ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೆನೋಪಾಸ್‌ ಕುಂದುವ ಲೈಂಗಿಕಾಸಕ್ತಿ

Last Updated 18 ಅಕ್ಟೋಬರ್ 2019, 19:30 IST
ಅಕ್ಷರ ಗಾತ್ರ

ಮಹಿಳೆಯರಲ್ಲಿ 40ರ ನಂತರ ಆಗುವ ಮೆನೋಪಾಸ್‌ನಿಂದ ಲೈಂಗಿಕ ಆಸಕ್ತಿ ಕುಂದಬಹುದು. ಆದರೆ ದಂಪತಿ ಪರಸ್ಪರ ಹೊಂದಾಣಿಕೆ, ಅನ್ಯೋನ್ಯತೆಯಿಂದ ಇದ್ದರೆ ಇದು ಒಂದು ಕೊರತೆಯೇ ಅಲ್ಲ. ಜೊತೆಗೆ ಪೌಷ್ಟಿಕ ಆಹಾರ ಸೇವನೆ, ನಿಯಮಿತ ದೈಹಿಕ ಚಟುವಟಿಕೆ ಹಾಗೂ ಕೌಟುಂಬಿಕ ಸಂಬಂಧಗಳಿಂದ ಇದನ್ನು ಎದುರಿಸಬಹುದು.

ಮೆನೋಪಾಸ್ (ಋತುಬಂಧ), ಮಾಸಿಕ ಋತುಚಕ್ರ ನಿಲ್ಲುವುದು ಮಹಿಳೆಯರ ಸಂತಾನೋತ್ಪತ್ತಿ ಜೀವನಕ್ಕೆ ತೆರೆ ಎಳೆದ ಹಾಗಾದರೂ ಇದನ್ನು ಲೈಂಗಿಕ ಜೀವನದ ಹಾಗೂ ದಾಂಪತ್ಯ ಸುಖದ ಅಂತ್ಯ ಎಂದು ಗೊಂದಲಕ್ಕೊಳಗಾಗುವವರೇ ಹೆಚ್ಚು. ಪ್ರತಿ ಹೆಣ್ಣಿನಲ್ಲೂ ಋತುಪ್ರಾಪ್ತಿಯ ಹಾಗೇ ಋತುಬಂಧವೂ ಅನಿವಾರ್ಯವೇ. ಸುಮಾರು 45–50 ವರ್ಷದೊಳಗೆ ಈ ಋತುಬಂಧದ ಪ್ರಕ್ರಿಯೆ ನಡೆದು ತನ್ನ ಜೀವನದ ಮೂರನೆಯ ಒಂದು ಭಾಗವನ್ನು ಮೆನೋಪಾಸ್ ನಂತರವೇ ಮಹಿಳೆ ಕಳೆಯಬೇಕಾದ ಅನಿವಾರ್ಯತೆ ಇದೆ. ಇದೊಂದು ಜೀವನದ ಬದಲಾವಣೆಯನ್ನಷ್ಟೇ ಪ್ರತಿನಿಧಿಸುತ್ತದೆ. ಆದರೆ ಮೆನೋಪಾಸ್ ಇಂದಿಗೂ ಉದ್ಯೋಗಸ್ಥ, ಸುಶಿಕ್ಷಿತ ಮಹಿಳೆಯರೂ ಬಹುವಾಗಿ ಚರ್ಚಿಸುವ ವಿಷಯ.

45– 50 ವರ್ಷದ ಆಸುಪಾಸಿನ ಮಹಿಳೆ ಒಂದರಿಂದ ಎರಡು ವರ್ಷಗಳ ಕಾಲ ಮುಟ್ಟಾಗದಿದ್ದರೆ ಅದನ್ನೇ ಮೆನೋಪಾಸ್ ಎನ್ನುತ್ತೇವೆ. ಇದು ಅನುವಂಶೀಯ ಆರ್ಥಿಕಸ್ಥಿತಿ, ಭೌಗೋಳಿಕ, ಸ್ಥೂಲಕಾಯ ಇನ್ನಿತರ ಅಂಶಗಳನ್ನು ಅವಲಂಬಿಸಿರುತ್ತದೆ.

ಮೆನೋಪಾಸ್ ನಂತರ ಗರ್ಭಕೋಶ, ಅಂಡಾಶಯಗಳು ಚಿಕ್ಕದಾಗುತ್ತವೆ. ಮೂತ್ರಕೋಶದ, ಯೋನಿಯ ಜೀವಕೋಶ ಪದರಗಳು ತೆಳ್ಳಗಾಗಿ ಪದೇಪದೇ ಮೂತ್ರ ಹಾಗೂ ಯೋನಿ ಸೋಂಕುಂಟಾಗಬಹುದು. ಮೂತ್ರವಿಸರ್ಜನೆಯ ಒತ್ತಡ ತಡೆಹಿಡಿಯಲು ತೊಂದರೆಯಾಗಿ ಕೆಮ್ಮು/ಸೀನು ಬಂದರೆ ಮೂತ್ರ ಒಸರುವುದು. ಚರ್ಮ ಸುಕ್ಕಾಗುವಿಕೆ, ಹೊಟ್ಟೆ, ಸೊಂಟ, ತೊಡೆಗಳಲ್ಲಿ ಹೆಚ್ಚಿನ ಕೊಬ್ಬು ಶೇಖರಣೆ, ಋತುಚಕ್ರ ಎರಡು ಮೂರು ತಿಂಗಳಿಗೊಮ್ಮೆ ಆಗುವುದು ಅಥವಾ 15 ದಿನಕ್ಕೊಮ್ಮೆ ಸ್ವಲ್ಪ ಸ್ವಲ್ಪ ಆಗಿ ನಿಂತು ಹೋಗಬಹುದು. ಆದರೆ ಇಲ್ಲಿ ನೆನಪಿಡಬೇಕಾದ ಸಂಗತಿ ಎಂದರೆ ಗೊತ್ತು ಗುರಿ ಇಲ್ಲದ ಅಥವಾ ದೀರ್ಘಕಾಲದ ವಿಪರೀತ ಪ್ರಮಾಣದ ರಕ್ತಸ್ರಾವವನ್ನು ಸಹಜ ಎಂದು ತಿಳಿಯಬಾರದು. ಮುಟ್ಟು ನಿಂತ ಮೇಲೆ ಒಂದೆರಡು ವರ್ಷ ನಂತರದ ರಕ್ತಸ್ರಾವವು ಸಹಜವಲ್ಲ. ವೈದ್ಯಕೀಯ ತಪಾಸಣೆಗೆ ಒಳಗಾಗಬೇಕು. ಶೇ 40- 50 ರಷ್ಟು ಮಹಿಳೆಯರಲ್ಲಿ ಮೆನೋಪಾಸ್‌ನ ಆಸುಪಾಸಿನಲ್ಲಿ ಹಾಟ್‌ಪ್ಲಶಸ್ (ಉಷ್ಣ ಅಲೆಗಳು) ಸಾಮಾನ್ಯ. ಶೇ 60ಕ್ಕೂ ಹೆಚ್ಚು ಜನರಲ್ಲಿ ನಿದ್ರಾಹೀನತೆ ಇರಬಹುದು. ಕೋಪ, ಸಿಡಿಮಿಡಿ, ಕುಂದುವ ಏಕಾಗ್ರತೆ, ಖಿನ್ನತೆ, ಸದಾ ಸುಸ್ತಿನ ಅನುಭವ, ಮರೆಗುಳಿತನ, ಖಾಲಿತನದ ಅನುಭವ ಹೀಗೆ ಹಲವು ರೀತಿಯ ಭಾವನಾತ್ಮಕ ಏರಿಳಿತ ಅನುಭವಿಸುತ್ತಾರೆ.

ಲೈಂಗಿಕವಾಗಿ ತಾನು ಸಕ್ರಿಯವಾಗಿಲ್ಲವೇನೋ ಎಂದೆನಿಸಿ ಶೇ 30 ರಿಂದ 40ಕ್ಕೂ ಹೆಚ್ಚು ಮಹಿಳೆಯರಲ್ಲಿ ಲೈಂಗಿಕಾಸಕ್ತಿ ಕುಂಠಿತಗೊಳ್ಳಬಹುದು. ಜೊತೆಗೆ ಕಡಿಮೆಯಾಗುವ ಲೈಂಗಿಕ ಸಂಪರ್ಕದಿಂದ ಯೋನಿಮಾರ್ಗವೂ ಚಿಕ್ಕದಾಗುತ್ತಾ ಹಾಗೇ ಬಿಟ್ಟರೆ ನಂತರದ ದಿನಗಳಲ್ಲಿ ಲೈಂಗಿಕಕ್ರಿಯೆ ಕಷ್ಟವಾಗಬಹುದು.

ಮಹಿಳೆಯರಲ್ಲಿ ಸಹಜ ಋತುಚಕ್ರದಲ್ಲಿ ಲೈಂಗಿಕಚೋದಕ ಶಕ್ತಿಯಲ್ಲಿ ಹಲವು ಬದಲಾವಣೆಗಳು ಸಾಧ್ಯ. ಜೀವವಿಕಾಸದ ಸೂತ್ರಕ್ಕೆ ಹೊಂದಿಕೊಂಡ ಹಾಗೇ ಅಂಡೋತ್ಪತ್ತಿ ಸಮಯದಲ್ಲಿ ಹಾಗೂ ಋತುಚಕ್ರದ ಆರಂಭದಲ್ಲಿ ಲೈಂಗಿಕ ಕಾಮನೆ ಅತ್ಯಧಿಕವಾಗಬಹುದು. ಲೈಂಗಿಕ ಕಾಮನೆ(ಲಿಬಿಡೋ) ಎಲ್ಲಾ ಮಹಿಳೆಯರಲ್ಲಿ ಒಂದೇ ತೆರನಾಗಿ ಇರುವುದಿಲ್ಲ. ಇದಕ್ಕೆ ಸಾಮಾಜಿಕ, ನೈತಿಕ ಆಯಾಮಗಳು ಇವೆ. ಹಾರ್ಮೋನ್‌ ವ್ಯತ್ಯಾಸದಿಂದ, ಜೊತೆಗೆ ಬಳಸುವ ಔಷಧಗಳು, ಆರೋಗ್ಯದಮಟ್ಟ, ಅನುಸರಿಸುವ ಜೀವನಶೈಲಿ, ಪರಸ್ಪರ ಸಂಬಂಧಗಳು, ಜೀವನದಲ್ಲಿ ಘಟಿಸುವ ಘಟನೆಗಳು ಎಲ್ಲವನ್ನೂ ಅವಲಂಬಿಸಿರುತ್ತದೆ.

ಲೈಂಗಿಕ ಚೋದಕ ಶಕ್ತಿ ಕುಂಠಿತ

ಲೈಂಗಿಕತೆ ಎಂದರೆ ಲೈಂಗಿಕ ಸಂಪರ್ಕವಷ್ಟೇ ಅಲ್ಲ. ಲೈಂಗಿಕತೆ ನಮ್ಮ ವ್ಯಕ್ತಿತ್ವದ ಅಭಿವ್ತಕ್ತಿ, ನಮ್ಮನ್ನು ನಾವು ಅರಿಯುವುದು. ಬೇರೆಯವರೊಡನೆ ಬೆರೆತು ಆಡುವ ಮಾತು, ಪರಸ್ಪರ ಸ್ನೇಹ ಬೆಳೆಸುವಿಕೆ, ಸಂಬಂಧ ಭಾವನೆಗಳನ್ನು ಸಾಕಾರಗೊಳಿಸುವುದು, ಆತ್ಮವಿಶ್ವಾಸ, ಧೈರ್ಯ, ಪತಿಪತ್ನಿಯರ ಪರಸ್ಪರ ಪ್ರೀತಿಪೂರ್ವಕ ಸಂವಹನ, ಸ್ಪರ್ಶ, ನಡೆ-ನುಡಿ ಎಲ್ಲವೂ ಮುಖ್ಯ. ಸಂತಾನೋತ್ಪತ್ತಿ ಜೊತೆಗೆ ಲೈಂಗಿಕತೆಯ ಪರಿಣಾಮಗಳು ಜೀವನದ ಎಲ್ಲಾ ಕಾರ್ಯವೈಶಾಲ್ಯತೆಯಲ್ಲೂ ಹಾಸು ಹೊಕ್ಕಾಗಿರುತ್ತದೆ. ಲೈಂಗಿಕ ಆಸಕ್ತಿ ಲೈಂಗಿಕ ಅಭಿವ್ಯಕ್ತಿಯ ಮೊದಲ ಘಟ್ಟ. ಪ್ರತಿಯೊಬ್ಬರ ಲೈಂಗಿಕ ಜೀವನ ಅಥವಾ ಚೋದಕ ಶಕ್ತಿ, ನರಮಂಡಲ ಹಾಗೂ ಹಾರ್ಮೋನ್‌ ಪ್ರಭಾವದಿಂದ ಪ್ರೇರಿತವಾಗಿದ್ದು ಮೆದುಳಿನ ಲಿಂಬಿಕ ವ್ಯವಸ್ಥೆಯ ಅಗತ್ಯವಿದೆ. ನರಮಂಡಲ, ಲೈಂಗಿಕ ವ್ಯವಸ್ಥೆಯ ಜೊತೆಗೆ ಟೆಸ್ಟೋಸ್ಟಿರಾನ್ ಎನ್ನುವ ಪುರುಷಪ್ರಧಾನ ಹಾರ್ಮೋನ್‌ ಹೆಣ್ಣು-ಗಂಡು ಇಬ್ಬರಲ್ಲೂ ಲೈಂಗಿಕ ಚೋದಕಶಕ್ತಿಗೆ ಅತ್ಯವಶ್ಯ. ಹರೆಯದಲ್ಲಿ ಅತಿಹೆಚ್ಚಿರುವ ಈ ಚೋದಕತೆ ಮಧ್ಯ ವಯಸ್ಸು ಮೀರುವಾಗ ಮಹಿಳೆಯರಲ್ಲಿ ಕಡಿಮೆಯಾಗುತ್ತಾ ಹೋಗುತ್ತದೆ. ಇದರ ಜೊತೆಗೆ ಮಕ್ಕಳ ಕಾಳಜಿ, ವಿದ್ಯಾಭ್ಯಾಸ, ಉದ್ಯೋಗದ ಒತ್ತಡ, ಯೌವನಕ್ಕೆ ಕಾಲಿಡುತ್ತಿರುವ ಮಕ್ಕಳ ಜೊತೆಗೆ ಒಡನಾಟ ಇದೆಲ್ಲವೂ ಮಹಿಳೆಯರಲ್ಲಿ ಒಂದು ಒತ್ತಡವಾಗಿ ಪರಿಣಮಿಸಿ ಶೇ 30ರಿಂದ 40ರಷ್ಟು ಮಹಿಳೆಯರು ಪರಸ್ಪರ ಲೈಂಗಿಕ ಸಂಬಂಧದಲ್ಲಿ ಆಸಕ್ತಿ ಕಳೆದುಕೊಳ್ಳಬಹುದು, ಇದರಿಂದ ಸಂಬಂಧ ಹಳಸಲು ಕಾರಣವಾಗಬಹುದು. ಬದಲಾಗಿ ಉತ್ತಮ ಲೈಂಗಿಕ ಸಂಬಂಧ ಮುಂದುವರೆಸಿದಾಗ ಅದು ಸಂತೋಷ, ಸಂತೃಪ್ತಿ, ಅನ್ಯೋನ್ಯತೆಗೆ ನಾಂದಿಯಾಗಬಹುದು.

ದಂಪತಿಯಲ್ಲಿ ಅನ್ಯೋನ್ಯತೆ ಮುಖ್ಯ

ಬಸಿರು- ಬಾಣಂತನಗಳ ರಗಳೆ ಇಲ್ಲದೆ, ಗರ್ಭನಿರೋಧಕ ಬಳಸುವ ಅನಿವಾರ್ಯತೆಯಿಲ್ಲದೇ, ಋತುಚಕ್ರದ ಮೇಲ್ವಿಚಾರಣೆ ಅಗತ್ಯವಿಲ್ಲದೆ, ಹೊಸ ಆಸಕ್ತಿ, ಹೊಸ ಹವ್ಯಾಸಗಳನ್ನು ಬೆಳೆಸಿಕೊಂಡು ಮೆನೋಪಾಸ್ ನಂತರ ಜೀವನದ ಹೊಸ ಅಧ್ಯಾಯ ಆರಂಭಿಸಿ. ಕುಂದುವ ಲೈಂಗಿಕಾಸಕ್ತಿಯನ್ನು ಗುರುತಿಸಿ, ಗಂಡ-ಹೆಂಡತಿ ಪರಸ್ಪರ ಅರಿಯುವುದು, ಅನ್ಯೋನ್ಯತೆ, ಸ್ಪಂದಿಸುವಿಕೆ ಹೊಂದಾಣಿಕೆ ತೋರುವುದು ಅತ್ಯವಶ್ಯಕ. ಖಿನ್ನತೆ, ಆತಂಕ ಇತ್ಯಾದಿಗಳಿಗೆ ಸೂಕ್ತ ಔಷಧ, ಮನೋಚಿಕಿತ್ಸೆ ಅಗತ್ಯ. ಲುಬ್ರಿಕೆಂಟ್‌ ಜೆಲ್ ಬಳಸುವಿಕೆ, ಕೆಗೆಲ್ಸ್ ವ್ಯಾಯಾಮದಿಂದ ಯೋನಿ ಮಾಂಸಖಂಡಗಳ ಸಂವೇದನೆಯು ಹೆಚ್ಚಿ ಉತ್ತಮ ಲೈಂಗಿಕಕ್ರಿಯೆ ಸಹಾಯವಾಗುತ್ತದೆ.

ಮೆನೋಪಾಸ್ ನಂತರ ಐಸೋಫ್ಲೆವಿನ್ ಇರುವ ಸೋಯಾ, ಫೈಟೋಈಸ್ಟ್ರೋಜೆನ್ ಹೆಚ್ಚಿರುವ ಅಗಸೆ, ಮೆಂತ್ಯೆ, ಕುಂಬಳಬೀಜ, ಹಸಿರು ತರಕಾರಿಗಳು, ಋತುಗಳಿಗೆ ಅನುಗುಣವಾದ ತಾಜಾಹಣ್ಣುಗಳು, ಒಣಹಣ್ಣುಗಳು ಇತ್ಯಾದಿ ಬಳಸಿ. ಕಾಫಿ-ಚಹ ಕಡಿಮೆ ಮಾಡಿ, ಕರಿದ-ಹುರಿದ ಪದಾರ್ಥಗಳನ್ನು ವರ್ಜಿಸಿ. ಮಜ್ಜಿಗೆ, ಹೈನು ಪದಾರ್ಥಗಳು, ರಾಗಿ ಇತ್ಯಾದಿಗಳಿಂದ ಈಸ್ಟ್ರೋಜೆನ್‌ ಹಾರ್ಮೋನ್‌ ಕೊರತೆಯಿಂದ ಉಂಟಾಗುವ ಮೂಳೆಸವೆತ (ಆಸ್ಟಿಯೋಪೊರೋಸಿಸ್) ಹಾಗೂ ಹೃದ್ರೋಗಗಳನ್ನು ಎದುರಿಸಬಹುದು. ಅಷ್ಟೇ ಅಲ್ಲ, ಅತಿ ಅವಶ್ಯವೆನಿಸಿದರೆ ವೈದ್ಯರು ಹಾರ್ಮೋನ್‌ ಪುನರ್ಭರಿಸುವ ಚಿಕಿತ್ಸೆಯನ್ನು ನೀಡಬಹುದು.

ಹಾರ್ಮೋನ್‌ ಚಿಕಿತ್ಸೆಎಷ್ಟು ಸೂಕ್ತ?

ಕಳೆದ ತಿಂಗಳು ನಡೆದ ಜಾಗತಿಕ ಮೆನೋಪಾಸ್ ಬಗೆಗಿನ ಸಮ್ಮೇಳನದಲ್ಲಿ ಮಧ್ಯವಯಸ್ಸಿನ ಮಹಿಳೆಯರಲ್ಲಿ ಟೆಸ್ಟೋಸ್ಟಿರಾನ್ ಹಾರ್ಮೋನ್‌ ಸೂಕ್ತವಾಗಿ ಬಳಸಿ ಕುಂದುತ್ತಿರುವ ಲೈಂಗಿಕ ಬಯಕೆಯನ್ನು ಸರಿಪಡಿಸಬಹುದು ಎನ್ನುವ ನಿರ್ಣಯಕ್ಕೆ ಬರಲಾಯಿತು. ಟೆಸ್ಟೋಸ್ಟಿರಾನ್ ಪುರುಷರ ಮುಖ್ಯ ಹಾರ್ಮೋನ್‌. ಆದರೆ ಅದು ಮಹಿಳೆಯರಲ್ಲೂ ಇರುತ್ತದೆ. ಪುರುಷರ ಶರೀರದಲ್ಲಿರುವಷ್ಟು ಹೆಚ್ಚಾಗಿ ಇರುವುದಿಲ್ಲ. ಮಹಿಳೆ ಹಾಗೂ ಪುರುಷ ಇಬ್ಬರಲ್ಲೂ ಲೈಂಗಿಕ ಚೋದಕಶಕ್ತಿಗೆ - ಪುರುಷ ಪ್ರಧಾನ ಟೆಸ್ಟೋಸ್ಟಿರಾನ್ ಹಾರ್ಮೋನ್‌ ಅತ್ಯಾವಶ್ಯಕ. ಆದ್ದರಿಂದಲೇ ಪುರುಷರಲ್ಲಿ ಹೆಣ್ಣಿಗಿಂತ ನಾಲ್ಕೈದು ಪಟ್ಟು ಈ ಚೋದಕಶಕ್ತಿ ಹೆಚ್ಚಿರುತ್ತದೆ.

(ಲೇಖಕಿ ಭದ್ರಾವತಿಯಲ್ಲಿ ಸ್ತ್ರೀರೋಗ ತಜ್ಞೆ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT