ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬುದ್ಧಿ ಹೇಳುವುದು ಆಪ್ತ ಸಮಾಲೋಚನೆಯಲ್ಲವೇ?

Last Updated 15 ನವೆಂಬರ್ 2019, 19:30 IST
ಅಕ್ಷರ ಗಾತ್ರ

ನನ್ನ ಮಗ ಎಸ್‍ಎಸ್‍ಎಲ್‍ಸಿಯಲ್ಲಿ ಶೇ 83 ಅಂಕ ತೆಗೆದುಕೊಂಡಿದ್ದ. ಪಿಯುನಲ್ಲಿ ವಿಜ್ಞಾನ ವಿಭಾಗ ಆರಿಸಿಕೊಂಡಿದ್ದಾನೆ. ಈಗ ಅವನಿಗೆ ಓದಿನಲ್ಲಿ ಆಸಕ್ತಿಯಿಲ್ಲ. ದಿನಕ್ಕೆ ಮೂರು ಗಂಟೆ ಇನ್‌ಸ್ಟಾಗ್ರಾಂನಲ್ಲಿರುತ್ತಾನೆ. ಕೇಳಿದರೆ ಬೇರೆಬೇರೆ ಗುರಿಗಳ ಬಗ್ಗೆ ಹೇಳುತ್ತಾನೆ. ಆರೋಗ್ಯದ ನೆಪ ಹೇಳಿ ತರಗತಿಗಳನ್ನು ಆಗಾಗ ತಪ್ಪಿಸುತ್ತಾನೆ. ನಾನು ಮತ್ತು ನನ್ನಕ್ಕ ಕೌನ್ಸೆಲಿಂಗ್ ಮಾಡಿದ್ದೇವೆ. ಅವನು ಚೆನ್ನಾಗಿ ಓದಬೇಕೆಂಬುದು ನನ್ನ ಆಸೆ. ನಾನು ಏಕಪೋಷಕಿ. ಇದೆಂತಹ ಸಮಸ್ಯೆ? ದಯವಿಟ್ಟು ಮಾರ್ಗದರ್ಶನ ಮಾಡಿ.

ಹೆಸರು, ಊರು ಬೇಡ

ಏಕಪೋಷಕಿಯಾಗಿ ನೀವು ತೋರಿಸುತ್ತಿರುವ ಧೈರ್ಯ ಪ್ರಾಮಾಣಿಕತೆಗೆ ನನ್ನ ಅಭಿನಂದನೆಗಳು.

ಮಗ ನಿಮ್ಮೆದುರು ತನ್ನ ಅಂತರಂಗವನ್ನು ತೆರೆಯುವುದು ಸಾಧ್ಯವಾದರೆ ಮಾತ್ರ ನಿಮ್ಮ ಸಂಭಾಷಣೆ ಕೌನ್ಸೆಲಿಂಗ್ ಆಗುತ್ತದೆ. ಪತ್ರದ ಧ್ವನಿಯನ್ನು ನೋಡಿದರೆ ಅದು ಸಾಧ್ಯವಾಗಿಲ್ಲ. ಹಾಗಾಗಿ ನೀವು ಹೇಳಿದ್ದು ಬುದ್ಧಿವಾದ ಅಥವಾ ಉಪದೇಶವಾಗಬಹುದಷ್ಟೇ. ಇದನ್ನು ಸಂಯಮದಿಂದ ಒಳ್ಳೆಯ ಮಾತುಗಳಲ್ಲಿ ಹೇಳಿದರೂ ಅವನ ಅಂತರಂಗಕ್ಕೆ ತಲುಪುವುದಿಲ್ಲ.

ಮಗನಿಗೆ ಹದಿವಯಸ್ಸಿನ ಸಹಜ ಆಕರ್ಷಣೆಗಳು, ಆತಂಕಗಳು ಅಥವಾ ಆಯ್ಕೆಯ ಗೊಂದಲಗಳು ಇರಬಹುದು. ಇವೆಲ್ಲವನ್ನು ಒಪ್ಪಿಕೊಂಡು, ಅರ್ಥ ಮಾಡಿಕೊಂಡು ನಿಭಾಯಿಸಲು ಅವನು ಕಷ್ಟಪಡುತ್ತಿದ್ದಾನೆ. ತನ್ನೊಳಗೆ ಮೂಡುತ್ತಿರುವ ಆಕರ್ಷಣೆ, ಆತಂಕ, ಅಸ್ಪಷ್ಟತೆಗಳ ಮಾನಸಿಕ ತುಮುಲದಿಂದ ತಪ್ಪಿಸಿಕೊಳ್ಳಲು ಅವನು ಮೊಬೈಲ್‍ ಅನ್ನು ಆಯ್ಕೆ ಮಾಡಿಕೊಂಡಿದ್ದಾನೆ. ನಿಮ್ಮೊಡನೆ ಹಂಚಿಕೊಳ್ಳಬೇಕೆನಿಸದರೂ ನಿಮಗೆ ಆಗಬಹುದಾದ ನೋವನ್ನು ಅಥವಾ ನಿಮ್ಮಿಂದ ಬರಬಹುದಾದ ಸಲಹೆ, ಉಪದೇಶಗಳನ್ನು ತಪ್ಪಿಸಲು ಅವನು ತನ್ನ ಮಾನಸಿಕ ಹೋರಾಟಗಳನ್ನು ಮುಚ್ಚಿಕೊಂಡಿದ್ದಾನೆ. ಇಂತಹ ಹಿಂಜರಿಕೆಗಳು ತರಗತಿಗಳನ್ನು ತಪ್ಪಿಸುವಂತೆ ಮಾಡುತ್ತಿವೆ.

ಇದು ಮಾನಸಿಕ ಸಮಸ್ಯೆ ಖಂಡಿತವಾಗಿ ಅಲ್ಲ. ನಿಮ್ಮಿಬ್ಬರಿಗೂ ಪರಸ್ಪರ ಅಂತರಂಗದ ಆತಂಕ, ಅನುಭವಗಳನ್ನು ಹಂಚಿಕೊಳ್ಳಲು ಸಾಧ್ಯವಾದಾಗ ಅವನು ನಿಮಗೆ ಅರ್ಥವಾಗುತ್ತಾನೆ, ಆತ್ಮೀಯನಾಗುತ್ತಾನೆ. ಹೀಗಾಗಿ ಇಬ್ಬರೂ ಸೇರಿ ತಜ್ಞ ಮನೋಚಿಕಿತ್ಸಕರ ಸಹಾಯ ಪಡೆಯಿರಿ. ಈ ಪ್ರಶ್ನೋತ್ತರವನ್ನು ಓದಿ ಪ್ರತಿಕ್ರಿಯಿಸುವಂತೆ ಅವನನ್ನು ಉತ್ತೇಜಿಸಿ.

ನಾನು ಒಂದು ಹುಡುಗಿಯನ್ನು ತುಂಬಾ ದಿನಗಳಿಂದ ಪ್ರೀತಿಸುತ್ತಿದ್ದೇನೆ. ಅವಳಿಗೆ ಹೇಳಿಕೊಳ್ಳುವಷ್ಟರಲ್ಲಿ ಅವಳು ದೂರವಾಗಿದ್ದಾಳೆ. ದೂರವಾಣಿ ಸಂಖ್ಯೆ ಇಲ್ಲ. ಮನೆ ಹತ್ತಿರ ಹೋದರೆ ಅವಳು ಸಿಟ್ಟು ಮಾಡಿಕೊಳ್ಳಬಹುದು. ನಾನು ಐ.ಎ.ಎಸ್‍.ಗೆ ಓದುತ್ತಿದ್ದೇನೆ. ಅದರಲ್ಲಿ ಉತ್ತೀರ್ಣನಾದರೆ ಅವಳು ಒಪ್ಪಬಹುದು ಎನಿಸುತ್ತದೆ. ಅವಳನ್ನು ಬಿಟ್ಟು ಇರೋದಕ್ಕೆ ಆಗಲ್ಲ. ಈಗ ಓದೋಕೆ ಆಗ್ತಾ ಇಲ್ಲ. ಪರಿಹಾರ ತಿಳಿಸಿ.

ಹೆಸರು, ಊರು ತಿಳಿಸಿಲ್ಲ

ನಿಮ್ಮ ವಯಸ್ಸಿನಲ್ಲಿ ಭಿನ್ನಲಿಂಗದವರ ಬಗೆಗಿನ ಆಕರ್ಷಣೆ ಸಹಜವಾದದ್ದು. ಇಬ್ಬರಲ್ಲೂ ಪರಸ್ಪರ ಆಕರ್ಷಣೆಯಿದ್ದರೆ ಅದನ್ನು ಪ್ರೀತಿಯಾಗಿ ಬದಲಾಯಿಸಬಹುದು. ಸದ್ಯಕ್ಕೆ ನಿಮ್ಮದು ಒಮ್ಮುಖ ಆಕರ್ಷಣೆ. ಹುಡುಗಿ ತಿರಸ್ಕರಿಸಬಹುದು ಮತ್ತು ಅದರಿಂದ ನನಗೆ ನೋವಾಗಬಹುದು ಎನ್ನುವ ಹಿಂಜರಿಕೆಯಿಂದ ಈ ಆಕರ್ಷಣೆಯನ್ನು ನಿಮ್ಮ ಅಂತರಾಳ ಒಪ್ಪಿಕೊಳ್ಳುತ್ತಿಲ್ಲ. ಆಕರ್ಷಣೆಗಳು ಸಹಜ, ನನ್ನದನ್ನು ಒಪ್ಪಿಕೊಂಡು ಹುಡುಗಿಗೆ ಹೇಳಿಕೊಳ್ಳುವುದರಿಂದ ನಾನು ಕೀಳಾಗುವುದಿಲ್ಲ, ಹಾಗೆಯೇ ಹುಡುಗಿ ಇಷ್ಟಪಡದಿರುವುದೂ ಕೂಡ ನನ್ನ ವ್ಯಕ್ತಿತ್ವದ ಬಗೆಗೆ ಅವಳು ತೋರಿಸುವ ತಿರಸ್ಕಾರವಲ್ಲ-ಎನ್ನುವ ಅಂಶಗಳನ್ನು ನೀವು ಮೈಗೂಡಿಸಿಕೊಳ್ಳಬೇಕಾಗಿದೆ. ಇದು
ನಿಧಾನವಾಗಿ ಆಗಬೇಕಾದ ಬದಲಾವಣೆ. ಸದ್ಯಕ್ಕೆ ನಿಮ್ಮ ವ್ಯಕ್ತಿತ್ವದ ಬಗೆಗೆ ನಿಮ್ಮೊಳಗೆ ಇರುವ ಹಿಂಜರಿಕೆಗಳ ಬಗೆಗೆ ಯೋಚಿಸಿ.

ಐ.ಎ.ಎಸ್‍.ಗೆ ಪ್ರಯತ್ನಿಸುವ ನಿಮ್ಮ ಉತ್ಸಾಹ, ಉದ್ದೇಶಗಳು ಮೆಚ್ಚುವಂಥದ್ದು. ಇದರ ಪ್ರೇರಣೆ ಹುಡುಗಿಯನ್ನು ಅಥವಾ ತಂದೆ– ತಾಯಿಗಳನ್ನು ಮೆಚ್ಚಿಸುವುದಾಗಿದ್ದರೆ, ಉತ್ತೀರ್ಣನಾಗದಿದ್ದರೆ ಅವರ ಪ್ರೀತಿಯನ್ನು ಕಳೆದುಕೊಳ್ಳುವ ಆತಂಕ ಸದಾ ನಿಮ್ಮ ಬೆನ್ನು ಬಿಡದು. ಪ್ರೇರಣೆಗಳು ಅಂತರಂಗದಿಂದ ಬಂದಿದ್ದಾಗಿದ್ದರೆ ಮಾತ್ರ ಪೂರ್ಣ ಮನಸ್ಸಿನಿಂದ ಪ್ರಯತ್ನಿಸುವುದು ಮತ್ತು ಅನಿವಾರ್ಯವಾಗಿ ಸೋಲುಗಳನ್ನು ಎದುರಿಸಬೇಕಾದಾಗ ಧೈರ್ಯಗೆಡದಿರುವುದು ಸಾಧ್ಯ.

ನಾವೆಲ್ಲಾ ಬೇರೆಯವರನ್ನು ಮೆಚ್ಚಿಸಲು ಏನನ್ನಾದರೂ ಸಾಧಿಸಬೇಕೆಂದುಕೊಂಡರೆ ಒತ್ತಡಕ್ಕೊಳಗಾಗುತ್ತೇವೆ. ಅಂತರಂಗದಿಂದ ಬರುವ ಪ್ರೇರಣೆ ಮಾತ್ರ ನಮ್ಮ ಪ್ರಯತ್ನಗಳನ್ನು ಹುರಿದುಂಬಿಸುತ್ತದೆ. ಇದು ಸ್ವಾರ್ಥವಲ್ಲ, ಸ್ವಯಂಸ್ಫೂರ್ತಿ.

ನನ್ನ ಹೆಸರು ಚಂದ್ರಪ್ಪ ಆರ್. ಎಂದು ಎಲ್ಲಾ ಶೈಕ್ಷಣಿಕ ದಾಖಲೆಗಳಲ್ಲಿದೆ. ಆದರೆ ಹೆಸರಿನಲ್ಲಿ ಅಪ್ಪ ಇರುವುದು ನನಗಿಷ್ಟವಿಲ್ಲ. ಇದರಿಂದ ನನಗೆ ಬೇಸರವಾಗಿ ಮುಂದಿನ ಸಾಧನೆಗೆ ತೊಂದರೆಯಾಗುತ್ತಿದೆ. ಹೆಸರನ್ನು ಚಂದ್ರಾರೆಡ್ಡಿ ಎಂದು ಬದಲಿಸಿಕೊಳ್ಳಬೇಕು. ಇದಕ್ಕೆ ಅವಕಾಶವಿದೆಯೇ ಮತ್ತು ಮುಂದೆ ಸರ್ಕಾರಿ ಹುದ್ದೆಗಳಿಗೆ ತೊಂದರೆಯಾಗುವುದಿಲ್ಲವೇ? ಸೂಕ್ತ ಸಲಹೆ ನೀಡಿ.

ಚಂದ್ರಪ್ಪ, ಊರಿನ ಹೆಸರಿಲ್ಲ.

ಹೆಸರನ್ನು ಬದಲಿಸಿಕೊಳ್ಳಲು ಕಾನೂನಿನಲ್ಲಿ ಅವಕಾಶವಿದೆ. ಇದಕ್ಕಾಗಿ ವಕೀಲರನ್ನು ಸಂಪರ್ಕಿಸಿ.

ಹೆಸರನ್ನು ಬದಲಾಯಿಸಿಕೊಂಡರೆ ನಿಮಗೆ ಸಮಾಜದಲ್ಲಿ ಗೌರವ ಸಿಗುತ್ತದೆ ಅಥವಾ ನಿಮ್ಮ ಸಾಧನೆಗಳಿಗೆ ಸಹಾಯವಾಗುತ್ತದೆ ಎನ್ನುವ ನಿಮ್ಮ ಮನೋಭಾವದ ಆಳದಲ್ಲಿ ಏನಿರಬಹುದು ಎಂದು ಯೋಚಿಸಿದ್ದಿರಾ? ದೌರ್ಬಲ್ಯಗಳನ್ನು ಮುಚ್ಚಿಕೊಳ್ಳುವ ಅಥವಾ ಸೋಲುಗಳಿಗೆ ನೆಪ ಹುಡುಕುವ ನಿಮ್ಮದೇ ಮನಸ್ಸಿನ ಕಳ್ಳಾಟ ಇದಾಗಿರಬಹುದೇ? ಇದರಿಂದ ನಿಮಗೆ ನೀವೇ ಮೋಸ ಮಾಡಿಕೊಳ್ಳುವ ಸಾಧ್ಯತೆಗಳಿರುತ್ತವೆ. ಇಂತಹ ಆತ್ಮವಂಚನೆಯಿಂದ ಹೊರಬರದಿದ್ದರೆ ಯಾವುದೇ ಹೆಸರಿನಲ್ಲಿ ಏನೆಲ್ಲಾ ಸಾಧನೆಗಳನ್ನು ಮಾಡಿಯೂ ನೀವು ಅತೃಪ್ತರಾಗಿ ಉಳಿಯಬಹುದು.

(ಅಂಕಣಕಾರರು ಶಿವಮೊಗ್ಗದಲ್ಲಿ ಮನೋಚಿಕಿತ್ಸಕರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT