಾಮಕಾರಿ ಔಷಧಿಗಳು ಈಗ ಲಭ್ಯವಿದೆ. ನೀವು ತಜ್ಞ ವೈದ್ಯರ ಸಲಹೆಯ ಮೇರೆಗೆ ಅವುಗಳನ್ನು ಸೂಕ್ತವಾಗಿ ಬಳಸಿ. ಜೊತೆಗೆ ಮೇಲೆ ತಿಳಿಸಿದ ಹಾಗೇ ನಿಮ್ಮ ಜೀವನಶೈಲಿಯನ್ನು ಬದಲಿಸಿಕೊಳ್ಳಿ. ಆದಷ್ಟು ಬೇಗನೇ ನಿಮಗೆ ಮಗು ಆಗಲಿ.

***

ಪ್ರಶ್ನೆ: ನನಗೆ 30 ವರ್ಷ. ಹೆಂಡತಿಗೆ 26 ವರ್ಷ. ಮದುವೆಯಾಗಿ ಒಂದು ವರ್ಷವಾಯಿತು. ನನ್ನ ಹೆಂಡತಿಗೆ ಪಿ.ಸಿ.ಓ.ಡಿ ಸಮಸ್ಯೆ ಇತ್ತು ನಂತರದಲ್ಲಿ ಎಲ್ಲಾ ಸರಿ ಆಯ್ತು. ಎರಡು ತಿಂಗಳು ಗರ್ಭಿಣಿಯೂ ಇದ್ದಳು. ಮೂರನೇ ತಿಂಗಳಿಗೆ ತನ್ನಿಂತಾನೆ ಗರ್ಭಪಾತ ಆಯ್ತು. ಈಗ ಮತ್ತೆ ಗರ್ಭಧಾರಣೆಗೆ ಸರಿಯಾದ ವೇಳೆಯಲ್ಲಿಯೇ ಸೇರುತ್ತಿದ್ದೇವೆ. ಆದರೆ ಗರ್ಭಪಾತ ಆಗಿದ್ದು ಏಕೆ? ಪುನಃ ಗರ್ಭಧಾರಣೆ ಆದಾಗ ಯಾವ ರೀತಿಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕೆಂದು ದಯವಿಟ್ಟು ತಿಳಿಸಿಕೊಡಿ.
-ಹೆಸರು, ಊರು ತಿಳಿಸಿಲ್ಲ.

ಉತ್ತರ: ಪಿಸಿಓಡಿಯಲ್ಲಿ ಗರ್ಭಪಾತವಾಗುವುದು, ಗರ್ಭಧಾರಣೆಯಾದಾಗ ಮಧುಮೇಹ, ಏರುರಕ್ತದೊತ್ತಡ ಬರುವುದು, ಮಗುವಿನ ಬೆಳವಣಿಗೆ ಕುಂಠಿತವಾಗುವುದು ಇವೆಲ್ಲಾ ಸಾಮಾನ್ಯ ತೊಂದರೆಗಳಾಗಿವೆ. ಆದ್ದರಿಂದ ನೀವು ಇನ್ನೊಂದು ಗರ್ಭಧಾರಣೆಯಾಗುವ ಮೊದಲೇ, ಈಮೇಲೆ ತಿಳಿಸಿದ ಜೀವನ ಶೈಲಿಯನ್ನು ಅನುಸರಿಸಿ, ತೂಕ ಹೆಚ್ಚಿದ್ದರೆ ನಿರ್ವಹಣೆ ಮಾಡಿಕೊಂಡು ತಜ್ಞವೈದ್ಯರ ಸಲಹೆ ಮೇರೆಗೆ ಸೂಕ್ತ ಚಿಕಿತ್ಸೆ ತೆಗೆದುಕೊಂಡು ಆರೋಗ್ಯವಂತ ಮಗುವನ್ನು ಪಡೆಯಬಹುದು. ಗರ್ಭಧಾರಣೆಗೂ 6ವಾರ ಮೊದಲೇ ಫೋಲಿಕ್ ಆಸಿಡ್ ಮಾತ್ರೆಯನ್ನು ದಿನಾಲೂ ಸೇವಿಸುವುದನ್ನು ಮರೆಯಬೇಡಿ. ಗರ್ಭಧಾರಣೆಯಾದಾಗ ಹತ್ತಿರದಲ್ಲಿರುವ ತಜ್ಞವೈದ್ಯರ ಸಲಹೆ ಚಿಕಿತ್ಸೆ ಪಡೆಯಿರಿ. ಮೇಲೆ ತಿಳಿಸಿದ ಹಾಗೇ ಉತ್ತಮ ಆಹಾರ ಪದ್ಧತಿಯನ್ನು ಅನುಸರಿಸಿ.

***

ಪ್ರಶ್ನೆ: ನನಗೆ 20 ವರ್ಷ. ನನ್ನ ಗಂಡನಿಗೆ 31 ವರ್ಷ. ನನಗೆ ಗಂಡನಿಗೆ 31 ವರ್ಷ, ನನಗೆ ನಿಯಮಿತವಾಗಿ ಮುಟ್ಟಾಗುತ್ತಿಲ್ಲ. ಒಮ್ಮೊಮ್ಮೆ ಮೂರು ತಿಂಗಳಾದರೂ ಮುಟ್ಟಾಗುವುದಿಲ್ಲ. ಈಗ ಸಂತಾನಕ್ಕಾಗಿ ಪ್ರಯತ್ನಿಸುತ್ತಿದ್ದೇವೆ. ಆದರೆ ಹೆಚ್ಚು ದಪ್ಪ ಇರುವುದರಿಂದ ಹಾಗೂ ಮುಟ್ಟಿನ ಸಮಸ್ಯೆ ಇರುವುದರಿಂದಾಗಿ ಗರ್ಭ ಧರಿಸುವುದು ತಡವಾಗುತ್ತಿದೆ ಎಂದು ವೈದ್ಯರು ಹೆಳಿದ್ದಾರೆ. ಈ ಸಮಸ್ಯೆಗೆ ಪರಿಹಾರ ತಿಳಿಸಿ?
-ಅರ್ಚನಾ, ಚಿಂತಾಮಣಿ

ಉತ್ತರ: ನೀವು ಈ ಮೇಲೆ ತಿಳಿಸಿದ ಹಾಗೆ ಆಹಾರ ಪದ್ಧತಿಯನ್ನು ಅನುಸರಿಸಿ. ಶೇ 10ರಷ್ಟು ನಿಮ್ಮ ತೂಕವನ್ನು ಕಡಿಮೆ ಮಾಡಿಕೊಂಡರಷ್ಟೇ ವೈದ್ಯರ ಚಿಕಿತ್ಸೆ ಕೂಡಾ ಫಲಕಾರಿಯಾಗುತ್ತದೆ. ವೈದ್ಯಕೀಯ ಚಿಕಿತ್ಸೆಯ ಜೊತೆಗೆ ತೂಕ ಕಡಿಮೆ ಮಾಡಿಕೊಳ್ಳುವುದು, ಅದರಲ್ಲೂ ಜೀವನಶೈಲಿ ಬದಲಾವಣೆ ಬಹಳ ಮುಖ್ಯ. ನೀವು ಈಗಿನಿಂದಲೇ ಅದಕ್ಕಾಗಿ ಪ್ರಯತ್ನಸಿ, ಅದಷ್ಟು ಬೇಗ ಮಗುವನ್ನ ಪಡೆಯಿರಿ.

***

ಪ್ರಶ್ನೆ: ನಮಗೆ ಹತ್ತು ತಿಂಗಳು ಒಂದು ಹೆಣ್ಣು ಮಗು ಇದೆ. ನನ್ನ ಹೆಂಡತಿಗೆ ಅನಿಯಮಿತ ಮುಟ್ಟಿನ ಸಮಸ್ಯೆ ಇದೆ. ಪರಿಹಾರವೇನು?
-ದಯಾನಂದ, ಊರಿನ ಹೆಸರಿಲ್ಲ

ಉತ್ತರ: ದಯಾನಂದ್‌ರವರೇ, ನಿಮ್ಮ ಹೆಂಡತಿಗೆ ಮಗುವಿಗೆ ಎದೆಹಾಲುಣಿಸುತ್ತಿರಬಹುದು. ಅದನ್ನು ಎರಡು ವರ್ಷದವರೆಗೂ ಮುಂದುವರಿಸಲಿ. ಜೊತೆಗೆ ಇನ್ನೊಂದು ಮಗುವಾಗಲು ಕನಿಷ್ಠ ಇನ್ನೆರಡು ವರ್ಷವಾದರೂ ಅಂತರವಿರಲಿ. ಹಾಗಾಗಿ ವೈದ್ಯರ ಸಲಹೆಯ ಮೇರೆಗೆ ಉತ್ತಮ ದರ್ಜೆಯ ಸಂತಾನ ನಿಯಂತ್ರಣ ಮಾತ್ರೆಗಳನ್ನು ನಿಮ್ಮ ಪತ್ನಿ ನುಂಗಬಹುದು. ಇಲ್ಲವೇ ನೀವು ಲೈಂಗಿಕ ಕ್ರಿಯೆಯ ಸಮಯದಲ್ಲಿ ಕಾಂಡೋಮ್ ಬಳಸಬಹುದು ಅಥವಾ ಕಾಪರ್ಟಿಯನ್ನು ನಿಮ್ಮ ಮಡದಿ ಅಳವಡಿಸಿಕೊಳ್ಳಬಹುದು. ಆಯ್ಕೆ ನಿಮ್ಮಬ್ಬರಿಗೆ ಬಿಟ್ಟಿದ್ದು.

ಡಾ. ವೀಣಾ ಎಸ್‌. ಭಟ್‌
ಡಾ. ವೀಣಾ ಎಸ್‌. ಭಟ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT