ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಮಿರುವಿಕೆ ಸಮಸ್ಯೆಗಿದೆ ಹಲವು ರೂಪ

Last Updated 31 ಆಗಸ್ಟ್ 2018, 19:30 IST
ಅಕ್ಷರ ಗಾತ್ರ

ನಿಮಿರುವಿಕೆ ಹಾಗೂ ಹೃದಯಸಂಬಂಧಿ ಸಮಸ್ಯೆಯ ನಡುವಿನ ಸಂಬಂಧದ ಕುರಿತು ಕಳೆದ ಸಂಚಿಕೆಯಲ್ಲಿ ವಿವರಿಸಲಾಗಿತ್ತು. ಆದರೆ ಇದು ಮತ್ತೂ ಕೆಲವು ತೊಂದರೆಗಳನ್ನು ಒಳಗೊಂಡಿರುತ್ತದೆ. ಅದರಲ್ಲಿ ಅತಿ ಗಂಭೀರವಾದುದು ಮಾನಸಿಕ ಅನಾರೋಗ್ಯ.

ನಿಮಿರುವಿಕೆಯಲ್ಲಿ ಯಾವುದೇ ಅಸಹಜತೆ ಕಂಡುಬರದ ಪುರುಷರಿಗೆ ಹೋಲಿಸಿದರೆ, ಸಮಸ್ಯೆ ಇರುವವರಲ್ಲಿ ಬುದ್ಧಿಮಾಂದ್ಯತೆ ಕಾಣಿಸಿಕೊಳ್ಳುವ ಸಾಧ್ಯತೆಯು 1.68 ಪಟ್ಟು ಹೆಚ್ಚಿರುತ್ತದೆ ಎಂದಿದೆ 2015ರಲ್ಲಿನ ಒಂದು ಅಧ್ಯಯನ. ಈ ಕುರಿತು ಇನ್ನೂ ಸಂಶೋಧನೆಗಳು ಪ್ರಗತಿಯಲ್ಲಿವೆ.

ಔಷಧಪ್ರೇರಿತ ಸಮಸ್ಯೆ: ಸಾಮಾನ್ಯವಾಗಿ ತೆಗೆದುಕೊಳ್ಳುವ ಕೆಲವು ಔಷಧಗಳು ನಿಮಿರುವಿಕೆಯಲ್ಲಿ ತೊಂದರೆ ತಂದೊಡ್ಡುತ್ತವೆ. ಕೆಲವು ಔಷಧಗಳ ಸೇವನೆ ಅಥವಾ ಔಷಧಗಳ ಅತಿಯಾದ ಸೇವನೆಯು ಲೈಂಗಿಕ ಆಸಕ್ತಿಯನ್ನು ಕುಗ್ಗಿಸುತ್ತದೆ. ಇದು ಸಹಜ ರಕ್ತಸಂಚಲನದಲ್ಲಿ ತೊಡಕನ್ನುಂಟುಮಾಡುತ್ತದೆ. ವೀರ್ಯ ಸ್ಖಲನವನ್ನು ಕಡಿಮೆ ಮಾಡುತ್ತದೆ ಅಥವಾ ಹಿಮ್ಮುಖ ಸ್ಖಲನವಾಗುತ್ತದೆ. ಸಾಮಾನ್ಯವಾಗಿ ತೆಗೆದುಕೊಳ್ಳುವ 12 ಔಷಧಗಳಲ್ಲಿ ಏಳು ಔಷಧಗಳನ್ನು ಅಡ್ಡಪರಿಣಾಮವನ್ನುಂಟುಮಾಡುವ ಔಷಧಗಳು ಎಂದು ವಿಂಗಡಿಸಲಾಗಿದೆ.

* ಎಸ್‍ಎಸ್‍ಆರ್‌ಐ - ಮನೋರೋಗ ನಿವಾರಣಾ ಔಷಧ

* ಬೆಟಾ ಬ್ಲಾಕರ್ಸ್ - ರಕ್ತದೊತ್ತಡಕ್ಕೆ ತೆಗೆದುಕೊಳ್ಳುವ ಔಷಧ

* ಕೆಟಕೊನಾಝೋಲ್ - ಸೋಂಕು ನಿವಾರಕ ಔಷಧ

* ಸ್ನಾಯುವಿನ ಸೆಳೆತಕ್ಕೆ ತೆಗೆದುಕೊಳ್ಳುವ ಔಷಧ

* ಹಿಸ್ಟಮೈನ್ ಎಚ್2-ಗ್ಯಾಸ್ಟ್ರಿಸಿಸ್ ಚಿಕಿತ್ಸೆಗೆ ನೀಡುವ ಔಷಧ

*ಕೆಲವು ಉರಿ ನಿವಾರಕ ಹಾಗೂ ನೋವುನಿವಾರಕ ಔಷಧಗಳು

*ಆ್ಯಂಟಿಹಿಸ್ಟಮೈನ್-ಶೀತಕ್ಕೆ ನೀಡುವ ಔಷಧ ಇಂಥ ಕೆಲವು ಮಾತ್ರೆಗಳ ನಿರಂತರ ಸೇವನೆಯು ನಿಮಿರುವಿಕೆಗೆ ತೊಡಕಾಗುತ್ತದೆ ಎಂದು ತಿಳಿದುಬಂದಿದೆ. ಈ ಮಾತ್ರೆಗಳನ್ನು ಸೇವಿಸುತ್ತಿದ್ದು, ತೊಂದರೆ ಕಂಡುಬಂದರೆ, ವೈದ್ಯರ ಬಳಿ ಶೀಘ್ರ ಚರ್ಚಿಸುವುದು ಒಳಿತು.

ಚೇತೋಹಾರಿ ಔಷಧಗಳ ಸೇವನೆ: ಚೇತೋಹಾರಿಯಾಗಿರಲು ತೆಗೆದುಕೊಳ್ಳುವ ನರವ್ಯೂಹ ಪ್ರಚೋದಕ ಔಷಧಗಳು, ಮದ್ಯಸೇವನೆ, ಸಮ್ಮೋಹನದ ಸಮಯದಲ್ಲಿ ಸೇವಿಸುವ ಔಷಧ, ಕೊಕೇನ್, ಗಾಂಜಾ, ನಿಕೊಟಿನ್, ಅಫೀಮು, ನಿದ್ರಾಜನಕ ಔಷಧ - ಇವೆಲ್ಲವೂ ನಿಮಿರುವಿಕೆಗೆ ತೊಂದರೆಯನ್ನುಂಟುಮಾಡುವ ಔಷಧಗಳು. ಕೆಲವು ಔಷಧಗಳ ಸೇವನೆಯು ಅಡ್ಡ ಪರಿಣಾಮವನ್ನು ಬೀರುತ್ತವೆ; ಮಾತ್ರವಲ್ಲ, ಕೇಂದ್ರ ನರಮಂಡಲವನ್ನೂ ನಿಗ್ರಹಿಸುತ್ತವೆ. ಈ ಮೂಲಕ ರಕ್ತನಾಳಗಳಿಗೆ ಗಂಭೀರವಾಗಿ ಹಾನಿಯನ್ನುಂಟುಮಾಡುತ್ತವೆ. ರಕ್ತನಾಳಗಳಿಗೆ ಯಾವುದೇ ಹಾನಿಯಾದರೆ ಅಥವಾ ಸಹಜ ರಕ್ತಸಂಚಲನಕ್ಕೆ ಅಡ್ಡಿ ಉಂಟಾದರೆ, ಅದು ನಿಮಿರುವಿಕೆಯ ಸಮಸ್ಯೆಗೂ ಕಾರಣವಾಗುವುದು ಸಹಜ. ಕೆಲವು ಔಷಧಗಳನ್ನು ಕೇವಲ ಒಂದು ಬಾರಿ ಬಳಸಿದರೂ ಸಮಸ್ಯೆಯ ಸಾಧ್ಯತೆ ಇದೆ ಎಂದು ವಾದಿಸಿದ್ದಾರೆ ತಜ್ಞರು. ಔಷಧಗಳನ್ನು ಹೆಚ್ಚು ಬಳಸಿದಷ್ಟು ಸಮಸ್ಯೆಯ ತೀವ್ರತೆಯೂ ಹೆಚ್ಚಾಗುತ್ತಾ ಸಾಗುತ್ತದೆ.

ಮಧುಮೇಹ ಹಾಗೂ ಸಮಸ್ಯೆ
7,689 ಪುರುಷರನ್ನು ಒಳಗೊಂಡ ಅಧ್ಯಯನವೊಂದರ ಪ್ರಕಾರ, 45ರಿಂದ 59ರ ವಯೋಮಾನದ, ಮಧುಮೇಹವಿರುವ ಶೇ 61ರಷ್ಟು ಪುರುಷರಲ್ಲಿ ನಿಮಿರುವಿಕೆ ಸಮಸ್ಯೆಯೂ ಇರುವುದು ಕಂಡುಬಂದಿದೆ. ರಕ್ತದಲ್ಲಿನ ಸಕ್ಕರೆ ಅಂಶದ ನಿರ್ವಹಣೆಯ ಕೊರತೆ ಇದಕ್ಕೆ ಕಾರಣ. ಮಧುಮೇಹವಿರುವ ಪುರುಷರಲ್ಲಿ ಈ ಸಮಸ್ಯೆ ಕಾಣಿಸಿಕೊಳ್ಳುವ ಸಾಧ್ಯತೆಯು ನಾಲ್ಕರಿಂದ ಆರು ಪಟ್ಟು ಹೆಚ್ಚಿರುತ್ತದೆ. ಇದರೊಂದಿಗೆ ಹೃದಯಾಘಾತ ಅಥವಾ ಪಾರ್ಶ್ವವಾಯುವಿನ ಸಾಧ್ಯತೆಯೂ ಇರುತ್ತದೆ. ಇಡೀ ದೇಹದಲ್ಲಿ ರಕ್ತನಾಳಗಳ ಜಟಿಲತೆ ಉಂಟಾಗುವುದು ಸಮಸ್ಯೆಯ ಮೂಲ.

ಮಧುಮೇಹ ಹಾಗೂ ನಿಮಿರುವಿಕೆ ಸಮಸ್ಯೆ ಇರುವ ಬಹುಪಾಲು ಪುರುಷರು ವೈದ್ಯರ ಬಳಿ ಲೈಂಗಿಕ ಸಮಸ್ಯೆಯನ್ನು ಕುರಿತು ಚರ್ಚಿಸುವುದಿಲ್ಲ ಎಂದು ಸಮೀಕ್ಷೆಯೊಂದು ವರದಿ ಮಾಡಿದೆ. ಎಂದರೆ ಅಂಥವರ ಹೃದಯದ ಸಮಸ್ಯೆಯ ಸಾಧ್ಯತೆಯನ್ನು ಪತ್ತೆ ಹಚ್ಚುವ ಅವಕಾಶವೂ ಅಂಥವರಿಗೆ ಕಡಿಮೆಯಾಯಿತೆಂದು ಎಂದರ್ಥ.

ಸೈಕ್ಲಿಂಗ್‍ನಿಂದಲೂ ತೊಂದರೆ: ದೀರ್ಘಾವಧಿ ಸೈಕ್ಲಿಂಗ್ ಮಾಡುವುದೂ ಸಮಸ್ಯೆಗೆ ಕಾರಣ ಎಂದಿದೆ ಒಂದು ಸಂಶೋಧನೆ. ದೀರ್ಘ ಅವಧಿ ಸೈಕಲ್‍ನ ಸೀಟ್ ಮೇಲೆ ಕುಳಿತುಕೊಳ್ಳುವುದು, ಜನನಾಂಗಕ್ಕೆ ರಕ್ತಸಂಚಲನ ಮಾಡುವ, ಲೈಂಗಿಕ ಕ್ರಿಯೆಗೆ ಪ್ರೇರಣೆ ನೀಡುವ ನಾಳದ ಮೇಲೆ ಒತ್ತಡವನ್ನು ತರುತ್ತದೆ. ಇದು ಪರೋಕ್ಷವಾಗಿ ತೊಂದರೆ ಉಂಟುಮಾಡುತ್ತದೆ.

ನಿಮಿರುವಿಕೆ ಸಮಸ್ಯೆಗೂ, ಹಲವು ದೈಹಿಕ ಸಮಸ್ಯೆಗೂ ಒಂದಕ್ಕೊಂದು ಸಂಬಂಧವಿರುವುದರಿಂದ ಈ ಕುರಿತು ಗಂಭೀರವಾಗಿ ಯೋಚಿಸುವ ಅಗತ್ಯವಿದೆ. ಆದರೆ ಎಷ್ಟೋ ಪುರುಷರು ವೈದ್ಯರ ಬಳಿ ಹೋಗುವುದನ್ನು ನಿರ್ಲಕ್ಷಿಸುತ್ತಾರೆ. ಹಾಗೆಯೇ ಹೃದಯದ ಸಮಸ್ಯೆಯನ್ನು ಪ್ರಾರಂಭಿಕ ಹಂತದಲ್ಲೇ ಕಂಡುಕೊಳ್ಳುವ ಸಾಧ್ಯತೆಯೂ ಕೈ ತಪ್ಪುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT