ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive | ನಲವತ್ತರ ಕಸಿವಿಸಿ ಬಿಟ್ಟುಬಿಡಿ

Last Updated 20 ಅಕ್ಟೋಬರ್ 2020, 13:32 IST
ಅಕ್ಷರ ಗಾತ್ರ

ಸಾಮಾಜಿಕ ಜಾಲತಾಣಗಳಲ್ಲಿ ಒಮ್ಮೆ ಇಣುಕಿ ನೋಡಿ. ನಿಮ್ಮ ಸ್ನೇಹಿತೆಯರದ್ದೇ ಹಲವರ ಫೋಟೋಗಳನ್ನು ನೋಡಿ ‘ವಾವ್‌’ ಎಂಬ ಉದ್ಗಾರ ಬರುವುದು ಸಹಜ. ‘ಹೇಗೆ ಈ ವಯಸ್ಸಿನಲ್ಲಿ ದೇಹದ ತೂಕ ಹೆಚ್ಚಾಗದಂತೆ ಕಾಯ್ದುಕೊಂಡಿದ್ದಾಳೆ! ತ್ವಚೆ ಹೇಗೆ ಹೊಳೆಯುತ್ತಿದೆ, ಕಣ್ಣ ಕೆಳಗೆ ಕಪ್ಪಿನ ಕಲೆ ಕೊಂಚವೂ ಇಲ್ಲ. ಆರೋಗ್ಯದಿಂದಿದ್ದರೆ ಮಾತ್ರ ಇಂತಹ ಕಳೆ ಸಹಜ’ ಎಂಬಂತಹ ತಾರೀಫು ಬರದೇ ಇರದು.

ಸಿನಿಮಾ ನಟಿಯರು, ಇತರ ಸೆಲೆಬ್ರಿಟಿಗಳ ಚಿತ್ರಗಳನ್ನು ಇನ್‌ಸ್ಟಾಗ್ರಾಮ್‌ನಲ್ಲೋ, ಫೇಸ್‌ಬುಕ್‌ನಲ್ಲೋ ಗಮನಿಸಿದಾಗ 50ರ ಆಜೂಬಾಜು ಇರುವಂಥವರೂ ಕೂಡ ಆರೋಗ್ಯಕರ ಕಳೆಯಿಂದ ಮಿಂಚುವುದು ನಿಮ್ಮ ಗಮನ ಸೆಳೆದಿರಬಹುದು. ನಟಿ ಕಾಜೋಲ್‌, ಮಲೈಕಾ ಅರೋರ, ಶಿಲ್ಪಾ ಶೆಟ್ಟಿ, ನೀತಾ ಅಂಬಾನಿ ಮೊದಲಾದವರ ವಯಸ್ಸು 30ಕ್ಕೇ ನಿಂತು ಬಿಟ್ಟಿದೆಯೇನೋ ಅನಿಸುವುದು ಸಹಜ. ಮೇಕಪ್‌ ಹಾಗೂ ಅದಕ್ಕೆ ತಕ್ಕಂತಹ ಆ್ಯಕ್ಸೆಸರಿಗಳಿಂದ ವಯಸ್ಸನ್ನು ಮುಚ್ಚಿಡಬಹುದು ಎಂದೂ ನಿಮಗೆ ಅನಿಸಬಹುದು. ಆದರೆ ಕೆಲವರನ್ನು ಸೂಕ್ಷ್ಮವಾಗಿ ಗಮನಿಸಿ. ಅವರ ಆರೋಗ್ಯಕರ ಶರೀರದ ಹಿಂದೆ ಆರೋಗ್ಯಕರ ಆಹಾರ ಸೇವನೆ, ವ್ಯಾಯಾಮ, ಆರೋಗ್ಯಕರ ಜೀವನಶೈಲಿ... ಹೀಗೆ ಹಲವು ಆರೋಗ್ಯಕರ ಅಂಶಗಳ ಪಟ್ಟಿಯೇ ಇರುತ್ತದೆ.

‘ಮೊದಲು ನಿಮ್ಮ ಬೆಳಗಿನ ಉಪಾಹಾರದಿಂದ ಆರಂಭಿಸಿ. ಪೌಷ್ಟಿಕಾಂಶಗಳಿಂದ ಕೂಡಿದ, ಹೊಟ್ಟೆ ತುಂಬ ಸೇವಿಸುವ ಉಪಾಹಾರ ನಿಮ್ಮ ಚಯಾಪಚಯ ಕ್ರಿಯೆಯನ್ನು ಸುಗಮಗೊಳಿಸುತ್ತದೆ. ಇದು ತೂಕವನ್ನು ಕಾಯ್ದುಕೊಳ್ಳಲು ಸಹಕಾರಿ’ ಎನ್ನುತ್ತಾರೆ ಲೈಫ್‌ಸ್ಟೈಲ್‌ ಕಾಯಿಲೆಗಳ ತಜ್ಞ ಡಾ.ಟಿ.ಎಸ್‌.ತೇಜಸ್‌.

ರಾತ್ರಿ ಹೆಚ್ಚು ಕಡಿಮೆ 10–12 ತಾಸುಗಳ ಕಾಲ ಖಾಲಿ ಹೊಟ್ಟೆಯಲ್ಲಿರುತ್ತೀರಿ. ಹೀಗಾಗಿ ಹೊಟ್ಟೆ ತುಂಬ ಉಪಾಹಾರ ಮಾಡುವುದು ಮುಖ್ಯ. ಇದು ನಮ್ಮ ಹಿರಿಯರು ಕೂಡ ಪಾಲಿಸಿಕೊಂಡು ಬರುತ್ತಿದ್ದ ದಿನಚರಿ. ಅವರ ಆರೋಗ್ಯದ ಗುಟ್ಟು ಕೂಡ ಇದೇ ಇರಬಹುದು. ಆದರೆ ಆಗ ಅಂತಹ ಆರೋಗ್ಯಕರ ಶರೀರದ ಬಗ್ಗೆ ಟಿಪ್ಸ್‌ ಹಂಚಿಕೊಳ್ಳಲು ಆನ್‌ಲೈನ್‌ ವೇದಿಕೆಗಳು ಇರಲಿಲ್ಲವಲ್ಲ!

ಇರಲಿ, ಮುಂಜಾನೆ ಎದ್ದ ಕೂಡಲೇ ಕುಡಿಯುವ ನೀರಿನ ನಂತರ ಸಾಕಷ್ಟು ಪೋಷಕಾಂಶಗಳಿರುವ ಉಪಾಹಾರದಿಂದ ದಪ್ಪ ಇರುವವರೂ ಕೂಡ ತೂಕ ಕರಗಿಸಬಹುದು ಎನ್ನುತ್ತಾರೆ ತಜ್ಞರು.

ಉಪಾಹಾರಕ್ಕೆ ಏನಿರಬೇಕು?

ಇಡ್ಲಿ, ದೋಸೆ, ಉಪ್ಪಿಟ್ಟು, ಮೊಟ್ಟೆಯ ಆಮ್ಲೆಟ್‌.. ಜೊತೆಗೆ ಹೆಚ್ಚು ಕೊಬ್ಬಿನಂಶವಿಲ್ಲದ ಹಾಲು. ಹಾಗೆಯೇ ಆಹಾರ ತಜ್ಞರು ಪದೇ ಪದೇ ಎಚ್ಚರಿಸುವಂತೆ ಹಣ್ಣಿನ ರಸದ ಬದಲು ಇಡೀ ಹಣ್ಣನ್ನೇ ಸೇವಿಸಿ. ಇದು ಸಾಕಷ್ಟು ಆ್ಯಂಟಿ ಆಕ್ಸಿಡೆಂಟ್‌ಗಳನ್ನು ಹೊಂದಿದ್ದು, ಆರೋಗ್ಯಕ್ಕೆ ಕೊಡುಗೆ ನೀಡುತ್ತದೆ ಹಾಗೂ ವಯಸ್ಸಾಗುವುದನ್ನು ನಿಧಾನಗೊಳಿಸುತ್ತದೆ ಎಂಬುದು ವೈದ್ಯರ ಅಂಬೋಣ.

ಪ್ರತಿ ದಿನ ಒಂದೇ ರೀತಿಯ ಉಪಾಹಾರ ಸೇವಿಸುವುದರ ಬದಲು ಬದಲಾವಣೆ ಮಾಡುತ್ತ ಹೋಗಿ. ಇದರಿಂದ ವಿವಿಧ ಬಗೆಯ ಪೋಷಕಾಂಶಗಳು ನಿಮಗೆ ಲಭ್ಯವಾಗುತ್ತವೆ. ಜೊತೆಗೆ ಬಾದಾಮಿ, ಅಕ್ರೂಟ್‌ನಂತ ನಟ್ಸ್‌, ದಾಲ್ಚಿನ್ನಿ, ಮೆಣಸಿನಕಾಳು, ಅರಿಸಿನ, ಶುಂಠಿಯಂತಹ ಸಂಬಾರು ಪದಾರ್ಥಗಳು ಒಂದಿಷ್ಟು ರೋಗ ನಿರೋಧಕ ಶಕ್ತಿ ನೀಡುತ್ತವೆ. ಹಾಗೆಯೇ ಕರಿಬೇವು, ಕೊತ್ತಂಬರಿ ಸೊಪ್ಪು, ಪುದಿನಾ.. ಹೀಗೆ ಉಪಾಹಾರದಲ್ಲಿ ಇವೆಲ್ಲವೂ ಸಮಗ್ರವಾಗಿರಲಿ.

ಆದರೆ ತೀರಾ ಕಟ್ಟುನಿಟ್ಟಿನ ಡಯಟ್‌ ನಿಮ್ಮ ಮುಖದ ಮೇಲೆ ಒಂದಿಷ್ಟು ನೆರಿಗೆ, ಕಣ್ಣ ಕೆಳಗೆ ಒಂದಿಷ್ಟು ಕಪ್ಪು ವೃತ್ತಗಳು, ತ್ವಚೆಗೆ ಪೇಲವ ನೋಟವನ್ನು ನೀಡುತ್ತದೆ ಎನ್ನುತ್ತಾರೆ ಡಾ.ತೇಜಸ್‌.

ವ್ಯಾಯಾಮ, ನಡಿಗೆ

ಅಂದಹಾಗೆ ಬೆಳಗಿನ ವ್ಯಾಯಾಮ ಅಥವಾ ವೇಗದ ನಡಿಗೆ ಅಥವಾ ರನ್ನಿಂಗ್‌ ಬಹು ಮುಖ್ಯ. ನಿಮಗೆ ಸೂಕ್ತವೆನಿಸಿದ ಯಾವುದೇ ವ್ಯಾಯಾಮಕ್ಕೆ ಕನಿಷ್ಠ ಅರ್ಧ ತಾಸು ಮೀಸಲಿಡಿ. 40 ಮೆಟ್ಟಿದ ಕೂಡಲೇ ವ್ಯಾಯಾಮ ಶುರು ಮಾಡುವ ಬದಲು 30ಕ್ಕಿಂತ ಮೊದಲೇ ಯೋಗ, ಕಾರ್ಡಿಯೊ ವ್ಯಾಯಾಮ ಮೊದಲಾದವುಗಳನ್ನು ಆರಂಭಿಸುವುದು ಒಳಿತು. ಇದು ಸ್ನಾಯುಗಳನ್ನು ಬಲಪಡಿಸಿ ಆರೋಗ್ಯಕರ ಶರೀರಕ್ಕೆ ಸಾಥ್‌ ನೀಡುತ್ತದೆ. ಹಾಗೆಯೇ ಚಯಾಪಚಯ ಕ್ರಿಯೆ ಸರಿ ಹೋಗುವಂತೆ ಮಾಡುತ್ತದೆ. ಜೊತೆಗೆ ತೂಕ ಕಮ್ಮಿ ಮಾಡಿಕೊಳ್ಳಬಹುದು. 25ರಿಂದ 30ರ ವಯಸ್ಸಿನಲ್ಲಿ ಬಹುತೇಕ ಮಹಿಳೆಯರು ಗರ್ಭಧಾರಣೆಯತ್ತ ಒಲವು ತೋರಿಸುವುದು ಸಹಜ. ಆ ಸಮಯದಲ್ಲಿ ತೂಕ ಜಾಸ್ತಿಯಾಗಿ ಸೊಂಟದ ಸುತ್ತ ಬೊಜ್ಜು ಸೇರಿಕೊಳ್ಳಬಹುದು. ಹೀಗಾಗಿ ಆ ವಯಸ್ಸಿನಲ್ಲಿ ಶರೀರವನ್ನು ಫಿಟ್‌ ಆಗಿಟ್ಟುಕೊಳ್ಳುವುದಕ್ಕೆ ಗಮನ ನೀಡಿದರೆ 40– 50ರ ವಯಸ್ಸಿನಲ್ಲಿಯೂ ಆರೋಗ್ಯಕರ ಶರೀರ ಹೊಂದಬಹುದು.

ವಯಸ್ಸಾದಂತೆ ಕಾಣಿಸುವುದಕ್ಕೆ ಇನ್ನೊಂದು ಕಾರಣ ಒತ್ತಡ. ಸಾಮಾನ್ಯವಾಗಿ 40ನೇ ವಯಸ್ಸಿನಲ್ಲಿ ಕುಟುಂಬ, ಮಕ್ಕಳ ಜವಾಬ್ದಾರಿ, ವೃತ್ತಿ ಎಂದೆಲ್ಲ ಮಹಿಳೆಯರು ಒತ್ತಡಕ್ಕೆ ಒಳಗಾಗುವುದು ಸಹಜ. ಈ ವಿಪರೀತ ಒತ್ತಡ ದೇಹದ ಮೇಲೆ ಪರಿಣಾಮ ಬೀರುತ್ತದೆ ಎನ್ನುತ್ತಾರೆ ಪ್ರಸೂತಿ ತಜ್ಞೆ ಡಾ.ರಾಧಾ ಮೂರ್ತಿ. ಇದರಿಂದ ಅಧಿಕ ರಕ್ತದೊತ್ತಡ, ಮಧುಮೇಹ, ಅರೆದಲೆಶೂಲೆಯಂತಹ ಕಾಯಿಲೆಗಳು ಕಾಣಿಸಿಕೊಳ್ಳಬಹುದು. ಮೂಳೆ ಸವೆತವೂ ಕಂಡು ಬರಬಹುದು. ಇದರಿಂದ ವಯಸ್ಸಾಗುವ ಪ್ರಕ್ರಿಯೆ ವೇಗ ಪಡೆದುಕೊಳ್ಳುತ್ತದೆ ಎಂದು ಎಚ್ಚರಿಸುತ್ತಾರೆ ಅವರು.

ಈ ಒತ್ತಡ ಕಡಿಮೆ ಮಾಡಿಕೊಳ್ಳಲು ಯೋಗ, ಧ್ಯಾನ, ಪ್ರಾಣಾಯಾಮ, ಸಂಜೆ ವಾಯು ವಿಹಾರ, ಸಣ್ಣಪುಟ್ಟ ಪ್ರವಾಸಗಳ ಕಡೆ ಗಮನ ನೀಡಬಹುದು. ಹಾಗೆಯೇ ಸ್ನೇಹಿತೆಯರೊಂದಿಗೆ ಮಾತುಕತೆ ಮೂಲಕ ಒತ್ತಡ ನಿವಾರಣೆಗೆ ಯತ್ನಿಸಬಹುದು.

ಕ್ಯಾಲ್ಸಿಯಂ, ವಿಟಮಿನ್‌ ಡಿ ಹಾಗೂ ಪ್ರೊಟೀನ್‌ ಸೇವನೆ ಕಡೆ ಗಮನ ಕೊಡಿ. ಇದು ಸ್ನಾಯುವಿನ ಸಾಂದ್ರತೆ ಹಿಡಿದಿಟ್ಟುಕೊಳ್ಳಲು ಸಹಕಾರಿ. ಹಾಗೆಯೇ ಖಿನ್ನತೆ ಕಡಿಮೆ ಮಾಡುತ್ತದೆ. ಹಾಲು, ಮೀನು, ಮೊಟ್ಟೆ, ಬೇಳೆಕಾಳು ಸೇವನೆ ಕಡೆ ಗಮನ ಇರಲಿ.

‘ನಿಮ್ಮ ದಾಂಪತ್ಯ ಜೀವನ ಸಂತಸದಿಂದ ಕೂಡಿದ್ದರೆ ಮನಸ್ಸೂ ಪ್ರಫುಲ್ಲವಾಗಿ ದೈಹಿಕವಾಗಿಯೂ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಹೀಗಾಗಿ ಪತಿಯ ಜೊತೆ ಅನ್ಯೋನ್ಯವಾದ ಸಂಬಂಧವಿರಲಿ’ ಎನ್ನುತ್ತಾರೆ ಡಾ.ರಾಧಾ.

ಕೊನೆಯದಾಗಿ ಪ್ರತಿ ವರ್ಷ ಒಂದಿಷ್ಟು ವೈದ್ಯಕೀಯ ಪರೀಕ್ಷೆ ಮಾಡಿಸಿಕೊಳ್ಳಿ. ರಕ್ತದೊತ್ತಡ, ರಕ್ತದಲ್ಲಿನ ಸಕ್ಕರೆ ಮಟ್ಟ, ಮ್ಯಾಮೊಗ್ರಾಮ್‌ ಹಾಗೂ ಪ್ಯಾಪ್‌ಸ್ಮಿಯರ್‌ ಪರೀಕ್ಷೆ, ಕಣ್ಣಿನ ಪರೀಕ್ಷೆ, ಹೊಟ್ಟೆಯ ಸ್ಕ್ಯಾನಿಂಗ್‌– ಈ ಬಗ್ಗೆ ವೈದ್ಯರ ಸಲಹೆ ಪಡೆದು ಮುಂದುವರಿಯಿರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT