ಸೋಮವಾರ, ಅಕ್ಟೋಬರ್ 26, 2020
28 °C

‘ರೋಗನಿರೋಧ ಶಕ್ತಿ ವೃದ್ಧಿಗೆ ಪೌಷ್ಟಿಕ ಆಹಾರ ಸೇವಿಸಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಜ್ವರ, ಕೆಮ್ಮು ಸೇರಿದಂತೆ ವಿವಿಧ ಅನಾರೋಗ್ಯದ ಲಕ್ಷಣಗಳು ಕಾಣಿಸಿಕೊಂಡಾಗ ಕೆಲವರು ಪರೀಕ್ಷೆ ಮಾಡಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಇದರಿಂದ ಆರೋಗ್ಯ ಇನ್ನಷ್ಟು ಹದಗೆಟ್ಟು, ಜೀವಕ್ಕೆ ಅಪಾಯ ಆಗುವ ಸಾಧ್ಯತೆ ಇರುತ್ತದೆ. ಹಾಗಾಗಿ ಸೋಂಕಿನ ಸಂದೇಹಗಳು ಮೂಡಿದಲ್ಲಿ ಭಯ ಬಿಟ್ಟು ಒಮ್ಮೆ ಪರೀಕ್ಷೆ ಮಾಡಿಸಿಕೊಳ್ಳಿ’.

– ಇದು ಕೊಲಂಬಿಯಾ ಏಷ್ಯಾ ಆಸ್ಪತ್ರೆಯ ಆಂತರಿಕ ಔಷಧ ವಿಭಾಗದ ಕಿರಿಯ ಸಲಹೆಗಾರ್ತಿ ಡಾ.ಬಿ. ಶಿಲ್ಪಾ ನಾಯ್ಡು ಅವರು ನೀಡಿದ ಸಲಹೆ. ಅವರು ಕೋವಿಡ್‌ ಚಿಕಿತ್ಸಾ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಹಲವು ಸೋಂಕಿತರಿಗೆ ಚಿಕಿತ್ಸೆ ನೀಡಿದ್ದಾರೆ. 

‘ಅನಾರೋಗ್ಯದ ಲಕ್ಷಣಗಳು ಕಾಣಿಸಿಕೊಂಡ ಕೂಡಲೇ ಕೊರೊನಾ ಸೋಂಕು ತಗುಲಿದೆ ಎಂದು ಆತಂಕ ಪಡಬೇಕಿಲ್ಲ. ಬದಲಾಗಿ ಹತ್ತಿರದ ಜ್ವರದ ಕ್ಲಿನಿಕ್‌ಗೆ ತೆರಳಿ, ತಪಾಸಣೆಗೆ ಒಳಪಡುವುದು ಒಳಿತು. ದೇಹವನ್ನು ಸೋಂಕು ಪ್ರವೇಶಿಸಿದ ಕೂಡಲೇ ಪತ್ತೆ ಮಾಡಿ, ಚಿಕಿತ್ಸೆ ನೀಡಿದಲ್ಲಿ ವ್ಯಕ್ತಿ ಬೇಗ ಚೇತರಿಸಿಕೊಳ್ಳುತ್ತಾನೆ. ಈ ಸಂದರ್ಭದಲ್ಲಿ ನಮ್ಮ ಆಹಾರ ಕ್ರಮ ಹಾಗೂ ಜೀವನ ವಿಧಾನ ಬದಲಾಯಿಸಿಕೊಳ್ಳಬೇಕಿದೆ. ಹಣ್ಣು, ತರಕಾರಿ, ಮೊಟ್ಟೆ ಸೇರಿದಂತೆ ವಿವಿಧ ಪೌಷ್ಟಿಕ ಆಹಾರ ಸೇವಿಸುವ ಮೂಲಕ ರೋಗನಿರೋಧಕ ಶಕ್ತಿ ವೃದ್ಧಿಸಿಕೊಳ್ಳಬೇಕು. ವ್ಯಾಯಾಮ, ಯೋಗ ಮಾಡುವುದನ್ನು ರೂಢಿಸಿಕೊಳ್ಳಬೇಕು’ ಎಂದು ಕಿವಿ ಮಾತು ಹೇಳಿದರು. 

‘ಮನೆಯ ಹಿರಿಯ ಸದಸ್ಯರಿಗೆ ರಕ್ಷಣೆ ನೀಡುವ ಜವಾಬ್ದಾರಿ ನಮ್ಮ ಮೇಲಿದೆ ಎನ್ನುವುದನ್ನು ಯುವಜನತೆ ಮರೆಯಬಾರದು. ವೃದ್ಧರಲ್ಲಿ ರೋಗನಿರೋಧಕ ಶಕ್ತಿ ಕಡಿಮೆ ಇರುವುದರಿಂದ ಸೋಂಕಿತರಾದಲ್ಲಿ ಅಸ್ವಸ್ಥರಾಗುವ ಸಾಧ್ಯತೆ ಇರಲಿದೆ. ಹಾಗಾಗಿ ಅಂತಹವರು ಅನಿವಾರ್ಯತೆ ಇದ್ದಲ್ಲಿ ಮಾತ್ರ ಅಗತ್ಯ ಸುರಕ್ಷತೆಯೊಂದಿಗೆ ಹೊರಗಡೆ ಹೋಗಬೇಕು. ಸದ್ಯ ಪಡೆಯುತ್ತಿರುವ ವೈದ್ಯಕೀಯ ಚಿಕಿತ್ಸೆ ಮುಂದುವರಿಸಬೇಕು’ ಎಂದರು.

‘ಮುನ್ನೆಚ್ಚರಿಕೆ ವಹಿಸಿದರೂ ಸೋಂಕಿತರಾದರೆ ಭಯಪಡಬಾರದು. ರೋಗ ಲಕ್ಷಣ ಇಲ್ಲದಿದ್ದಲ್ಲಿ ಮನೆಯಲ್ಲಿಯೇ ಆರೈಕೆ ಮಾಡಿಕೊಳ್ಳಬಹುದು. ಮೂರು ದಿನಕ್ಕೆ ಒಮ್ಮೆ ಟೆಲಿ ಮೆಡಿಸಿನ್ ವ್ಯವಸ್ಥೆಯಡಿ ವೈದ್ಯರನ್ನು ಸಂಪರ್ಕಿಸಿ, ಸಲಹೆಗಳನ್ನು ಪಡೆದುಕೊಳ್ಳುವುದು ಉತ್ತಮ. ಪಲ್ಸ್‌ ಆಕ್ಸಿ ಮೀಟರ್ ಇಟ್ಟುಕೊಂಡಿರಬೇಕು. ಒಂದು ವೇಳೆ ರೋಗ ಲಕ್ಷಣಗಳು ಇದ್ದರೂ ಪೂರಕ ಚಿಕಿತ್ಸೆಗಳು ಲಭ್ಯ ಇವೆ. ಔಷಧ ಬರುವವರೆಗೆ ಮುಖಗವಸು ಧರಿಸುವುದನ್ನು ಮತ್ತು ಅಂತರ ಕಾಯ್ದುಕೊಳ್ಳುವುದನ್ನು ಯಾವುದೇ ಕಾರಣಕ್ಕೂ ಮರೆಯಬಾರದು’ ಎಂದು ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು