ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ಒಂದಿಷ್ಟು ತಿಳಿಯೋಣ: ನರಮಂಡಲಕ್ಕೆ ಧಕ್ಕೆಯಿಂದ ದೀರ್ಘಾವಧಿ ಸಮಸ್ಯೆ

Last Updated 21 ಡಿಸೆಂಬರ್ 2020, 21:11 IST
ಅಕ್ಷರ ಗಾತ್ರ

ಕೋವಿಡ್‌–19ಗೆ ಅಮೆರಿಕದಲ್ಲಿ ಲಸಿಕೆ ನೀಡುವ ಕಾರ್ಯ ಮುಂದುವರಿದಿದ್ದು, ಲಸಿಕೆಯಿಂದಾಗಿ ಈ ಭೀಕರ ಪಿಡುಗಿಗೆ ಒಂದಿಷ್ಟು ತಡೆ ಹಾಕುವ ಬಗ್ಗೆ ಆಶಾಕಿರಣ ಮೂಡಿದೆ. ಆದರೆ ಕೊರೊನಾ ಸೋಂಕು ತಗಲಿ 30– 35 ದಿನಗಳ ನಂತರವೂ ಅದರ ಪರಿಣಾಮಗಳಿಂದ ಬಾಧೆ ಪಡುತ್ತಿರುವವರಿಗೆ (ಲಾಂಗ್‌ ಹೌಲರ್ಸ್‌) ಸದ್ಯಕ್ಕೆ ಯಾವುದೇ ಪರಿಹಾರ ದೊರಕುವ ಲಕ್ಷಣ ಕಾಣಿಸುತ್ತಿಲ್ಲ.

ಕೆಲವು ಕಡೆ ಸೋಂಕಿತರಲ್ಲಿ ಮೂರನೇ ಒಂದರಷ್ಟು ಮಂದಿಗೆ ಬೇರೆ ಬೇರೆ ವೈದ್ಯಕೀಯ ಸಮಸ್ಯೆಗಳು ದೀರ್ಘಕಾಲದಿಂದ ಕಾಡುತ್ತಿವೆ ಎಂದು ಅನ್ನಲ್ಸ್‌ ಆಫ್‌ ಇಂಟರ್ನಲ್‌ ಮೆಡಿಸಿನ್‌ ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನ ವರದಿಯೊಂದು ಹೇಳಿದೆ. ಅಮೆರಿಕನ್‌ ಕಾಲೇಜ್‌ ಆಫ್‌ ಫಿಜಿಷಿಯನ್ಸ್‌ ಈ ಜರ್ನಲ್‌ ಅನ್ನು ಪ್ರಕಟಿಸುತ್ತಿದೆ.

ಜಿನಿವಾದ ಫಿಜಿಶಿಯನ್ಸ್‌ ತಂಡವೊಂದು ಈ ಅಧ್ಯಯನ ನಡೆಸಿದ್ದು, ಆರಂಭದಲ್ಲಿ ವಾಸನೆ ಹಾಗೂ ನಾಲಿಗೆ ರುಚಿ ಕಳೆದುಕೊಂಡವರಲ್ಲಿ 30– 45 ದಿನಗಳ ನಂತರವೂ ಈ ಸಮಸ್ಯೆಗಳು ಹಾಗೆಯೇ ಇವೆ. ಜೊತೆಗೆ ವಿಪರೀತ ಸುಸ್ತು, ಉಸಿರಾಟದ ಸಮಸ್ಯೆ, ಕೆಮ್ಮು ಮೊದಲಾದ ತೊಂದರೆಗಳು ಕಡಿಮೆಯಾಗಿಲ್ಲ ಎಂದು ವರದಿಯಲ್ಲಿ ಹೇಳಿದ್ದಾರೆ.

ಹಾಗೆಯೆ ನಿದ್ರಾಹೀನತೆ, ನೆನಪಿನ ಶಕ್ತಿ ಮತ್ತು ಮಾತಿನ ತೊಂದರೆ ಉಂಟು ಮಾಡುವ ಮೆದುಳಿನ ಸಮಸ್ಯೆ, ಎದೆಬಡಿತದಲ್ಲಿ ಏರುಪೇರು ಕೂಡ ಕಾಡುತ್ತಿರುವುದು ಆತಂಕ ಸೃಷ್ಟಿಸಿದೆ. ಕೋವಿಡ್‌–19 ತಗಲುವ ಮುನ್ನ ಇಲ್ಲದಿದ್ದ ಏಕಾಗ್ರತೆಯ ಸಮಸ್ಯೆ ಕೂಡ ಹಲವರಲ್ಲಿ ದುಗುಡ ಸೃಷ್ಟಿಸಿದೆ.

ಕೊರೊನಾ ವೈರಸ್‌ ನರಮಂಡಲದ ಮೇಲೆ ದಾಳಿ ನಡೆಸುವ ಗುಣ ಹೊಂದಿರಬಹುದು. ಹೀಗಾಗಿ ಇಂತಹ ದೀರ್ಘಕಾಲೀನ ಲಕ್ಷಣಗಳು ಗೋಚರಿಸುತ್ತಿವೆ. ಮಾತನಾಡುವಾಗ ತೊದಲುವುದು, ಕೈ– ಕಾಲು ಬೆರಳುಗಳಲ್ಲಿ ಸೆಡೆತ, ಆಲೋಚನೆಯಲ್ಲಿ ಗೊಂದಲ ಮೊದಲಾದವು ನರಮಂಡಲ ವ್ಯವಸ್ಥೆಗೆ ಸಂಬಂಧಿಸಿವೆ. ಇವೆಲ್ಲವುಗಳಿಗೆ ಪರಿಹಾರ ಒದಗಿಸಬೇಕಾದರೆ ನರಮಂಡಲ ವ್ಯವಸ್ಥೆಯ ಮೇಲೆ ವೈರಸ್‌ ಹೇಗೆ ದಾಳಿ ನಡೆಸುತ್ತದೆ ಎಂಬುದನ್ನು ಕಂಡು ಹಿಡಿಯಬೇಕಾಗಿದೆ. ಇದು ವಿಜ್ಞಾನಿಗಳಿಗೆ ಮತ್ತು ವೈದ್ಯರಿಗೆ ಸವಾಲಿನ ಕೆಲಸ ಎಂದು ವರದಿಯಲ್ಲಿ ಹೇಳಲಾಗಿದೆ.

ಕೋವಿಡ್‌ನಿಂದಾಗಿ ತೀವ್ರ ಲಕ್ಷಣಗಳಿಂದ ಬಾಧೆ ಪಟ್ಟವರು ಅಥವಾ ಆಸ್ಪತ್ರೆಯ ತೀವ್ರ ನಿಗಾ ವ್ಯವಸ್ಥೆಯಲ್ಲಿ ಇದ್ದವರು ಈ ದೀರ್ಘಾವಧಿ ಪರಿಣಾಮಗಳಿಂದ ಬಳಲುವ ಸಾಧ್ಯತೆ ಜಾಸ್ತಿ. ಇಂಥವರು ಸಾಮಾನ್ಯ ಸ್ಥಿತಿಗೆ ಮರಳಿ, ನಿತ್ಯದ ಕೆಲಸಗಳನ್ನು ಮಾಡಿಕೊಳ್ಳುವ ಸಾಮರ್ಥ್ಯ ಪುನಃ ಗಳಿಸುವುದೂ ಅನುಮಾನ ಎಂದು ಸಂಶೋಧಕರು ಆತಂಕ ವ್ಯಕ್ತಪಡಿಸಿದ್ದಾರೆ.

ಸೋಂಕು ತಗಲುವ ಮುನ್ನ ಚುರುಕಾಗಿ, ಚಟುವಟಿಕೆಯಿಂದ ಕೂಡಿದ ಜೀವನ ನಡೆಸುತ್ತಿದ್ದವರು ಈ ಸಮಸ್ಯೆಗಳಿಂದ ಕಚೇರಿಗೆ ಅಥವಾ ವಿದ್ಯಾರ್ಥಿಗಳಾಗಿದ್ದರೆ ಶಾಲಾ– ಕಾಲೇಜಿಗೆ ಮರಳುವುದು ಕೂಡ ಅನುಮಾನವೇ ಎಂಬ ಭಯವೂ ವ್ಯಕ್ತವಾಗಿದೆ. ಇಂತಹ ಲಕ್ಷಣಗಳನ್ನು ದೀರ್ಘಕಾಲ ಅನುಭವಿಸುತ್ತಿರುವವರು ವೈದ್ಯರ ಬಳಿ ಮಾತನಾಡಿ ಪರ್ಯಾಯ ಚಿಕಿತ್ಸೆಯ ವಿಧಾನಗಳ ಬಗ್ಗೆ ಚರ್ಚಿಸುವುದು ಒಳಿತು. ಸಮಸ್ಯೆ ಕಡಿಮೆ ಮಾಡಲು ಫಿಸಿಯೊ ಥೆರಪಿಯ ಅವಶ್ಯಕತೆ ಇದೆ. ಏಕಾಗ್ರತೆಗೆ, ಸ್ಮರಣ ಶಕ್ತಿಗೆ ಪದಬಂಧ ಮತ್ತಿತರ ಕೆಲವು ಚಟುವಟಿಕೆಯಲ್ಲಿ ತೊಡಗಬೇಕು ಎಂದು ಅಧ್ಯಯನ ವರದಿಯಲ್ಲಿ ಸಲಹೆ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT