ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೋಂ ಸ್ಟೇ ಮಧ್ಯವರ್ತಿಗಳ ಬಂಧನ

ರಾತ್ರಿ ವೇಳೆ ಪ್ರಮುಖ ವೃತ್ತಗಳಲ್ಲಿ ನಿಂತು ಪ್ರವಾಸಿಗರಿಗೆ ಕಿರಿಕಿರಿ ಮಾಡಿದರೆ ಕ್ರಮ
Last Updated 19 ಮೇ 2018, 12:18 IST
ಅಕ್ಷರ ಗಾತ್ರ

ಮಡಿಕೇರಿ: ‘ಮಂಜಿನ ನಗರಿ’ ಮಡಿಕೇರಿ ಸೇರಿದಂತೆ ಜಿಲ್ಲೆಯಾದ್ಯಂತ ಹೋಂ ಸ್ಟೇ ದಂದೆಗೆ ಕಡಿವಾಣ ಇಲ್ಲವಾಗಿದ್ದು, ಎಲ್ಲೆಂದರಲ್ಲಿ ಅತಿಥಿ ಸತ್ಕಾರದ ಹೆಸರಿನಲ್ಲಿ ಹೋಂ ಸ್ಟೇಗಳು ನಿರ್ಮಾಣಗೊಳ್ಳುತ್ತಿವೆ.

ಒಂದು ಅಂದಾಜಿನ ಪ್ರಕಾರ, ಕೊಡಗಿನಲ್ಲಿ 4 ಸಾವಿರದಷ್ಟು ಹೋಂ ಸ್ಟೇಗಳಿವೆ. ಅದರಲ್ಲಿ 500 ಹೋಂ ಸ್ಟೇಗಳು ಮಾತ್ರ ನೋಂದಣಿ ಯಾಗಿರುವುದು. ಉಳಿದವು ಅನಧಿಕೃತ ಎಂಬ ಆರೋಪವಿದ್ದು, ಈ ಕುರಿತು ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹಗಳು ಕೇಳಿಬರುತ್ತಿವೆ.

ಈ ಮಧ್ಯೆ, ರಾತ್ರಿ ವೇಳೆ ಮಡಿಕೇರಿಗೆ ಆಗಮಿಸುವ ಪ್ರವಾಸಿಗರಿಗೆ ಹೋಂ ಸ್ಟೇ ‘ಮಧ್ಯವರ್ತಿಗಳು’ ಕಿರಿಕಿರಿ ಉಂಟು ಮಾಡಿ ಅವರೊಂದಿಗೆ ಜಗಳಕ್ಕಿಯುವ ದೃಶ್ಯಗಳು ಸಾಮಾನ್ಯವಾಗಿವೆ. ಪ್ರವಾಸಿಗ ರಿಂದ ಹೆಚ್ಚುವರಿ ಹಣ ವಸೂಲಿ ಪ್ರಕರಣಗಳು ನಡೆಯುತ್ತಿವೆ. ಅದಕ್ಕೆ ಕಡಿವಾಣ ಹಾಕಲು ಜಿಲ್ಲಾ ಪೊಲೀಸರು ಮುಂದಾಗಿದ್ದಾರೆ. ರಾತ್ರಿ ವೇಳೆ ನಗರಕ್ಕೆ ಬರುವ ಪ್ರವಾಸಿಗರ ವಾಹನಗಳನ್ನು ಮಧ್ಯವರ್ತಿ ಗಳು ಅಡ್ಡಗಟ್ಟಿ ತೊಂದರೆ ನೀಡುವುದು ಕಂಡುಬಂದರೆ ಸಾರ್ವಜನಿ ಕರು ಮಡಿಕೇರಿ ನಗರ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಬಹುದು.

ದೂರವಾಣಿ: 08272 229333, ಸಬ್‌ ಇನ್‌ಸ್ಪೆಕ್ಟರ್‌ ಅವರ ಮೊಬೈಲ್‌: 94808 04945 ಅಥವಾ ಪೊಲೀಸ್‌ ಕಂಟ್ರೋಲ್‌ ರೂಂ ದೂರವಾಣಿ: 08272 229330ಗೆ ಕರೆಮಾಡಿ ತಿಳಿಸಬಹುದು.

‘ಕಾನೂನು ಉಲ್ಲಂಘಿಸಿ ವರ್ತಿಸುವ ಮಧ್ಯವರ್ತಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಪಿ. ರಾಜೇಂದ್ರ ಪ್ರಸಾದ್‌ ಎಚ್ಚರಿಕೆ ನೀಡಿದ್ದಾರೆ.

ಮೂವರ ಬಂಧನ: ನಗರದಲ್ಲಿ ಮೇ 17ರಂದು ಪ್ರವಾಸಿಗರನ್ನು ಅಡ್ಡಗಟ್ಟಿ ಭಯದ ವಾತಾವರಣ ನಿರ್ಮಾಣ ಮಾಡಿದ್ದ ಮೂವರು ಮಧ್ಯವರ್ತಿಗಳನ್ನು ಪೊಲೀಸರು ಬಂಧಿಸಿದ್ದಾರೆ. ನಗರದ ನಿವಾಸಿಗಳಾದ ಎಂ.ಎಚ್‌. ರಿಜ್ವಾನ್‌, ಜೈನುದ್ದೀನ್‌, ಮುಸ್ತಾಫ್‌ ಬಂಧಿತರು.

‘ಮೂವರು 16ರಂದು ನಗರದಲ್ಲಿ ಪ್ರವಾಸಿಗರಿಗೆ ಕಿರಿಕಿರಿ ಉಂಟು ಮಾಡಿದ್ದರು. ಆಗ ಪೊಲೀಸ್ ಠಾಣೆಗೆ ಕರೆತಂದು ಅವರಿಗೆ ಎಚ್ಚರಿಕೆ ನೀಡಿ ಕಳುಹಿಸಲಾಗಿತ್ತು. ಆದರೂ ಈ ವರ್ತನೆಯನ್ನು ಬಿಟ್ಟಿರಲಿಲ್ಲ. ಮರು ದಿವಸವೇ ವೃತ್ತಗಳಲ್ಲಿ ನಿಂತು ಅದೇ ವರ್ತನೆ ಮುಂದುವರಿಸಿದ್ದರು. ಹೀಗಾಗಿ, ಅವರನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಲಾಗಿದೆ’ ಎಂದು ಎಸ್‌ಪಿ ರಾಜೇಂದ್ರ ಪ್ರಸಾದ್‌ ವಿವರಿಸಿದ್ದಾರೆ.

‘ಮೇ 10ರಂದು ರಾತ್ರಿ 2 ಗಂಟೆಯ ಸುಮಾರಿಗೆ ನಗರದ ಫೋರ್ಟ್‌ ವ್ಯೂ ಲಾಡ್ಜ್‌ಗೆ ಹೋದಂತಹ ಕೆಲವು ಪ್ರವಾಸಿಗರನ್ನು ಹೋಂ ಸ್ಟೇ ಮಧ್ಯವರ್ತಿ ಅಶ್ರಫ್‌, ತನ್ನೊಂದಿಗೆ ಪ್ರವಾಸಿಗರು ಹೋಂಸ್ಟೇಗೆ ಬರಬೇಕು ಎಂದು ಕಿರಿಕಿರಿ ಉಂಟು ಮಾಡಿದ್ದ. ಆಗ ವಸತಿಗೃಹದ ವ್ಯವಸ್ಥಾಪಕ ಜುಬೇರ್‌ ಹಾಗೂ ಅಶ್ರಫ್‌ ನಡುವೆ ಮಾತಿನ ಚಕಮಕಿ ನಡೆದಿತ್ತು. ಅಶ್ರಫ್‌, ಲಾಡ್ಜ್‌ ವ್ಯವಸ್ಥಾಪಕನಿಗೆ ನಿಂದಿಸಿ, ಕೊಲೆ ಬೆದರಿಕೆ ಹಾಕಿದ್ದ. ಈ ಸಂಬಂಧ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ’ ಎಂದೂ ಎಸ್‌ಪಿ ಮಾಹಿತಿ ನೀಡಿದ್ದಾರೆ.

**
ರಾತ್ರಿ ವೇಳೆ ಪ್ರವಾಸಿಗರ ವಾಹನಗಳನ್ನು ಅಡ್ಡಗಟ್ಟಿ ತಮ್ಮ ಹೋಂ ಸ್ಟೇಗೆ ಬರುವಂತೆ ಮಧ್ಯವರ್ತಿಗಳು ಪೀಡಿಸುವಂತಿಲ್ಲ. ನಾಗರಿಕರು ಮಾಹಿತಿ ನೀಡಿದರೆ ಅಂಥವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು
  ಪಿ. ರಾಜೇಂದ್ರ ಪ್ರಸಾದ್‌, ಎಸ್‌ಪಿ, ಕೊಡಗು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT