ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದಲ್ಲಿ ಕೋವಿಡ್ 2ನೇ ಅಲೆಗೆ ಎವೈ 4 ರೂಪಾಂತರಿ ಕಾರಣ: ಅಧ್ಯಯನದಲ್ಲಿ ಪತ್ತೆ

Last Updated 28 ಆಗಸ್ಟ್ 2021, 2:58 IST
ಅಕ್ಷರ ಗಾತ್ರ

ಬೆಂಗಳೂರು: ಎವೈ 4 ಎಂದು ಕರೆಯಲ್ಪಡುವ ಡೆಲ್ಟಾ ರೂಪಾಂತರದ ಉಪರೂಪಾಂತರವು ಕರ್ನಾಟಕದಲ್ಲಿ ಜೂನ್ ಮತ್ತು ಜುಲೈ ತಿಂಗಳಕೋವಿಡ್ -19 ಮಾದರಿಗಳಲ್ಲಿ ಪ್ರಬಲವಾದ ರೂಪಾಂತರವೆಂದು ಕಂಡುಬಂದಿದೆ ಎಂದು ಸಂಶೋಧಕರು ಹೇಳಿದ್ದಾರೆ.

ಅಧ್ಯಯನಕ್ಕೆ ಬಳಸಿದ 523 ಸೀಕ್ವೆನ್ಸ್‌ಗಳ ಪೈಕಿ ಶೇಕಡಾ 41.1(215)ರಲ್ಲಿ ಎವೈ 4 ಕಂಡುಬಂದಿದೆ. ಇದು ಮೂಲ ಡೆಲ್ಟಾ (210 ಪ್ರಕರಣ, ಶೇಕಡಾ 40.2) ರೂಪಾಂತರವನ್ನು ಹಿಂದಿಕ್ಕಿ ರಾಜ್ಯದಲ್ಲಿ ಮಾರಕ ಎರಡನೇ ಅಲೆಗೆ ಕಾರಣವಾಗಿತ್ತು ಎಂದು ಅಧ್ಯಯನಕಾರರು ಹೇಳಿದ್ದಾರೆ. ಎವೈ.12 ರೂಪಾಂತರ (72 ಪ್ರಕರಣ, ಶೇಕಡಾ 13.8) ನಂತರದ ಸ್ಥಾನದಲ್ಲಿದೆ.

ಜಿನೋಮಿಕ್ ವಿಜ್ಞಾನಿಗಳ ಪ್ರಕಾರ, ಎವೈ.4 ಬ್ರಿಟನ್‌ನಿಂದ ಬಂದಿದ್ದು, ಎವೈ.12 ಇಸ್ರೇಲ್ ಮೂಲದ್ದಾಗಿದೆ. ಈ ಎರಡೂ ದೇಶಗಳಲ್ಲಿ ಶೇಕಡಾ 60ರಷ್ಟು ಜನಸಂಖ್ಯೆಗೆಸಂಪೂರ್ಣವಾಗಿ ಲಸಿಕೆ ಹಾಕಿದ್ದರೂ ಪ್ರಕರಣಗಳು ಹೆಚ್ಚುತ್ತಿವೆ.

ಜಿನೋಮಿಕ್ ಸೀಕ್ವೆನ್ಸಿಂಗ್ ಪರೀಕ್ಷೆಯನ್ನು ಐಎನ್‌ಎಸ್‌ಎಸಿಒಜಿ ( ಜಿನೋಮಿಕ್ಸ್ ಸಂಬಂಧಿತ ಭಾರತೀಯ ಸಾರ್ಸ್-ಕೋವ್-2 ಒಕ್ಕೂಟ)ದ ಪ್ರಯೋಗಾಲಯದಲ್ಲಿ ಮಾಡಲಾಗಿದೆ.

ಜಿಐಎಸ್‌ಅಐಡಿ(ಎಲ್ಲಾ ಸೋಕುಗಳ ಕುರಿತಾದ ಡೇಟಾವನ್ನು ಹಂಚಿಕೊಳ್ಳುವ ಜಾಗತಿಕ ಉಪಕ್ರಮ ) ವೆಬ್‌ ಸೈಟ್ ದತ್ತಾಂಶದ ಪ್ರಕಾರ, ಕರ್ನಾಟಕದಲ್ಲಿ ಈಗ ಡೆಲ್ಟಾ ಉಪ ರೂಪಾಂತರ ಬಿ.1.617.2.4 ಅಥವಾ ಎವೈ.4 ಪ್ರಬಲ ರೂಪಾಂತರವಾಗಿದೆ. ಇದನ್ನು ಪ್ರಪಂಚದಾದ್ಯಂತ ಅಧ್ಯಯನ ಮಾಡಲಾಗುತ್ತಿದೆ. ಡೆಲ್ಟಾ ರೂಪಾಂತರವು 13 ಉಪ ರೂಪಾಂತರಗಳನ್ನು ಹೊಂದಿದೆ. ಎವೈ 4 ಅವುಗಳಲ್ಲಿ ಒಂದಾಗಿದೆ’ಎಂದು ರಾಜ್ಯ ಕೋವಿಡ್ -19 ಜಿನೋಮಿಕ್ ಸರ್ವೆಲೆನ್ಸ್ ಸಮಿತಿಯ ಸದಸ್ಯರೂ ಆಗಿರುವ ಎಚ್‌ಸಿಜಿ ಸೆಂಟರ್ ಫಾರ್ ಅಕಾಡೆಮಿಕ್ಸ್ ಅಂಡ್ ರಿಸರ್ಚ್‌ನ ಅಸೋಸಿಯೇಟ್‌ನ ಡೀನ್ ಡಾ. ವಿಶಾಲ್ ರಾವ್ ಹೇಳಿದ್ದಾರೆ.

ಸಂಶೋಧಕರು ಕಳೆದ ಕೆಲವು ತಿಂಗಳುಗಳ ನಡುವಿನ ಬದಲಾವಣೆಗಳನ್ನು ಅಧ್ಯಯನ ಮಾಡಿದ್ದು, ಮಾರ್ಚ್ ಮತ್ತು ಏಪ್ರಿಲ್ ತಿಂಗಳಲ್ಲಿ ಕರ್ನಾಟಕದಲ್ಲಿ 715 ಸೀಕ್ವೆನ್ಸಿಂಗ್ ಪರೀಕ್ಷೆ ನಡೆಸಿದಾಗ ಶೇಕಡಾ 11(78)ರಷ್ಟು ಜನರಲ್ಲಿ ಮಾತ್ರ ಎವೈ 4 ಪತ್ತೆಯಾಗಿತ್ತು.

‘ಎವೈ.4 ತಳಿಯು ಅಮೆರಿಕ, ಇಸ್ರೇಲ್ ಮತ್ತು ಭಾರತದಲ್ಲಿ, ವಿಶೇಷವಾಗಿ ಕರ್ನಾಟಕದಲ್ಲಿ ಹೆಚ್ಚಾಗುತ್ತಿದೆ‘ ಎಂದು ರಾವ್ ಎಚ್ಚರಿಸಿದ್ದಾರೆ.

‘ನಾವು ಕೇರಳ ಮತ್ತು ಕರ್ನಾಟಕ ರಾಜ್ಯಗಳನ್ನು ಹೋಲಿಕೆ ಮಾಡಿದಾಗ, ಎರಡು ತಿಂಗಳಲ್ಲಿ ರಾಜ್ಯದಲ್ಲಿ ಇದು ಹೆಚ್ಚಾಗಿದೆ. ಕೇರಳದಲ್ಲಿ ಮೂಲ ಡೆಲ್ಟಾ ರೂಪಾಂತರಿ ತಳಿ ಪ್ರಬಲವಾಗಿದೆ’ ಎಂದು ಅವರು ತಿಳಿಸಿದ್ದಾರೆ.

ರಾವ್ ಪ್ರಕಾರ,‘ಕೆಲವು ರಾಜ್ಯಗಳು ನಿರ್ದಿಷ್ಟ ರೂಪಾಂತರಗಳ ಮೂಲಕ ಕೋವಿಡ್ ಸಂಖ್ಯೆಯಲ್ಲಿ ಏರಿಕೆ ಕಾಣುತ್ತಿವೆ’ಎಂಬುದು ಇದರರ್ಥ.

ರಾಜ್ಯದ ಸುಮಾರು 300 ಆಸ್ಪತ್ರೆಗೆ ದಾಖಲಾದ ಕೋವಿಡ್ ರೋಗಿಗಳ ಜೀನೋಮಿಕ್ ಸೀಕ್ವೆನ್ಸಿಂಗ್ ಫಲಿತಾಂಶಗಳು ಇಂದು ಲಭ್ಯವಾಗುವ ಸಾಧ್ಯತೆ ಇದ್ದು, ಈ ಬಗ್ಗೆ ಮತ್ತಷ್ಟು ಮಾಹಿತಿ ಸಿಗುವ ಸಾಧ್ಯತೆ ಇದೆ ಎಂದು ಸಂಶೋಧಕರು ಆಶಿಸುತ್ತಿದ್ದಾರೆ.

ಎವೈ 4 ಸೋಂಕಿತರ ಸಂಖ್ಯೆ ಹೆಚ್ಚಳ ಹಿನ್ನೆಲೆಯಲ್ಲಿ ಅಮೆರಿಕದಿಂದ ಬರುವ ಪ್ರಯಾಣಿಕರು 72 ಗಂಟೆಗಳಲ್ಲಿ ಪಡೆದ ಆರ್‌ಟಿ-ಪಿಸಿಆರ್ ನೆಗೆಟಿವ್ ಪ್ರಮಾಣಪತ್ರವನ್ನು ಹೊಂದಿರುವುದನ್ನು ಕಡ್ಡಾಯಗೊಳಿಸಲಾಗಿದೆ ಎಂದು ರಾಜ್ಯ ಆರೋಗ್ಯ ಆಯುಕ್ತ ಡಾ.ತ್ರಿಲೋಕ್ ಚಂದ್ರ ಹೇಳಿದ್ದಾರೆ.

‘ಎಲ್ಲಾ ಪ್ರಯಾಣಿಕರು ಪ್ರಮಾಣಪತ್ರವನ್ನು ಏರ್ ಸುವಿಧಾ ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡಬೇಕು. ಆಗ ಮಾತ್ರ, ವಿಮಾನಯಾನ ಸಂಸ್ಥೆಗಳು ಅವರಿಗೆ ವಿಮಾನ ಹತ್ತಲು ಅವಕಾಶ ನೀಡುತ್ತವೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT