ನನ್ನ ಮಗಳಿಗೆ 13 ವರ್ಷ. ಇದ್ದಕ್ಕಿದ್ದ ಹಾಗೆ ಪ್ಯಾನಿಕ್ ಅಟ್ಯಾಕ್ ಆಗುತ್ತಾಳೆ. ನಿತ್ಯ ನಿದ್ದೆಯಲ್ಲಿ ಮಾತನಾಡುತ್ತಾಳೆ. ಇದಕ್ಕೆ ಪರಿಹಾರ ಸೂಚಿಸುವಿರಾ?

ರಮಾ, ತುಮಕೂರು

ನಿಮ್ಮ ಪ್ರಶ್ನೆಯ ಹಿಂದೆ ಒಂದು ಗಂಭೀರ ಸಮಸ್ಯೆ ಅಡಗಿದೆ. ಮತ್ತು ಈ ಸಮಸ್ಯೆಗೆ ಪರಿಹಾರ ಕೇವಲ ಈ ಬರಹದ ಮೂಲಕ ತಿಳಿಸಲು ಸಾಧ್ಯವೇ ಇಲ್ಲ. ಯಾಕೆಂದರೆ, ಪ್ಯಾನಿಕ್ ಅಟ್ಯಾಕ್ ಅನ್ನುವುದು ಉದ್ವೇಗದ ತೀವ್ರ ರೂಪ. ಯಾವುದೇ ಸಮಸ್ಯೆ ತೀವ್ರರೂಪಕ್ಕೆ ತಿರುಗಿದ ಮೇಲೆ, ಅದಕ್ಕೆ ಸುಲಭ ಪರಿಹಾರಗಳನ್ನು ಕೊಡುವುದು ಸಾಧ್ಯವಿಲ್ಲ. ಶುಶ್ರೂಷೆಯೊಂದೇ ದಾರಿ. ಇತ್ತೀಚೆಗಷ್ಟೇ ಸುಮಾರು ನಿಮ್ಮ ಮಗಳದ್ದೇ ವಯಸ್ಸಿನ ಇನ್ನೊಬ್ಬ ಹುಡುಗಿ ನನ್ನ ಬಳಿ ಶುಶ್ರೂಷೆಗಾಗಿ ಬಂದು ಗುಣವಾದ ಬಗೆಯನ್ನು ಹಂಚಿಕೊಳ್ಳಬಯಸುತ್ತೇನೆ.

ದೀಕ್ಷಾ (ಹೆಸರು ಬದಲಾಯಿಸಲಾಗಿದೆ) 9ನೇ ತರಗತಿಯಲ್ಲಿ ಓದುತ್ತಿದ್ದ ಹುಡುಗಿ. ಸುಮಾರು ಎಂಟು ತಿಂಗಳುಗಳ ಹಿಂದೆ ಆಕೆಗೆ ಏಕಾಏಕಿ ಪ್ಯಾನಿಕ್ ಅಟ್ಯಾಕ್ ಸಮಸ್ಯೆ ಶುರುವಾಯಿತು. ಹೆತ್ತವರಿಗೆ ಯಾಕೆ - ಹೇಗೆ ಎಂಬುದು ಅರ್ಥವಾಗಲಿಲ್ಲ. ಅದೂ ಕೂಡಾ ರಜೆಗೆಂದು ಸುತ್ತಾಡಲು ಹೋದಂತಹ ಸಂದರ್ಭದಲ್ಲಿ.

ಆದರೆ ಅದು ಆರಂಭದಲ್ಲಿ ಒಮ್ಮೆ ಬಂದು ಆಮೇಲೆ ಕಡಿಮೆಯಾದಂತೆ ತೋರಿದ್ದರಿಂದ ಹೆತ್ತವರು ಅದನ್ನು ಹೆಚ್ಚು ಗಂಭೀರವಾಗಿ ಪರಿಗಣಿಸಲಿಲ್ಲ. ಆದರೆ, ಆಮೇಲಿನ ದಿನಗಳಲ್ಲಿ ಅದು ಎಷ್ಟರ ಮಟ್ಟಿನ ತೀವ್ರತೆಯನ್ನು ಪಡೆಯಿತು ಅಂದರೆ, ಆಕೆಗೆ ಪ್ಯಾನಿಕ್ ಅಟ್ಯಾಕ್ ಆದಾಗ ನೆಲದ ಮೇಲೆ ಬಿದ್ದು ಹೊರಳಾಡುತ್ತಿದ್ದಳು. ಮೈಯೆಲ್ಲಾ ನಡುಗುತ್ತಿತ್ತು. ಮತ್ತು ಹೆತ್ತವರಿಗೆ ಆ ಸಂದರ್ಭದಲ್ಲಿ ಏನು ಮಾಡಬೇಕು ಅಂತ ಅರ್ಥವಾಗುತ್ತಿರಲಿಲ್ಲ. ಭೀತಿಯಿಂದ ಮೂರು - ನಾಲ್ಕು ಆಸ್ಪತ್ರೆಗಳಿಗೆ ಕರೆದುಕೊಂಡು ಹೋಗಿ ಶುಶ್ರೂಷೆ ಕೊಡಿಸಿದರೂ ಯಾವುದೇ ಮಹತ್ತರವಾದಂತಹ ಪರಿಣಾಮ ಕಂಡು ಬರಲಿಲ್ಲ. ಒಂದಷ್ಟು ಮಾತ್ರೆಗಳನ್ನು ನುಂಗಬೇಕಾದಂತಹ ಹಿಂಸೆ, ಮಾತ್ರವಲ್ಲ ಆ ಮಾತ್ರೆಗಳ ಕಾರಣದಿಂದಾಗಿ ಮಂಪರು, ಉದಾಸೀನತೆ ಮತ್ತು ನಿಶ್ಶಕ್ತಿ. ಯಾವುದೇ ಕೆಲಸ ಮಾಡಲೂ ಆಸಕ್ತಿ ಇಲ್ಲ. ಮಗಳ ಇಂತಹ ಪರಿಸ್ಥಿತಿಯನ್ನು ಹೆತ್ತವರು ಕಂಗೆಟ್ಟು ಹೋಗಿದ್ದರು. ಒಂದು ಆಸ್ಪತ್ರೆಯಿಂದ ಇನ್ನೊಂದು ಆಸ್ಪತ್ರೆಗೆ ಹೋಗುವುದೇ ಆಗಿ ಹೋಗಿತ್ತು.

ರಾತ್ರೆ ಸರಿಯಾಗಿ ನಿದ್ದೆ ಇಲ್ಲ, ನಿದ್ದೆಯಲ್ಲಿ ಏನೇನೋ ಕನವರಿಕೆ, ಹಾಸಿಗೆಯಿಂದ ಏಳುವುದಕ್ಕೆ ಆಸಕ್ತಿ ಇಲ್ಲ, ಶರೀರವು ಯಾಕೋ ಭಾರವೆಂಬಂತೆ ಭಾಸವಾಗುತ್ತಿತ್ತು. ಊಟ - ತಿಂಡಿ ಮಾಡುವುದಕ್ಕೂ ಮನಸ್ಸಿಲ್ಲ. ದೈಹಿಕ ಚಟುವಟಿಕೆಗಳೆಲ್ಲವೂ ಮೂಲೆಗುಂಪಾಗಿದ್ದುವು. ಪುಸ್ತಕಗಳಿಗೆ ದೂಳು ಹಿಡಿದಿತ್ತು. ತನಗೆ ಏನಾಗುತ್ತಿದೆ ಎಂದು ಅರ್ಥವಾಗದ ಪರಿಸ್ಥಿತಿಯಲ್ಲಿ ಆಕೆ ಇದ್ದಳು. ಒಂದೊಂದು ಬಾರಿ, ತಂದೆ - ತಾಯಿಯ ಆರೈಕೆಯೂ ಭಾರವಾದಂತೆ ಆಕೆಗೆ ಅನ್ನಿಸುತ್ತಿತ್ತು. ಆಕೆಯ ಮನಸ್ಥಿತಿ ಎಲ್ಲಿಯವರೆಗೆ ಹೋಗಿತ್ತು ಅಂದರೆ, ಒಂದು ದಿನ ಇದ್ದ ಅಷ್ಟೂ ಮಾತ್ರೆಗಳನ್ನು ಒಟ್ಟಿಗೇ ತೆಗೆದುಕೊಂಡು ಬಿಟ್ಟಿದ್ದಳು. ಇರುವ ಒಬ್ಬಳೇ ಮಗಳು ಹೀಗೆಲ್ಲಾ ಮಾಡಿಕೊಂಡಾಗ ತಂದೆ - ತಾಯಿಗೆ ಜೀವವೇ ಕೈಗೆ ಬಂದಂತಾಗಿತ್ತು.

ಇನ್ನೊಂದಷ್ಟು ಕೌನ್ಸೆಲಿಂಗ್ ಮಾಡಲು ಕರೆದುಕೊಂಡು ಹೋದರೂ, ಏನೂ ದೊಡ್ಡ ಪ್ರಯೋಜನವಾಗಲಿಲ್ಲ. ಮುಂದೇನು ಮಾಡುವುದು ಎಂದು ತೋಚದೇ ಇದ್ದಂತಹ ಪರಿಸ್ಥಿತಿಯಲ್ಲಿ ಯಾರೋ ಒಬ್ಬರು ಹಿರಿಯರು ಅವರಿಗೆ ನನ್ನಲ್ಲಿ ಶುಶ್ರೂಷೆ ಪಡೆಯಲು ಸಲಹೆ ನೀಡಿದರು.

ಧೃತಿಗೆಟ್ಟಿದ್ದರೂ ಪ್ರಯತ್ನವನ್ನು ಮುಂದುವರಿಸುವ ಲಕ್ಷ್ಯವನ್ನು ಹೊಂದಿದ್ದ ಆಕೆಯ ತಂದೆ - ತಾಯಿ ಸ್ವಲ್ಪ ಒತ್ತಾಯ ಮಾಡಿಯೇ, ಆಕೆಯನ್ನು ಕರೆದುಕೊಂಡು ಬಂದಿದ್ದರು. ಮೊದಲ ಬಾರಿಗೆ ನನ್ನ ಬಳಿ ಬಂದಾಗ, ಆಕೆ ಮಾತನಾಡುವುದಕ್ಕೆ ಸಿದ್ಧಳಿರಲಿಲ್ಲ. ಅತ್ಯಂತ ಸಿಡುಕುತನ ಆಕೆಯ ಮನದಲ್ಲಿ ಮನೆಮಾಡಿತ್ತು. ಆದರೂ, ಹೇಗೋ ಆಕೆಯ ಮನವೊಲಿಸಿ ಒಂದು ಗಂಟೆ ಮಾತನಾಡುವ ಹಾಗೆ ಮಾಡಿದೆ. ಆಕೆಯ ಮನದಾಳದ ನೋವುಗಳನ್ನು ಅರ್ಥೈಸಿಕೊಂಡು ಒಂದಷ್ಟು ಉಪಾಯಗಳನ್ನು ಹೇಳಿದೆ. ತದನಂತರ ಮುಂದಿನ ಸೆಷನ್ಗಳಿಗೆ ಬರುವುದಕ್ಕೆ ಆಕೆಯೇ ಒಪ್ಪಿದಳು. ಸುಮಾರು 4 ಸೆಷನ್ಗಳಲ್ಲಿ ಆಕೆಯಲ್ಲಿ ಎಷ್ಟೊಂದು ಬದಲಾವಣೆ ಕಂಡುಬಂತೆಂದರೆ, ಆಕೆಯ ಪ್ಯಾನಿಕ್ ಅಟ್ಯಾಕ್ ಸುಮಾರಾಗಿ ಕಣ್ಮರೆಯಾಗಿತ್ತು. ಒಂದು ವೇಳೆ ಸಣ್ಣ ಪ್ರಮಾಣದಲ್ಲಿ ಬಂದರೂ ಅದು ಉದ್ವೇಗದ ರೂಪದಲ್ಲಿರುತ್ತಿತ್ತಷ್ಟೇ ಬಿಟ್ಟರೆ, ನೆಲದ ಮೇಲೆ ಹೊರಳಾಡುವಂತಹ ಪರಿಸ್ಥಿತಿಯಲ್ಲಿರಲಿಲ್ಲ. ಆಕೆಯ ನಿದ್ದೆಯ ಸಮಸ್ಯೆ ಸರಿಹೋಯಿತು. ರಾತ್ರಿ ಮಲಗಿದವಳು ಸುಮಾರು 12 ಗಂಟೆಯ ಹೊತ್ತಿಗೆ ಕಷ್ಟಪಟ್ಟು ಏಳುತ್ತಿದ್ದವಳು, ಬೆಳಿಗ್ಗೆ 7 ಗಂಟೆ ಗಂಟೆಗೆ ಏಳಲು ಆರಂಭಿಸಿದಳು. ತನ್ನ ಹವ್ಯಾಸಗಳಾದ ಸಂಗೀತ, ನೃತ್ಯ, ಈಜಾಟ ಮುಂತಾದ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಳು. ನಿಧಾನವಾಗಿ ಪುಸ್ತಕದ ದೂಳು ಮರೆಯಾಯಿತು. ಮನೆಯಲ್ಲಿ - ಮನದಲ್ಲಿ ಜೀವಂತಿಕೆ ಬಂತು. ಸುಮಾರು ತಿಂಗಳುಗಳ ಹೋರಾಟವು ಮುಗಿಯಿತು.

ಇದು ಹೇಗೆ ಸಾಧ್ಯವಾಯಿತು ?

* ಮೊದಲನೆಯದಾಗಿ ಅರ್ಥಮಾಡಿಕೊಳ್ಳಬೇಕಿರುವುದು ಪ್ಯಾನಿಕ್ ಅಟ್ಯಾಕ್ ಅನ್ನುವುದು ಭಾವನಾತ್ಮಕ ಸಮಸ್ಯೆ (Emotional problem)

* ಅದು ಒಮ್ಮಿಂದೊಮ್ಮೆಲೇ ಕಾಣಿಸಿಕೊಂಡರೂ, ಎಷ್ಟೋ ಬಾರಿ ಅದರ ಮೂಲ ನಮ್ಮ ಜೀವನದಲ್ಲಿ ನಡೆದ ಹಿಂದಿನ ಘಟನೆಗಳಲ್ಲಿ ಅಡಗಿರುತ್ತವೆ.

* ಮೂಲದಿಂದ ಬೇರು ಸಹಿತ ತೆಗೆದಾಗ ಮಾತ್ರ, ನಾವು ಅದನ್ನು ಪರಿಹರಿಸಿಕೊಳ್ಳಬಹುದು.

* ಯಾವುದೇ ಈ ರೀತಿಯ ಚಿಕಿತ್ಸೆಗೆ ಸ್ವಲ್ಪ ಸಮಯವನ್ನು ಕೊಡಬೇಕು. ತಾಳ್ಮೆ ವಹಿಸಬೇಕು.

* ಹೀಗೆ, ಪ್ಯಾನಿಕ್ ಅಟ್ಯಾಕ್ನಂತಹ ಸಮಸ್ಯೆ ಇದ್ದಾಗ, ತಡಮಾಡದೇ ಚಿಕಿತ್ಸೆಯನ್ನು ಕೊಡಿಸಿ. ಕೇವಲ ಲೇಖನಗಳಲ್ಲಿ ಅಥವಾ ಪುಸ್ತಕಗಳಲ್ಲಿ ಅಥವಾ ಯುಟ್ಯೂಬ್ನಲ್ಲಿ ಅಥವಾ ಇನ್ಸ್ಟಾಗ್ರಾಂನಲ್ಲಿ ಬರುವಂತಹ ಒಂದಷ್ಟು ಸುಲಭ ಉಪಾಯಗಳನ್ನು ಅರಿತುಕೊಂಡು ಪ್ರಯತ್ನಿಸುವುದರಿಂದ ಪರಿಹಾರ ಸಿಗಲು ಸಾಧ್ಯವಿಲ್ಲ. ಗಂಭೀರ ಸಮಸ್ಯೆಯನ್ನು ಹಗುರವಾಗಿ ಕಾಣಬೇಡಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.