ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಡೋತ್ಪತ್ತಿ ನೋವು ಮಹಿಳೆಯರಲ್ಲಿ ಸಾಮಾನ್ಯವೇ?

Last Updated 3 ಜನವರಿ 2021, 19:30 IST
ಅಕ್ಷರ ಗಾತ್ರ

22ರ ಹರೆಯದ ಗಾಯತ್ರಿಗೆ ಋತುಚಕ್ರದ ಮಧ್ಯದಲ್ಲಿ ಅಂದರೆ ಸ್ರಾವ ಶುರುವಾಗಿ 14–15ನೇ ದಿನ ಕಿಬ್ಬೊಟ್ಟೆ ಬದಿಯಲ್ಲಿ ಒಂದೇ ಸಮನೆ ನೋವು ಬರುತ್ತಿತ್ತು. ಎಂ.ಟೆಕ್‌ ಮಾಡುತ್ತಿರುವ ಆಕೆಗೆ ಆ ಸಮಯದಲ್ಲಿ ಓದಲೂ ಆಗದಷ್ಟು ಕಿರಿಕಿರಿ. ಅಂತರ್ಜಾಲದಲ್ಲಿ ವೈದ್ಯಕೀಯ ವೆಬ್‌ಸೈಟ್‌ನಲ್ಲಿ ಹುಡುಕಾಡಿದಾಗ ಒಂದು ಕಡೆ ‘ಅಂಡಾಣು ಬಿಡುಗಡೆ (ಓವ್ಯುಲೇಶನ್‌)ಯಾಗುವಾಗ ಈ ರೀತಿಯ ನೋವು ಸಾಮಾನ್ಯ’ ಎಂಬ ಪುಟ್ಟ ವಿವರಣೆಯಿತ್ತು. ಕುಟುಂಬದ ವೈದ್ಯರನ್ನು ಭೇಟಿ ಮಾಡಿದಾಗಲೂ ದೃಢಪಡಿಸಿದ್ದು ಆ ಕಾರಣವನ್ನೇ. ಆ ಸಂದರ್ಭದಲ್ಲಿ ವಿಶ್ರಾಂತಿ ಪಡೆಯಲು ವೈದ್ಯರು ಸೂಚಿಸಿದರಲ್ಲದೇ, ಬಿಸಿ ನೀರಿನ ಶಾಖ ತೆಗೆದುಕೊಳ್ಳುವಂತೆಯೂ ಸಲಹೆ ನೀಡಿದರು.

ಏನಿದು ಓವ್ಯುಲೇಶನ್‌ ಅಥವಾ ಅಂಡೋತ್ಪತ್ತಿ ನೋವು?

ತಜ್ಞರ ಪ್ರಕಾರ ಶೇ. 50ರಷ್ಟು ಮಹಿಳೆಯರು ಕನಿಷ್ಠ ಒಂದು ಸಲವಾದರೂ ಈ ಅಂಡೋತ್ಪತ್ತಿ ನೋವನ್ನು ಅನುಭವಿಸಿರುತ್ತಾರೆ. ಕೆಲವು ಮಹಿಳೆಯರಿಗೆ ಪ್ರತಿ ತಿಂಗಳೂ ಈ ನೋವಿನ ಅನುಭವ ಉಂಟಾಗುತ್ತದೆ. ಈ ನೋವು ಸಾಮಾನ್ಯ ಕೂಡ.

‘ಈ ನೋವು ಸರಿಯಾಗಿ ಅಂಡಾಣು ಅಂಡಾಶಯದಿಂದ ಬಿಡುಗಡೆಯಾಗುವ ಸಮಯದಲ್ಲೇ ಬರಬೇಕೆಂದೇನೂ ಇಲ್ಲ. ಅಂಡೋತ್ಪತ್ತಿಗಿಂತ ಒಂದೆರಡು ದಿನಗಳ ಮುಂಚೆ ಅಥವಾ ನಂತರವೂ ಅನುಭವಕ್ಕೆ ಬರಬಹುದು’ ಎನ್ನುತ್ತಾರೆ ಪ್ರಸೂತಿ ತಜ್ಞೆ ಡಾ.ವೈಶಾಲಿ ಎಂ. ರಾಯ್ಕರ್‌.

ಹೆಚ್ಚಿನ ಮಹಿಳೆಯರಿಗೆ ಅಷ್ಟೊಂದು ತೀವ್ರವಲ್ಲದ ನೋವಿನ ಅನುಭವ ಕೆಲವು ಗಂಟೆಗಳ ಕಾಲ ಅಥವಾ ಒಂದೆರಡು ದಿನಗಳು ಇರಬಹುದು. ಇನ್ನು ಕೆಲವರಿಗೆ ಒಮ್ಮೆಲೇ ತೀವ್ರವಾದ ನೋವು ಬಂದು ಕೆಲವು ಕ್ಷಣಗಳಲ್ಲಿ ಕಡಿಮೆಯಾಗಬಹುದು. ಈ ನೋವು ಹೆಚ್ಚಿನ ಸಲ ಒಂದೇ ಬದಿಗೆ ಬರಬಹುದು. ಒಂದು ಬದಿಯ ಅಂಡಾಶಯ ಇನ್ನೊಂದಕ್ಕಿಂತ ಹೆಚ್ಚು ಸಲ ಅಂಡಾಣು ಬಿಡುಗಡೆ ಮಾಡುವುದು ಇದಕ್ಕೆ ಕಾರಣ ಎನ್ನುತ್ತಾರೆ ತಜ್ಞರು. ಇದು ಸಾಮಾನ್ಯ ಕೂಡ.

ಕಾರಣಗಳು

ಈ ನೋವಿಗೆ ಖಚಿತ ಕಾರಣ ಇನ್ನೂ ತಿಳಿದು ಬಂದಿಲ್ಲ ಎನ್ನುವ ವೈದ್ಯರು, ಕೆಲವೊಂದು ಸಾಧ್ಯತೆಗಳನ್ನು ಪಟ್ಟಿ ಮಾಡಬಹುದು ಎನ್ನುತ್ತಾರೆ. ಅಂಡಾಶಯದಲ್ಲಿರುವ ಫಾಲಿಕಲ್‌ ದೊಡ್ಡದಾಗುವುದು ಅಥವಾ ಒಡೆಯುವುದು ಒಂದು ಕಾರಣ. ಇದರಿಂದ ಹೆಚ್ಚುವರಿ ದ್ರವ ಬಿಡುಗಡೆಯಾಗಿ ಸಣ್ಣ ನೋವು ಬರಬಹುದು. ಫಾಲಿಕಲ್‌ ಒಳಗಿರುವ ಮೊಟ್ಟೆ ಒಡೆದು ತೀಕ್ಷ್ಣ ನೋವು ಬರಬಹುದು. ಅಂಡೋತ್ಪತ್ತಿಯ ದಿನ ಸಮೀಪಿಸಿದಂತೆ ಫ್ಯಾಲೊಪಿಯನ್‌ ಕೊಳವೆ ಅಥವಾ ಗರ್ಭಾಶಯದಲ್ಲಾಗುವ ಸೆಳೆತವೂ ಈ ನೋವಿಗೆ ಕಾರಣ ಎಂದು ಡಾ. ವೈಶಾಲಿ ವಿವರಿಸುತ್ತಾರೆ.

ಇನ್ನು ಯಾವುದೇ ಸಂದರ್ಭದಲ್ಲಿ ಬರುವ ತೀವ್ರವಾದ ಹೊಟ್ಟೆನೋವಿಗೆ ಎಂಡೊಮೆಟ್ರಿಯೋಸಿಸ್‌ ಕಾರಣವಾಗಬಹುದು. ‘ಇದು ಋತುಸ್ರಾವ ಹಾಗೂ ಅಂಡೋತ್ಪತ್ತಿ ಸಂದರ್ಭದಲ್ಲಿ ತೀವ್ರವಾಗುತ್ತದೆ’ ಎನ್ನುತ್ತಾರೆ ಅವರು. ಹಾಗೆಯೇ ಫ್ಯಾಲೊಪಿಯನ್‌ ಕೊಳವೆಗಾಗುವ ಸೋಂಕು, ಗರ್ಭಾಶಯದ ಹಾಗೂ ಅಂಡಾಶಯದ ಗೆಡ್ಡೆ (ಫೈಬ್ರಾಯ್ಡ್‌ ಮತ್ತು ಸಿಸ್ಟ್‌) ಋತುಚಕ್ರದ ಮಧ್ಯದಲ್ಲಿನ ನೋವಿಗೆ ಕಾರಣವಾಗಬಹುದು. ಸಂತಾನಹೀನತೆಗೆ ತೆಗೆದುಕೊಳ್ಳುವ ಔಷಧಿಯಿಂದಲೂ ಈ ನೋವು ಬರಬಹುದು ಎಂದು ಅವರು ವಿವರಿಸುತ್ತಾರೆ.

ಕೆಲವು ಅಧ್ಯಯನದ ಪ್ರಕಾರ, ಅಂಡೋತ್ಪತ್ತಿಯ ನೋವು ಅಂಡಾಣು ಬಿಡುಗಡೆಯ ಸಂಕೇತ. ಇನ್ನು ಕೆಲವು ಸಂಶೋಧನೆಯ ಪ್ರಕಾರ, ನೋವು ಬಂದ ಒಂದೆರಡು ದಿನಗಳ ನಂತರ ಅಂಡಾಣು ಬಿಡುಗಡೆಯಾಗುತ್ತದೆ. ಹೀಗಾಗಿ ಗರ್ಭಧಾರಣೆಗೆ ಯತ್ನಿಸುವವರು ಈ ನೋವಿನ ಅನುಭವದಿಂದ ಅಂಡಾಣು ಬಿಡುಗಡೆಯಾಗಿದೆ ಎನ್ನುವ ತೀರ್ಮಾನಕ್ಕೆ ಬರುವ ಬದಲು ವೈದ್ಯರ ಸಲಹೆ ಪಡೆಯಬೇಕಾಗುತ್ತದೆ.

ನೋವಿನ ಮಾತ್ರೆ ಗರ್ಭಧಾರಣೆಗೆ ತಡೆ ಉಂಟುಮಾಡಬಹುದು. ಹೀಗಾಗಿ ಬಿಸಿ ನೀರಿನ ಶಾಖ ತೆಗೆದುಕೊಂಡು ನೋವು ಕಡಿಮೆ ಮಾಡಿಕೊಳ್ಳಬಹುದು. ಆದರೆ ತೀವ್ರ ನೋವಿನ ಅನುಭವವಾದರೆ, ನಿತ್ಯದ ಕೆಲಸಗಳಿಗೆ ತೊಂದರೆಯಾದರೆ ನೋವಿನ ಮಾತ್ರೆ ತೆಗೆದುಕೊಳ್ಳುವ ಬದಲು ವೈದ್ಯರನ್ನು ಸಂಪರ್ಕಿಸುವುದು ಸೂಕ್ತ. ನಿಜವಾದ ಕಾರಣವನ್ನು ಪತ್ತೆ ಹಚ್ಚಿ, ಚಿಕಿತ್ಸೆ ಪಡೆಯುವುದು ಒಳ್ಳೆಯದು ಎನ್ನುತ್ತಾರೆ ಡಾ. ವೈಶಾಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT