ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏನಾದ್ರೂ ಕೇಳ್ಬೋದು: ನಕಾರಾತ್ಮಕ ಚಿಂತನೆಗಳು ನಮ್ಮ ಶತ್ರುಗಳೇ?

Last Updated 18 ಡಿಸೆಂಬರ್ 2020, 19:31 IST
ಅಕ್ಷರ ಗಾತ್ರ

ನೆಗೆಟಿವ್‌ ವಿಚಾರಗಳು ಬರುವುದರಿಂದ ನನಗೆ ಮಾನಸಿಕ ಆರೋಗ್ಯ ತುಂಬಾ ಹದಗೆಟ್ಟಿದೆ. ಉತ್ತಮ ಸಲಹೆ ಕೊಡಿ.
–ಸಂಜಯ್‌, ಊರಿನ ಹೆಸರಿಲ್ಲ.

*
ಪಿಎಸ್‌ಐ ಆಗುವ ಆಸೆಯಿದೆ. ಓದುವಾಗ ಕೆಟ್ಟ ಆಲೋಚನೆ ಬಂದು ಓದಿರುವುದು ಮರೆತುಹೋಗಿ ಭಯವಾಗುತ್ತದೆ. ಸರಿಯಾದ ಮಾರ್ಗ ತಿಳಿಸಿ.
–ರವಿ, ಊರಿನ ಹೆಸರಿಲ್ಲ.

*
ಸರ್ಕಾರೀ ಕೆಲಸಕ್ಕಾಗಿ ಓದುತ್ತಿದ್ದೇನೆ. ನಕರಾತ್ಮಕ ಚಿಂತನೆಗಳು ಕಾಡುತ್ತಿವೆ. ವಯಸ್ಸು ಆಗಿರುವುದರಿಂದ ಮದುವೆಯ ಚಿಂತೆ ಕಾಡುತ್ತಿದೆ. ಪರಿಹಾರ ತಿಳಿಸಿ.
–ಹೆಸರು, ಊರು ತಿಳಿಸಿಲ್ಲ.

*
ಮನಸ್ಸಿನ ತುಂಬಾ ಕೆಟ್ಟ ಯೋಚನೆಗಳು ಬಂದು ದೇವರಿಗೆ ಕೈಮುಗಿಯುವುದಕ್ಕೆ ಆಗುವುದಿಲ್ಲ. ದೇವರ ಬಗೆಗೂ ಕೆಟ್ಟ ಯೋಚನೆಗಳು, ದುಗುಡ ಮತ್ತು ಭಯ. ಸ್ಪರ್ಧಾತ್ಮಕ ಪರೀಕ್ಷೆಗೆ ಓದುವುದಕ್ಕೆ ಆಗುತ್ತಿಲ್ಲ. ಪರಿಹಾರ ತಿಳಿಸಿ.
–ಸಂತೋಷ್‌, ಊರಿನ ಹೆಸರಿಲ್ಲ.

ನಕಾರಾತ್ಮಕ ಚಿಂತನೆಗಳನ್ನು ಮನಸ್ಸಿನಿಂದ ತೆಗೆದುಹಾಕಬೇಕು ಎಂದು ಪ್ರಯತ್ನಿಸುವವರೆಲ್ಲಾ ಒಂದು ಚಕ್ರವ್ಯೂಹದಲ್ಲಿ ಒದ್ದಾಡುತ್ತಿರುತ್ತಾರೆ. ನಕರಾತ್ಮಕ ಚಿಂತನೆಗಳು ನಿಮ್ಮನ್ನು ಹತಾಶೆಗೆ ತಳ್ಳುತ್ತವೆ. ಹೊರತಳ್ಳಲು ಪ್ರಯತ್ನಿಸಿದಾಗ ಅವುಗಳಿಗೆ ಅನಗತ್ಯವಾದ ಪ್ರಾಮುಖ್ಯತೆ ಸಿಕ್ಕು ಅವು ಮತ್ತೆಮತ್ತೆ ಹಿಂತಿರುಗುತ್ತವೆ. ಹಾಗಾಗಿ ನಿಮ್ಮ ಹತಾಶೆ ಇನ್ನೂ ಹೆಚ್ಚಾಗುತ್ತದೆ. ನಕರಾತ್ಮಕ ಚಿಂತನೆಯಿಂದ ಹತಾಶೆ, ಹತಾಶೆಯಿಂದ ಹೆಚ್ಚುವ ನಕರಾತ್ಮಕ ಚಿಂತನೆ ಎನ್ನುವ ಚಕ್ರವ್ಯೂಹಕ್ಕೆ ಸಿಲುಕಿಕೊಳ್ಳುತ್ತೇವೆ.

ನಕರಾತ್ಮಕ ಚಿಂತನೆಗಳು ನಮ್ಮ ಶಕ್ತಿ ಸಾಮರ್ಥ್ಯಗಳನ್ನು ಕುರಿತಾಗಿರುತ್ತದೆ. ನನಗೆ ಇದು ಸಾಧ್ಯವಾಗಬಹುದೇ? ಸಾಧ್ಯವಾಗದಿದ್ದರೆ ನಾನು ಅವಮಾನಿತವಾಗಬಹುದೇ? ನನ್ನ ಭವಿಷ್ಯದಲ್ಲಿ ಏನು ಕಾದಿರಬಹುದು? ನನಗೊಂದು ಒಳ್ಳೆಯ ಬದುಕು, ಪ್ರೀತಿ, ಆತ್ಮೀಯತೆ ಸಿಗಬಹುದೇ? ಇಂತಹ ಪ್ರಶ್ನೆಗಳಿಗೆ ತಕ್ಷಣಕ್ಕೆ ಉತ್ತರವಿಲ್ಲವೆಂದು ಬುದ್ಧಿಗೆ ಹೊಳೆದರೂ ನಿಮ್ಮ ಕಸಿವಿಸಿಗಳೇನೂ ಕಡಿಮೆಯಾಗುವುದಿಲ್ಲ. ಹಾಗಿದ್ದರೆ ಎಲ್ಲಿದೆ ಇಂತಹ ಚಕ್ರವ್ಯೂಹದಿಂದ ಹೊರಬರುವ ದಾರಿ?

ನೀವಂದುಕೊಂಡಂತೆ ನಕಾರಾತ್ಮಕ ಚಿಂತನೆಗಳು ತಕ್ಷಣ ಹೊಡೆದೋಡಿಸಬೇಕಾದ ಶತ್ರುಗಳಲ್ಲ. ನಿಮಗೆಲ್ಲಾ ತೊಂದರೆ ಕೊಡುತ್ತಿರುವುದು ನಕಾರಾತ್ಮಕ ಯೋಚನೆಗಳಿಗಿಂತ ಹೆಚ್ಚಾಗಿ ಅವುಗಳಿಂದ ಹೊರಬರಲಾಗದ ಹತಾಶೆ. ಇಂತಹ ಯೋಚನೆಗಳು ನಿಮ್ಮ ಬಗೆಗೆ ನಿಮ್ಮ ಮನಸ್ಸಿನಲ್ಲಿಯೇ ಇರುವ ಹಿಂಜರಿಕೆಗಳು, ಅನುಮಾನಗಳ ಬಗೆಗೆ ತಿಳಿಸಲು ಪ್ರಯತ್ನ ಮಾಡುತ್ತಿರುವ ಉಪಕಾರಿಗಳು. ಹಾಗಾಗಿ ಅಂತಹ ಯೋಚನೆಗಳನ್ನು ತಕ್ಷಣ ಹೊರತಳ್ಳದೆ ಅವುಗಳ ಸಂದೇಶಗಳನ್ನು ಗಮನಿಸಲು ಪ್ರಯತ್ನಿಸಿ.

ಮೊದಮೊದಲು ಇದು ಬಹಳ ಕಷ್ಟಕರವಾಗಿತ್ತದೆ. ಇಂತಹ ಯೋಚನೆಗಳು ಬಂದ ಕೂಡಲೇ ಬಿಗಿಯಾಗುತ್ತಿರುವ ನಿಮ್ಮ ದೇಹದ ಅಂಗಾಂಗಗಳನ್ನು ಗಮನಿಸಿ. ಸ್ವಲ್ಪ ದೀರ್ಘವಾಗಿ ಉಸಿರಾಡುತ್ತಾ ಅಂಗಾಂಗಗಳನ್ನು ಸಡಿಲಬಿಡಿ. ನಂತರ ಈ ಯೋಚನೆಗಳು ನಿಮ್ಮ ಬಗೆಗೆ ಏನನ್ನು ಹೇಳುತ್ತಿವೆ ಎನ್ನುವುದನ್ನು ಪಟ್ಟಿಮಾಡಿಕೊಳ್ಳಿ. ಒಂದೊಂದು ಯೋಚನೆಗಳನ್ನು ಕುರಿತು ಇದು ನಿಮ್ಮೊಳಗೆ ಸೇರಿಕೊಳ್ಳಲು ಕಾರಣವಾದ ಬಾಲ್ಯದ ಘಟನೆಗಳೇನಿರಬಹುದು ಎಂದು ನೆನಪುಮಾಡಿಕೊಳ್ಳಿ. ನಿಮ್ಮೊಳಗಿರುವ ಮಗು ಬಾಲ್ಯದ ಆ ನೋವನ್ನು ಈಗಲೂ ಅನುಭವಿಸುತ್ತಿರುತ್ತದೆ. ಅಂತಹ ನೋವನ್ನು ಈಗಲೂ ಅನುಭವಿಸಿ ದುಃಖ, ಕೋಪ ಮುಂತಾದ ಭಾವನೆಗಳನ್ನು ಏಕಾಂತದಲ್ಲಿ ಹೊರಹಾಕಿ. ನಂತರ ಬಾಲ್ಯದ ಅಂತಹ ಘಟನೆಗಳನ್ನು ಇವತ್ತಿನ ಮನಸ್ಥಿತಿಯಲ್ಲಿ ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ.

ಉದಾಹರಣೆಗೆ ಪರೀಕ್ಷೆಯಲ್ಲಿ ನಿರೀಕ್ಷಿತ ಫಲಿತಾಂಶ ಬರದಿದ್ದರೆ ಎನ್ನುವುದು ನಿಮ್ಮನ್ನು ಕಾಡುತ್ತಿದ್ದರೆ ನಿಮ್ಮ ಸಾಮರ್ಥ್ಯದ ಬಗೆಗೆ ಹಿಂಜರಿಕೆಯಿದೆ ಎಂದಾಯಿತು. ಇದರ ಬಾಲ್ಯದ ಹಿನ್ನೆಲೆಯನ್ನು ಪರೀಕ್ಷೆಮಾಡಿ. ಜೊತೆಗೆ ಯಾವ ವಿಷಯಗಳಲ್ಲಿ ನನಗೆ ಸಾಮರ್ಥ್ಯದ ಕೊರತೆಯಿದೆ? ಅದನ್ನು ಗಳಿಸುವುದು ಹೇಗೆ? ಎನ್ನುವ ಕುರಿತಾಗಿಯೂ ನಿಮ್ಮ ಪ್ರಯತ್ನವನ್ನು ಶುರುಮಾಡಿದಾಗ ನೀವು ಕ್ರಿಯಾಶೀಲರಾಗಬಹುದು.

ಇಷ್ಟೆಲ್ಲಾ ಮಾಡಿದ ಮೇಲೂ ನಕಾರಾತ್ಮಕ ಯೋಚನೆಗಳು ನಿಮ್ಮನ್ನು ಕಾಡಬಹುದು. ಆದರೆ ಅವುಗಳು ಪ್ರಭಾವ ಕಡಿಮೆಯಾಗಿರುತ್ತದೆ. ಕೆಟ್ಟ ಯೋಚನೆಗಳನ್ನು ಓಡಿಸುವ ಪ್ರಯತ್ನದಲ್ಲಿ ಹತಾಶರಾಗುವ ಬದಲು ಅವು ಮನುಷ್ಯ ಸಹಜವೆಂದು ಒಪ್ಪಿಕೊಂಡು ಅವುಗಳಿಗೆ ನೀವು ನೀಡುತ್ತಿರುವ ಪ್ರಾಮುಖ್ಯತೆಯನ್ನು ಕಡಿಮೆಮಾಡಿ. ನಿಮ್ಮನ್ನು ಕಾಡುತ್ತಿರುವುದು ಕೆಟ್ಟ ಯೋಚನೆಗಳಲ್ಲ, ಅವುಗಳ ಬಗೆಗಿರುವ ತಪ್ಪುತಿಳಿವಳಿಕೆಗಳು.

* 26ರ ಯುವಕ. ಪಿಡಬ್ಲ್ಯುಡಿ ಎಂಜಿನಿಯರ್‌ ಪರೀಕ್ಷೆಗೆ ಓದುತ್ತಿದ್ದೇನೆ. ಪ್ರೀತಿಸುತ್ತಿರುವ ಹುಡುಗಿ ಸಿಗುತ್ತಾಳೋ ಇಲ್ಲವೋ ಎನ್ನುವ ಭಯ ಕಾಡುತ್ತಿದೆ. ಅವಳನ್ನು ಮರೆಯಬೇಕೆಂದುಕೊಂಡರೂ ಮತ್ತೆಮತ್ತೆ ನೆನಪಾಗುತ್ತಿದೆ. ಇದರಿಂದ ಓದಲಾಗುತ್ತಿಲ್ಲ. ಪರಿಹಾರ ತಿಳಿಸಿ.
–ಉಮಾಮಹೇಶ್‌, ಊರಿನ ಹೆಸರಿಲ್ಲ.

ಹುಡುಗಿಗೂ ನಿಮ್ಮ ಬಗೆಗೆ ಪ್ರೀತಿ ಇದೆಯೇ ಎನ್ನುವುದು ಪತ್ರದಿಂದ ಸ್ಪಷ್ಟವಾಗುತ್ತಿಲ್ಲ. ಒಮ್ಮುಖ ಪ್ರೀತಿಯಾಗಿದ್ದರೆ ಮೊದಲು ಪ್ರೀತಿಯನ್ನು ವ್ಯಕ್ತಪಡಿಸಿ. ನೀವಿಬ್ಬರೂ ಈಗಲೂ ಸಂಪರ್ಕದಲ್ಲಿರುತ್ತೀರಿ ಎಂದಾದರೆ ನಿಮ್ಮ ಆತಂಕಗಳ ಬಗೆಗೆ ಅವರೊಂದಿಗೆ ಮಾತನಾಡಿದ್ದೀರಾ? ಅವರು ಕೊಡುವ ಭರವಸೆ ನಿಮಗೆ ಸಮಾಧಾನ ತರುತ್ತಿಲ್ಲವೇ? ಹಾಗಿದ್ದರೆ ಸೋಲುವುದು ಅಥವಾ ಕಳೆದುಕೊಳ್ಳುವುದಕ್ಕೆ ನಿಮ್ಮಲ್ಲಿ ಬಹಳ ಹಿಂಜರಿಕೆಯಿಂದೆ. ಮುದೊಂದು ದಿನ ಕಳೆದುಕೊಳ್ಳಬಹುದೇ ಎನ್ನುವುದು ನಮ್ಮೆಲ್ಲರ ಮಾನವ ಸಹಜ ಆತಂಕ. ಇದನ್ನು ನಿಭಾಯಿಸಲಾಗದೆ ಹುಡುಗಿಯನ್ನು ಮರೆಯಲು ಪ್ರಯತ್ನಿಸಿ ಹತಾಶರಾಗುತ್ತಿದ್ದೀರಿ. ಪ್ರೀತಿಯನ್ನು ಆನಂದಿಸುತ್ತಲೇ ಕಳೆದುಕೊಳ್ಳುವ ಆತಂಕವನ್ನು ಸಹಜವೆಂದು ಒಪ್ಪಿಕೊಳ್ಳಿ. ಅಗತ್ಯವೆನಿಸಿದರೆ ಮನೋಚಿಕಿತ್ಸಕರನ್ನು ಭೇಟಿಯಾಗಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT