ಮಂಗಳವಾರ, ಅಕ್ಟೋಬರ್ 27, 2020
22 °C
ಇದು ಕ್ಯಾನ್ಸರ್‌ ಜಾಗೃತಿಯ ಪ್ರಯತ್ನ

ಸ್ತನ ಕ್ಯಾನ್ಸರ್‌ ಜಾಗೃತಿಗೆ ‘ನೋ ಬ್ರಾ ದಿನ’!

ಸುಶೀಲಾ ಡೋಣೂರ Updated:

ಅಕ್ಷರ ಗಾತ್ರ : | |

ಅಕ್ಟೋಬರ್‌ 13, ನೋ ಬ್ರಾ ಡೇ. ಅಚ್ಚರಿ ಪಡಬೇಡಿ. ಅಮ್ಮನಿಗೊಂದು ದಿನ, ಅಪ್ಪನಿಗೊಂದು ದಿನ, ಪ್ರೇಮಿಗಳಿಗೂ ಒಂದು ದಿನ, ಮಹಿಳಾ ದಿನ, ಪುರುಷ ದಿನಗಳ ನಡುವೆ ಇದೇನಿದು ಬ್ರಾ ಧರಿಸದೇ ಇರುವುದಕ್ಕೂ ಒಂದು ದಿನವೇ!

ಹೌದು, ‘ನೋ ಬ್ರಾ ಡೇ’ ಸ್ತನ ಕ್ಯಾನ್ಸರ್ ವಿರುದ್ಧದ ಹೋರಾಟವನ್ನು ನೆನಪಿಸುವ ದಿನ, ಸ್ತನ ಕ್ಯಾನ್ಸರ್‌ ಬಗ್ಗೆ ಗೆಳತಿಯರಲ್ಲಿ ಜಾಗೃತಿ ಮೂಡಿಸುವ ದಿನ. ಕಾಲಕಾಲಕ್ಕೆ ಸ್ತನ ಪರೀಕ್ಷೆಗೆ/ತಪಾಸಣೆಗೆ ಒಳಗಾಗುತ್ತ, ಸ್ತನದಲ್ಲಿ ಆಗುವ ಸಣ್ಣಪುಟ್ಟ ವ್ಯತ್ಯಾಸದ ಬಗ್ಗೆ ಗಮನ ಹರಿಸುತ್ತ, ಯಾವುದೇ ವಿಲಕ್ಷಣ ಬದಲಾವಣೆ ಕಂಡುಬಂದಲ್ಲಿ ಯಾವ ಮುಜುಗುರವೂ ಇಲ್ಲದೆ ವೈದ್ಯರನ್ನು ಭೇಟಿ ಮಾಡಬೇಕಾದ ಅಗತ್ಯದ ಬಗ್ಗೆ ಮನವರಿಕೆ ಮಾಡುವ ದಿನ. ಸ್ತನ ಕ್ಯಾನ್ಸರ್‌ ತಟ್ಟಿ ಹೋದ ಪರಿಣಾಮ ಸ್ತನ ಕಳೆದುಕೊಂಡ ಗೆಳತಿಯರಿಗೆ ‘ನಿಮ್ಮೊಂದಿಗೆ ನಾವೂ ಇದ್ದೇವೆ’ ಎಂದು ಸಾಂತ್ವನ ಹೇಳುವ ದಿನ, ಈಗ ತಾನೆ ಹರೆಯಕ್ಕೆ ಕಾಲಿಡುವ ನಮ್ಮ ಕಿಶೋರಿಯರಿಗೆ ಸರಿಯಾದ ಬ್ರಾ ಆಯ್ಕೆ ಮಾಡುವ ಬಗ್ಗೆ ಕಿವಿಮಾತು ಹೇಳುವ ದಿನ.

ಸ್ತನ ಕ್ಯಾನ್ಸರ್ ಭಾರತದಲ್ಲಿ ಮಹಿಳೆಯರನ್ನು ಕಾಡುವ 2ನೇ ಮುಖ್ಯ ಕ್ಯಾನ್ಸರ್‌ ಪ್ರಕಾರ. ಇಲ್ಲಿ ಪ್ರತಿವರ್ಷ ಸುಮಾರು 1.6 ಲಕ್ಷ ಮಹಿಳೆಯರು ಸ್ತನ ಕ್ಯಾನ್ಸರ್‌ಗೆ ತುತ್ತಾಗುತ್ತಾರೆ ಎಂದು ಐಸಿಎಂಆರ್‌ ಅಂದಾಜಿಸಿದೆ. ಸ್ತನ ಕ್ಯಾನ್ಸರ್‌ನಿಂದ ಗುಣಮುಖರಾದವರು ಮತ್ತು ಅದರೊಂದಿಗೆ ಬದುಕುತ್ತಿರುವವರು ಎದುರಿಸುತ್ತಿರುವ ಸವಾಲುಗಳ ಬಗ್ಗೆ ಜಾಗೃತಿ ಮೂಡಿಸುವುದು ‘ನೋ ಬ್ರಾ ಡೇ’ಯ ಉದ್ದೇಶ. ಸ್ತನ ಕ್ಯಾನ್ಸರ್‌ ಒಂದು ದಿನ ಅಥವಾ ಒಂದಷ್ಟು ದಿನಗಳ ಹೋರಾಟವಲ್ಲ, ಇದು ನಿರಂತರ ಹೋರಾಟದೊಂದಿಗಿನ ಪಯಣ. ಈ ಪಯಣದಲ್ಲಿ ಅಂತವರ ಜೊತೆಗೆ ನಿಂತು ಮಾನಸಿಕ ಬೆಂಬಲ ನೀಡುವುದು ಎಲ್ಲರ ಕರ್ತವ್ಯ.

ಬ್ರಾ ಕಳಚಿಡುವುದರ ಉದ್ದೇಶ

ಸ್ತನ ಕ್ಯಾನ್ಸರ್‌ ಚಿಕಿತ್ಸೆಯ ಭಾಗವಾಗಿ ಕೆಲವು ಮಹಿಳೆಯರು ಒಂದು ಅಥವಾ ಎರಡೂ ಸ್ತನಗಳನ್ನು ಕಳೆದುಕೊಂಡಿರುತ್ತಾರೆ. ಕೆಲವರು ಈ ಅನಿವಾರ್ಯತೆಯನ್ನು ಒಪ್ಪಿಕೊಂಡು ಸಹಜವಾಗಿದ್ದರೆ, ಇನ್ನೂ ಕೆಲವರು ತಮ್ಮ ಹೆಣ್ತನವೇ ಮುಗಿದುಹೋಯಿತು ಎಂದು ಕೊರಗುತ್ತ, ಮಾನಸಿಕವಾಗಿ ಕುಗ್ಗುವುದೂ ಇದೆ. ಒಂದು ದಿನ ಬ್ರಾ ಧರಿಸದೇ ಕಳೆಯುವ ಮೂಲಕ ಅಂತಹ ಮಹಿಳೆಯರ ಮಾನಸಿಕ ಹೊರೆಯನ್ನು ಒಂದಿಷ್ಟು ಕಡಿಮೆ ಮಾಡಬಹುದು. ಅದಕ್ಕಾಗಿ ನೀವು ಇನ್ನೂ ಒಂದೆರಡು ಹೆಜ್ಜೆ ಮುಂದಿಡಬಹುದು.

-ಮೊದಲು ನಿಮ್ಮ ವೈದ್ಯರ ಬಳಿ ಹೋಗಿ ಸ್ತನ ಪರೀಕ್ಷೆ ಮಾಡಿಸಿಕೊಳ್ಳಿ.

-ನಿಮ್ಮ ಗೆಳತಿಯರಿಗೆ, ಅಮ್ಮ–ಚಿಕ್ಕಮ್ಮ–ದೊಡ್ಡಮ್ಮಂದಿರಿಗೆ, ಅಕ್ಕ–ತಂಗಿಯರಿಗೆ, ನಿಮ್ಮನೆಯ ಕೆಲಸದವಳಿಗೆ… ಹೀಗೆ ನೀವು ಯಾರಿಗೆಲ್ಲಾ ಎದುರಾಗುತ್ತೀರೊ ಅವರಿಗೆಲ್ಲಾ ಸ್ತನ ಪರೀಕ್ಷೆ ಮಾಡಿಸಿ ಅಥವಾ ಮಾಡಿಸಿಕೊಳ್ಳುವಂತೆ ತಿಳಿಸಿ.

-ಮನೆಮನೆಯ– ಮನಮನದ ಒಡನಾಡಿಯಾಗಿರುವ ಸಾಮಾಜಿಕ ಜಾಲತಾಣಗಳ ಮೂಲಕ ಜಾಗೃತಿ ಮೂಡಿಸಿ. ಸ್ತನ ಕ್ಯಾನ್ಸರ್‌ನಿಂದ ಸ್ತನ ಕಳೆದುಕೊಂಡವರ ಮುಂದಿರುವ ಆಯ್ಕೆಗಳ ಬಗ್ಗೆ ಮಾಹಿತಿಯನ್ನು ನಿಮ್ಮ ತಾಣಗಳಲ್ಲಿ ಹಂಚಿಕೊಳ್ಳಿ.

-ಸ್ತನ ಕ್ಯಾನ್ಸರ್‌ ಅನ್ನು ಜಯಿಸಿದ ಬಂಧುಗಳ–ಗೆಳತಿಯರ, ದಿಟ್ಟ ಮಹಿಳೆಯರ ಮಾಹಿತಿಯನ್ನು, ಜೀವನಗಾಥೆಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಿ.

ಇದನ್ನೇ ನೆಪವಾಗಿಟ್ಟುಕೊಂಡು ನಿಧಿ ಸಂಗ್ರಹಿಸಿ. ಅದನ್ನು ಬಳಸಿ ಸ್ತನ ಕ್ಯಾನ್ಸರ್‌ಗೆ ಗುರಿಯಾಗಿ ಚಿಕಿತ್ಸೆಗೆ ಹಣವಿಲ್ಲದೇ ಒದ್ದಾಡುವ ಬಡ ಮಹಿಳೆಯರಿಗೆ ಮರುಜೀವ ನೀಡಬಹುದು. ಸ್ತನ ಕ್ಯಾನ್ಸರ್ ಪೀಡಿತರ ಶ್ರೇಯೋಭಿವೃದ್ಧಿಗೆ ದುಡಿಯುವ ಚಾರಿಟಿಗಳಿಗೆ ಈ ಹಣವನ್ನು ನೀಡಬಹುದು.

ಸ್ತನ ಕ್ಯಾನ್ಸರ್‌ ಜೊತೆಗೇ ಆರೋಗ್ಯಕರ, ನೆಮ್ಮದಿಯ ಜೀವನ ಸಾಗಿಸುವುದು ಹೇಗೆ ಎನ್ನುವ ಬಗ್ಗೆ ಸ್ತನ ಕ್ಯಾನ್ಸರ್‌ ಇರುವ ಮಹಿಳೆಯರಿಗೆ ತಿಳಿಸಿ ಹೇಳಲು ಈ ದಿನವನ್ನು ಬಳಸಿಕೊಳ್ಳೋಣ. ಇದರಿಂದಾಗಿ ಮನೋಕ್ಷೋಭೆಯನ್ನು ಎದುರಿಸುವವರ ಪಕ್ಕದಲ್ಲಿ ನಿಂತು ‘ಹ್ಯಾಪಿ ನೋ ಬ್ರಾ ಡೇ’ ಎಂದು ಕಿವಿಯಲ್ಲಿ ಪಿಸುಗುಡುವ ಮೂಲಕ ಅವರ ಮುಖದಲ್ಲಿಯೂ ನೆಮ್ಮದಿಯ ಗೆರೆ ಮೂಡುವುದನ್ನು ನೋಡೋಣ. v

ಆಯ್ಕೆ ಹೀಗಿರಲಿ

ಸ್ತನ ಕ್ಯಾನ್ಸರ್‌ಗೂ ಬ್ರಾ ಧರಿಸುವುದಕ್ಕೂ ಏನೇನೂ ಸಂಬಂಧವಿಲ್ಲ ಎನ್ನುತ್ತಾರೆ ಸ್ತನ ಕ್ಯಾನ್ಸರ್‌ ತಜ್ಞೆ ಡಾ. ನಂದಾ ರಜನೀಶ್‌. ‘ಆದರೂ ನಿಮ್ಮ ಆರಾಮಕ್ಕಾಗಿ, ಅಂದಕ್ಕಾಗಿ, ಆತ್ಮವಿಶ್ವಾಸಕ್ಕಾಗಿ ನೀವು ಬ್ರಾ ಧರಿಸಬಹುದು. ಸ್ತನ ಕ್ಯಾನ್ಸರ್‌ ಚಿಕಿತ್ಸೆಯ ನಂತರ ಬ್ರಾ ಆರಿಸುವಾಗ ಕೆಲವು ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು’ ಎನ್ನುವ ಅವರು, ಇಲ್ಲಿ ಕೆಲವು ಟಿಪ್ಸ್‌ ನೀಡಿದ್ದಾರೆ.

-ಶಸ್ತ್ರಚಿಕಿತ್ಸೆಯ ನಂತರ ನಿಮ್ಮ ಬ್ರಾ ಅಳತೆ ಬದಲಾಗುವ ಸಾಧ್ಯತೆ ಇರುವುದರಿಂದ ನಿಮ್ಮ ಅಳತೆಯನ್ನು ಮತ್ತೊಮ್ಮೆ ಗುರುತಿಸಿಕೊಳ್ಳಿ.

-ಮ್ಯಾಸ್ಟೆಕ್ಟಮಿಗೆ ಒಳಗಾದವರಿಗಾಗಿಯೇ ವಿಶೇಷವಾಗಿ ತಯಾರಿಸಲಾದ ಸಿಲಿಕಾನ್‌ ಇಂಪ್ಲಾಂಟ್‌ಗಳು ಸಿಗುತ್ತವೆ. ಇವು ಬ್ರಾದೊಂದಿಗೆ ಬಾಹ್ಯವಾಗಿ ಧರಿಸಬಹುದಾದ ಇಂಪ್ಲಾಂಟ್‌ಗಳು. 

-ಮೃದುವಾದ ಕಾಟನ್‌ ಬಟ್ಟೆಗಳ ಲೇಯರ್‌ ಬ್ರಾಗಳನ್ನು ಆಯ್ಕೆ ಮಾಡಿ

-ವಿಶಾಲವಾದ ಅಂಡರ್‌ಬ್ಯಾಂಡ್ ಇರುವ, ಕಂಫರ್ಟ್‌ ನೀಡುವ ಬ್ರಾ ಇರಲಿ

-ಮುಂಭಾಗ ಮತ್ತು ಸೈಡ್‌ ಪ್ಯಾನಲ್‌ಗಳು ವಿಶಾಲವಾಗಿರಲಿ

-ಕಪ್‌ಗಳು ನಿಮ್ಮ ಮೂಲ ಸ್ತನದ ಗಾತ್ರದ ಪ್ರಕಾರ ಇರಲಿ

-ಹೆಚ್ಚಿನ ಕಂಫರ್ಟ್‌ಗಾಗಿ ಬ್ರಾ ಕುಶನ್‌ಗಳನ್ನು ಬಳಸಬಹುದು

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು