ಭಾನುವಾರ, 28 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗರ್ಭ ಧಾರಣೆಗೂ ಬೇಕು ಪೌಷ್ಟಿಕ ಆಹಾರ

Last Updated 6 ಸೆಪ್ಟೆಂಬರ್ 2020, 19:30 IST
ಅಕ್ಷರ ಗಾತ್ರ

ಮಹಿಳೆಯು ಗರ್ಭಧಾರಣೆಗೆ ದೇಹವನ್ನು ಸರಿಯಾದ ರೀತಿಯಲ್ಲಿ ಸಿದ್ಧಗೊಳಿಸಬೇಕಾಗುತ್ತದೆ. ಯಾವ ರೀತಿ ಸಿದ್ಧಪಡಿಸಬೇಕು ಎಂಬುದು ಹಲವಾರು ಅಂಶಗಳನ್ನು ಒಳ
ಗೊಂಡಿದೆ. ಪೂರಕವಾದ ಆಹಾರ ಪದ್ಧತಿ ಅಳವಡಿಕೆ, ಮಧ್ಯಮ ಪ್ರಮಾಣದ ವ್ಯಾಯಾಮ, ಉತ್ತಮ ನಿದ್ದೆ ಮತ್ತು ಒಳ್ಳೆಯ ಯೋಚನೆಗಳು ಆರೋಗ್ಯಕರ ಗರ್ಭಧಾರಣೆಗೆ ಅಗತ್ಯವಾದ ಮುಖ್ಯವಾದ ಅಂಶಗಳು. ಹಾಗೆಯೇ ಪ್ರಸವಪೂರ್ವ, ಗರ್ಭಿಣಿ ಮತ್ತು ಪ್ರಸವ ನಂತರದ ಅವಧಿಯಲ್ಲಿ ಪೌಷ್ಟಿಕಾಂಶ ಹೊಂದಿರುವ ಆಹಾರ ಸೇವನೆ ಪ್ರಮುಖ ಪಾತ್ರ ವಹಿಸುತ್ತದೆ.

ಗರ್ಭ ಧರಿಸುವ ಮುನ್ನ ಪ್ರತಿದಿನ 400 ಎಂಸಿಜಿಯಷ್ಟು ಫೋಲಿಕ್ ಆಸಿಡ್‌ಯುಕ್ತ ಆಹಾರ ಸೇವನೆ ಅಗತ್ಯ. ಅಂದರೆ, ಗರ್ಭಧಾರಣೆಗಿಂತ ಮೊದಲ ಮೂರು ತಿಂಗಳಲ್ಲಿ ಇದರ ಅವಶ್ಯಕತೆ ಇದೆ. ಭ್ರೂಣದಲ್ಲಿನ ನರದ ದೋಷಗಳನ್ನು ತಡೆಗಟ್ಟಲು ಇಷ್ಟು ಪ್ರಮಾಣದ ಫೋಲಿಕ್ ಆಸಿಡ್ ಇರುವ ಆಹಾರ ಸೇವಿಸುವುದು ಅತ್ಯಗತ್ಯ. ವಿಟಮಿನ್ ಬಿ ಕಾಂಪ್ಲೆಕ್ಸ್ ಫೋಲಿಕ್ ಆಸಿಡ್ ಅನ್ನು ಗರಿಷ್ಠಪ್ರಮಾಣದಲ್ಲಿ ಬಳಕೆ ಮಾಡಲು ನೆರವಾಗುತ್ತದೆ. ಹಸಿರು ಸೊಪ್ಪು, ತರಕಾರಿಗಳು ಫೋಲಿಕ್ ಆಸಿಡ್ ಅಂಶವನ್ನು ಹೆಚ್ಚಿನ ಪ್ರಮಾಣದಲ್ಲಿ ಹೊಂದಿರುತ್ತವೆ.

ಹಣ್ಣುಗಳು ಮತ್ತು ತರಕಾರಿಗಳಲ್ಲಿ ಕೀಟನಾಶಕಗಳನ್ನು ಬಳಸಲಾಗಿರುತ್ತದೆ. ಇದು ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂಬ ಆತಂಕ ಇರುವುದರಿಂದ ಸಾವಯವ ಪದ್ಧತಿಯಡಿ ಬೆಳೆದ ಉತ್ಪನ್ನಗಳನ್ನು ಬಳಸುವುದು ಸುರಕ್ಷಿತ.

ಪೂರಕ ಆಹಾರ: ಬೆಳೆಯುತ್ತಿರುವ ಭ್ರೂಣಕ್ಕೆ ಕಾರ್ಬೊಹೈಡ್ರೇಟ್‌, ಪ್ರೊಟೀನ್‌, ಕೊಬ್ಬು, ವಿಟಮಿನ್‌ಗಳು, ಖನಿಜಾಂಶಗಳು ಬೆಳವಣಿಗೆಗೆ ಪೂರಕವಾದ ಅಂಶಗಳ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಗರ್ಭಿಣಿಯು ತಾನು ಸೇವಿಸುವ ಆಹಾರದ ಬಗ್ಗೆ ಗಮನಹರಿಸಬೇಕು. ಗರ್ಭಾವಸ್ಥೆಯ ಸಂದರ್ಭದಲ್ಲಿ ರಕ್ತಹೀನತೆ ಸಂಭವ ಜಾಸ್ತಿ. ಏಕೆಂದರೆ, ರಕ್ತದ ಪ್ಲಾಸ್ಮಾದ ಪ್ರಮಾಣವು ಕೆಂಪು ರಕ್ತಕಣಗಳಿಗೆ ಹೋಲಿಸಿದರೆ ಹೆಚ್ಚಾಗುತ್ತದೆ. ಇದನ್ನು ಪರಿಹರಿಸಲು, ಪ್ರಸವಪೂರ್ವ ತಪಾಸಣೆ ವೇಳೆ ಎರಡನೇ ತ್ರೈಮಾಸಿಕದ ನಂತರ ಕಬ್ಬಿಣದ ಅಂಶವುಳ್ಳ ಪದಾರ್ಥಗಳನ್ನು ಬಳಸುವಂತೆ ಸಲಹೆ ನೀಡಲಾಗುತ್ತದೆ. ಅಲ್ಲದೇ, ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಅಂಶಗಳುಳ್ಳ ಮಾತ್ರೆಗಳನ್ನು ನೀಡಲಾಗುತ್ತದೆ. ಇದರಿಂದ ಗರ್ಭಿಣಿಯು ಪೌಷ್ಟಿಕಾಂಶದ ಕೊರತೆಯಿಂದ ಮುಕ್ತರಾಗಬಹುದು.

ಗರ್ಭಾವಸ್ಥೆಯ ವೇಳೆ ಆಗುವ ಹಾರ್ಮೋನ್‌ಗಳ ಬದಲಾವಣೆಯಿಂದಾಗಿ ಮಲಬದ್ಧತೆ ಕಾಣಿಸಿಕೊಳ್ಳುವುದು ಸಾಮಾನ್ಯ. ಗರ್ಭಿಣಿಯು ತನ್ನ ಗರ್ಭಕ್ಕೆ ಅವಶ್ಯಕವಿರುವಂತಹ ಪ್ರೊಜೆಸ್ಟರಾನ್ ಸಪ್ಲಿಮೆಂಟ್‌ಗಳನ್ನು ತೆಗೆದುಕೊಳ್ಳಬೇಕು. ಮಧ್ಯಮ ಪ್ರಮಾಣದ ವ್ಯಾಯಾಮದೊಂದಿಗೆ ಹೆಚ್ಚು ಫೈಬರ್ ಅಂಶಗಳಿರುವ ಆಹಾರ ಸೇವನೆ ಮಾಡುವುದರಿಂದ ಈ ಸಮಸ್ಯೆಯಿಂದ ಪಾರಾಗಬಹುದು.

ಡೇರಿ ಉತ್ಪನ್ನಗಳು, ಲೆಂಟಿಲ್ಸ್, ಧಾನ್ಯಗಳಲ್ಲಿ ಕ್ಯಾಲ್ಸಿಯಂ ಸಮೃದ್ಧವಾಗಿರುತ್ತದೆ. ಹಸಿರು ತರಕಾರಿಗಳು ವಿಶೇಷವಾಗಿ ನುಗ್ಗೆಕಾಯಿ ಎಲೆಗಳು, ಪಾಲಕ್‌ ಮತ್ತು ಬಸಳೆ ಬಳಸುವುದು ಸೂಕ್ತ. ಇವುಗಳಲ್ಲಿ ಕಬ್ಬಿಣದ ಅಂಶ ಯಥೇಚ್ಛವಾಗಿರುತ್ತದೆ. ಹಣ್ಣು, ತರಕಾರಿಗಳು, ಧಾನ್ಯಗಳಲ್ಲಿ ಫೈಬರ್ ಅಂಶ ಹೆಚ್ಚಿರುತ್ತದೆ. ಪ್ರತಿದಿನ ಮೂರು ಬಗೆಯ ಹಣ್ಣುಗಳು ಮತ್ತು ಮೂರು ಬಗೆಯ ತರಕಾರಿಗಳನ್ನು ಸೇವಿಸುವುದು ಸೂಕ್ತ.

ಕೆಫಿನ್‌ ಸೇವನೆ ಕಡಿಮೆ ಇರಲಿ: ಗರ್ಭಿಣಿಗೆ ಹಾರ್ಟ್‌ಬರ್ನ್ ಮತ್ತು ರಿಫ್ಲಕ್ಸ್ ಅನ್ನನಾಳದ ಉರಿಯಾಗುವುದು ಕಂಡುಬರುತ್ತದೆ. ಈ ಸಮಸ್ಯೆಯನ್ನು ದೂರ ಮಾಡಲು ಆಗಾಗ ಸ್ವಲ್ಪ ಸ್ವಲ್ಪ ಊಟ ಮಾಡುವುದು, ಎಣ್ಣೆ ಮತ್ತು ಮಸಾಲೆ ಅಂಶಗಳಿಲ್ಲದ ಆಹಾರ ಪದಾರ್ಥಗಳನ್ನು ಸೇವನೆ ಮಾಡಬೇಕು. ಇದಲ್ಲದೇ, ಕೆಲವು ಮಹಿಳೆಯರಲ್ಲಿ ಗರ್ಭಾವಸ್ಥೆಯಲ್ಲಿ ಮಧುಮೇಹ ಬರುವ ಸಾಧ್ಯತೆ ಇರುತ್ತದೆ. ಮಧುಮೇಹ ಪೂರ್ವ ಲಕ್ಷಣಗಳಿರುವ ಮಹಿಳೆಯರು ಕ್ಯಾಲೊರಿ ಲೆಕ್ಕ ಹಾಕುವುದು ಹಾಗೂ ಸಕ್ಕರೆ ಪ್ರಮಾಣದ ಮೇಲೆ ನಿಗಾ ಇಡುವುದು ಕಡ್ಡಾಯ. ಮದ್ಯ ಮತ್ತು ಕೆಫಿನ್ ಬಳಸುವುದನ್ನು ನಿಲ್ಲಿಸಬೇಕು. ಇವು ಗ್ಯಾಸ್ಟ್ರಿಕ್‌ ಸಮಸ್ಯೆ ಹೆಚ್ಚಿಸುವುದಲ್ಲದೇ ಗರ್ಭದಲ್ಲಿರುವ ಶಿಶುವಿನ ಮೇಲೂ ಪರಿಣಾಮವನ್ನು ಬೀರುತ್ತವೆ. ಗರ್ಭಾವಸ್ಥೆಯ ವೇಳೆಯಲ್ಲಿ ಮದ್ಯಪಾನ ಮಾಡುವುದರಿಂದ ಗರ್ಭಪಾತವಾಗಬಹುದು, ಅವಧಿ ಪೂರ್ವ ಜನನವಾಗಬಹುದು ಮತ್ತು ದೀರ್ಘಾವಧಿಯ ದೈಹಿಕ, ಮತ್ತು ಬೌದ್ಧಿಕ ವಿಕಲಾಂಗತೆಗಳಿಗೆ ಕಾರಣವಾಗಬಹುದು. ದಿನಕ್ಕೆ 200 ಎಂಜಿಗಿಂತ ಹೆಚ್ಚು ಕೆಫೀನ್ ಅನ್ನು ಸೇವಿಸಿದರೆ ಗರ್ಭಪಾತವಾಗುತ್ತದೆ ಅಥವಾ ಭ್ರೂಣದ ಬೆಳವಣಿಗೆಯನ್ನು ಕುಂಠಿತಗೊಳಿಸುತ್ತದೆ. ಭ್ರೂಣದ ಮೇಲೆ ಪರಿಣಾಮ ಬೀರುವುದರಿಂದ ಮಾದಕ ದ್ರವ್ಯ ಮತ್ತು ಧೂಮಪಾನ ತ್ಯಜಿಸಬೇಕು.

ಸಾಫ್ಟ್ ಚೀಸ್‌, ಪ್ಯಾಶ್ಚರೀಕರಿಸದ ಹಾಲು, ಫ್ರಿಜ್‌ನಲ್ಲಿರಿಸಿದ ಆಹಾರ, ಮಾಂಸ ಮತ್ತು ಸೀಫುಡ್, ತೊಳೆಯದ ಕಚ್ಚಾ ಹಣ್ಣುಗಳು, ತರಕಾರಿಗಳು ಲಿಸ್ಟಿರಿಯಾ ಎಂಬ ಹೆಸರಿನ ಬ್ಯಾಕ್ಟೀರಿಯಾವನ್ನು ಹರಡಬಹುದು. ಈ ಬ್ಯಾಕ್ಟೀರಿಯಾವು ಆಹಾರ ಪದಾರ್ಥಗಳನ್ನು ವಿಷಕಾರಿಯನ್ನಾಗಿ ಮಾಡುವ ಗುಣಹೊಂದಿರುತ್ತದೆ. ಇದಲ್ಲದೇ ಜ್ವರ, ಚಳಿ, ದೇಹದ ನೋವು, ಭೇದಿ ಮತ್ತು ಗರ್ಭಪಾತಕ್ಕೆ ಅಥವಾ ಅವಧಿಪೂರ್ವ ಪ್ರಸವಕ್ಕೆ ಕಾರಣವಾಗುತ್ತದೆ. ಹುಟ್ಟುವ ಶಿಶುಗಳು ಸಾವನ್ನಪ್ಪಲೂಬಹುದು. ಲಿಸ್ಟಿರಿಯಾ, ಟೈಫಾಯ್ಡ್, ಅಮಿಯೋಬಿಯೊಸಿಸ್ ಮತ್ತು ಟೋಕ್ಸೋಪ್ಲಾಸ್ಮಾದಂತಹ ಸಮಸ್ಯೆಗಳನ್ನು ತಪ್ಪಿಸಲು ಇರುವ ಮಾರ್ಗವೆಂದರೆ ಆಹಾರ ಪದಾರ್ಥಗಳಲ್ಲಿ ಶುಚಿತ್ವ ಕಾಪಾಡಿಕೊಳ್ಳುವುದು.

(ಲೇಖಕಿ: ಕನ್ಸಲ್ಟೆಂಟ್ ಗೈನಕಾಲಜಿಸ್ಟ್, ವಿಕ್ರಂ ಹಾಸ್ಪಿಟಲ್, ಬೆಂಗಳೂರು)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT