ಶುಕ್ರವಾರ, ಸೆಪ್ಟೆಂಬರ್ 24, 2021
21 °C

ಏನಾದ್ರೂ ಕೇಳ್ಬೋದು: ಉಭಯಲಿಂಗ ಪ್ರೇಮಕ್ಕೆ ಚಿಕಿತ್ಸೆ ಇದೆಯೇ?

ನಡಹಳ್ಳಿ ವಸಂತ್‌ Updated:

ಅಕ್ಷರ ಗಾತ್ರ : | |

* 27ರ ಯುವಕ. ನನಗೆ ಹುಡುಗ ಮತ್ತು ಹುಡುಗಿಯರಿಬ್ಬರೂ ಲೈಂಗಿಕವಾಗಿ ಇಷ್ಟವಾಗುತ್ತಾರೆ. ನಾನು ಉಭಯಲಿಂಗ ಪ್ರೇಮಿ ಇರಬಹುದೇ? ಇಂಥವರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎಂದು ಓದಿದ್ದೇನೆ. ನನಗೆ ಏನೂ ತೋಚದೆ ತುಂಬಾ ಬೇಸರದಲ್ಲಿದ್ದೇನೆ. ಈ ಸಮಸ್ಯೆಗೆ ಏನಾದರೂ ಚಿಕಿತ್ಸೆ ಇದೆಯೇ?

–ಹೆಸರು, ಊರು ತಿಳಿಸಿಲ್ಲ.

ಸಲಿಂಗ ಪ್ರೇಮದಂತೆ ಉಭಯಲಿಂಗ ಪ್ರೇಮವೂ ಅಸಹಜವಲ್ಲ, ಕಾಯಿಲೆಯೂ ಅಲ್ಲ. ಕೇವಲ ಪ್ರಕೃತಿಯೇ ನೀಡಿರುವ ಆಯ್ಕೆ. ಇಂಥವರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎನ್ನುವುದೂ ತಪ್ಪುಮಾಹಿತಿ. ಕೆಲವರು ಇದಕ್ಕೆ ಅಂಟಿರುವ ಸಾಮಾಜಿಕ ಕಳಂಕದಿಂದ ನೊಂದು ಆತ್ಮಹತ್ಯೆಗೆ ಶರಣಾಗಿರಬಹುದು. ಉಭಯಲಿಂಗ ಪ್ರೇಮಿಗಳಿಗೆ ಒಂದೇ ಸಂಗಾತಿಯೊಡನೆ ಮದುವೆಯಂತಹ ಬದ್ಧಸಂಬಂಧವನ್ನು ರೂಪಿಸಿಕೊಳ್ಳುವುದು ಕಷ್ಟವಾಗುತ್ತದೆ. ಸಂಗಾತಿಯನ್ನು ಬದಲಾಯಿಸುತ್ತಿರುವುದು ಅಥವಾ ಭಿನ್ನಭಿನ್ನ ಸಂಗಾತಿಗಳೊಡನೆ ಬೆರೆಯವುದು ಲೈಂಗಿಕ ರೋಗಗಳಿಗೆ ಆಹ್ವಾನ ನೀಡಿದಂತಾಗುವುದಲ್ಲದೆ, ಭಾವನಾತ್ಮಕ ಅಸ್ಥಿರತೆಗೆ ಕಾರಣವಾಗಬಹುದು. ಈ ಎಲ್ಲಾ ವಿಚಾರಗಳನ್ನು ನಿಭಾಯಿಸಲು ತಜ್ಞ ಲೈಂಗಿಕ ಮನೋಚಿಕಿತ್ಸಕರ ಸಹಾಯ ಪಡೆಯಬಹುದು. ಆತುರದ ನಿರ್ಧಾರಗಳಿಂದ ಅನಾಹುತಗಳಿಗೆ ಅವಕಾಶ ಕೊಡಬೇಕಾಗಿಲ್ಲ. 

* ವಿವಾಹಿತ ಯುವಕ. ಕೆಲವೊಮ್ಮೆ ಬೇರೆ ಹುಡುಗಿಯರ ಆಕರ್ಷಣೆಯುಂಟಾಗಿ ಹೆಂಡತಿಯಿಂದ ದೂರವಾಗುತ್ತೇನೆ. ಯಾರ ಜೊತೆಯೂ ಸಂಪರ್ಕಮಾಡಿಲ್ಲ. ನನಗೆ ಲೈಂಗಿಕ ಶಕ್ತಿ ಕಡಿಮೆಯಿದೆ. ಬೇರೆ ಆಕರ್ಷಣೆಗಳನ್ನು ತಪ್ಪಿಸುವುದು ಹೇಗೆ?

ಮಠದ್‌, ಊರಿನ ಹೆಸರಿಲ್ಲ.

ಇತರ ಸ್ತ್ರೀಯರ ಬಗೆಗೆ ಆಕರ್ಷಣೆಯುಂಟಾದರೂ ಅದಕ್ಕೆ ಮನಗೊಡದಿರುವ ನಿಮ್ಮ ಪ್ರಾಮಾಣಿಕತೆಗೆ ಮೆಚ್ಚುತ್ತೇನೆ. ಹೀಗೆ ಆಕರ್ಷಣೆಯುಂಟಾಗುವುದು ಏಕೆಂದು ಗೊತ್ತೇ? ನಿಮ್ಮ ಕಲ್ಪನೆಯ ಲೈಂಗಿಕ ಸುಖ ಹೆಂಡತಿಯಿಂದ ದೊರೆಯುತ್ತಿಲ್ಲ. ನಿಮಗೆ ಆಕರ್ಷಕ ಎನ್ನಿಸುವ ಲೈಂಗಿಕತೆ ಹೇಗಿರುತ್ತದೆ? ಹಾಗೆಯೇ ಪತ್ನಿಗೂ ಅವಳದ್ದೇ ಆದ ಆಯ್ಕೆಗಳಿರಬಹುದಲ್ಲವೇ? ನಿಮ್ಮನಿಮ್ಮ ಆಯ್ಕೆಗಳನ್ನು ಗುರುತಿಸಿಕೊಂಡು ಮುಕ್ತವಾಗಿ ಚರ್ಚೆಮಾಡಿ. ಇಬ್ಬರಿಗೂ ಆಕರ್ಷಕವೆನ್ನಿಸುವ ಲೈಂಗಿಕತೆಯನ್ನು ಹುಡುಕಿಕೊಂಡಾಗ ಹೊರಗಿನ ಆಕರ್ಷಣೆಗಳೂ ಕಡಿಮೆಯಾಗುತ್ತವೆ, ಲೈಂಗಿಕ ಶಕ್ತಿಯೂ ತುಂಬಿಕೊಳ್ಳುತ್ತದೆ.

* 30ರ ಯುವಕ. ಪ್ರೀತಿಸುವ ಹುಡುಗಿಯ ಜೊತೆ ಸಂಭೋಗ ಮಾಡುವಾಗ ಉದ್ರೇಕ ಕಡಿಮೆ ಇರುತ್ತದೆ ಮತ್ತು ಬೇಗನೆ ಸ್ಖಲನವಾಗುತ್ತದೆ. ಚೇರ್‌ಪೈನ್‌ ಇದೆ. ಪರಿಹಾರವೇನು?

ರಮೇಶ್‌, ಊರಿನ ಹೆಸರಿಲ್ಲ.

ಚೇರ್‌ಪೈನ್‌ ಎಂದು ಯಾವುದಕ್ಕೆ ಹೇಳುತ್ತಿದ್ದೀರೋ ಗೊತ್ತಾಗಲಿಲ್ಲ. ವೈದ್ಯರನ್ನು ಸಂಪರ್ಕಿಸಿ. ತೃಪ್ತಿಕರ ಲೈಂಗಿಕ ಸುಖ ಪಡೆಯುವುದಕ್ಕೆ ಪ್ರೀತಿಸುವ ವ್ಯಕ್ತಿಯ ಜೊತೆಗೆ ಸುರಕ್ಷಿತ ವಾತಾವರಣವೂ ಅಗತ್ಯವಾಗಿರುತ್ತದೆ. ಆಗ ಮಾತ್ರ ನಿರಾತಂಕದಿಂದ ಲೈಂಗಿಕ ಕ್ರಿಯೆಯಲ್ಲಿ ಒಳಗೊಳ್ಳಲು ಸಾಧ್ಯ. ನಿಮ್ಮ ಸಮಸ್ಯೆಗಳಿಗೆ ಮಾನಸಿಕ ಆತಂಕ, ಒತ್ತಡಗಳೇ ಕಾರಣ. ಪ್ರೀತಿಸುವ ಹುಡುಗಿಯ ಜೊತೆಗೆ ಇನ್ನೂ ವಿವಾಹವಾಗಿಲ್ಲವೇ? ನಿಮ್ಮಿಬ್ಬರ ನಡುವಿನ ಬಾಂಧವ್ಯ ಹೇಗಿದೆ? ಇಂತಹ ಅಂಶಗಳು ನಿಮ್ಮ ಆತಂಕಕ್ಕೆ ಕಾರಣವಾಗಿರಬಹುದು. ಸಮಸ್ಯೆಗಳು ನಿಮ್ಮೊಬ್ಬರಿಗೆ ಮಾತ್ರ ಸಂಬಂಧಿಸಿದ್ದು ಎಂದುಕೊಳ್ಳದೆ ಪ್ರಿಯತಮೆಯೊಡನೆ ಮುಕ್ತವಾಗಿ ಚರ್ಚೆಮಾಡಿ. ಇದರಿಂದ ನಿಮ್ಮ ಸಮಸ್ಯೆಗಳ ಭಾರ ಕಡಿಮೆಯಾಗುವುದಲ್ಲದೆ ಇಬ್ಬರ ಬಾಂಧವ್ಯದ ಬೆಸುಗೆಯೂ ಬಿಗಿಯಾಗುತ್ತದೆ.

* 32ರ ಅವಿವಾಹಿತ ಯುವಕ. ಹಸ್ತಮೈಥುನ ಮಾಡಿಕೊಂಡರೂ ಯಾರೊಂದಿಗೂ ಲೈಂಗಿಕ ಸಂಪರ್ಕ ಮಾಡಿಲ್ಲ. ಹುಟ್ಟಿನಿಂದಲೂ ಒಂದೇ ವೃಷಣವಿದೆ ಮತ್ತು ಜನನಾಂಗ ಚಿಕ್ಕದಾಗಿದೆ. ವಿವಾಹದ ನಂತರ ಮಕ್ಕಳನ್ನು ಪಡೆಯಲು ತೊಂದರೆಯಾಗುತ್ತದೆಯೇ?

ಹೆಸರು, ಊರು ತಿಳಿಸಿಲ್ಲ.

ಕೆಲವು ಪುರುಷರಲ್ಲಿ ಎರಡು ವೃಷಣಗಳಿದ್ದರೂ ಒಂದು ಮಾತ್ರ ಹೊರಗೆ ಕಾಣಿಸಿಕೊಳ್ಳುತ್ತದೆ. ಇದಕ್ಕೂ ಮತ್ತು ಲೈಂಗಿಕ ಸುಖ ಹಾಗೂ ಮಕ್ಕಳಾಗುವುದಕ್ಕೂ ಸಂಬಂಧವಿರುವುದಿಲ್ಲ. ಅನುಮಾನಗಳಿದ್ದರೆ ವೈದ್ಯರೊಡನೆ ಪರೀಕ್ಷೆ ಮಾಡಿಸಿಕೊಂಡು ಬೇಗನೆ ಮದುವೆಯಾಗಿ.

* ನನ್ನ ಸಹೋದರ ಮದುವೆಯಾಗಿರುವ ಸ್ತ್ರೀಯನ್ನು ಪ್ರೀತಿಸುತ್ತಿದ್ದಾನೆ. ಅವಳು ಮದುವೆಯಾಗಿ ಒಂದು ತಿಂಗಳೂ ಪತಿಯ ಜೊತೆ ಇರಲಿಲ್ಲ. ಈಗ ತಾಯಿಯ ಮನೆಯಲ್ಲಿದ್ದಾಳೆ. ಅವಳ ಪತಿ ವಿಚ್ಛೇದನವನ್ನು ಕೊಡುತ್ತಿಲ್ಲ. ಆದರೆ ಮೌಖಿಕವಾಗಿ ಬೇರೆ ಮದುವೆಯಾಗುವಂತೆ ತಿಳಿಸಿದ್ದಾನೆ. ನನ್ನ ತಮ್ಮೊನೊಡನೆ ವಿವಾಹವಾಗವುದುಕ್ಕೆ ಇಬ್ಬರ ಕುಟುಂಬದ ಒಪ್ಪಿಗೆಯಿದೆ. ಯಾರಿಗೂ ತೊಂದರೆಯಾಗದಂತೆ ಮುಂದುವರೆಯುವುದು ಹೇಗೆ?

ಹೆಸರು, ಊರು ತಿಳಿಸಿಲ್ಲ.

ಇದು ವಕೀಲರೊಡನೆ ಚರ್ಚಿಸಬೇಕಾದ ವಿಚಾರವಲ್ಲವೇ? ಕಾನೂನುಬದ್ಧವಾಗಿ ವಿಚ್ಛೇದನೆ ಪಡೆಯದೆ ಮತ್ತೆ ಮದುವೆಯಾಗುವುದು ಸೂಕ್ತವಲ್ಲ. ವಿಚ್ಛೇದನವೆಂದರೆ ಪತಿ ಕೊಡುವುದು ಮತ್ತು ಪತ್ನಿ ಪಡೆದುಕೊಳ್ಳುವುದು ಎಂದು ನೀವು ತಿಳಿದುಕೊಂಡಿರುವಂತಿದೆ. ಪತ್ನಿಯೇ ವಿಚ್ಛೇದನಕ್ಕೆ ಕೌಟುಂಬಿಕ ನ್ಯಾಯಾಲಯಕ್ಕೆ ಹೋಗಬಹುದಲ್ಲವೇ? ಹುಡುಗಿ ಮತ್ತು ಅವರ ಪೋಷಕರಿಗೆ ವಕೀಲರನ್ನು ಸಂಪರ್ಕಿಸಲು ಹೇಳಿ.

* 16ರ ಯುವಕ. ಕಾಮಾಸಕ್ತಿಯಿಂದ ಸಾಕಷ್ಟು ಬಾರಿ ಹಸ್ತಮೈಥುನ ಮಾಡಿದ್ದೇನೆ. ಆದರೆ ಶಿಶ್ನವು ಬಹಳ ಚಿಕ್ಕದಾಗುತ್ತಿರುವದಿಂದ ಹಸ್ತಮೈಥುನ ನಿಲ್ಲಿಸುವ ನಿರ್ಧಾರ ಮಾಡಿದೆ. ಆದರೆ ಕೈ ಸ್ಪರ್ಷವಿಲ್ಲದಿದ್ದರೂ ರಾತ್ರಿಯ ವೇಳೆ ಸ್ಖಲನವಾಗಿರುತ್ತದೆ. ಇದಕ್ಕೆ ಪರಿಹಾರವೇನು? ಇದರಿಂದ ಮುಂದಿನ ಲೈಂಗಿಕ ಜೀವನಕ್ಕೆ ತೊಂದರೆಯಾಗಬಹುದೇ?

ಹೆಸರು, ಊರು ತಿಳಿಸಿಲ್ಲ.

ಕೆಲಸ ಮಾಡುವುದರಿಂದ ಕೈಬೆರೆಳುಗಳು ಸಣ್ಣದಾಗುವುದು ಸಾಧ್ಯವೇ? ಹಾಗೆಯೇ ಹಸ್ತಮೈಥುನದಿಂದ ಶಿಶ್ನವು ಸಣ್ಣಗಾಗುವುದಿಲ್ಲ. ದೇಹದ ಜೀವಕೋಶಗಳು ನಿರಂತರವಾಗಿ ಮರಣಹೊಂದುತ್ತಾ ಹೊಸದರ ಸೃಷ್ಟಿಯಾಗುತ್ತಲೇ ಇರುತ್ತದೆ. ಸ್ವಪ್ನಸ್ಖಲನದಿಂದ ಹೊರಹೋದರೂ ಕೂಡ ಮತ್ತೆ ಸೃಷ್ಟಿಯಾಗುತ್ತದೆ. ಇದರಿಂದ ಮುಂದಿನ ಲೈಂಗಿಕ ಜೀವನಕ್ಕೆ ತೊಂದರೆಯಿಲ್ಲ. ನಿಶ್ಚಿಂತರಾಗಿ ವಿದ್ಯಾಭ್ಯಾಸದ ಕಡೆ ಗಮನಹರಿಸಿ.

* 20ರಯುವಕ. ವಾರದಲ್ಲಿ 4-5 ಬಾರಿ ಹಸ್ತಮೈಥುನ ಮಾಡಿಕೊಳ್ಳುತ್ತೇನೆ. ಇದು ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ವಾರದಲ್ಲಿ ಎಷ್ಟುಬಾರಿ ಮಾಡಿದರೆ ಒಳ್ಳೆಯದು?

100 ವರ್ಷಗಳ ಹಿಂದೆ ಪುರುಷರು 20 ವರ್ಷಕ್ಕೆ ಮದುವೆಯಾಗುತ್ತಿದ್ದರಲ್ಲವೇ? ಆಗ 4-5 ಬಾರಿಗಿಂತ ಹೆಚ್ಚು ಹೆಂಡತಿಯೊಡನೆ ಕೂಡಿದರೆ ಆರೋಗ್ಯಕ್ಕೆ ಹಾನಿಯಾಗುತ್ತಿತ್ತೇ? ಹಸ್ತಮೈಥುನಕ್ಕೂ ಅಂತಹ ನಿಯಮಗಳೇನಿಲ್ಲ. ದೇಹ ದಣಿದಾಗ ಸ್ಪಂದನೆಯನ್ನು ತಾನಾಗಿಯೇ ನಿಲ್ಲಿಸುತ್ತದೆ. ಲೆಕ್ಕವಿಡುವುದನ್ನು ಬಿಟ್ಟು ಓದು, ಉದ್ಯೋಗಗಳ ಕಡೆ ಪೂರ್ಣ ಮನಸ್ಸಿನ ಗಮನಹರಿಸಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು