ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧ್ಯಾನದ ಜೀವನ ಸೂತ್ರ

Last Updated 5 ಜುಲೈ 2021, 19:30 IST
ಅಕ್ಷರ ಗಾತ್ರ

ಧ್ಯಾನ ಎಂದರೆ ಓರ್ವ ವ್ಯಕ್ತಿ ಏಕಾಗ್ರತೆಯೊಂದಿಗೆ ಅರಿವನ್ನು ಸಂಪಾದಿಸುವುದು; ಮಾನಸಿಕ ಸ್ಪಷ್ಟತೆ, ಭಾವನಾತ್ಮಕ ಪ್ರಶಾಂತತೆ ಮತ್ತು ಸ್ಥಿರವಾದ ಮನಃಸ್ಥಿತಿಯನ್ನು ಸಾವಧಾನದಿಂದ ಸಾಧಿಸುವುದು; ಒಂದು ವಸ್ತುವನ್ನು ಕುರಿತ ಆಲೋಚನೆ ಅಥವಾ ಚಟುವಟಿಕೆಯ ಮೇಲೆ ಗಮನವನ್ನು ಕೇಂದ್ರೀಕರಿಸುವ ತಂತ್ರವನ್ನು ಅಭ್ಯಾಸ ಮಾಡುವುದು.

ನಾವು ಏಕೆ ಧ್ಯಾನ ಮಾಡಬೇಕು?

ಸಾಮಾನ್ಯವಾಗಿ ವ್ಯಕ್ತಿಗಳು ತನ್ನ ಸುತ್ತಲಿನ ವಾತಾವರಣ ಅಥವಾ ತನ್ನ ಕೈಲಿರುವ ಕಾರ್ಯದ ಮೇಲೆ ಗಮನ ವಹಿಸುವುದಿಲ್ಲ. ಈ ಸ್ಥಿತಿಯಲ್ಲಿರುವಾಗ ಮೆದುಳಿನ ಕೆಲವು ಭಾಗಗಳು ಪರಸ್ಪರ ಸಂವಹನಗೊಂಡು ಒಂದು ಜಾಲವನ್ನು ಹೆಣೆದುಕೊಳ್ಳುತ್ತವೆ. ಇದೇ ನರವಿಜ್ಞಾನಶಾಸ್ತ್ರದಲ್ಲಿ ಈ ಸ್ಥಿತಿಯನ್ನು ‘ಡಿಫಾಲ್ಟ್ ನೆಟ್‍ವರ್ಕ್ ಮೋಡ್’ ಎನ್ನುವರು. ಇದನ್ನೇ ನಾವು ‘ಆಲೋಚನೆಯಲ್ಲಿ ಕಳೆದುಹೋಗುವುದು’ ಅಥವಾ ‘ಮಾನಸಿಕ ಗೈರು’ ಎಂದು ಕರೆಯಬಹುದು. ಈ ಸ್ಥಿತಿಯಲ್ಲಿರುವವರು ಕಳೆದುಹೋದ ನೆನಪಿನಲ್ಲೇ ಪುನರ್ಜೀವಿಸುತ್ತಿರುತ್ತಾರೆ ಅಥವಾ ಭವಿಷ್ಯದ ಸಂಗತಿಗಳ ಬಗೆಗೆ ಚಿಂತಿಸುತ್ತಿರುತ್ತಾರೆ. ಆದ್ದರಿಂದ ಡಿಫಾಲ್ಟ್ ನೆಟ್‍ವರ್ಕ್ ಮೋಡ್ ಎಂಬುದು ಅಸಂತೋಷದೊಡನೆ ಬೆಸೆದುಕೊಂಡಿದೆ. ಓರ್ವ ವ್ಯಕ್ತಿ ಬಹಳ ದೀರ್ಘಾವಧಿಯವರೆಗೆ ಈ ಅಸಹಜಸ್ಥಿಯನ್ನು ಅನುಭವಿಸುತ್ತಿದ್ದಲ್ಲಿ ಅಂಥವರು ಖಿನ್ನತೆ, ಗಾಬರಿ, ಅತಿ ಚಟುವಟಿಕೆ/ಗಮನದ ಕೊರತೆಯಂತಹ ಸಮಸ್ಯೆಗಳಿಗೆ ಬಲಿಯಾಗುವ ಸಾಧ್ಯತೆ ಹೆಚ್ಚು.

ನಮಗೆಲ್ಲಾ ‘ಜಾಗೃತ’ ಎಂಬ ಪದವು ಚಿರಪರಿಚಿತ. ಜಾಗೃತವೆಂದರೆ ಯಾವುದಾದರೊಂದು ಅಸ್ತಿತ್ವದ ಬಗೆಗಿನ ಎಚ್ಚರಿಕೆ, ಜ್ಞಾನ; ವಾಸ್ತವದಲ್ಲಿ ಬದುಕುವುದು ಎಂದೂ ಅರ್ಥಮಾಡಬಹುದು. ಆದರೆ ನಮ್ಮ ಮೆದುಳು ಡಿಫಾಲ್ಟ್ ನೆಟ್ವರ್ಕ್ ಮೋಡ್‍ನಲ್ಲಿ ಸಿಲುಕಿರುವಾಗ ಕೈಲಿರುವ ವಿಚಾರದ ಕಡೆಗೆ ಗಮನ ವಹಿಸುವುದು ಹಾಗೂ ಸುತ್ತಲಿನ ವಾತಾವರಣದ ಬಗೆಗೆ ಜಾಗೃತವಾಗಿರುವುದು ವ್ಯಕ್ತಿಗೆ ಬಹಳ ಸವಾಲಿನ ಕೆಲಸವಾಗಿರುತ್ತದೆ. ಅವನು ಕಲ್ಪನಾಲೋಕದಲ್ಲಿ ಬದುಕಲು ಪ್ರಾರಂಭಿಸುತ್ತಾನೆ. ಇದರಿಂದ ಇನ್ನೂ ಭೀಕರವಾದ ಮಾನಸಿಕ ಸಮಸ್ಯೆಗಳಿಗೆ ಗುರಿಯಾಗಬಹುದು.

ಧ್ಯಾನದ ಅಭ್ಯಾಸದಿಂದ ಹಲವು ನರವೈಜ್ಞಾನಿಕ ಸಮಸ್ಯೆಗಳಿಂದ ಪಾರಾಗಬಹುದು. ಧ್ಯಾನದ ನಿಯಮಿತ ಅಭ್ಯಾಸದ ಮೂಲಕ ನಾವು ನಮ್ಮ ಮನಸ್ಸನ್ನು ಉದ್ದೇಶಪೂರ್ವಕವಾಗಿ ಒಂದು ವಸ್ತುವಿನ ಮೇಲೆ ಗಮನ ಹರಿಸುವಂತೆ ತರಬೇತಿ ನೀಡಬಹುದು. ಇದು ನಮ್ಮ ಮೆದುಳು ಪುನರ್ ನಿರ್ಮಾಣಗೊಳ್ಳಲು ಸಹಕರಿಸುತ್ತದೆ. ಆಗ ನಾವು ಮಾಡುವ ಎಲ್ಲ ಕೆಲಸಗಳ ಮೇಲೂ ಉತ್ತಮವಾದ ಏಕಾಗ್ರತೆಯನ್ನು ಸಾಧಿಸಲು ಸಾಧ್ಯ.

ಧ್ಯಾನವು ಹೆಚ್ಚಿನ ಅರಿವನ್ನು ಪಡೆಯಲು ಹೇಗೆ ಸಹಾಯಮಾಡುತ್ತದೆ ಎಂಬುದು ಕೆಲವು ಸಂಶೋಧನಗಳಿಂದ ಸಿದ್ಧವಾಗಿದೆ:

* ಯೇಲ್ ವಿಶ್ವವಿದ್ಯಾಲಯವು ನಡೆಸಿದ ಒಂದು ಅಧ್ಯಯನದ ಪ್ರಕಾರ ಮೆದುಳಿನ ಡಿಫಾಲ್ಟ್ ಮೋಡ್‍ನ ಚಟುವಟಿಕೆಯನ್ನು ಕಡಿಮೆಗೊಳಿಸುವಲ್ಲಿ ಧ್ಯಾನವು ಅತ್ಯಂತ ಪರಿಣಾಮಕಾರಿ ಎಂಬುದು ಸಾಬೀತಾಗಿದೆ.

* 2011ರಲ್ಲಿ ಹಾರ್ವರ್ಡ್‌ನಲ್ಲಿ ನಡೆಸಿದ ಅಧ್ಯಯನದಲ್ಲಿ ಕಂಡುಬಂದ ಅಂಶವೇನೆಂದರೆ, ಮನಃಪೂರ್ವಕ ಧ್ಯಾನದಿಂದ ಮೆದುಳಿನ ರಚನೆಯನ್ನು ನಿಜವಾಗಿ ಬದಲಿಸಬಹುದು. ಎಂಟು ವಾರಗಳ ಮನಃಪೂರ್ವಕ ಧ್ಯಾನದಿಂದ ಕಲಿಕೆ ಹಾಗೂ ನೆನಪನ್ನು ನಿಯಂತ್ರಿಸುವ ಮೆದುಳಿನ ಭಾಗವಾದ ಹಿಪ್ಪೊಕ್ಯಾಂಪಸ್‍ನಲ್ಲಿ ಬದಲಾವಣೆ ಕಂಡುಬಂದಿದೆ.

* ವಿಸ್ಕೊಸಿನ್ ವಿಶ್ವವಿದ್ಯಾಲಯವು ಒಂದು ಅಧ್ಯಯನ ನಡೆಸಿತು. ಇದರಲ್ಲಿ 10 ದೀರ್ಘಕಾಲಿಕ ಬುದ್ಧನ ಅನುಯಾಯಿಗಳು ಹಾಗೂ ಈಗ ತಾನೇ ಧ್ಯಾನದಲ್ಲಿ ಅಲ್ಪ ತರಬೇತಿ ಪಡೆದ 8 ಕಾಲೇಜು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಧ್ಯಾನದ ಸಮಯದಲ್ಲಿ ಈ ಎರಡೂ ಗುಂಪಿನ ಇಇಜಿ (Electroencephalogram) ವರದಿಯನ್ನು ವಿಶ್ಲೇಷಿಸಲಾಯಿತು. ಬೌದ್ಧ ಸನ್ಯಾಸಿಗಳು ಅತಿಹೆಚ್ಚು ಗಾಮ ತರಂಗಗಳನ್ನು ಉತ್ಪತ್ತಿ ಮಾಡಿದ್ದರು. ಆದರೆ ಆ ವಿದ್ಯಾರ್ಥಿಗಳ ತರಂಗಗಳು ಸನ್ಯಾಸಿಗಳ ತರಂಗಗಳ ಸಾಮರ್ಥ್ಯಕ್ಕಿಂತ ಎಷ್ಟೋ ಪಟ್ಟು ಕಡಿಮೆ ಇದ್ದವು. ಗಾಮ ತರಂಗಗಳು ಮೆದುಳಿನ ವಿವಿಧ ಭಾಗಗಳಿಂದ ವಿಷಯ (ಮಾಹಿತಿ)ಗಳನ್ನು ಏಕಕಾಲದಲ್ಲಿ ವೇಗವಾಗಿ ಸಾಗಣಿಕೆ ಮಾಡುವ ಪ್ರಕ್ರಿಯೆಯಲ್ಲಿ ಭಾಗವಹಿಸುತ್ತವೆ.

ಒಟ್ಟಿನಲ್ಲಿ ಸಂಶೋಧನಾಧಾರಿತ ಸಂಗತಿಗಳ ಮೂಲಕ ಕಂಡುಕೊಳ್ಳಬಹುದಾದ ಸಂಗತಿ ಎಂದರೆ ನಾವು ಸಂತೃಪ್ತರಾಗಿರಲು ಧ್ಯಾನ ಸಹಕಾರಿ.

ಜಾಗೃತಿ = ಸಂತೋಷ

ಧ್ಯಾನ = ಜಾಗೃತಿ

ಆದ್ದರಿಂದ, ಧ್ಯಾನ = ಸಂತೋಷ

ಈ ಧ್ಯಾನಸೂತ್ರ ನಮ್ಮ ಜೀವನಸೂತ್ರವಾಗಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT