ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾಯಿಗೆ ಕೋವಿಡ್‌ ಇದ್ದರೆ ಶಿಶುವಿಗೆ ಸಂಗ್ರಹಿಸಿದ ಎದೆಹಾಲುಣಿಸಿ

Last Updated 20 ನವೆಂಬರ್ 2020, 20:57 IST
ಅಕ್ಷರ ಗಾತ್ರ

ಬೆಂಗಳೂರು: ಭಾರತದಲ್ಲಿ ಕೇವಲ ಶೇ 1ರಷ್ಟು ನವಜಾತ ಶಿಶುಗಳಿಗೆ ಕೊರೊನಾ ಪಾಸಿಟಿವ್ ಇರುವ ತಾಯಂದಿರಿಂದ ಸೋಂಕು ಹರಡಿದೆ. ಆದರೆ ಈ ತಾಯಂದಿರು ತಮ್ಮ ನವಜಾತ ಶಿಶುಗಳಿಗೆ ಎದೆಹಾಲುಣಿಸುವ ಮುನ್ನ ಎನ್95 ಮಾಸ್ಕ್ ಧರಿಸಬೇಕು; ತಮ್ಮ ಎದೆಯನ್ನು ಸ್ವಚ್ಛಗೊಳಿಸಿಕೊಳ್ಳಬೇಕು ಮತ್ತು ಕೈಗಳನ್ನು ಸ್ಯಾನಿಟೈಸ್ ಮಾಡಿಕೊಳ್ಳಬೇಕು. ಹಾಗೆಯೇ ಸಂಗ್ರಹಿಸಿದ ಎದೆಹಾಲನ್ನು ಕುಟುಂಬಸ್ಥರು ಮಗುವಿಗೆ ಉಣಿಸುವುದು ಅತ್ಯಂತ ಸುರಕ್ಷಿತ ಕ್ರಮ.

‘ಸೋಂಕಿನ ಲಕ್ಷಣಗಳು ಇರುವ ತಾಯಂದಿರಿಂದ 10 ದಿನಗಳವರೆಗೆ ಇತರರಿಗೆ ಸೋಂಕು ಹರಡುವ ಸಾಧ್ಯತೆಗಳಿರುತ್ತವೆ. ಈ ಅವಧಿಯಲ್ಲಿ, ತಾಯಿಯು ಎದೆ ಹಾಲುಣಿಸದಿರುವ ವೇಳೆಯಲ್ಲಿ ಕುಟುಂಬದ ಇತರೆ ಸದಸ್ಯರು ನವಜಾತ ಶಿಶುವಿನ ಆರೋಗ್ಯ, ಸುರಕ್ಷತೆ ಮತ್ತು ಲಾಲನೆ ಪಾಲನೆ ಮಾಡಬೇಕು ಮತ್ತು ಎಚ್ಚರಿಕೆ ವಹಿಸಬೇಕು. ಕೊರೊನಾ ಪಾಸಿಟಿವ್ ಇರುವ ತಾಯಿಯಲ್ಲಿ ಸೋಂಕು ನಿವಾರಣೆ ಆಗಿರುವುದು ಖಾತರಿಯಾಗುವವರೆಗೆ ಅವರ ಬಳಿ ಹೋಗುವಾಗ ಪಿಪಿಇ ಕಿಟ್‌ಗಳನ್ನು ಧರಿಸಬೇಕು. ಇನ್ನೊಂದು ಆಯ್ಕೆಯೆಂದರೆ, ಮಗುವಿನ ಆರೈಕೆ ಮಾಡುವವರು ತಾಯಿಯ ಎದೆಯಿಂದ ಸಂಗ್ರಹಿಸಿದ ಹಾಲನ್ನು ಮಗುವಿಗೆ ಕುಡಿಸುವುದು. ಇದರಿಂದ ಸೋಂಕು ಹರಡುವ ಪ್ರಮಾಣವನ್ನು ಕಡಿಮೆ ಮಾಡಿದಂತಾಗುತ್ತದೆ’ ಎನ್ನುತ್ತಾರೆ ಬೆಂಗಳೂರಿನ ರಾಧಾಕೃಷ್ಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ವ್ಯವಸ್ಥಾಪಕ ನಿರ್ದೇಶಕ ಮತ್ತು ಮಕ್ಕಳ ತಜ್ಞ ಡಾ.ಬಿ.ಕೆ.ವಿಶ್ವನಾಥ್ ಭಟ್.

ವೈದ್ಯರ ಪ್ರಕಾರ, ಸೋಂಕು ಗರ್ಭಧಾರಣೆಯ ಮೇಲೆ ಯಾವುದೇ ವಿಶೇಷ ಪರಿಣಾಮವನ್ನು ಬೀರುವುದಿಲ್ಲ. ಕೊರೊನಾ ಪಾಸಿಟಿವ್ ಗರ್ಭಿಣಿಯರಿಗೆ ಹೆರಿಗೆಗೆ ಹತ್ತಿರವಿದ್ದಾಗ ಸೋಂಕು ತಗುಲುವ ಸಾಧ್ಯತೆಗಳಿವೆ. ಪ್ರಸ್ತುತ ನವಜಾತ ಶಿಶುಗಳಿಗೆ ಸೋಂಕು ಹರಡಿರುವ ಪ್ರಮಾಣ ನಗಣ್ಯ. ಭಾರತದಲ್ಲಿ ಕೋವಿಡ್ ಪಾಸಿಟಿವ್ ಹೊಂದಿರುವ ತಾಯಿಯಿಂದ ನವಜಾತ ಶಿಶುಗಳಿಗೆ ಸೋಂಕು ಹರಡಿರುವ ಪ್ರಮಾಣ ಸುಮಾರು ಶೇ 1ರಷ್ಟು. ಅದೂ ಕೂಡ ಊರ್ಧ್ವ ಪ್ರಸರಣದಿಂದಾಗಿ. ವಿಶ್ವದಾದ್ಯಂತದ ಪ್ರಮಾಣವು ಶೇ 6–7ರಷ್ಟಿದೆ. ಇದಕ್ಕೆ ಹೋಲಿಸಿದರೆ ಭಾರತದಲ್ಲಿ ಇದರ ಪ್ರಮಾಣ ಅತ್ಯಂತ ಕಡಿಮೆ ಇದೆ.

ಹುಟ್ಟಿದ ನಂತರ ನವಜಾತ ಶಿಶುಗಳಿಗೆ ತಾಯಿಯಿಂದ ಕೋವಿಡ್ ಹರಡಬಹುದು ಅಥವಾ ಸೋಂಕು ಸಕ್ರಿಯವಾಗಿರುವ ರೋಗಿಗಳಿಂದ ಗಾಳಿಯ ಮೂಲಕ ಮಗುವಿಗೆ ತಟ್ಟಬಹುದಾದ ಸಾಧ್ಯತೆಗಳಿರುತ್ತವೆ. ಈ ಹಿನ್ನೆಲೆಯಲ್ಲಿ ಮಗುವಿನ ಬಳಿ ಹೋಗುವ ಸಂದರ್ಭದಲ್ಲಿ ಕಡ್ಡಾಯವಾಗಿ ಎನ್95 ಮಾಸ್ಕ್ ಧರಿಸಬೇಕು ಮತ್ತು ಹ್ಯಾಂಡ್ ಸ್ಯಾನಿಟೈಸ್‌ ಮಾಡಿಕೊಳ್ಳಬೇಕು ಎಂದು ಸಲಹೆ ನೀಡುತ್ತಾರೆ ವೈದ್ಯರು.

ಆರೋಗ್ಯವಂತ ನವಜಾತ ಶಿಶುವನ್ನು ನೋಡಿಕೊಳ್ಳುವ ಪೋಷಕರು ಎಲ್ಲಾ ರೀತಿಯ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಹೊರಗೆ ಹೋಗಿ ಮನೆಗೆ ಬಂದ ತಕ್ಷಣ ಅವರು ತಮ್ಮ ಬಟ್ಟೆಗಳನ್ನು ಬದಲಿಸಿ ಅವುಗಳನ್ನು ತಾವೇ ತೊಳೆಯಬೇಕು. ಆದಷ್ಟೂ ಮಗುವನ್ನು ಬೇರೆಯವರಿಂದ ದೂರ ಇಡಬೇಕು. ಅಲ್ಲದೇ, ಮಗುವಿನೊಂದಿಗೆ ಸಂಪರ್ಕಕ್ಕೆ ಬರುವ ಎಲ್ಲಾ ವಸ್ತುಗಳನ್ನು ಸ್ಯಾನಿಟೈಸ್ ಮಾಡಬೇಕು.

ಕೋವಿಡ್ ಸಮಯದಲ್ಲಿ ಗರ್ಭಧಾರಣೆಗೆ ಸಂಬಂಧಿಸಿದಂತೆ ಇರುವ ಗಾಳಿಸುದ್ದಿ ಅಲ್ಲಗಳೆದ ಡಾ. ವಿಶ್ವನಾಥ್ ‘ಗರ್ಭಧಾರಣೆಯಿಂದ ಕೋವಿಡ್-19 ತಗಲುವ ಅಪಾಯದ ಪ್ರಮಾಣ ಯಾವುದೇ ಕಾರಣಕ್ಕೂ ಹೆಚ್ಚುವುದಿಲ್ಲ. ಕೊರೊನಾ ಸೋಂಕಿರುವ ರೋಗಿಯ ಜತೆ ಸಂಪರ್ಕ ಮಾಡಿದ್ದರೆ ಮಾತ್ರ ಇತರ ಮಹಿಳೆಯರಂತೆ ಗರ್ಭಿಣಿಗೂ ಸೋಂಕು ಹರಡುತ್ತದೆ. ಇದರಲ್ಲಿ ಯಾವುದೇ ವಿಶೇಷವಿಲ್ಲ. ಸೋಂಕು ಇದೆ ಎಂದು ಶಂಕಿಸಲಾಗುವ ಅಥವಾ ಸೋಂಕು ಇರುವುದು ಖಚಿತವಾಗಿದ್ದ ಸಂದರ್ಭದಲ್ಲಿ ಗರ್ಭಿಣಿಯರಿಗೆ ಸೀಸೇರಿಯನ್ ಮಾಡಿಯೇ ಮಗುವನ್ನು ಹೊರ ತೆಗೆಯಬೇಕೆಂಬ ಕಟ್ಟುಕತೆ ಹುಟ್ಟಿಕೊಂಡಿದೆ. ಸೀಸೇರಿಯನ್ ಕಡ್ಡಾಯವೇನಲ್ಲ. ಇತರೆ ಮಹಿಳೆಯರ ರೀತಿಯಲ್ಲಿಯೇ ತಾಯಿ ಮತ್ತು ಹೊಟ್ಟೆಯೊಳಗಿರುವ ಭ್ರೂಣದ ಪರಿಸ್ಥಿತಿಯ ಆಧಾರದಲ್ಲಿ ಪ್ರಸವ ವಿಧಾನಗಳು ಅವಲಂಬಿತವಾಗಿರುತ್ತವೆ’ ಎನ್ನುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT