ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್-19 ಕಲಿಸಿದ ಜೀವನಪಾಠ

Last Updated 27 ಜುಲೈ 2020, 19:30 IST
ಅಕ್ಷರ ಗಾತ್ರ

ಆಕೆ ದೆಹಲಿ ಮೂಲದ ರೀತು ಅಗರವಾಲ್‌. ಮೂರು ವರ್ಷಗಳ ಹಿಂದೆ ಬೆಂಗಳೂರಿಗೆ ಉದ್ಯೋಗದ ಸಲುವಾಗಿ ಬಂದು ಬಾಡಿಗೆ ಅಪಾರ್ಟ್‌ಮೆಂಟ್‌ ಒಂದರಲ್ಲಿ ಆರಾಮವಾಗಿ ಇದ್ದಳು. ಕೋವಿಡ್‌–19ಗಿಂತ ಮೊದಲಿನ ದಿನಗಳೆಂದರೆ ಬಹುತೇಕ ಆರಾಮದ ದಿನಗಳೇ. ಆದರೆ ಕೊರೊನಾ ಸೋಂಕು ಎಲ್ಲಾ ಕಡೆ ಹರಡಲು ಶುರುವಾದಾಗ ದೆಹಲಿಗೆ ಹಿಂದಿರುಗಲೂ ಆಗದೇ, ಇಲ್ಲಿಯೂ ಹೆಚ್ಚಿನ ಸ್ನೇಹಿತರು ಸಹಾಯಕ್ಕಿಲ್ಲದೇ ಸಮಸ್ಯೆ ಆರಂಭವಾಯಿತು. ಜೊತೆಗೆ ಒಂಟಿತನ ಕಾಡಲಾರಂಭಿಸಿತು.

ಅಲ್ಲಿಯವರೆಗೆ ತಾನು, ತನ್ನ ಕೆಲಸ ಎಂಬುದಕ್ಕೆ ಸೀಮಿತಗೊಳಿಸಿಕೊಂಡಿದ್ದ ರೀತು ನಿಧಾನವಾಗಿ ಅಕ್ಕಪಕ್ಕದ ಮನೆಗಳಲ್ಲಿ ಯಾರಿದ್ದಾರೆ ಎಂದು ಹುಡುಕಾಟ ಆರಂಭಿಸಿದಳು. ಆಗ ಸಿಕ್ಕವರು 70ರ ಆಜೂಬಾಜಿನಲ್ಲಿದ್ದ ದಂಪತಿ. ಮಾತುಕತೆಯಿಂದ ಶುರುವಾಗಿ ಪರಸ್ಪರ ನೆರವು, ಬಿಡುವಿದ್ದಾಗ ಬೋರ್ಡ್‌ ಗೇಮ್‌ಗಳು, ಅವರ ಮೊಮ್ಮಕ್ಕಳ ಜೊತೆ ಆಟ, ಅವರ ಕಲಿಕೆಗೆ ಸಹಾಯ ಮಾಡುವವರೆಗೆ ಇಬ್ಬರ ನಡುವಿನ ಸ್ನೇಹ ಮುಂದುವರಿದಿದೆ. ಆ ದಂಪತಿಯೂ ಅಷ್ಟೆ, ರೀತುಗೆ ಅಗತ್ಯವಿರುವ ದಿನಸಿ, ತರಕಾರಿ ಒದಗಿಸುವುದು, ಸಣ್ಣಪುಟ್ಟ ಆರೋಗ್ಯ ಸಮಸ್ಯೆಯಿದ್ದಾಗ ತಮ್ಮ ಸೊಸೆಯನ್ನು ಜೊತೆಯಾಗಿರಲು ಕಳಿಸುವುದು.. ಹೀಗೆ ಅಗತ್ಯವಿರುವ ನೆರವು ಒದಗಿಸುತ್ತಿದ್ದಾರೆ.

ಕೊರೊನಾ ತಂದ ಹೊಸ ಜೀವನಶೈಲಿ, ಲಾಕ್‌ಡೌನ್ ಎಂಬುದು ಇಂತಹ ಹೊಸ ಸಂಬಂಧಗಳಿಗೆ ನಾಂದಿ ಹಾಡಿದೆ. ನಗರಗಳಲ್ಲಿ ಅಕ್ಕಪಕ್ಕದ ಮನೆಗಳಲ್ಲಿ ಏನು ನಡೆಯುತ್ತಿದೆ ಎಂಬುದನ್ನೂ ತಾಗಿಸಿಕೊಳ್ಳದೇ ಮನೆ, ಕಚೇರಿ ಎಂದು ಸೀಮಿತವಾಗಿದ್ದವರು ಈಗ ನಿಧಾನಕ್ಕೆ ಅಕ್ಕಪಕ್ಕದವರ ಮುಖ ನೋಡಿ ಮುಗಳ್ನಗಲು ಶುರು ಮಾಡಿದ್ದಾರೆ. ಜಾತಿ, ವರ್ಗ, ಭಾಷೆ, ಪ್ರದೇಶ ಎಂಬುದನ್ನೆಲ್ಲ ಮರೆತು ಸೌಹಾರ್ದ ಮಾತುಕತೆಗೆ ನಾಂದಿ ಹಾಡುತ್ತಿದ್ದಾರೆ. ಬೆಳಿಗ್ಗೆ ಮುಖ ನೋಡಿದ ತಕ್ಷಣ ‘ಶುಭ ಮುಂಜಾವು’ ಎಂಬುದರೊಂದಿಗೆ ಶುರುವಾಗುವ ಒಡನಾಟ, ‘ಏನಾದರೂ ಸಹಾಯ ಬೇಕೆ?’ ಎಂದು ನೆರವಿನ ಹಸ್ತ ಚಾಚುವುದರೊಂದಿಗೆ ಮುಂದುವರಿಯುತ್ತದೆ.

ಕೊರೊನಾ ಸೋಂಕು ಶುರುವಾದಾಗ ಅಕ್ಕಪಕ್ಕದ ಮನೆಯವರ ಮೇಲೆ ಅನುಮಾನಗಳು ಎಲ್ಲರ ಮನಸ್ಸಿನಲ್ಲಿದ್ದವು. ‘ಆಕೆಗೇನಾದರೂ ಸೋಂಕಿದ್ದರೆ..’, ‘ಅವರು ವಯಸ್ಸಾದವರು. ನಾವು ಮಾತನಾಡಿಸಿದರೆ ಕೊರೊನಾ ಬರಬಹುದು ಎಂದು ಹೆದರಿದರೆ...‘ ಹೀಗೆ ಇಂತಹ ಶಂಕೆಗಳಿದ್ದುದು ಸಹಜವೇ. ಆದರೆ ಹೊಸ ಜೀವನಶೈಲಿ ಶುರುವಾದ ನಂತರ, ಮುಖಗವಸು, ಸ್ಯಾನಿಟೈಜರ್‌, ಅಂತರ ಎಂದೆಲ್ಲ ಶಿಸ್ತು ಪಾಲಿಸುವ ಜನರಿರುವ ಕಡೆ ದೂರದಿಂದ ಮಾತನಾಡಿಸಲಿಕ್ಕೇನೂ ಅಡ್ಡಿ ಇಲ್ಲವಲ್ಲ ಎಂದು ನಿಧಾನವಾಗಿ ಹತ್ತಿರವಾಗುತ್ತಿದ್ದಾರೆ.

ಅದರಲ್ಲೂ ವೃದ್ಧ ದಂಪತಿಯಷ್ಟೇ ವಾಸಿಸುತ್ತಿದ್ದರೆ, ಒಂಟಿ ಮಹಿಳೆ ‘ವರ್ಕ್‌ ಫ್ರಂ ಹೋಂ’ ಎಂದು ಮನೆಗೆ ಸೀಮಿತಗೊಂಡಿದ್ದರೆ, ಸಹೃದಯಿಗಳು ಅನುಕಂಪ ತೋರಿಸಿ ಸಹಾಯ ಹಸ್ತ ಚಾಚುವ ಸಂಪ್ರದಾಯ ಶುರುವಾಗಿದೆ. ಏನಿಲ್ಲದಿದ್ದರೂ, ಹತ್ತಿರದ ಬೂತ್‌ನಿಂದ ಮುಂಜಾನೆ ಹಾಲಿನ ಪ್ಯಾಕ್‌ ತಂದುಕೊಡುವ ಸಣ್ಣಪುಟ್ಟ ಕೆಲಸಗಳಲ್ಲೂ ಕೃತಾರ್ಥ ಭಾವ ಕಾಣುವವರಿದ್ದಾರೆ.

‘ಇಷ್ಟು ವರ್ಷ ಇಂತಹವರ ಸಂಪರ್ಕ ನನಗ್ಯಾಕೆ ಬೇಕು ಎಂದುಕೊಂಡು ನನ್ನಷ್ಟಕ್ಕೇ ನಾನಿದ್ದೆ. ಆದರೆ ಮನುಷ್ಯ ಸಂಘಜೀವಿ. ಒಂದಲ್ಲ ಒಂದು ಸಂದರ್ಭದಲ್ಲಿ ಬೇರೆಯವ ಸಹಾಯ ಬೇಕೇ ಬೇಕು’ ಎನ್ನುವ ರೀತು, ಈ ಕೋವಿಡ್‌–19 ಎನ್ನುವುದು ಇನ್ನೆಷ್ಟು ಹೊಸ ಜೀವನ ಪಾಠಗಳನ್ನು ಕಲಿಸುತ್ತದೆಯೋ ಎನ್ನಲು ಮರೆಯುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT