ಸೋಮವಾರ, ಆಗಸ್ಟ್ 8, 2022
21 °C

ಕೊರೊನಾ ಒಂದಿಷ್ಟು ತಿಳಿಯೋಣ: ತೀವ್ರವಾದ ಸುಸ್ತಿಗೆ ಪ್ರಾಯೋಗಿಕ ಹಂತದಲ್ಲಿ ಚಿಕಿತ್ಸೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋವಿಡ್‌–19ರ ಒಂದು ಲಕ್ಷಣವೆಂದರೆ ವಿಪರೀತ ಸುಸ್ತು ಕಾಣಿಸಿಕೊಳ್ಳುವುದು. ಸೋಂಕು ಕಡಿಮೆಯಾದರೂ ಈ ಆಯಾಸದ ಲಕ್ಷಣಗಳು ಮಾತ್ರ ಬೇಗ ಕಡಿಮೆಯಾಗುವುದಿಲ್ಲ. ಕೆಲವರು ಕೋವಿಡ್‌ನಿಂದ ಗುಣಮುಖರಾಗಿ ಆರು ತಿಂಗಳಾದರೂ ಇನ್ನೂ ಆಯಾಸದಿಂದ ಬಳಲುತ್ತಿದ್ದು, ವಿಜ್ಞಾನಿಗಳು ಮತ್ತು ವೈದ್ಯರು ಇದಕ್ಕೊಂದು ಪರಿಹಾರ ಕಂಡು ಹಿಡಿಯಲು ಶ್ರಮಿಸುತ್ತಿದ್ದಾರೆ.

ದೈಹಿಕವಾಗಿ ಅಥವಾ ಮಾನಸಿಕವಾಗಿ ಸ್ವಲ್ಪ ಪ್ರಮಾಣದ ಚಟುವಟಿಕೆಯಲ್ಲಿ ತೊಡಗಿದವರಿಗೂ ಆಯಾಸ ಜಾಸ್ತಿಯಾಗುವುದು ಇದರ ಲಕ್ಷಣ. ಸಾಕಷ್ಟು ವಿಶ್ರಾಂತಿ ತೆಗೆದುಕೊಂಡರೂ ಇದು ಕಡಿಮೆಯಾಗುವುದಿಲ್ಲ ಎಂಬುದು ಕೋವಿಡ್‌ ರೋಗಿಗಳ ಅಳಲು.

ಕೋವಿಡ್‌ಗಿಂತ ಮೊದಲು ತೀವ್ರತರದ (Myalgic Encephalomyelitis– ME) ಆಯಾಸದ ಬಗ್ಗೆ ಸಾಕಷ್ಟು ಸಂಶೋಧನೆಗಳು ನಡೆದಿದ್ದವು. ಆದರೆ ಕೋವಿಡ್‌ ನಂತರ ಸಂಶೋಧನೆ ಚುರುಕಾಗಿದ್ದು, ಈ ಬಗ್ಗೆ ‘ಸೈಂಟಿಫಿಕ್‌ ರಿಪೋರ್ಟ್ಸ್‌’ ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನ ವರದಿಯಲ್ಲಿ ಕೆಲವು ಆಶಾದಾಯಕ ಅಂಶಗಳನ್ನು ಹೇಳಲಾಗಿದೆ. ಅಧ್ಯಯನ ತಂಡದಲ್ಲಿದ್ದ ಮಾಂಟ್ರಿಯಲ್‌ ವಿಶ್ವವಿದ್ಯಾಲಯದ ಜೀವರಸಾಯನಶಾಸ್ತ್ರ ಹಾಗೂ ಕಣ ಔಷಧ ವಿಭಾಗದ ಪ್ರೊ. ಅಲನ್‌ ಮೊರೆಯ್‌ ಪ್ರಕಾರ, ಈ ತೀವ್ರತರದ ಆಯಾಸವನ್ನು ಪ್ರಯೋಗಾಲಯದಲ್ಲಿ ಪತ್ತೆ ಮಾಡಲು ಸಾಧ್ಯವಿಲ್ಲದ್ದರಿಂದ ಲಕ್ಷಣಗಳ ಮೇಲೇ ಹೇಳಬೇಕಾಗಿಕಿತ್ತು. ಆದರೆ ಅದಕ್ಕೀಗ ಹೊಸ ಬಗೆಯ ಪರೀಕ್ಷೆಗಳನ್ನು ಕಂಡುಹಿಡಿಯುವಲ್ಲಿ ಪ್ರಗತಿ ಸಾಧಿಸಲಾಗಿದೆ. ಇದರಲ್ಲಿ ಯಶಸ್ಸು ಸಿಕ್ಕರೆ ಸೂಕ್ತ ಔಷಧಿ ಹೊಂದಿಸುವುದು ಕಷ್ಟವೇನಲ್ಲ ಎನ್ನುತ್ತಾರೆ ಸಂಶೋಧಕರು.

ಈ ಪರೀಕ್ಷೆಯಲ್ಲಿ ರೋಗಿಯ ಕೈಗೆ ತಂತ್ರಜ್ಞಾನ ಅಳವಡಿಸಿದ ಪಟ್ಟಿಯನ್ನು ಹಾಕಿ ತೀವ್ರತರದ ಸುಸ್ತು ಪತ್ತೆ ಹಚ್ಚಬಹುದು. ನಂತರ ರಕ್ತ ಪರೀಕ್ಷೆಯನ್ನೂ ನಡೆಸಬಹುದು. ಇದರಲ್ಲಿ ಮೈಕ್ರೊಆರ್‌ಎನ್‌ಎ ಗಣನೆಗೆ ತೆಗೆದುಕೊಳ್ಳಲಾಗುವುದು ಎಂದು ಅವರು ವರದಿಯಲ್ಲಿ ಹೇಳಿದ್ದಾರೆ.

ಇದು ರೋಗಿಗಳು ಯಾವ ಔಷಧಕ್ಕೆ ಸ್ಪಂದಿಸಬಹುದು ಎಂಬುದನ್ನು ನಿರ್ಧರಿಸುವ ಅಂಶವಾಗಿದೆ. ಕೋವಿಡ್‌–19 ಗುಣವಾದ ಆರಂಭದಲ್ಲೇ ಈ ತೀವ್ರತರದ ಆಯಾಸವನ್ನು ಪತ್ತೆ ಮಾಡಿ ತಕ್ಷಣವೇ ಔಷಧ ಮತ್ತು ಚಿಕಿತ್ಸೆ ಆರಂಭಿಸಲು ಸಂಶೋಧನೆ ನೆರವಾಗಲಿದೆ ಎಂಬ ಅಭಿಪ್ರಾಯ ವರದಿಯಲ್ಲಿ ವ್ಯಕ್ತವಾಗಿದೆ.

ಕೋವಿಡ್‌–19 ನೆಗೆಟಿವ್‌ ಬಂದರೂ ಕೂಡ ಶೇ 35ರಷ್ಟು ಮಂದಿ ಸಾಮಾನ್ಯ ಸ್ಥಿತಿಗೆ ಹಿಂದಿರುಗದೇ ಹಲವು ಸಮಸ್ಯೆಗಳಿಂದ ಕಷ್ಟಪಡುತ್ತಿದ್ದಾರೆ. ಇದರಲ್ಲಿ ಒಂದು ಈ ತೀವ್ರವಾದ ಸುಸ್ತು. ಚಿಕ್ಕ ವಯಸ್ಸಿನವರಲ್ಲೂ ಈ ತೀವ್ರವಾದ ಆಯಾಸ ಕಾಣಿಸಿಕೊಳ್ಳುತ್ತಿದೆ. ಗುಣಮುಖರಾಗಲು ತಗಲುವ ಸಮಯ ದೀರ್ಘವಾದಷ್ಟೂ ಈ ಸುಸ್ತಿನ ಪ್ರಮಾಣವೂ ಹೆಚ್ಚು. ಈ ಹಿಂದೆ ಸಾರ್ಸ್‌ ರೋಗಿಗಳಲ್ಲಿ ಸಹ ಈ ತೀವ್ರತರದ ಆಯಾಸದ ಲಕ್ಷಣಗಳು ಕಾಣಿಸಿಕೊಂಡಿದ್ದವು ಎನ್ನುತ್ತಾರೆ ಸಂಶೋಧಕರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು