‘ಬಾಣಂತಿ ಬಳುಕಬೇಕು ಕೂಸು ಕುಣೀಬೇಕು’

6
ಕಾಳಜಿ

‘ಬಾಣಂತಿ ಬಳುಕಬೇಕು ಕೂಸು ಕುಣೀಬೇಕು’

Published:
Updated:
ಮಗುವಿನೊಡನೆ ತಾಯಿ

ನಮ್ಮ ಕ್ಲಾಸಿನಲ್ಲಿ ಅಂದು ವಿದ್ಯಾರ್ಥಿಗಳಾಗಿದ್ದವರೆಲ್ಲವೂ ಮತ್ತೆ ನಮ್ಮ ಕಾಲೇಜಿನಲ್ಲಿ ಭೇಟಿಯಾಗಬೇಕೆಂದು ತೀರ್ಮಾನ ಮಾಡಿದ್ದೆವು. ಬಹಳ ವರ್ಷಗಳ ನಂತರ ಸ್ನೇಹಿತರನ್ನು ನೋಡಬಹುದೆಂಬ ಸಂಭ್ರಮದಲ್ಲಿ, ನಿಗದಿ ಮಾಡಿದ ಸಮಯಕ್ಕಿಂತ ಮುಂಚೆಯೇ ಕಾಲೇಜು ತಲುಪಿದ್ದೆ. ಹಳೆಯ ನೆನಪಿನಲ್ಲಿ ಕಾಲೇಜಿನ ಪರಿವೀಕ್ಷಣೆ ಮಾಡಲು ಹೊರಟೆ.

ನಾವೆಲ್ಲಾ ಕೂತು ಹರಟೆ ಹೊಡೆಯುತ್ತಿದ್ದ ಜಾಗ ಹೇಗಿದೆ – ಎಂದು ನೋಡಲು ಹೋದೆ. ನಾಲ್ಕೈದು ಜನ ಹುಡುಗಿಯರು ನಿಂತು ಯಾವುದೋ ವಿಷಯವನ್ನು ಗಹನವಾಗಿ ಚರ್ಚಿಸುತ್ತಿದ್ದರು. ಕುತೂಹಲದಿಂದ ಅವರ ಮಾತನ್ನು ಗಮನಿಸುತ್ತಿದ್ದೆ. ಅವರೆಲ್ಲರ ಚರ್ಚೆಯ ವಿಷಯ ‘ಡೆಲಿವರಿ ಆದ ನಂತರ ಬಾಣಂತಿಗೆ ಯಾವ ರೀತಿ ಚಿಕಿತ್ಸೆ ಮಾಡಬೇಕು?’ – ಎಂಬುದಾಗಿತ್ತು.

ಪ್ರತಿಯೊಬ್ಬರು ಅವರವರ ಮನೆಯ ಅನುಭವಗಳನ್ನು, ಸಾಂಪ್ರದಾಯಿಕವಾದ ಕ್ರಮ ಎಂದರೆ ಹೀಗೆ – ಎಂದು ಮಾತಾಡುತ್ತಿದ್ದರು. ಒಬ್ಬಳು, ‘ಶುಂಠಿ ಮತ್ತು ಮೆಣಸು ಇತ್ಯಾದಿಗಳನ್ನೇ ಆಹಾರವಾಗಿ ಕೊಡಬೇಕು, ತುಪ್ಪ ಹೆಚ್ಚಾಗಿ ತಿನ್ನಲು ಹೇಳಬೇಕು’ ಎಂದರೆ, ಮತ್ತೊಬ್ಬಳು, ಯಾವುದೇ ‘ರೀತಿಯ ಕೊಬ್ಬಿನಂಶ ಇರುವ ಆಹಾರ ಕೊಡಬಾರದು, ಕೇವಲ ಗಂಜಿ ಮತ್ತು ಉಪ್ಪು, ಸೀಗೆ ಸೊಪ್ಪಿನಸಾರು ಕೊಡಬೇಕು’ ಎಂದು, ಇನ್ನೊಬ್ಬಳು, ‘ಇಲ್ಲಾ ಹೆಚ್ಚಾಗಿ ಬೆಳ್ಳುಳ್ಳಿಯನ್ನೇ ಉಪಯೋಗಿಸಬೇಕು’ ಎಂದರೆ, ಗುಂಪಿನಲ್ಲಿನ ಮತ್ತೊಂದು ಹುಡುಗಿ, ‘ನಮ್ಮಲ್ಲಿ ಕ್ಯಾಪುಲ್ಸ್ ಮತ್ತು ಡಾಕ್ಟರ್ಸ್‌ ಬ್ರಾಂದಿ ಕೊಡ್ತಾರೆ’ ಎಂದು ಹೇಳುತ್ತಿದ್ದಳು.

‌‌‌‌‌ಅಷ್ಟರಲ್ಲಿ ಇನ್ನೊಬ್ಬಳು ‘ಆದರೆ ಈಗ ವೈದ್ಯರೂ ಈ ಯಾವ ಚಿಕಿತ್ಸಾಕ್ರಮವನ್ನೂ ಹೇಳುವುದಿಲ್ಲವಲ್ಲ! ಎಲ್ಲ ರೀತಿಯ ಆಹಾರವನ್ನೂ ಸೇವಿಸಬಹುದು; ಹಣ್ಣು–ತರಕಾರಿಗಳನ್ನು ಹೆಚ್ಚಾಗಿ ತಿಂದಷ್ಟೂ ಹೆಚ್ಚು ರಕ್ತವೃದ್ದಿಯಾಗುತ್ತದೆ, ಹೆಚ್ಚು ಹಾಲು ಬರುತ್ತದೆ ಎನ್ನುತ್ತಾರಲ್ಲ!! ಹಾಗಾದರೆ ಆಯುರ್ವೇದದ ವಿದ್ಯಾರ್ಥಿಗಳಾಗಿ ನಾವು ಏನನ್ನು ಹೇಳಬೇಕು!!!’ ಎಂದು ಕುತೂಹಲದಿಂದ ಪ್ರಶ್ನಿಸಿದಳು.

ಅವರ ಮಾತನ್ನು ಕೇಳುತ್ತಿದ್ದ ನನಗೆ ನಮ್ಮ ಆ ದಿನಗಳು ನೆನಪಾದವು. ನಾವು ಹೀಗೆ ಸಂಶಯದಲ್ಲಿ ನಮ್ಮ ಗುರುಗಳ ಬಳಿ ಕೇಳಿದಾಗ ಬಂದ ಉತ್ತರ ನೆನಪಾಯಿತು.

ನಮ್ಮ ಗುರುಗಳು ನಮಗೆ ಎಂದೂ ನೇರವಾಗಿ ಉತ್ತರವನ್ನು ಕೊಟ್ಟವರೇ ಅಲ್ಲ. ಯಾವುದೇ ಪ್ರಶ್ನೆ ಕೇಳಿದರೂ ಅದಕ್ಕೆ ಮರುಪ್ರಶ್ನೆ ಹಾಕಿ ಉತ್ತರವನ್ನು ನಮ್ಮ ಬಾಯಿಂದಲೇ ಹೊರಡಿಸುತ್ತಿದ್ದರು. ಈ ರೀತಿಯ ನಮ್ಮ ಪ್ರಶ್ನೆಗೆ, ಅವರ ಉತ್ತರ, ಗ್ರಂಥವನ್ನು ಸರಿಯಾಗಿ ಓದಿ ಎಂದು. ಕೊನೆಯ ವಾಕ್ಯವನ್ನು ಅರ್ಥೈಸಿ ಎಂದು. ಅದಾದವುದೆಂದು ನೋಡಿದರೆ ಬಾಣಂತನಕ್ಕೆ ಸಂಬಂಧಪಟ್ಟ ವಿಷಯದ ವಿವರಣೆಯ ಕೊನೆಯಲ್ಲಿ ಇದ್ದ ಉತ್ತರ ‘ತತ್ರ ವೃದ್ಧ ನಾರೀಣಾಂ ಆಧಿಕಾರಃ’ ಎಂದು.

ಎಂದರೆ ಗ್ರಂಥಕಾರರು ಕೆಲವು ಸೂಚನೆಗಳನ್ನು ಕೊಟ್ಟು ಇಲ್ಲಿಂದ ಮುಂದೆ ಹೆಚ್ಚಿನ ಬಾಣಂತನದ ವಿಷಯಗಳಿಗೆ ಆಯಾ ಪ್ರದೇಶದ ಬಸುರಿ, ಬಾಣಂತಿಯರ ವಿಷಯದಲ್ಲಿ ಅನುಭವವುಳ್ಳ ವಯಸ್ಸಾದ ಹೆಂಗಸರ ಅಧಿಕಾರ ಎಂದು. ಪರೋಕ್ಷವಾಗಿ ಇದು ವಿದ್ಯೆಗಿಂತ ಅನುಭವಕ್ಕೆ ಪ್ರಧಾನ್ಯ ಇರುವ ವಿಷಯ ಎಂದು.

ಆಗ ನಾವೂ ನಮ್ಮ ಗುರುಗಳನ್ನು, ‘ಆದರೆ ಈಗಿನ ಕಾಲದಲ್ಲಿ ಅನುಭವವಿರುವ ಹೆಂಗಸರೇ ಇಲ್ಲವಲ್ಲಾ? ಅಥವಾ ಇದ್ದರೂ, ವೈದ್ಯರ ಸಲಹೆ ಇಲ್ಲದೆ ಮುಂದುವರೆಯಲು ಸಾದ್ಯವಿಲ್ಲದ ಸ್ಥಿತಿಗೆ ನಮ್ಮ ಸಮಾಜ ತಲುಪಿದೆಯಲ್ಲಾ? ಹಾಗಾಗಿ ವೈದ್ಯರಾದ ನಮ್ಮ ಬಳಿಗೆ ಬಂದಾಗ ನಾವು ಏನು ಮಾಡಬೇಕು?’ ಎನ್ನಲು ಗುರುಗಳು ಹೇಳಿದರು ‘ನೀವು ಏನೇ ಹೇಳಿದರೂ ಮನೆಯ ಹಿರಿಯರು ಬಾಣಂತನದ ವಿಷಯದಲ್ಲಿ ಮೂಗು ತೂರಿಸದೇ ಬಿಡುವುದಿಲ್ಲ, ಅದಕ್ಕಾಗಿ ನಾನು ನನ್ನ ರೋಗಿಗಳಿಗೆ ಮೊದಲು ಅವರವರ ಸಾಂಪ್ರದಾಯಿಕ ಕ್ರಮದ ವಿಷಯವನ್ನು ತಿಳಿದುಕೊಂಡು, ಆಯುರ್ವೇದದ ತತ್ವಗಳನ್ನು ಅನುಸರಿಸಿ ಚಿಕಿತ್ಸೆ ಹೇಳುತ್ತೇನೆ.

ಆಯಾ ಪ್ರದೇಶದ ಋತುಮಾನ, ಆಹಾರ, ಆಚಾರವನ್ನು ಅನುಸರಿಸಿ ಬಾಣಂತನ ಎನ್ನುವುದು ಬದಲಾಗುತ್ತಾ ಹೋಗುತ್ತದೆ, ಆದರೆ ಯಾವುದೇ ಪ್ರದೇಶದಲ್ಲಾಗಲೀ ಸಾಂಪ್ರದಾಯಿಕ ಕ್ರಮ–ತತ್ವವನ್ನು ಬಿಟ್ಟಿರುವುದಿಲ್ಲ. ಆದರೆ ಇಂದಿನ ಜೀವನಶೈಲಿಯೇ ಬದಲಾಗಿರುವುದರಿಂದ, ಅನುಭವಿ ಹಿರಿಯರೂ ಇಲ್ಲದಿರುವುದರಿಂದ ಬಾಣಂತನದಲ್ಲಿ ವೈದ್ಯರ ಸಲಹೆ ಅತ್ಯಗತ್ಯ. ಹೆರಿಗೆಯಾದ ನಂತರ ದೇಹದಲ್ಲಿ ಶೂನ್ಯ ಅಥವಾ ಖಾಲಿಯಾದ ಅನುಭವ ಆಗುತ್ತದೆ.

ಇದು ಹೆಣ್ಣಿಗೆ ಮತ್ತೊಂದು ಜನ್ಮ. ಮಗುವಿಗೆ ಎಲ್ಲಾ ಧಾತುಗಳು ವೃದ್ದಿಯಾಗುವಂತಹ ಪೋಷಕಾಂಶಗಳು ಹೇಗೆ ಬೇಕಾಗುತ್ತದೋ, ಹಾಗೆಯೇ ಬಾಣಂತಿಗೂ ಕೂಡ, ಆದರೆ ಮಗುವಿಗೆ ಹಂತ ಹಂತವಾಗಿ ಪೋಷಕಾಂಶಗಳನ್ನು ಕೊಡುತ್ತಾ ಹೋಗಬೇಕು, ಆದರೆ ಬಾಣಂತಿಗೆ ಆಕೆಯ ದೇಹವೇ ಸರಿಯಾದ ಪೋಷಕಾಂಶವನ್ನು ಸಕಾಲದಲ್ಲಿ ಉತ್ಪತ್ತಿ ಮಾಡಿ ಸರಿಯಾಗಿ ಉಪಯೋಗಿಸುವಂತೆ ಮಾಡಬೇಕು. ಇದೂ ಸರ್ವಧಾತು ಪೋಷಕವಾದ ರಸಾಯನ ಚಿಕಿತ್ಸೆಯೇ.

ಆಯುರ್ವೇದದಲ್ಲಿ ಸರ್ವಧಾತು ಪೋಷಕ ಚಿಕಿತ್ಸಾವಿಧಾನವನ್ನು ರಸಾಯನಚಿಕಿತ್ಸೆ ಎಂದು ಕರೆದು, ಅದರಲ್ಲಿ ‘ಕುಟಿ ಪ್ರಾವೇಶಿಕ ರಸಾಯನ’ ಎಂದು ಒಂದು ವಿಧಾನವನ್ನು ಹೇಳುತ್ತಾರೆ, ಎಂದರೆ ವ್ಯಾವಹಾರಿಕ ಪ್ರಪಂಚದ ಯಾವುದೇ ಸಂಪರ್ಕವಿಲ್ಲದೆ ಗರ್ಭದಂತಿರುವ ಮನೆಯೊಳಗಿದ್ದು, ಹಂತಹಂತವಾಗಿ ದೇಹದ ಕಶ್ಮಲಗಳನ್ನು ಹೊರಹಾಕಿ, ಉಪಯುಕ್ತವಾದ ಧಾತುಪೋಷಕ ಆಹಾರ, ವಿಹಾರ, ಆಚಾರ, ಚಿಂತನೆಗಳ ಮೂಲಕ ಶರೀರ, ಇಂದ್ರೀಯ, ಮನಸ್ಸುಗಳನ್ನು ನವಯುವಕರಂತೆ ಪುನಶ್ಚೇತನಗೊಳಿಸುವುದು.

ಇದೇ ರೀತಿ ಬಾಣಂತಿಯರಿಗೂ ಒಂದು ಕಡೆ ದೇಹದ ಕಶ್ಮಲಗಳನ್ನು ಹೊರಹಾಕುವ ಚಿಕಿತ್ಸೆ ಒಂದು ಕಡೆಯಾದರೆ, ಧಾತುಗಳನ್ನು ಪರಿಪೂರ್ಣ ಮಾಡುವ ವಿಧಾನವನ್ನು ಅದರ ಜೊತೆ ಜೊತೆಗೆ ಅಳವಡಿಸಬೇಕು. ದೇಹದ ಉಷ್ಣತೆ ಕಡಿಮೆಯಾಗದಂತೆ ನೋಡಿಕೊಳ್ಳಬೇಕು; ಅದಕ್ಕಾಗಿ ಕೆಲವರು ದಿನಕ್ಕೆ ನಾಲ್ಕು ಬಾರಿ ಬಿಸಿಬಿಸಿ ನೀರಿನ ಸ್ನಾನ ಮಾಡಿದರೆ, ಕೆಲವರು ಕೆಂಡವನ್ನು ಇಡುತ್ತಾರೆ; ಇನ್ನು ಕೆಲವರು ಕೆಂಡದಲ್ಲಿ ಮೈ ಕಾಯಿಸಿಕೊಳ್ಳುತ್ತಾರೆ.

ಮತ್ತೆ ಕೆಲವು ಕಡೆ ಬಿಸಿನೀರಿನಲ್ಲಿ ಸ್ನಾನಮಾಡಿ, ಮೈ ಬೆವರುವಷ್ಟು ಹೊತ್ತು ಬೆಚ್ಚಗೆ ಉಣ್ಣೆ ಬಟ್ಟೆ ಹೊದ್ದು ಮಲಗುತ್ತಾರೆ. ಮತ್ತೆ ಕೆಲವು ಪ್ರದೇಶದಲ್ಲಿ ಇದಾವುದೂ ಸಾಲದೆಂದು ಆರೋಗ್ಯ ಹಾಳುಮಾಡದಂತಿರುವ ಮದ್ಯವನ್ನು ದೇಹದ ಉಷ್ಣತೆ ಕಾಪಾಡಲು ಉಪಯೋಗಿಸುತ್ತಾರೆ. ಒಟ್ಟಾರೆಯಾಗಿ ವಾತಾವರಣದ ಹಾಗೂ ದೇಹದ ಒಳಗಿನ ಉಷ್ಣಾಂಶವು ಒಂದಕ್ಕೊಂದು ಪೂರಕವಾಗಬೇಕು, ಮತ್ತು ದೇಹದ ಯಾವುದೇ ಸಹಜಕ್ರಿಯೆಗೆ ತೊಡಕಾಗಬಾರದು.

ಮತ್ತು ಬೆವರುವಿಕೆಯ ವಿಧಾನಗಳು ಅನೇಕವಾದರೂ ಬೆವರಿಸುವ ಪ್ರಕ್ರಿಯೆ ನಡೆಯಲೇಬೇಕು. ಮಲ, ಮೂತ್ರದ ಮೂಲಕ ದೇಹದ ಕಶ್ಮಲ ಹೊರ ಹೋಗುವಾಗ ಕರಳು ಮೂತ್ರಜನಕಾಂಗದ ಮೇಲೆ ಒತ್ತಡ ಹೆಚ್ಚಾಗುತ್ತದೆ, ಆದರೆ ಉಷ್ಣತೆಯನ್ನು ಕಾಪಾಡಿಕೊಂಡು, ಬೆವರಿಸುವ ಪ್ರಕ್ರಿಯೆ ಮೇದಸ್ಸನ್ನು ಕರಗಿಸಿದರೂ, ಮೂತ್ರಜನಕಾಂಗದ ಮೇಲೆ ಒತ್ತಡ ಇರುವುದಿಲ್ಲ. ಆದ್ದರಿಂದ ಆಭ್ಯಂಗ ಸಹಿತವಾಗಿ ಮೈ ಬೆವರಿಸುವಿಕೆಯು ಚರ್ಮದ ಆರೋಗ್ಯವನ್ನು ಕಾಪಾಡುತ್ತಾ, ಮೇದಸ್ಸನ್ನು ಕರಗಿಸುವ ಅಂತರಿಕ ಕ್ರಿಯೆಗಳನ್ನು ವ್ಯತ್ಯಾಸವಾಗದಂತೆ ನೋಡಿಕೊಳ್ಳುವ ಸುಲಭ ವಿಧಾನ.

ಇಲ್ಲಿ ಮುಖ್ಯವಾಗಿ ಹೊಟ್ಟೆ ಮತ್ತು ಕರುಳಿನ ಭಾಗದ ಮೇಲಿದ್ದ ಒತ್ತಡ ಹೆರಿಗೆಯ ನಂತರ ಒಂದೇ ಸಲಕ್ಕೆ ಇಲ್ಲದಂತಾಗುವುದರಿಂದ ಕರುಳಿನಲ್ಲಿರುವ ವಾತದ ಗತಿಯು ಏರುಪೇರಾಗಿ, ಜೀರ್ಣಕ್ರಿಯೆಯ ಮೇಲೆ ವ್ಯತಿರಿಕ್ತವಾದ ಪರಿಣಾಮ ಬೀರುತ್ತದೆ. ಆದ್ದರಿಂದ ಈ ವಾತದ ಗತಿಯನ್ನು ತಹಬದಿಗೆ ತಂದು ಆಂತರಿಕ ಕ್ರಿಯೆಗಳು ಸಹಜವಾಗಿ ನಡೆಯುವಂತೆ ಮಾಡುವುದೇ ಬಾಣಂತನದ ತತ್ವ. ಅದಕ್ಕಾಗಿಯೇ ಯಾವುದೇ ಪ್ರದೇಶದವರಾಗಲೀ, ಯಾವುದೇ ವೈದ್ಯರಾಗಲೀ ಬಾಣಂತಿಗೆ ಹೊಟ್ಟೆ ಉಬ್ಬರ ಆಗದಂತೆ ನೋಡಿಕೊಳ್ಳುವುದು ಮುಖ್ಯ ಎಂದು ಹೇಳುತ್ತಾರೆ.

ಆದ್ದರಿಂದಲೇ ಬಾಣಂತಿ ಹೊಟ್ಟೆಯಲ್ಲಿ ಗಾಳಿ ತುಂಬದಂತೆ ಹೊಟ್ಟೆಗೆ ಗಟ್ಟಿಯಾಗಿ ಬಟ್ಟೆ ಕಟ್ಟಬೇಕು ಅಥವಾ ಈಗಿನ ಕಾಲದಲ್ಲಿ ಸಿಗುವ ಸೊಂಟ ಮತ್ತು ಹೊಟ್ಟೆಯನ್ನು ಭದ್ರವಾಗಿ ಬಂಧಿಸುವ ಬೆಲ್ಟ್‌ಗಳನ್ನಾದರೂ ಕಟ್ಟಬೇಕು. ಇಲ್ಲದಿದ್ದರೆ ಬಸುರಿಯಲ್ಲಿ ಗರ್ಭಕೋಶದ ರಕ್ಷಣೆಗಾಗಿ ಉತ್ಪತ್ತಿಯಾದ ಕೊಬ್ಬು ಹಾಗೇ ಉಳಿಯುತ್ತದೆ ಮತ್ತು ವಾತ ಪ್ರಕೋಪದಿಂದಾಗಿ ಜೀರ್ಣಶಕ್ತಿಯಲ್ಲಿ ವ್ಯತ್ಯಾಸವಾಗಿ ಅಮ್ಲಪಿತ್ತ, ಅಜೀರ್ಣ, ಅತಿಸಾರ ಮುಂತಾದ ತೊಂದರೆಗಳು ಕಾಣಿಸಿಕೊಳ್ಳುತ್ತವೆ.

ಅಲ್ಲದೆ ಗರ್ಭಿಣಿಗೆ ಮಗುವಿನ ಬೆಳವಣಿಗೆಗೆ ಮತ್ತು ಪ್ರಸವಕ್ಕಾಗಿ ಸೊಂಟದ ಮೂಳೆಗಳ ಸಂಧಿಗಳು ವಿಕಸಿತವಾಗಿರುತ್ತವೆ. ಅವು ಪುನಃ ತಮ್ಮ ಮೊದಲಿನ ಸಹಜಸ್ಥಿತಿಗೆ ಮರಳಬೇಕು, ಇಲ್ಲವಾದಲ್ಲಿ ಬಾಣಂತನ ಮುಗಿದ ನಂತರದ ಕಾಲದಲ್ಲಿ ಸೊಂಟಕ್ಕೆ ಬಲವಿಲ್ಲದೆ, ಸೊಂಟನೋವು, ಸ್ಲಿಪ್ ಡಿಸ್ಕ್‌, ಋತುಶೂಲೆ – ಮೊದಲಾದ ತೊಂದರೆಗಳಿಂದ ನರಳಬೇಕಾಗುತ್ತದೆ. ಬಾಣಂತನದ ವಿಕೃತಿಯಿಂದಾಗಿ ಪ್ರಾರಂಭವಾದ ಯಾವುದೇ ತೊಂದರೆಗಳನ್ನು ಮತ್ತೆ ಗುಣಪಡಿಸಲು ಸಾಧ್ಯವಿಲ್ಲ. ಜೀವನಪರ್ಯಂತ ಆ ವ್ಯಾಧಿಗಳಿಂದ ನರಳಬೇಕಾಗುತ್ತದೆ.

ಬಾಣಂತಿಯ ಆಹಾರವೂ ಅವಳ ದೇಹದ ವಿಕೃತಿಗಳನ್ನು ಸರಿಪಡಿಸುವಂತಿರಬೇಕು. ಆದ್ದರಿಂದ ಎಲ್ಲ ಪ್ರದೇಶಗಳಲ್ಲೂ ಅಲ್ಲಿನ ಸಹಜ ವಾತಾವರಣಕ್ಕೆ ಹೇಗೆ ದೇಹದ ಕ್ರಿಯೆಗಳು ನಡೆಯಬೇಕೋ ಅದಕ್ಕನುಗುಣವಾಗಿ ಆಹಾರ–ವಿಹಾರಗಳನ್ನು ವ್ಯತ್ಯಾಸ ಮಾಡುತ್ತಾರೆ. ಪ್ರಪಂಚದ ಯಾವುದೇ ಭಾಗದ ಮೂಲ ನಿವಾಸಿಗಳ ಬಾಣಂತನವನ್ನು ಗಮನಿಸಿದರೆ ನಮಗೆ ಬಹಳ ಸೂಕ್ಷ್ಮವಾಗಿ ಈ ಅಂಶವು ಗೋಚರಿಸುತ್ತದೆ.

ತಾಯಿಯು ಶಾಂತಚಿತ್ತದಿಂದ ವರ್ತಿಸಿ ಮಗುವಿಗೆ ಪ್ರೀತಿಯಿಂದ ಹಾಲುಣಿಸಿದರೆ ಮಗುವಿನ ಮಾನಸಿಕ ಬೆಳವಣಿಗೆಯೂ ಚೆನ್ನಾಗಿ ಆಗುತ್ತದೆ. ಈ ರೀತಿಯಾಗಿ ರಸಾಯನ ವಿಧಾನವನ್ನು ಯಾವುದೇ ಪ್ರದೇಶದ ವಾತಾವರಣವನ್ನು ಹೊಂದಿಕೊಂಡು ಅನುಸರಿಸುವುದರಿಂದ ಬಾಣಂತಿಯ ತೂಕ ಹೆಚ್ಚಾಗುವುದಿಲ್ಲ; ಮಗುವಿನ ತೂಕ ಕಾಲಕಾಲಕ್ಕೆ ತಕ್ಕಂತೆ ಹೆಚ್ಚಾಗುತ್ತಾ ಹೋಗುತ್ತದೆ.

ತಾಯಿಯ ತೂಕ ಗರ್ಭಿಣಿ ಆಗುವ ಮೊದಲು ಎಷ್ಟಿತ್ತೋ ಅಷ್ಟಕ್ಕೆ ಇಳಿಯಬೇಕು, ಮಗುವಿನ ತೂಕ ಹೆಚ್ಚಾಗಬೇಕು ಎಂದು ತಿಳಿಸಲು ಹಿಂದಿನವರು ‘ಬಾಣಂತಿ ಬಳುಕಬೇಕು, ಕೂಸು ಕುಣೀಬೇಕು’ ಎಂದಿದ್ದಾರೆ.

(ಡಾ.ವಿಜಯಲಕ್ಷ್ಮಿ ಪಿ.)

ಬರಹ ಇಷ್ಟವಾಯಿತೆ?

 • 17

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !