ಶುಕ್ರವಾರ, ಡಿಸೆಂಬರ್ 6, 2019
20 °C

ಚಲನಶೀಲತೆ ಕುಂದಿಸುವ ಕಾಯಿಲೆ ಹಂಟಿಂಗ್ಟನ್‌

Published:
Updated:

ವ್ಯಕ್ತಿಯ ಚಲನಶೀಲತೆ, ಬೌದ್ಧಿಕ ಮತ್ತು ಮಾನಸಿಕ ಸಾಮರ್ಥ್ಯವನ್ನು ಕುಂದಿಸುವುದು ಹಂಟಿಂಗ್ಟನ್‌ ಕಾಯಿಲೆಯ ಲಕ್ಷಣ. ಅನುವಂಶಿಕವಾದ ಈ ಕಾಯಿಲೆಯನ್ನು ಗರ್ಭದಲ್ಲಿಯೇ ಪತ್ತೆ ಹಚ್ಚುವುದು ಇದರ ನಿಯಂತ್ರಣಕ್ಕಿರುವ ಮಾರ್ಗ.

1970– 80ರಲ್ಲಿ ದ.ಅಮೆರಿಕದ ವೆನೆಜುವೆಲಾದ ಮರಾಕೈಬೊ ಸರೋವರದ ಪ್ರದೇಶದಲ್ಲಿರುವ ಹಲವರಲ್ಲಿ ವಿಚಿತ್ರ ಕಾಯಿಲೆಯೊಂದು ಬೆಳಕಿಗೆ ಬಂತು. ಕಾಯಿಲೆಪೀಡಿತರು ನಡೆದಾಡಲು, ಯಾವುದೇ ಕೆಲಸ ಮಾಡಲು, ಮಾತನಾಡಲು, ಆಹಾರ ಸೇವಿಸಲು ಕಷ್ಟಪಡುತ್ತಿದ್ದರಲ್ಲದೇ ಅವರಲ್ಲಿ ಸ್ಮರಣಶಕ್ತಿ, ಏಕಾಗ್ರತೆ ಕಡಿಮೆಯಾಗಿತ್ತು. ಯಾವುದೇ ಕೌಶಲವನ್ನು ಬಳಸಲು ಅವರಿಗೆ ಸಾಧ್ಯವಾಗದಂತಹ ಪರಿಸ್ಥಿತಿ ತಲೆದೋರಿತ್ತಲ್ಲದೇ, ಕೆಲವರಲ್ಲಿ ಖಿನ್ನತೆ, ಆತ್ಮಹತ್ಯೆಗೆ ಯತ್ನಿಸುವಂತಹ ಮನೋಭಾವ ಕೂಡ ಇತ್ತು. ಇದಕ್ಕೆಲ್ಲ ಕಾರಣ ವಂಶವಾಹಿನಿಯಲ್ಲಿನ ತೊಂದರೆ ಎಂಬುದು ಅಮೆರಿಕದ ನ್ಯೂರೋಸೈಕಾಲಜಿಸ್ಟ್‌ ನ್ಯಾನ್ಸಿ ವೆಕ್ಸ್‌ಲೆರ್‌ ಅವರ ಸಂಶೋಧನೆ ದೃಢಪಡಿಸಿತು. ಇದೇ ಹಂಟಿಂಗ್ಟನ್‌ ಕಾಯಿಲೆ.

ಪಾರ್ಕಿನ್ಸನ್‌, ಮರೆವಿನ ಕಾಯಿಲೆ ಡೆಮೆನ್ಶಿಯ ಹಾಗೂ ಖಿನ್ನತೆ ಈ ಎಲ್ಲದರ ಮಿಶ್ರಣವೇ ಈ ಕಾಯಿಲೆಯ ಲಕ್ಷಣ.

ಈ ಅನುವಂಶೀಯ ಕಾಯಿಲೆಯಲ್ಲಿ ಮೆದುಳಿನಲ್ಲಿ ಜೀವಕೋಶಗಳು ನಾಶವಾಗುತ್ತ ಹೋಗುತ್ತವೆ. ಇದರಿಂದ ವ್ಯಕ್ತಿಯಲ್ಲಿ ಚಲನಶೀಲತೆ ಕುಂದುವುದಲ್ಲದೇ, ಆಲೋಚನಾಶಕ್ತಿ ಕೂಡ ಕ್ಷೀಣಿಸುತ್ತದೆ. ಮಾನಸಿಕ ಏರುಪೇರು ಕಾಣಿಸಿಕೊಳ್ಳುತ್ತದೆ.

‘ಈ ಕಾಯಿಲೆ 30–40 ರ ವಯಸ್ಸಿನಲ್ಲಿ ಕಾಣಿಸಿಕೊಳ್ಳಬಹುದು. ಎರಡು ವರ್ಷದ ಮಗುವಿನಲ್ಲೂ ಇರಬಹುದು. ಕಾಯಿಲೆ ವಾಸಿ ಮಾಡಲು ಸದ್ಯಕ್ಕೆ ಯಾವುದೇ ಔಷಧಿ ಇಲ್ಲದಿರುವುದರಿಂದ ಜೀವಿತಾವಧಿ ಕಡಿಮೆಯಾಗಬಹುದು. ಆದರೆ ನಿರಂತರ ಹಾಗೂ ಸಮಗ್ರ ಚಿಕಿತ್ಸಾ ಕ್ರಮಗಳಿಂದ ಲಕ್ಷಣಗಳನ್ನು ಕಡಿಮೆ ಮಾಡಬಹುದು’ ಎನ್ನುತ್ತಾರೆ ಬೆಂಗಳೂರಿನ ವಿಕ್ರಂ ಆಸ್ಪತ್ರೆಯ ಪಾರ್ಕಿನ್ಸನ್‌ ಕಾಯಿಲೆ ಹಾಗೂ ಚಲನಶೀಲತೆ ಸಮಸ್ಯೆಯ ತಜ್ಞ ಡಾ. ಪ್ರಶಾಂತ್‌ ಎಲ್‌. ಕೆ.

ಲಕ್ಷಣಗಳು

ಹಂಟಿಂಗ್ಟನ್‌ ಕಾಯಿಲೆಯಲ್ಲಿ ಚಲನಶೀಲತೆ, ಆಲೋಚನಾಶಕ್ತಿ ಹಾಗೂ ಮಾನಸಿಕ ಸಮಸ್ಯೆಗಳು ತಲೆದೋರುತ್ತವೆ. ಲಕ್ಷಣಗಳು ಹಲವಾರು. ಅಂಗಾಂಗಗಳನ್ನು ತಿರುಗಿಸಲು ಕಷ್ಟವಾಗುತ್ತದೆ. ಸ್ನಾಯುಗಳು ಹಿಡಿದುಕೊಳ್ಳಬಹುದು. ಕಣ್ಣುಗಳ ಚಲನೆಯೂ ನಿಧಾನವಾಗಬಹುದು. ಸಮತೋಲನ ತಪ್ಪಬಹುದು. ಓಡಾಡುವ, ಕುಳಿತುಕೊಳ್ಳುವ ಭಂಗಿಯಲ್ಲಿ ಬದಲಾವಣೆ ಕಾಣಿಸಿಕೊಳ್ಳುತ್ತದೆ. ಮಾತನಾಡಲು ಹಾಗೂ ಆಹಾರವನ್ನು ನುಂಗಲು ಕಷ್ಟವಾಗುತ್ತದೆ. ನಿಯಂತ್ರಣವಿಲ್ಲದೇ ಕೈ, ಕಾಲುಗಳು, ತಲೆ ಅಲ್ಲಾಡಬಹುದು.

‘ನಿತ್ಯದ ಕೆಲಸಗಳನ್ನು ಮಾಡಲು, ಸಂವಹನ ನಡೆಸಲು ಕೂಡ ಕಷ್ಟವಾಗುತ್ತದೆ. ವ್ಯಕ್ತಿ ಎಲ್ಲದಕ್ಕೂ ಇನ್ನೊಬ್ಬರನ್ನು ಅವಲಂಬಿಸಬೇಕಾಗುತ್ತದೆ’ ಎನ್ನುತ್ತಾರೆ ವಿಕ್ರಂ ಆಸ್ಪತ್ರೆಯ ನ್ಯೂರೋ ಸೈಕಿಯಾಟ್ರಿಸ್ಟ್‌ ಕನ್ಸಲ್ಟೆಂಟ್‌ ಡಾ.ಆನಂದ್‌ ಜಯರಾಮನ್‌.

ಬೌದ್ಧಿಕಶಕ್ತಿ ಬಳಸಿ ಮಾಡುವಂತಹ ಕೆಲಸಗಳಲ್ಲೂ ರೋಗಿ ಹಿಂದೆ ಬೀಳಬಹುದು. ಒಂದೇ ಬಗೆಯ ಆಲೋಚನೆ, ನಡವಳಿಕೆ ಹೆಚ್ಚು ಸಮಯ ಇರದೇ ವಿಚಿತ್ರವಾಗಿ ಆಡಬಹುದು. ಮಾನಸಿಕ ಏರುಪೇರನ್ನು ನಿಯಂತ್ರಿಸಲು ಕಷ್ಟವಾಗುತ್ತದೆ. ಒಮ್ಮೆಲೇ ರೇಗಬಹುದು, ಹೆಚ್ಚು ಆಲೋಚನೆ ಮಾಡದೆ ನಡವಳಿಕೆ ವಿಚಿತ್ರವಾಗಿರುತ್ತದೆ. ಲೈಂಗಿಕವಾಗಿಯೂ ನಿಯಂತ್ರಣವಿರುವುದಿಲ್ಲ. ಹೊಸ ಮಾಹಿತಿಯನ್ನು ಅರ್ಥ ಮಾಡಿಕೊಳ್ಳಲು ಆಗುವುದಿಲ್ಲ. ಬೇರೆಯವರ ಮುಖದಲ್ಲಿನ ಭಾವನೆಗಳನ್ನು ಅರ್ಥ ಮಾಡಿಕೊಳ್ಳಲು ವಿಫಲರಾಗುತ್ತಾರೆ. ಯಾವುದೇ ಪ್ರಶ್ನೆ ಅರ್ಥ ಮಾಡಿಕೊಂಡು ಉತ್ತರಿಸಲು ಬಹಳಷ್ಟು ಸಮಯ ತೆಗೆದುಕೊಳ್ಳುತ್ತಾರೆ.

‘ಹಂಟಿಂಗ್ಟನ್‌ ಕಾಯಿಲೆಯ ಸಾಮಾನ್ಯ ಮಾನಸಿಕ ಲಕ್ಷಣವೆಂದರೆ ಖಿನ್ನತೆ. ಮೆದುಳಿಗೆ ಉಂಟಾದ ಹಾನಿಯಿಂದ ಇದು ಸಂಭವಿಸುತ್ತದೆ. ದುಃಖದ ಭಾವನೆ, ಸಾಮಾಜಿಕವಾಗಿ ಬೆರೆಯದೇ ಇರುವುದು, ನಿದ್ರಾಹೀನತೆ, ಸುಸ್ತು, ಆತ್ಮಹತ್ಯೆಯ ಆಲೋಚನೆ ಸಾಮಾನ್ಯ’ ಎನ್ನುತ್ತಾರೆ ಡಾ.ಆನಂದ್‌

ಇದರ ಜೊತೆಗೆ ಪದೇ ಪದೇ ಒಂದೇ ರೀತಿಯ ನಡವಳಿಕೆ, ಆಲೋಚನೆ ಬರುವಂತಹ ‘ಆಬ್ಸೆಸ್ಸಿವ್‌ ಕಂಪಲ್ಸಿವ್‌’ ಸಮಸ್ಯೆ, ಅತಿ ಚಟುವಟಿಕೆ, ಆತ್ಮವಿಶ್ವಾಸ ಕುಗ್ಗುವುದು ಮೊದಲಾದ ಲಕ್ಷಣಗಳೂ ತಲೆದೋರುತ್ತವೆ. ಕಾಯಿಲೆ ಹೆಚ್ಚಾದಂತೆ ತೂಕವೂ ಕಮ್ಮಿಯಾಗುತ್ತದೆ.

ಗರ್ಭದಲ್ಲೇ ಪತ್ತೆ ಸಾಧ್ಯ

‘ದೋಷವಿರುವ ವಂಶವಾಹಿನಿಯಿಂದ ಬರುವ ಈ ಕಾಯಿಲೆಯನ್ನು ಗರ್ಭದಲ್ಲಿರುವ ಭ್ರೂಣದಲ್ಲಿಯೇ ಪತ್ತೆ ಹಚ್ಚಬಹುದು. ಇದು ಡಿಎನ್‌ಎ ಪರೀಕ್ಷೆಯಿಂದ ಸಾಧ್ಯ’ ಎನ್ನುವ ಡಾ.ಪ್ರಶಾಂತ್‌, ಚಲನೆಯಲ್ಲಿ ಬದಲಾವಣೆ, ಮಾನಸಿಕ ಸ್ಥಿತಿಯಲ್ಲಿ ಏರುಪೇರು ಕಂಡುಬಂದರೆ ವೈದ್ಯರನ್ನು ಭೇಟಿ ಮಾಡಿ’ ಎನ್ನುತ್ತಾರೆ.

ಇದನ್ನೂ ಓದಿ: ಕ್ರಿಯಾಶೀಲತೆಗೆ ರಹದಾರಿ ಹಠಯೋಗ

ಮಗುವಿನ ಲಿಂಗವನ್ನು ನಿರ್ಧರಿಸುವ ಕ್ರೊಮೋಸೋಮ್‌ಗಳಲ್ಲಿ ತಂದೆ– ತಾಯಿಯಿಂದ ತಲಾ ಒಂದೊಂದು ಕ್ರೊಮೋಸೋಮ್‌ ಬಂದಿರುತ್ತದೆ. ತಂದೆ ಅಥವಾ ತಾಯಿಯ ದೋಷ ಇರುವ ಕ್ರೊಮೋಸೋಮ್‌ ಮಗುವಿಗೆ ಬಂದರೆ ಈ ಕಾಯಿಲೆ ಬರಬಹುದು. ಸಂಭವನೀಯತೆ 50:50 ಇರುತ್ತದೆ.

ಕಾಯಿಲೆ ಲಕ್ಷಣಕ್ಕೆ ಚಿಕಿತ್ಸೆ

ಮಕ್ಕಳಲ್ಲಿ ಲಕ್ಷಣಗಳು ಬೇಗ ಗೋಚರಿಸಿದರೆ ಶೀಘ್ರವಾಗಿ ಕಾಯಿಲೆ ಬೆಳವಣಿಗೆಯಾಗಿ ಸಾವು ಸಂಭವಿಸಬಹುದು. ಆದರೆ ಕಾಯಿಲೆ ಲಕ್ಷಣಗಳನ್ನು ಕಡಿಮೆ ಮಾಡಲು ಸಮಗ್ರ ಚಿಕಿತ್ಸೆಯ ಅಗತ್ಯವಿದೆ. ಅಂದರೆ ಚಲನಶೀಲತೆ ಸಮಸ್ಯೆ ಕಡಿಮೆ ಮಾಡಲು ತಜ್ಞರು, ಮಾನಸಿಕ ಸಮಸ್ಯೆಗೆ ಸೈಕಿಯಾಟ್ರಿಸ್ಟ್‌ ಶ್ರಮಿಸಬೇಕಾಗುತ್ತದೆ. ನಿತ್ಯದ ಕೆಲಸಗಳನ್ನು ಮಾಡುವಂತಾಗಲು ಥೆರಪಿಯ ಅಗತ್ಯವಿದೆ. ವ್ಯಕ್ತಿಯ ಸುರಕ್ಷತೆ ಬಗ್ಗೆ ಕುಟುಂಬದವರಲ್ಲಿ ಜಾಗೃತಿ ಮೂಡಿಸಬೇಕಾಗುತ್ತದೆ. ಸಂವಹನ ಸಮಸ್ಯೆ, ಆಹಾರ ಸೇವಿಸುವಾಗ ನುಂಗಲು ಕಷ್ಟವಾದರೆ, ಭಾವನಾತ್ಮಕ ಸಮಸ್ಯೆಗೆ ಎಲ್ಲದರ ಬಗ್ಗೆಯೂ ಆಸ್ಥೆ ವಹಿಸಬೇಕಾಗುತ್ತದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು