ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೂಕ್ಷ್ಮಜೀವಿಗಳು: ತಾರಕವೂ.. ಮಾರಕವೂ.. ಕುತೂಹಲಕರ ಮಾಹಿತಿ ಇಲ್ಲಿದೆ

Last Updated 2 ಮೇ 2022, 20:30 IST
ಅಕ್ಷರ ಗಾತ್ರ

ಸೂಕ್ಷ್ಮಜೀವಿಗಳು ಎಂದಾಕ್ಷಣ ನಮಗೆ ಅವುಗಳಿಂದ ಉಂಟಾಗುವ ಕಾಯಿಲೆಗಳೇ ನೆನಪಾಗುತ್ತವೆ. ಹೌದು, ಅನೇಕ ಬಗೆಯ ರೋಗಕಾರಕ ಸೂಕ್ಷ್ಮಜೀವಿಗಳು ನಮ್ಮ ಸುತ್ತಲಿನ ಪರಿಸರದಲ್ಲಿವೆ. ಬ್ಯಾಕ್ಟಿರಿಯಾ, ವೈರಾಣು, ಪರಾವಲಂಬಿ ಸೂಕ್ಷ್ಮಾಣು, ಶಿಲೀಂಧ್ರ ಮೊದಲಾದುವು ಅವುಗಳಲ್ಲಿ ಮುಖ್ಯವಾದುವು. ಅವು ವಿವಿಧ ಬಗೆಯ ರೋಗಗಳಿಗೆ ಕಾರಣವಾಗುವುದು ನಮಗೆ ಗೊತ್ತೇ ಇದೆ. ಆದರೆ, ನಮ್ಮ ಶರೀರದಲ್ಲೇ ಒಂದಿಷ್ಟು ಸ್ನೇಹಪರ, ಉಪಯುಕ್ತ ಸೂಕ್ಷ್ಮಜೀವಿಗಳಿದ್ದು ಅವು ನಮ್ಮ ಆರೋಗ್ಯವನ್ನು ಕಾಪಾಡುತ್ತವೆ ಎಂದರೆ ನಿಮಗೆ ಆಶ್ಚರ್ಯವಾಗಬಹುದು.

ಹೌದು, ನಮ್ಮ ಶರೀರದ ಒಳ ಹಾಗೂ ಹೊರಭಾಗಗಳಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಈ ಸೂಕ್ಷ್ಮಜೀವಿಗಳಿವೆ. ಚರ್ಮದ ಮೇಲೆ, ಕಣ್ಣಿನ ಒಳಗೆ, ಬಾಯಿ, ಶ್ವಾಸಕೋಶ, ಯೋನಿ, ಜಠರ, ಕರುಳು - ಹೀಗೆ ಎಲ್ಲಡೆಯೂ ಅವು ನೆಲೆ ಮಾಡಿಕೊಂಡಿವೆ. ಒಟ್ಟಾರೆ ನಮ್ಮ ಶರೀರದ ಜೀವಕೋಶಗಳಿಗಿಂತಲೂ ಸರಿ ಸುಮಾರು ಮೂರು ಪಟ್ಟು ಹೆಚ್ಚಿನ ಸಂಖ್ಯೆಯಲ್ಲಿ ಈ ಸೂಕ್ಷ್ಮಜೀವಿಗಳು ನಮ್ಮ ದೇಹದಲ್ಲಿ ನೆಲೆಸಿವೆ. ಶರೀರದ ಇತರ ಭಾಗಗಳಿಗಿಂತ ಕರುಳಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಈ ಸೂಕ್ಷ್ಮಾಣುಗಳ ಬಗ್ಗೆ ಪ್ರತಿಯೊಬ್ಬರೂ ತಿಳಿಯಲೇಬೇಕು. ಏಕೆಂದರೆ, ಅವು ನಮ್ಮ ಸಂಪೂರ್ಣ ಆರೋಗ್ಯವನ್ನು ಕಾಪಾಡುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತವೆ. ವ್ಯಕ್ತಿಯ ಮಾನಸಿಕ ಹಾಗೂ ದೈಹಿಕ ಆರೋಗ್ಯವನ್ನು ಸುಸ್ಥಿತಿಯಲ್ಲಿಡಲು ಮತ್ತು ಹಲವಾರು ಕಾಯಿಲೆಗಳು ಬರದಂತೆ ತಡೆಯಲು ಈ ಸೂಕ್ಷ್ಮಜೀವಿಗಳು ನಿರಂತರ ಹೋರಾಡುತ್ತವೆ.

ಎಲ್ಲಿಂದ ಪ್ರವೇಶ?

ಮಗು ಜನಿಸಿದಾಗಲೇ ಶರೀರದಲ್ಲಿ ಸೂಕ್ಷ್ಮಜೀವಿಗಳು ನೆಲೆ ಮಾಡಿರುತ್ತವೆ. ತಾಯಿಯ ಗರ್ಭದಲ್ಲಿರುವಾಗಲೇ ಗರ್ಭಾಶಯದಿಂದ ಒಂದಿಷ್ಟು ಜೀವಿಗಳು ಮಗುವಿನ ಶರೀರವನ್ನು ಪ್ರವೇಶಿಸಿದ್ದರೆ ಇನ್ನುಳಿದವು ಪ್ರಸವದ ವೇಳೆಯಲ್ಲಿ, ಸ್ತನ್ಯಪಾನದ ಮೂಲಕ, ಆಟವಾಡುವಾಗ, ಆಹಾರ ಸೇವಿಸುವಾಗ – ಹೀಗೆ ಎಲ್ಲ ಸಂದರ್ಭಗಳಲ್ಲಿಯೂ ಮಗುವಿನ ಶರೀರವನ್ನು ಪ್ರವೇಶಿಸುತ್ತವೆ.

ಏನೆಲ್ಲ ಮಾಡುತ್ತವೆ?

ದೇಹದ ಪ್ರತಿಯೊಂದು ಅಂಗಾಂಗಳ ಸಮರ್ಪಕ ಕಾರ್ಯನಿರ್ವಹಣೆಯಲ್ಲಿ ಈ ಸೂಕ್ಷ್ಮಜೀವಿಗಳ ಪಾತ್ರವಿದೆ.

l ಚರ್ಮದ ಮೇಲಿನ ಸೂಕ್ಷ್ಮಜೀವಿಗಳು ಇತರ ರೋಗಕಾರಕ ಅಣುಜೀವಿಗಳು ಅಲ್ಲಿ ನೆಲೆ ಮಾಡದಂತೆ ತಡೆದು ಚರ್ಮದ ಆರೋಗ್ಯವನ್ನು ಕಾಪಾಡುವುದರ ಜೊತೆಗೆ ಸೂರ್ಯನ ಕಿರಣಗಳ ನೆರವಿನಿಂದ ವಿಟಮಿನ್ ಡಿ ತಯಾರಿಸಲೂ ನೆರವಾಗುತ್ತವೆ.

l ಶರೀರದ ಎಲ್ಲ ಬಗೆಯ ಚಯಾಪಚಯ ಕ್ರಿಯೆಗಳು ಸರಾಗವಾಗಿ ನಡೆಯಲು ನೆರವಾಗುತ್ತವೆ.

l ಮೇದೋಜೀರಕ ಗ್ರಂಥಿಯ ಬೀಟಾ ಜೀವಕೋಶಗಳಿಂದ ಇನ್ಸುಲಿನ್ ರಸದೂತ ತಯಾರಾಗುವ ಪ್ರಕ್ರಿಯೆಯನ್ನು ನಿರ್ವಹಿಸುತ್ತವೆ.

l ರೋಗನಿರೋಧಕ ವ್ಯವಸ್ಥೆಯನ್ನು ಸಶಕ್ತಗೊಳಿಸುತ್ತವೆ.

l ಹೃದಯ ಹಾಗೂ ರಕ್ತನಾಳಗಳ ಆರೋಗ್ಯವನ್ನು ವೃದ್ಧಿಸುತ್ತವೆ.

l ಕರುಳಿನಲ್ಲಿ ಈ ಜೀವಿಗಳು ವ್ಯಕ್ತಿ ಸೇವಿಸುವ ಆಹಾರದಿಂದ ಉತ್ಪತ್ತಿಯಾಗುವ ಶಕ್ತಿಯ ಪ್ರಮಾಣ ಮತ್ತು ಪೋಷಕಾಂಶಗಳ ಬಗೆಯನ್ನೂ ನಿರ್ಧರಿಸಬಲ್ಲವು. ನಾವು ಸೇವಿಸಿದ ಆಹಾರಕಣಗಳನ್ನು ವಿಭಜಿಸಿ ಅದರಲ್ಲಿನ ಪೋಷಕಾಂಶಗಳು ನಮ್ಮ ಶರೀರಕ್ಕೆ ದೊರೆಯುವಂತೆ ಮಾಡುತ್ತವೆ. ಆಹಾರದಲ್ಲಿನ ನಾರಿನಾಂಶವನ್ನು ಜೀರ್ಣಿಸಿ ಅವುಗಳಿಂದ ಜೀವಸತ್ವಗಳ ಉತ್ಪಾದನೆಗೆ ಮತ್ತು ಶರೀರಕ್ಕೆ ಅಗತ್ಯವಿರುವಷ್ಟೇ ಪ್ರಮಾಣದ ಕೊಬ್ಬಿನ ಅಂಶವನ್ನು ಹೀರಿಕೊಳ್ಳಲು ನೆರವಾಗುತ್ತವೆ. ಅಲ್ಲದೆ, ಆಹಾರದ ಜೊತೆ ಶರೀರವನ್ನು ಪ್ರವೇಶಿಸುವ ವಿಷಕಾರಕ ವಸ್ತುಗಳನ್ನು ತಟಸ್ಥಗೊಳಿಸುತ್ತವೆ. ರೋಗಕಾರಕ ಸೂಕ್ಷ್ಮಾಣುಗಳು ಬೆಳೆಯದಂತೆ ನಿಯಂತ್ರಣದಲ್ಲಿಡುವುದೂ ಈ ಜೀವಿಗಳ ಜವಾಬ್ದಾರಿಯೇ.

l ಕೊಬ್ಬಿನ ಅಂಶದ ಹೀರುವಿಕೆಯನ್ನು ನಿಯಂತ್ರಣದಲ್ಲಿಡುವುದರ ಮೂಲಕ ಯಕೃತ್ತಿನ ಆರೋಗ್ಯವನ್ನು ಕಾಪಾಡುತ್ತವೆ.

l ಮೂಳೆಗಳನ್ನು ಗಟ್ಟಿಯಾಗಿಡಲು ನೆರವಾಗುತ್ತವೆ.

l ಮಿದುಳಿನ ನರವಾಹಕಗಳನ್ನು ನಿಯಂತ್ರಿಸುವ ಈ ಜೀವಿಗಳು ವ್ಯಕ್ತಿಯ ವರ್ತನೆ, ವಿಚಾರ, ಆಲೋಚನೆ ಹಾಗೂ ಭಾವನೆಗಳ ಮೇಲೆಯೂ ಗಾಢವಾದ ಪ್ರಭಾವ ಬೀರುತ್ತವೆ.

ಮಾರಕ ಯಾವುದು?

ಜಂಕ್ ಆಹಾರ ಮತ್ತು ಅತಿಯಾದ ಮಾಂಸಾಹಾರ ಸೇವನೆ: ವ್ಯಕ್ತಿ ಅತಿಯಾದ ಮಾಂಸಾಹಾರವನ್ನು ಸೇವಿಸಿದಾಗ ಆತನ ಕರುಳಿನಲ್ಲಿರುವ ಈ ಸೂಕ್ಷ್ಮಜೀವಿಗಳು ‘ಟ್ರೈಮಿಥೈ ಮೈನ್ ಎನ್ ಆಕ್ಸೈಡ್’ ಎಂಬ ರಾಸಾಯನಿಕವನ್ನು ಉತ್ಪತ್ತಿಗೆ ಕಾರಣವಾಗುತ್ತವೆ. ಈ ರಾಸಾಯನಿಕವು ರಕ್ತನಾಳಗಳ ಒಳಪದರಗಳಲ್ಲಿ ಕೊಬ್ಬಿನಾಂಶ ಶೇಖರವಾಗಲು ಪ್ರಚೋದಿಸುತ್ತದೆ. ಅಲ್ಲದೆ ಈ ರಾಸಾಯನಿಕದ ಪ್ರಮಾಣ ದೇಹದಲ್ಲಿ ಏರಿದಂತೆಲ್ಲ ಮೂತ್ರಪಿಂಡಗಳ ಮತ್ತು ಹೃದಯದ ದೀರ್ಘಕಾಲಿಕ ಅನಾರೋಗ್ಯಕ್ಕೂ ಕಾರಣವಾಗಬಹುದು.

ಅತಿಯಾದ ಮಾನಸಿಕ ಒತ್ತಡ; ಜಡಜೀವನ ಶೈಲಿ: ನಾಲ್ಕು ತಾಸುಗಳಿಗೂ ಹೆಚ್ಚು ಒಂದೇ ಜಾಗದಲ್ಲಿ ಕುಳಿತಿರುವುದು, ವ್ಯಾಯಾಮವಿಲ್ಲದ ಜೀವನ.

l ವೈದ್ಯರ ಸಲಹೆ ಇಲ್ಲದೆ ಅನಗತ್ಯ ಹಾಗೂ ಹೆಚ್ಚಾದ ಆ್ಯಂಟಿಬಯೋಟಿಕ್ ಬಳಕೆ.

ಯಾವ ಆರೋಗ್ಯ ಸಮಸ್ಯೆ?

ಕರುಳಿನ ಈ ಸೂಕ್ಷ್ಮಜೀವಿಗಳಿಗೂ ಕೆಲವು ಆರೋಗ್ಯ ಸಮಸ್ಯೆಗಳಿಗೂ ನಿಕಟ ಸಂಬಂಧವಿದೆ. ಈ ಜೀವಿಗಳ ಸಂಖ್ಯೆ ಅಥವಾ ಬಗೆಯಲ್ಲಿ ವ್ಯತ್ಯಾಸವಾದಾಗ ವ್ಯಕ್ತಿ ಹಲವು ಬಗೆಯ ಆರೋಗ್ಯ ಸಮಸ್ಯೆಗಳಿಗೆ ತುತ್ತಾಗುತ್ತಾನೆ. ಮಧುಮೇಹ, ಬೊಜ್ಜು, ಅಧಿಕ ರಕ್ತದೊತ್ತಡ ಮತ್ತು ಕರುಳಿನ ಕ್ಯಾನ್ಸರ್‌ನಂತಹ ಸಮಸ್ಯೆಗಳು ಇವುಗಳಲ್ಲಿ ಮುಖ್ಯವಾದವು.

ಮಿದುಳಿಗೆ ಸಂಬಂಧಿಸಿದ ಕಾಯಿಲೆಗಳಾದ ನಿದ್ರಾಹೀನತೆ, ಆತಂಕ, ಖಿನ್ನತೆ, ಮರೆವು, ಆಲ್ಜೈಮರ್ ಕಾಯಿಲೆ, ಪಾರ್ಕಿನ್‍ಸನ್ ಕಾಯಿಲೆ, ಆಟಿಸಂ, ಅಪಸ್ಮಾರದಂತಹ ಸಮಸ್ಯೆಗಳಿಗೂ ಈ ಸೂಕ್ಷ್ಮಜೀವಿಗಳ ಅಸಮತೋಲನವೇ ಕಾರಣ ಎನ್ನುತ್ತವೆ ಅಧ್ಯಯನಗಳು. ಇದನ್ನು ನಾವು ‘ಕರುಳು-ಮಿದುಳಿನ ರೇಖೆ’ ಎಂದು ವಿಶ್ಲೇಷಿಸಬಹುದು.

ಒಟ್ಟಿನಲ್ಲಿ ಹೇಳುವುದಾದರೆ, ಕರುಳಿನ ಈ ಜೀವಿಗಳ ಸಮತೋಲನ ನಮ್ಮ ಸಂಪೂರ್ಣ ಆರೋಗ್ಯಕ್ಕೆ ರಹದಾರಿ. ಜೀವಿಗಳು ವೈವಿಧ್ಯವಾದಂತೆಲ್ಲ ವ್ಯಕ್ತಿ ಹೆಚ್ಚು ಆರೋಗ್ಯವಂತನಾಗಿರುತ್ತಾನೆ. ಹಾಗಾಗಿ ಇವುಗಳನ್ನು ಸಾಮರಸ್ಯವನ್ನು ಕಾಪಾಡುವುದರತ್ತ ನಾವು ಚಿತ್ತ ಹರಿಸಬೇಕು.

ಸಾಮರಸ್ಯವ ಕಾಪಾಡುವುದು ಹೇಗೆ?

l ವೈಯಕ್ತಿಕ ಸ್ವಚ್ಛತೆಯನ್ನು ಕಾಪಾಡಿಕೊಳ್ಳಿ.

l ಅನಗತ್ಯ ಆ್ಯಂಟಿಬಯೋಟಿಕ್ ಬಳಕೆ ಬೇಡ.

l ವೈದ್ಯರ ಸಲಹೆಯಿಲ್ಲದೆ ಔಷಧಗಳನ್ನು ಸೇವಿಸಬೇಡಿ.

l ಜಂಕ್ ಆಹಾರಸೇವನೆಯನ್ನು ಆದಷ್ಟು ಕಡಿಮೆ ಮಾಡಿ.

l ಕೃತಕ ರಾಸಾಯನಿಕಗಳ ಬಳಕೆಯೂ ಮಿತಿಯಲ್ಲಿರಲಿ.

l ಪ್ರಿಬಯೋಟಿಕ್ ಮತ್ತು ಪ್ರೋಬಯೋಟಿಕ್ ಆಹಾರ ಪದಾರ್ಥಗಳು ನಿಮ್ಮ ದಿನನಿತ್ಯದ ಆಹಾರದಲ್ಲಿರಲಿ.

(ಪ್ರಿಬಯೋಟಿಕ್ ಆಹಾರಗಳು: ದೋಸೆ, ಇಡ್ಲಿ, ಮೊಸರು, ಮಜ್ಜಿಗೆ, ಉಪ್ಪಿನಕಾಯಿ ಇತ್ಯಾದಿ.

ಪ್ರೊ-ಬಯೋಟಿಕ್ ಆಹಾರಗಳು: ಈರುಳ್ಳಿ, ಬೆಳ್ಳುಳ್ಳಿ, ಶುಂಠಿ, ನಾರಿನಾಂಶ ಹೇರಳವಾಗಿರುವ ಹಣ್ಣುಗಳು, ಸೊಪ್ಪು, ತರಕಾರಿಗಳು, ಧಾನ್ಯಗಳು.)

l ನಿತ್ಯವೂ ಕನಿಷ್ಠ ಮೂರು ಬಗೆಯ ತರಕಾರಿಗಳು ಮತ್ತು ಐದು ಬಗೆಯ ಹಣ್ಣುಗಳು ನಿಮ್ಮ ಆಹಾರದ ಭಾಗವಾಗಿರಲಿ.

l ಒತ್ತಡ ನಿರ್ವಹಿಸುವುದನ್ನು ಕಲಿಯಿರಿ.

l ನಿತ್ಯವೂ ಯಾವುದಾದರೊಂದು ಬಗೆಯ ವ್ಯಾಯಾಮವನ್ನು ರೂಢಿಸಿಕೊಳ್ಳಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT