ಗುರುವಾರ , ನವೆಂಬರ್ 26, 2020
20 °C

ಕೊರೊನಾ | ಒಂದಿಷ್ಟು ತಿಳಿಯೋಣ: ಅನಗತ್ಯ ಟೇಬಲ್‌, ಕುರ್ಚಿ ಮುಟ್ಟಬೇಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ‘ಜನರ ತುರ್ತು ಕೆಲಸಗಳಲ್ಲಿ ಸಾರ್ವಜನಿಕ ಕಚೇರಿಗಳ ಕೆಲಸವೂ ಸೇರಿದೆ. ಕೋವಿಡ್‌ ಭೀತಿಯ ನಡುವೆಯೂ ಸರ್ಕಾರಿ, ಖಾಸಗಿ ವಲಯದ ಕಚೇರಿಗಳಿಗೆ ಭೇಟಿ ನೀಡುವುದು ಅನಿವಾರ್ಯ. ಆದರೆ, ಸುರಕ್ಷತೆ ನಿರ್ಲಕ್ಷಿಸಿ, ಪ್ರಾಣ ಪಣಕ್ಕೆ ಒಡ್ಡುವುದು ಸಲ್ಲ’ ಎಂಬುದು ಹುಬ್ಬಳ್ಳಿಯ ಕಿಮ್ಸ್‌ನ ಫಿಸಿಯಾಜಲಿ ವಿಭಾಗದ ಮುಖ್ಯಸ್ಥ ಡಾ.ಕೆ.ಎಫ್‌.ಕಮ್ಮಾರ ಕಾಳಜಿಪೂರ್ವಕ ಎಚ್ಚರಿಕೆ.

‘ಸಮಸ್ಯೆಗಳನ್ನು ಹೊತ್ತು ಕಚೇರಿಗಳಿಗೆ ಹೋಗುವ ಜನಸಾಮಾನ್ಯರು ಸದಾ ಎಚ್ಚರಿಕೆಯಿಂದ ಇರಬೇಕು. ಅಲ್ಲಿನ ಟೇಬಲ್‌, ಕುರ್ಚಿ, ಬಾಗಿಲಿನ ಹಿಡಿಕೆ ಸೇರಿದಂತೆ ಯಾವುದನ್ನೂ ಅನಗತ್ಯ ಮುಟ್ಟಬಾರದು. ಸರದಿಯಲ್ಲಿ ಎಷ್ಟೇ ಜನರಿದ್ದರೂ ಸುರಕ್ಷಿತ ಅಂತರ ನಿರ್ಲಕ್ಷಿಸಬಾರದು. ತಾಸುಗಟ್ಟಲೇ ಕಾಯುವ ಬದಲು ನಿಮ್ಮ ಕೆಲಸ ಆಗಬಹುದೇ ಎಂಬುದನ್ನು ಮೊದಲೇ ಅಧಿಕಾರಿಗಳನ್ನು ವಿಚಾರಿಸಿ ಸರದಿ ಸಾಲಿನಲ್ಲಿ ನಿಲ್ಲುವುದು ಉತ್ತಮ’ ಎಂಬುದು ಅವರ ಸಲಹೆ.

‘ಕಚೇರಿಗಳಿಗೆ ಹೋದಾಗ ಸಿಕ್ಕ ಸಿಕ್ಕಲ್ಲಿ ಊಟ, ತಿಂಡಿ, ಚಹಾ ಸೇವನೆ ಉಚಿತವಲ್ಲ. ಸಾಧ್ಯವಾದಷ್ಟು ಮನೆಯಲ್ಲಿಯೇ ಎಲ್ಲ ಮುಗಿಸಿಕೊಂಡು ಹೋಗಬೇಕು. ಮರಳಿ ಮನೆಗೆ ಬಂದೇ ಸ್ನಾನದ ಬಳಿಕ ಊಟ ತಿಂಡಿ ಮಾಡಿದರೆ ಒಳಿತು. ಕಚೇರಿಯಲ್ಲಿ ಕೆಲಸ ಮಾಡುವವರಿಗೂ ಇದನ್ನು ಅನ್ವಯಿಸಬಹುದು. ಕೆಲಸದ ನಡುವೆ ಕುರುಕಲು ತಿನ್ನುವ ಹವ್ಯಾಸ ಬಿಡಿ. ಇದರಿಂದ ಮಾಸ್ಕ್‌ ನಿರ್ಲಕ್ಷಿಸುವ ಸಾಧ್ಯತೆ ಇದ್ದು, ಅ‍ಪಾಯಕ್ಕೆ ಆಹ್ವಾನ ನೀಡಬಲ್ಲದು’ ಎನ್ನುತ್ತಾರೆ ಅವರು.

‘ಮನೆಯಿಂದ ಹೊರಗೆ ಹೋದಾಗ ಮಾಸ್ಕ್‌ ಹಾಗೂ ಸ್ಯಾನಿಟೈಸರ್‌ ಬಾಟಲ್‌ ಜೊತೆಗಿರಲಿ. ನಿಮಗೆ ಸಂದೇಹ ಬಂದಾಗ, ಇಲ್ಲವೇ ಯಾವುದಾದರೂ ವಸ್ತುಗಳನ್ನು ಮುಟ್ಟಿದಾಗ ಸ್ಯಾನಿಟೈಸರ್‌ ಬಳಸುವುದು ಉತ್ತಮ. ಸಾರ್ವಜನಿಕ ಪ್ರದೇಶಗಳಲ್ಲಿ ಗಂಟೆಗೊಂದು ಸಲ ಸ್ಯಾನಿಟೈಸರ್ ಬಳಸಿದರೂ ಒಳ್ಳೆಯದೇ’ ಎಂಬುದು ಅವರ ಅಂಬೋಣ.

ಮುನ್ನೆಚ್ಚರಿಕೆ ಕ್ರಮಗಳು

l ತುರ್ತು ಕೆಲಸಗಳ ಹೊರತು ಹೊರಗೆ ಹೋಗಬೇಡಿ.

l ಅಗತ್ಯ ಕೆಲಸಗಳಿಗೆ 40 ವರ್ಷದೊಳಗಿನವರು ಹೋದರೆ ಉತ್ತಮ.

l ಕೈತೊಳೆದುಕೊಳ್ಳದ ಹೊರತು ಬಾಯಿ, ಕಣ್ಣು, ಮೂಗು ಮುಟ್ಟಿಕೊಳ್ಳದಿದ್ದರೆ ನಾವು ಬಹುತೇಕ ಸುರಕ್ಷಿತ. ಇದನ್ನು ಪ್ರಜ್ಞಾಪೂರ್ವಕವಾಗಿ ಪಾಲಿಸಿ.

l ಸೋಂಕು ಹರಡದಂತೆ ತಡೆಯಲು ಸಾಬೂನು, ಹ್ಯಾಂಡ್‌ವಾಷ್‌ ಉತ್ತಮ. ಸಿಗದಿದ್ದರೆ ಸ್ಯಾನಿಟೈಸರ್‌ ಬಳಸಿ.

l ಮಾಸ್ಕ್‌ ಧರಿಸುವಷ್ಟೇ ಆದ್ಯತೆ ಅದನ್ನು ಸರಿಯಾಗಿ ಧರಿಸಲು ಕೂಡ ನೀಡಬೇಕು. ಇಲ್ಲದಿದ್ದರೆ ಅದು ನಿಷ್ಪ್ರಯೋಜಕ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು