ಹೈ ರಿಸ್ಕ್‌ ಪ್ರೆಗ್ನೆನ್ಸಿಗೆ ಧೈರ್ಯವೇ ಮದ್ದು

7

ಹೈ ರಿಸ್ಕ್‌ ಪ್ರೆಗ್ನೆನ್ಸಿಗೆ ಧೈರ್ಯವೇ ಮದ್ದು

Published:
Updated:
Deccan Herald

ತಾಯ್ತನವೆಂಬುದು ಮಧುರ ಅನುಭವ. ಒಂಬತ್ತು ತಿಂಗಳು ಸುಸೂತ್ರವಾಗಿ ಕಳೆದು ಹೆರಿಗೆಯಾದರೆ ತಾಯ್ತನದ ಸುಖ ಇಮ್ಮಡಿಯಾಗುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ‘ಹೈ ರಿಸ್ಕ್‌ ಪ್ರೆಗ್ನೆನ್ಸಿ’ (ಗರ್ಭಧಾರಣೆಯಿಂದ ಹೆರಿಗೆಯವರೆಗೂ ಸೂಕ್ಷ್ಮ ಪ್ರಕೃತಿಯಿಂದ ಕೂಡಿರುವುದು) ಬಗ್ಗೆ ಹೆಚ್ಚಾಗಿ ಚರ್ಚೆ ನಡೆಯುತ್ತಿರುತ್ತದೆ.

ಅತ್ಯಾಧುನಿಕ ವೈದ್ಯಕೀಯ ಸೌಲಭ್ಯಗಳು ಲಭ್ಯವಿರುವ ಬೆಂಗಳೂರಿನಲ್ಲಿ ಇಂತಹ ಪ್ರಕರಣಗಳನ್ನು ನಿಭಾಯಿಸುವುದು ಸುಲಭವಾಗಿದೆ. ಆದರೆ ಬಾಗಲಕೋಟೆ, ಬಳ್ಳಾರಿ, ಬೀದರ್‌, ವಿಜಯಪುರ ಜಿಲ್ಲೆಗಳಲ್ಲಿ ಹೈ ರಿಸ್ಕ್‌ ಪ್ರೆಗ್ನೆನ್ಸಿ (ಎಚ್‌ಆರ್‌ಪಿ) ಪ್ರಕರಣಗಳು ಹೆಚ್ಚು ಸುದ್ದಿಯಾಗುತ್ತವೆ ಎನ್ನುತ್ತಾರೆ ನಗರದ ವೈದ್ಯರು. 

‘ಗರ್ಭಧಾರಣೆ ಅಥವಾ ಹೆರಿಗೆಯ ಸಂದರ್ಭದಲ್ಲಿ ತಾಯಿ ಮತ್ತು ಶಿಶುವಿನ ಮರಣ ತಪ್ಪಿಸಲು ಹಾಗೂ ತುರ್ತು ಸಂದರ್ಭಗಳಲ್ಲಿ ಗರ್ಭಿಣಿಯರಿಗೆ ಚಿಕಿತ್ಸೆ ನೀಡಲು ನಗರದ ಆಸ್ಪತ್ರೆಗಳಲ್ಲಿ ಆಧುನಿಕ ಸೌಲಭ್ಯಗಳಿವೆ. 10 ವರ್ಷಗಳ ಹಿಂದೆ ಅವಧಿಪೂರ್ವ ಜನನ ಪ್ರಕರಣಗಳಲ್ಲಿ ತಾಯಿ ಮತ್ತು ಮಗು ಇಬ್ಬರಲ್ಲಿ ಒಬ್ಬರನ್ನು ಬದುಕಿಸಬಹುದಾಗಿತ್ತು. ಈಗ ಇಬ್ಬರನ್ನೂ ಬದುಕಿಸಬಹುದು’ ಎನ್ನುತ್ತಾರೆ ರಿಚ್ಮಂಡ್‌ ಟೌನ್‌ನ ಫೋರ್ಟಿಸ್‌ ಲಾ ಫೆಮ್ಮೆ ಆಸ್ಪತ್ರೆಯ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞೆ ಡಾ. ಪ್ರತಿಮಾ ರೆಡ್ಡಿ.

‘ನಗರದಲ್ಲಿ ಶೇ 10ರಷ್ಟು ಎಚ್‌ಆರ್‌ಪಿ ಪ್ರಕರಣಗಳು ಕಂಡುಬರುತ್ತಿವೆ. ನಗರದ ಮಹಿಳೆಯರ ಆಧುನಿಕ ಜೀವನಶೈಲಿ, ಆಹಾರಪದ್ಧತಿ ಇದಕ್ಕೆ ಕಾರಣವಾಗಬಹುದು. ಉದ್ಯೋಗಸ್ಥ ಮಹಿಳೆಯರು ವೃತ್ತಿ ಬದುಕಿನ ಉನ್ನತಿಗೆ ಆದ್ಯತೆ ಕೊಡುತ್ತಾರೆ. ಅದು ಒಂದು ಹಂತಕ್ಕೆ ಬಂದ ಮೇಲೆ ಮದುವೆ, ಮಕ್ಕಳ ಬಗ್ಗೆ ಆಲೋಚಿಸುತ್ತಾರೆ. 35 ವರ್ಷದ ನಂತರ ತಾಯಿಯಾಗುವವರಿಗೆ ಗರ್ಭಾವಸ್ಥೆ ಅಥವಾ ಪ್ರಸವ ಸಂದರ್ಭದಲ್ಲಿ ಸಮಸ್ಯೆಗಳು ಸಹಜವಾಗಿ ಕಾಡುತ್ತವೆ. ಕೆಲವರು ಊಟ, ತಿಂಡಿಗೆ ಹೋಟೆಲ್‌, ರೆಡಿಮೇಡ್‌ ಆಹಾರಗಳನ್ನೇ ಆಶ್ರಯಿಸಿರುತ್ತಾರೆ. ಇದು ದೇಹತೂಕ ಹೆಚ್ಚಳಕ್ಕೆ ಕಾರಣವಾಗುತ್ತದೆ. ದೇಹತೂಕ ಜಾಸ್ತಿಯಿದ್ದ ಮಹಿಳೆ ಗರ್ಭ ಧರಿಸಿದಾಗ ಈ ಸಮಸ್ಯೆಗಳು ಕಾಡುತ್ತವೆ. ಹಾಗಾಗಿ ಮಹಿಳೆಯರು ವೃತ್ತಿಬದುಕಿನ ಜೊತೆಗೆ ಖಾಸಗಿ ಬದುಕಿನ ಭವಿಷ್ಯದ ಬಗ್ಗೆಯೂ ಆಲೋಚನೆ ಮಾಡಿದರೆ ಉತ್ತಮ’ ಎನ್ನುವುದು ಅವರ  ಮಾತು. 

ಇದಲ್ಲದೇ ಅಧಿಕ ರಕ್ತದೊತ್ತಡ, ಶ್ವಾಸಕೋಶ, ಕಿಡ್ನಿ, ಹೃದಯದ ತೊಂದರೆ, ಮಧುಮೇಹ, ಲೈಂಗಿಕ ಸೋಂಕು ಕಾಯಿಲೆಗಳಿಂದ ಬಳಲುತ್ತಿರುವ ಮಹಿಳೆ ಗರ್ಭ ಧರಿಸಿದಾಗ ಎಚ್‌ಆರ್‌ಪಿ ಕಾಡಬಹುದು. ಈ ಹಿಂದೆ ಯಾವುದೋ ಕಾರಣದಿಂದ ಗರ್ಭಪಾತ ಆಗಿದ್ದರೂ ಈ ಅಪಾಯ ಕಾಡಬಹುದು. ಗರ್ಭಕೋಶದಲ್ಲಿನ ಸಮಸ್ಯೆಗಳಿಂದ ಮಗುವಿಗೆ ಜಾಗ ಸಾಲದೇ ಇದ್ದಾಗ, ಕೃತಕ ಗರ್ಭಧಾರಣೆ, ಅವಳಿ, ತ್ರಿವಳಿ ಮಕ್ಕಳಿದ್ದಾಗ ಅವಧಿಪೂರ್ವ ಹೆರಿಗೆಯಾಗಬಹುದು. ಇದನ್ನೂ ಎಚ್ಆರ್‌ಪಿ ಎಂದೇ ಕರೆಯಲಾಗುತ್ತದೆ. 

ಇಂತಹ ಮಹಿಳೆಯರಿಗೆ ಗರ್ಭಪಾತ, ಪ್ರಸವಪೂರ್ವ ಜನನ, ರಕ್ತಸ್ರಾವ ಮೊದಲಾದ ಸಮಸ್ಯೆಗಳು ಕಾಡುತ್ತವೆ. ಈ ಹಿಂದೆ ಆಕಸ್ಮಿಕ ತೊಂದರೆಗಳು ಹಾಗೂ ರಕ್ತಸ್ರಾವದಿಂದ ತಾಯಿ ಹಾಗೂ ಮಗುವಿನ ಜೀವಕ್ಕೆ ಅಪಾಯವಾಗುತ್ತಿತ್ತು. ಆದರೆ ಈಗ ಉತ್ತಮ ಚಿಕಿತ್ಸೆ, ಸೌಲಭ್ಯಗಳು ಲಭ್ಯವಿವೆ. ಆದರೆ ಎಚ್‌ಆರ್‌ಪಿ ಬರದಂತೆ ಮುಂಚಿತವಾಗಿ ತಡೆಗಟ್ಟುವ ಯಾವುದೇ ಚಿಕಿತ್ಸೆಗಳು ಲಭ್ಯವಿಲ್ಲ. ಹಾಗಾಗಿ ಇದಕ್ಕೆ ಧೈರ್ಯವೇ ಮದ್ದು’ ಎಂದು ಪ್ರತಿಮಾ ಧೈರ್ಯ ತುಂಬುತ್ತಾರೆ. 

‘ಅವಧಿಪೂರ್ವ ಶಿಶು ಜನನವಾದಾಗ ತಾಯಂದಿರಿಗೆ ಮಗು ಬದುಕುವುದೋ ಇಲ್ಲವೋ ಎಂಬ ಆತಂಕ ಕಾಡುತ್ತದೆ. ಆ ಮಕ್ಕಳಿಗೆ ಉಳಿದ ಮಕ್ಕಳಿಗಿಂತ ಹೆಚ್ಚು ಕಾಳಜಿ ಅಗತ್ಯವಿರುವ ಕಾರಣ ಎನ್‌ಐಸಿಯುವಿನಲ್ಲಿ ಆರೈಕೆ ಮಾಡಬೇಕಾಗುತ್ತದೆ. ನಿಗದಿತ ವೇಳೆಯಲ್ಲಿ ಹಾಲುಣಿಸುವುದು ತಾಯಿಗೆ ಸವಾಲಾದೀತು. ಆಗ ತಾಯಿ ಒತ್ತಡಕ್ಕೆ ಒಳಗಾಗಬಹುದು. ಅವಳಿಗೆ ಮನೆ ಮಂದಿಯ ಮಾನಸಿಕ ಸ್ಥೈರ್ಯ, ಬೆಂಬಲ, ಆರೈಕೆ ಅಗತ್ಯ’ ಎನ್ನುತ್ತಾರೆ ಪ್ರತಿಮಾ.

ಬರಹ ಇಷ್ಟವಾಯಿತೆ?

 • 11

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !