7

ನಾಯಿ ಜೊತೆಗೆ ಓಡಿ

Published:
Updated:

ಸಾಕುನಾಯಿ ಮನೆಯ ಆವರಣದಲ್ಲಿ ‘ಗಲೀಜು’ ಮಾಡುವುದನ್ನು ತಪ್ಪಿಸಲು ನಿಗದಿತ ವೇಳೆಗೆ ಮನೆಯಿಂದಾಚೆ ಒಯ್ಯುವುದು ಕೆಲವರ ದಿನಚರಿಯ ಭಾಗ. ದುಬಾರಿ ನಾಯಿಯನ್ನು ಜೊತೆಗೆ ವಾಯುವಿಹಾರಕ್ಕೆ ಕರೆದೊಯ್ಯುವುದು ಕೆಲವರಿಗೆ ಪ್ರತಿಷ್ಠೆಯ ಪ್ರಶ್ನೆ. ಮತ್ತೆ ಕೆಲವರು, ತಮ್ಮ ವಾಯುವಿಹಾರಕ್ಕೆ ನಂಬಿಕೆಯ ನೆಂಟನಿಗಿಂತ ಉತ್ತಮ ಜೊತೆಗಾರ ಇಲ್ಲ ಎಂದುಕೊಳ್ಳುವುದೂ ಉಂಟು.

ಅಸಲಿಗೆ, ಸಾಕುನಾಯಿಯನ್ನು ವಾಯುವಿಹಾರಕ್ಕೆ ಕರೆದೊಯ್ಯುವ ರೂಢಿ ಒಳ್ಳೆಯದಂತೆ. ಇದರಿಂದ ನಮಗೂ, ಅವುಗಳಿಗೂ ದೈಹಿಕ ಮತ್ತು ಮಾನಸಿಕ ಪ್ರಯೋಜನ ಆಗುತ್ತದೆ. ಕೇವಲ ನಡಿಗೆಯೋ, ಲಘು ಓಟವೋ ಏನೇ ಇರಲಿ, ವಾಯುವಿಹಾರದ ವೇಳೆ ಸಾಕುನಾಯಿ ನಮ್ಮ ಜೊತೆಗಾರನಾಗಿದ್ದರೆ ನಾವು ಹೆಚ್ಚು ಉತ್ತೇಜನ ಮತ್ತು ಚೈತನ್ಯದಿಂದ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಲು ಸಹಕಾರಿಯಂತೆ. ಇದು, ಅಧ್ಯಯನದಿಂದ ಸಾಬೀತಾಗಿರುವ ಸಂಗತಿ.

ನಿಮ್ಮ ಈ ಜೊತೆಗಾರ ಪಳಗಿದ ಓಟಗಾರನಾಗಿರಬಹುದು ಅಥವಾ ಹೊಸದಾಗಿ ವಿಹಾರಕ್ಕೆ ಬಂದ ಖುಷಿಯಲ್ಲಿ ಉಮೇದಿನಿಂದ ವೇಗವಾಗಿ ಓಡುವುದನ್ನು ಇಷ್ಟಪಡಬಹುದು, ಇಲ್ಲವೇ ಶಿಸ್ತಿನ ಓಟ ಗೊತ್ತಿಲ್ಲದೇ ಇರಬಹುದು. ರಸ್ತೆ ದಾಟುವುದು, ರಸ್ತೆ ಬದಿಯಲ್ಲಿ ನಡೆಯುವುದು, ಓಡುವುದು, ಮೈದಾನದ ಟ್ರ್ಯಾಕ್‌ನಲ್ಲಿನ ಬಿರುನಡಿಗೆ ಮುಂತಾದುವುಗಳ ಅರಿವೇ ಇಲ್ಲದಿರಬಹುದು. 

ಆರಂಭದ ದಿನಗಳಲ್ಲಿ ನಿಮ್ಮ ಜೊತೆಗಾರನನ್ನು ಅರ್ಥ ಮಾಡಿಕೊಳ್ಳುವುದು ನಿಮಗೂ ಗೊಂದಲ ತರಬಹುದು. ನಡಿಗೆ, ಓಟದ ಓಘಕ್ಕೆ ಹೊಂದಿಕೊಂಡು ನಿಮ್ಮ ವಾಯುವಿಹಾರದ ಅವಧಿಗೆ ಅವನನ್ನು ಪಳಗಿಸಲು ನಿಮಗೆ ತಾಳ್ಮೆ ಇರಬೇಕು. ಅದಕ್ಕೆ ಕೆಲವು ಉಪಾಯಗಳನ್ನು ಕಂಡುಕೊಳ್ಳಿ.

* ಮೊಂಡುತನ ಮಾಡುತ್ತಿದ್ದರೆ ಮಧ್ಯೆ ಮಧ್ಯೆ ಯಾವುದಾದರೂ ಲಘು ಆಹಾರವನ್ನು ಕೊಡಿ.

* ಒಂದೆರಡು ಸುತ್ತು ನಡಿಗೆ ಮುಗಿಸಿ ಸಣ್ಣ ವಿರಾಮ ನೀಡಿ.

* ‘ಜಾಗಿಂಗ್‌ ಫ್ರೆಂಡ್‌’, ‘ವಾಕಿಂಗ್‌ ಫ್ರೆಂಡ್‌’, ‘ಯೋಗ ಫ್ರೆಂಡ್‌’, ‘ಪಾರ್ಕ್‌ ಫ್ರೆಂಡ್‌’ ಜೊತೆ ನೀವು ಲೋಕಾಭಿರಾಮ ಮಾತನಾಡುತ್ತೀರಿ ತಾನೆ? ನಿಮ್ಮ ಈ ಜೊತೆಗಾರನೊಂದಿಗೆ ಕೂಡಾ ಮಾತನಾಡಿ. ಉತ್ತೇನದ ಮಾತುಗಳಿಂದ ಅವನಲ್ಲಿ ಚೈತನ್ಯ ತುಂಬಿ.

* ಜೊತೆಗಾರ ದಣಿದಿದ್ದರೆ, ಅನಾರೋಗ್ಯವಿದ್ದರೆ ನೀವೂ ಕುಳಿತುಕೊಂಡು ಅವನು ಸಾವರಿಸಿಕೊಳ್ಳುವಂತೆ ನೋಡಿಕೊಳ್ಳಿ. 

 * ಅವನು ಆಟವಾಡುವ ಮೂಡ್‌ನಲ್ಲಿದ್ದರೆ ನೀವು ನಿಂತು, ‘ಈಗ ಆಟವಾಡುವ ಸಮಯವಲ್ಲ’ ಎಂದು ಖಚಿತ ಧ್ವನಿಯಲ್ಲಿ ಹೇಳಿಬಿಡಿ. ಮುಂದೆಂದೂ ಅವನು ವಾಯುವಿಹಾರದಲ್ಲಿ ಆಟವಾಡಲು ಬಯಸಲಾರ.

* ಓಟ ಶುರು ಮಾಡುವುದಕ್ಕೂ ಮೊದಲು ಮತ್ತು ಓಟದ ಕೊನೆಯಲ್ಲಿ ನಿಧಾನವಾಗಿ ನಡೆಯಿರಿ. ಇದು ಅವನ ದೇಹದ ಶಾಖ ಸಾಮಾನ್ಯ ಮಟ್ಟಕ್ಕೆ ಬರಲು ನೆರವಾಗುತ್ತದೆ.

* ನಿಮ್ಮಂತೆ ಜೊತೆಗಾರನಿಗೂ ದಾಹವಾಗುತ್ತದೆ. ಅವನಿಗೂ ಕುಡಿಯಲು ನೀರು ಕೊಡಿ.

* ವಿಹಾರದ ಕೊನೆಯಲ್ಲಿ ನೀವು ಉಪಾಹಾರ ಸೇವಿಸಿದರೆ ಅವನಿಗೂ ಕೊಡಿ.

* ಪ್ರತಿದಿನ ವಾಯುವಿಹಾರದಿಂದ ಹಿಂತಿರುಗಿದಾಗ ಅವನ ಮೈ, ಕೈ ಮತ್ತು ಕಾಲನ್ನು ಒರೆಸಿಬಿಡಿ. ಇದರಿಂದ ಯಾವುದೇ ಸೋಂಕು ತಗುಲುವುದನ್ನು ತಡೆಯಬಹುದು.

V

Tags: 

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !