ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳನ್ನು ಕಾಡದಿರಲಿ ಒಂಟಿತನ

Last Updated 17 ಜುಲೈ 2020, 19:30 IST
ಅಕ್ಷರ ಗಾತ್ರ

ಕೋವಿಡ್‌ – 19 ಕಾರಣ ಲಾಕ್‌ಡೌನ್ ವಿಧಿಸಿರುವುದರಿಂದ ಶಾಲೆಗಳನ್ನು ಸದ್ಯಕ್ಕೆ ತೆರೆಯುವುದು ಅನುಮಾನ. ಕಳೆದ ಕೆಲವು ತಿಂಗಳಿಂದ ಮಕ್ಕಳು ಮನೆಯೊಳಗೆ ಕುಳಿತಿದ್ದಾರೆ. ಸ್ನೇಹಿತರ ಜೊತೆ ಆಟವಾಡುವುದು, ಬೇಸಿಗೆ ರಜೆ, ಪ್ರವಾಸ, ಅಜ್ಜಿ ಮನೆ ಎಲ್ಲವನ್ನೂ ತುಂಬಾನೇ ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಇದರಿಂದ ಅವರು ಮಾನಸಿಕವಾಗಿಯೂ ಕುಗ್ಗಿ ಹೋಗಿರಬಹುದು. ಮನೆಯ ಒಳಗೇ ಇದ್ದು ಇದ್ದೂ ಬೇಸರ ಮೂಡಿರಬಹುದು. ಈ ಸಮಯದಲ್ಲಿ ಪೋಷಕರು ಮಕ್ಕಳ ಮೇಲೆ ಹೆಚ್ಚಿನ ಗಮನ ನೀಡಬೇಕು. ಸುಮ್ಮನೆ ರೇಗುವುದು, ಬಯ್ಯುವುದು ಮಾಡುವುದಕ್ಕಿಂತ ಅವರನ್ನು ಲವಲವಿಕೆಯಿಂದ ಇರುವಂತೆ ಮಾಡುವುದು ಹೇಗೆ ಎಂದು ಯೋಚಿಸಬೇಕು. ಮಕ್ಕಳ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಮೇಲೂ ಗಮನ ಹರಿಸಬೇಕು.

ದಿನಚರಿಯನ್ನು ರೂಢಿಸಿ

ಮಕ್ಕಳ ಮನಸ್ಸು ತುಂಬಾ ಸೂಕ್ಷ್ಮ. ಈ ದೀರ್ಘಾವಧಿಯ ಲಾಕ್‌ಡೌನ್‌ನಲ್ಲಿ ನೀವು ಮಕ್ಕಳ ಮೇಲೆ ಗಮನ ಹರಿಸದಿದ್ದರೆ ಅದು ಅವರ ಮನಸ್ಸಿನ ಮೇಲೆ ಪರಿಣಾಮ ಬೀರಬಹುದು. ಇಷ್ಟು ದಿನಮಕ್ಕಳು ಶಾಲೆ, ಮನೆ, ಆಟ–ಪಾಠ ಎಂದು ಒಂದು ಕ್ರಮವನ್ನು ಅಳವಡಿಸಿಕೊಂಡಿರುತ್ತಾರೆ. ಆದರೆ ಈಗ ಆ ಕ್ರಮದಲ್ಲಿ ಬದಲಾವಣೆಯಾಗಿದೆ. ಅದು ಅವರಲ್ಲಿ ಒತ್ತಡಕ್ಕೆ ಕಾರಣವಾಗಿರಬಹುದು. ಅದರಲ್ಲೂ ಆ ಬದಲಾವಣೆ ದೀರ್ಘಕಾಲದ್ದು. ಅಲ್ಲದೇ ಬಹುದಿನಗಳಿಂದ ಅವರನ್ನು ಪಂಜರದಲ್ಲಿ ಬಂಧಿಸಿದಂತಹ ಭಾವನೆ ಕಾಡಬಹುದು. ಇದು ಅವರಿಗೆ ಬೇಸರವೂ ತರಿಸಿರಬಹುದು. ಅಲ್ಲದೇ ಮನಸ್ಸಿನ ಮೇಲೆ ಋಣಾತ್ಮಕ ಪರಿಣಾಮ ಬೀರಬಹುದು. ಆ ಕಾರಣಕ್ಕೆ ಮಕ್ಕಳಿಗೆ ಮನೆಯಲ್ಲಿ ಒಂದು ಕ್ರಮವಾದ ದಿನಚರಿಯನ್ನು ರೂಢಿಸಿ. ತಿಂಡಿ, ಊಟ, ಪಾಠ, ಟಿವಿ ನೋಡುವುದು ಎಲ್ಲದ್ದಕ್ಕೂ ಸಮಯ ನಿಗದಿಪಡಿಸಿ.

ಸ್ನೇಹಿತರ ಜೊತೆ ಮಾತನಾಡಲು ಬಿಡಿ

ಮಕ್ಕಳನ್ನು ಸುಮ್ಮನೆ ಹಿಡಿದು ಕೂರಿಸುವುದು ಅಸಂಭವ. ಮಕ್ಕಳು ಸದಾ ತಮ್ಮ ಅಕ್ಕಪಕ್ಕದ ಮನೆಯ ಸ್ನೇಹಿತರ ಜೊತೆ ಆಟವಾಡಲು, ಮಾತನಾಡಲು ಬಯಸುತ್ತಾರೆ. ಅಲ್ಲದೇ ಶಾಲೆಯಲ್ಲೂ ಸ್ನೇಹಿತರ ಜೊತೆ ಇದ್ದು ಇದ್ದೂ ಅಭ್ಯಾಸವಾಗಿರುತ್ತದೆ. ಈಗ ಲಾಕ್‌ಡೌನ್ ಕಾರಣದಿಂದ ಶಾಲೆ ಮುಚ್ಚಿರುವುದು ಅವರ ದಿನಚರಿಯ ಸ್ವರೂಪವನ್ನೇ ಕೆಡಿಸಿದೆ. ಆ ಕಾರಣಕ್ಕೆ ಮಕ್ಕಳನ್ನು ಪ್ರತಿದಿನ ಕೆಲ ಹೊತ್ತು ಹೊರಗಡೆ ಕರೆದ್ಯೊಯಿರಿ. ಅವರ ಸ್ನೇಹಿತರ ಜೊತೆ ಮಾತನಾಡಲು ವ್ಯವಸ್ಥೆ ಮಾಡಿ ಕೊಡಿ. ವಿಡಿಯೊ ಕರೆ ಮಾಡಿ ಮಾತನಾಡಲು ಅವಕಾಶ ಕಲ್ಪಿಸಿ. ಆದರೆ ಸ್ಕ್ರೀನ್ ಟೈಮ್‌ನ ಮೇಲೆ ನಿಗಾ ವಹಿಸಿ.

ಹವ್ಯಾಸವನ್ನು ಎಂಜಾಯ್ ಮಾಡಲು ಬಿಡಿ

ಮನೆಯಲ್ಲೇ ಇರುವುದು ಅವರಲ್ಲಿನ ಒಂಟಿತನಕ್ಕೂ ಕಾರಣವಾಗಬಹುದು. ಅದನ್ನ ಹೋಗಲಾಡಿಸಲು ಅವರನ್ನು ಹವ್ಯಾಸದಲ್ಲಿ ತೊಡಗಿಕೊಳ್ಳುವಂತೆ ಮಾಡಿ. ದಿನದಲ್ಲಿ ಕನಿಷ್ಠ ಒಂದು ಗಂಟೆಯಾದರೂ ಅವರ ಹವ್ಯಾಸಕ್ಕೆಂದೇ ಸಮಯ ಮೀಸಲಿಡಿ. ಅದು ಡಾನ್ಸ್ ಮಾಡುವುದು, ಹಾಡು ಹೇಳುವುದು, ಚಿತ್ರ ಬಿಡಿಸುವುದು, ಗೊಂಬೆಗಳೊಂದಿಗೆ ಆಟ ಆಡುವುದು ಯಾವುದೇ ಆಗಿರಲಿ. ಒಟ್ಟಾರೆ ಅವರನ್ನು ಹವ್ಯಾಸಕ್ಕೆ ತೆರೆದುಕೊಳ್ಳುವಂತೆ ಮಾಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT