ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೋಷಕರು ಮಕ್ಕಳಾಗುವ ಸಮಯ...

Last Updated 13 ಮೇ 2022, 19:30 IST
ಅಕ್ಷರ ಗಾತ್ರ

ಮನೆ ಒಳಗಾಗಲಿ, ಹೊರಗಾಗಲಿ ‘ವಾತಾವರಣ’ ಅಹ್ಲಾದಕರವಾಗಿದ್ದರೆ ಮಕ್ಕಳ ನಡವಳಿಕೆಯೂ ಉತ್ತಮವಾಗಿರುತ್ತದೆ. ಅಂಥ ಸಕಾರಾತ್ಮಕ ಪರಿಸರವನ್ನು ನಿರ್ಮಿಸುವುದು ಪೋಷಕರು ಮತ್ತು ನಾಗರಿಕರ ಜವಾಬ್ದಾರಿ.

ವಾಯಲೆನ್ಸ್, ವಾಯಲೆನ್ಸ್, ವಾಯಲೆನ್ಸ್..
ಐ ಡೋಂಟ್ ಲೈಕ್ ಇಟ್..

ಸ್ಮಾರ್ಟ್‌ಫೋನ್‌ನಲ್ಲಿ ಬರುತ್ತಿದ್ದ ಕೆಜಿಎಫ್‌ –2 ಸಿನಿಮಾದ ನಟ ಯಶ್‌ ಡೈಲಾಗ್‌ ದೃಶ್ಯವನ್ನು ನೋಡುತ್ತಿದ್ದರುತಾಯಿ ಸೌಜನ್ಯಾ. ಅವರ ಜೊತೆಗಿದ್ದ ಮಗಳು ಶ್ರಾವ್ಯಾ ತೊದಲ್ನುಡಿಯಲ್ಲಿ ವಾಲೆನ್ಸ್... ವಾಲೆನ್ಸ್ ಎನ್ನತೊಡಗಿದಳು. ಆಕೆಯ ವಯಸ್ಸು 6 ವರ್ಷ!

ಮಗ ಆಕಾಶ್‌ಗೆ ತಂದೆ ಕೃಷ್ಣಕುಮಾರನಂತೆ ಆಗಬೇಕು ಎಂಬ ಬಯಕೆ. ಹಾಗಾಗಿ ಅಪ್ಪನ ಎಲ್ಲ ನಡೆ–ನುಡಿಯನ್ನೂ ಅನುಸರಿಸುತ್ತಿದ್ದ. ಹೀಗೊಂದು ದಿನ ಬೇಸರಗೊಂಡಿದ್ದ ಕೃಷ್ಣಕುಮಾರ ಮನೆಯ ಟೆರೇಸ್ ಮೇಲೆ ಸಿಗರೇಟ್ ಸೇದುತ್ತ ನಿಂತಿದ್ದನ್ನು ಆಕಾಶ್ ನೋಡಿದ. ಕೆಲ ಹೊತ್ತಿನ ನಂತರ ಅಲ್ಲಿ ಆರಿಸಿ ಎಸೆದಿದ್ದ ಸಿಗರೇಟ್ ತುಂಡನ್ನು ಬಾಯಿಯಲ್ಲಿ ಇಟ್ಟುಕೊಂಡ. ಆತನ ವಯಸ್ಸು 12 ವರ್ಷ!

ಸೌಜನ್ಯಾ, ಕೃಷ್ಣಕುಮಾರ ಇಬ್ಬರದ್ದೂ ಮಧ್ಯಮವರ್ಗದ ಕುಟುಂಬಗಳು. ಬರುವ ಕಡಿಮೆ ಸಂಬಳದಲ್ಲಿಯೇ ಬದುಕು ಕಟ್ಟಿಕೊಂಡವರು. ಎಷ್ಟೇ ಕಷ್ಟಗಳು ಎದುರಾದರೂ, ಮಕ್ಕಳಿಗೆ ಯಾವುದೇ ಕೊರತೆ ಆಗದಂತೆ ಬೆಳೆಸುವ ಅಭಿಲಾಷೆ ಅವರದ್ದು. ಮಕ್ಕಳ ಈ ನಡವಳಿಕೆ ಅವರನ್ನು ತುಸು ಆತಂಕಕ್ಕೆ ದೂಡಿದೆ. ‘ಮಕ್ಕಳು ನಮ್ಮ ಮಾತೇ ಕೇಳುವುದಿಲ್ಲ. ತುಂಬಾ ಅನುಕರಣೆ ಸ್ವಭಾವ ಅವರದ್ದು. ಒಮ್ಮೊಮ್ಮೆ ಕೆಟ್ಟದಾಗಿ ಮಾತನಾಡುತ್ತಾರೆ. ಎಷ್ಟು ಹೇಳಿದರೂ ತಿದ್ದಿಕೊಳ್ಳುವುದಿಲ್ಲ’ ಎಂದು ಇಬ್ಬರೂ ಬೇಸರ ವ್ಯಕ್ತಪಡಿಸುತ್ತಾರೆ.

ಮಕ್ಕಳಲ್ಲಿನ ಈ ಸಮಸ್ಯೆ ಎರಡು ಕುಟುಂಬಗಳಿಗಷ್ಟೇ ಸೀಮಿತವಾಗಿಲ್ಲ. ಮಕ್ಕಳಿರುವ ಅನೇಕ ಕುಟುಂಬಗಳೂ ಈ ಸಮಸ್ಯೆಯನ್ನು ಎದುರಿಸುತ್ತಿವೆ. ಆದರೆ, ಸ್ವರೂಪ ಬೇರೆ ಅಷ್ಟೇ.

ಇದಕ್ಕೆ ಕಾರಣ ಏನು?

ಇಂಥ ಬದಲಾವಣೆಗೆ ನೇರವಾಗಿ ಮಕ್ಕಳನ್ನಷ್ಟೇ ದೂಷಿಸಲಾಗದು. ಮನೆ ಮತ್ತು ಸುತ್ತಮುತ್ತಲಿನ ಪರಿಸರದ ಪರಿಣಾಮವೂ ಕಾರಣವಿರುತ್ತದೆ. ಜೊತೆಗೆ ಮಕ್ಕಳಲ್ಲಿ ಮೂಡುವ ಅತಿ ಕುತೂಹಲವೂ ಹೀಗೆ ಮಾಡಲು ಅವರನ್ನು ಪ್ರೇರೇಪಿಸುತ್ತದೆ ಎನ್ನುತ್ತಾರೆ ಮನಃಶಾಸ್ತ್ರಜ್ಞೆ ಡಾ. ಜಯಶ್ರೀ ಎಸ್. ರೆಡ್ಡಿ.

ಮಕ್ಕಳು ಹೀಗೆ ತಪ್ಪು ಮಾಡುವಾಗ, ಪೋಷಕರು ಅದರ ಮೂಲ ಕಾರಣವನ್ನು ಪತ್ತೆಮಾಡಿ ತಿಳಿ ಹೇಳಬೇಕು. ‘ತಾವು ಸಣ್ಣವರಿದ್ದಾಗ, ಇಂಥ ತಪ್ಪುಗಳನ್ನು ಮಾಡಿಯೇ ಇಲ್ಲವೇ’ ಎಂಬುದನ್ನು ಸ್ವಯಂ ಪ್ರಶ್ನಿಸಿಕೊಳ್ಳಬೇಕು. ಆಗ ತಮ್ಮ ತಂದೆ-ತಾಯಿ ಪರಿಸ್ಥಿತಿ ಹೇಗೆ ನಿಭಾಯಿಸಿದ್ದರು? ಈಗ ಯಾಕೆ ಅದು ಸಾಧ್ಯವಾಗಲಿಲ್ಲ ಎಂದು ಅರಿಯಲು ಪ್ರಯತ್ನಿಸಬೇಕು ಎಂಬುದು ಅವರ ಸಲಹೆ.

ಸಮಸ್ಯೆಗೆ ಪರಿಹಾರವೇನು?

ಇಡೀ ಮನೆಯಷ್ಟೇ ಜಗತ್ತು ಮತ್ತು ಮನೆಯಲ್ಲಿನ ಕುಟುಂಬ ಸದಸ್ಯರಷ್ಟೇ ತನ್ನ ಪ್ರಪಂಚದವರು ಎಂಬ ಮುಗ್ಧ ಭಾವದಲ್ಲಿರುವ ಮಕ್ಕಳಿಗೆ ಸರಿ-ತಪ್ಪುಗಳ ತಿಳಿ ಹೇಳಬೇಕು.‌ ಪೋಷಕರು, ಕೆಲಸದ ಹೊರೆಯನ್ನು ಮನೆಗೆ, ಮನೆಯ ಸಮಸ್ಯೆಯನ್ನು ಕಚೇರಿಗೆ ಒಯ್ಯದೇ ಅವುಗಳನ್ನು ಅಲ್ಲಲ್ಲಿಯೇ ಬಿಟ್ಟು ಮಗುವಿನ ಎದುರು ಸದಾ ಪ್ರಸನ್ನಚಿತ್ತರಾಗಿ ಇರುವಂತೆ ಮನಸ್ಸನ್ನು ಹಿಡಿತದಲ್ಲಿಟ್ಟುಕೊಳ್ಳಬೇಕು.

ಮನೆಯಲ್ಲಿ ಪದೇ ಪದೇ ಆತಂಕ, ಖಿನ್ನತೆ ಮೂಡಿಸುವ ಜಗಳದಂತಹ ಘಟನೆಗಳು ನಡೆಯದಂತೆ ಎಚ್ಚರವಹಿಸಬೇಕು. ಇಂಥ ಘಟನೆಗಳು ಮಕ್ಕಳ ಮನಸ್ಸಿನ ಮೇಲೂ ತೀವ್ರ ಪರಿಣಾಮ ಬೀರುತ್ತವೆ. ‘ಇಂಥ ಸಂದರ್ಭಗಳಲ್ಲಿ ಪೋಷಕರು ಮಕ್ಕಳ‌ ಜೊತೆ ಮಕ್ಕಳಾಗಿ.‌ ಸ್ನೇಹಿತರಾಗಿ ಅವರಲ್ಲಿರುವ ಗೊಂದಲವನ್ನು ಹೋಗಲಾಡಿಸಿ, ಆತ್ಮವಿಶ್ವಾಸ ಹೆಚ್ಚಿಸಬೇಕು’ ಎಂದು ಸಲಹೆ ನೀಡುತ್ತಾರೆ ಮನಃಶಾಸ್ತ್ರಜ್ಞರು.

ಅವರ ಪ್ರಕಾರ, ಕೆಲ ಮಕ್ಕಳಿಗೆ ಕಾಡುವ ಮಾನಸಿಕ ಸಮಸ್ಯೆಗಳು ಮನೆಯಿಂದಲೇ ಆರಂಭಗೊಳ್ಳುತ್ತವೆ. ಪೋಷಕರು ಮನೆಯಲ್ಲಿನ ಪರಿಸ್ಥಿತಿ ಸುಧಾರಿಸಿಕೊಂಡು ಮಕ್ಕಳ ಜೊತೆ ಪ್ರೀತಿ ಮತ್ತು ಸ್ನೇಹಭಾವದಿಂದ ಕಳೆದರೆ, ಮಾನಸಿಕ ಸಮಸ್ಯೆಗಳನ್ನು ಮನೆಗಳಲ್ಲಿಯೇ ಪರಿಹರಿಸಿಕೊಳ್ಳಬಹುದು.

ಮೊಬೈಲ್ ಗೀಳಿನ ಸಮಸ್ಯೆ

ಈವರೆಗೆ ಮಕ್ಕಳು ಸುತ್ತಮುತ್ತಲಿನ ಪರಿಸರದಲ್ಲಿ ನಡೆಯುವ ಘಟನೆಗಳ ಅನುಕರಣೆ ಮಾಡುತ್ತಾರೆಂಬ ಆತಂಕದಲ್ಲಿದ್ದ ಪೋಷಕರಿಗೆ, ಈಗ ಅವರು ಮೊಬೈಲ್‌ ವೀಕ್ಷಣೆಯ ವ್ಯಸನಕ್ಕೆ ಒಳಗಾಗಿರುವುದು ದೊಡ್ಡ ತಲೆನೋವಾಗಿದೆ. ಫೋನ್‌ನಲ್ಲಿ ನೋಡುವ ದೃಶ್ಯಗಳನ್ನೂ ಅನುಕರಿಸುತ್ತಾರೆಂಬ ದೂರು ಪೋಷಕರದ್ದು. ಏಕೆಂದರೆ, ಮೊಬೈಲ್ ಬರೀ‌ ಫೋನ್ ಆಗಿ ಉಳಿಯದೇ‌ ಪುಟಾಣಿ ಟಿವಿ ಸೆಟ್ ಮತ್ತು ಪುಟ್ಟ ಸಿನಿಮಾ ಮಂದಿರವೂ ಆಗಿಬಿಟ್ಟಿದೆ. ಈ ಹಿನ್ನೆಲೆಯಲ್ಲಿ ಪೋಷಕರು, ಮಕ್ಕಳ ಎದುರು ಮೊಬೈಲ್‌ ಅನ್ನು ಅತಿಯಾಗಿ ಬಳಸದಿರುವುದು ಒಳ್ಳೆಯದು.

ಮಕ್ಕಳು ಹಟ ಮಾಡುವಾಗ, ಅವರನ್ನು ಸಮಾಧಾನ ಮಾಡಲು ಕೆಲವು ಪೋಷಕರು ಮೊಬೈಲ್ ಕೊಡುತ್ತಾರೆ. ಇದು ತಕ್ಷಣದ ಪರಿಹಾರ ಎನಿಸಿದರೂ ದೀರ್ಘಕಾಲದಲ್ಲಿ ಮಕ್ಕಳ ಮನಸ್ಸಿನ ಮೇಲೆ ದುಷ್ಪರಿಣಾಮ ಬೀರುವ ಅಭ್ಯಾಸವಾಗಿದೆ. ಮೊಬೈಲ್‌ನ ಅತಿಯಾದ ವೀಕ್ಷಣೆ ಮಕ್ಕಳಲ್ಲಿನ ಸೃಜನಾತ್ಮಕ ಆಲೋಚನೆಗೆ ತಡೆಯೊಡ್ಡುವ ಸಾಧ್ಯತೆ ಇದೆ. ಮಾತ್ರವಲ್ಲ, ದೈಹಿಕ ಚಟುವಟಿಕೆಯನ್ನು ಕುಂಠಿತಗೊಳಿಸಬಹುದು. ಈ ಬಗ್ಗೆ ಎಚ್ಚರವಿರಲಿ.

ಇಲ್ಲಿವರೆಗೂ ಕೊರೊನಾ ಕಾರಣ ಆನ್‌ಲೈನ್ ತರಗತಿಯ ನೆಪದಲ್ಲಿ ಮೊಬೈಲ್ ಮಕ್ಕಳ ಕೈ ಸೇರಿತ್ತು. ಈಗ ತಕ್ಕ ಮಟ್ಟಿಗೆ ಸಮಸ್ಯೆ ಬಗೆಹರಿದಿದೆ. ಇನ್ನು ಕೆಲ ವರ್ಷಗಳ ಮಟ್ಟಿಗಾದರೂ ಮಕ್ಕಳು ಮೊಬೈಲ್‌ನಿಂದ ದೂರವಿರುವಂತೆ ನೋಡಿಕೊಳ್ಳಬೇಕು.

ಮನೆಯಲ್ಲಿ ಉತ್ತಮ, ಆಹ್ಲಾದಕರ ವಾತಾವರಣವನ್ನು ನಿರ್ಮಿಸುವ ಜೊತೆಗೆ, ಮಕ್ಕಳು ಸುಂದರ ಪರಿಸರದಲ್ಲಿ ಆಟವಾಡುವಂತಾಗಲಿ. ಕ್ಷಣ ಕ್ಷಣವೂ ಹೊಸ ಸಂಗತಿಗಳನ್ನು ಕಲಿಯುತ್ತ, ಅರಿಯುತ್ತ ಚೆಂದನೆಯ ವ್ಯಕ್ತಿತ್ವ ರೂಪಿಸಿಕೊಳ್ಳಲಿ.

‘ಪೋಷಕರಲ್ಲಿ ಕಾಳಜಿ, ಅರಿವು ಅವಶ್ಯ’

ಡಾ. ಜಯಶ್ರೀ ಎಸ್. ರೆಡ್ಡಿ
ಡಾ. ಜಯಶ್ರೀ ಎಸ್. ರೆಡ್ಡಿ

‘ಮಕ್ಕಳ ವ್ಯಕ್ತಿತ್ವವನ್ನು ಉತ್ತಮಗೊಳಿಸುವಲ್ಲಿ ಪೋಷಕರ ಪಾತ್ರ ಪ್ರಮುಖವಾದದ್ದು. ಹಾಗಾಗಿ, ಮಕ್ಕಳ ಎದುರು ತಾಳ್ಮೆ ಕಳೆದುಕೊಳ್ಳದೇ, ಜಗಳವಾಡದೇ, ಮನಸ್ತಾಪ ಅಥವಾ ಖಿನ್ನತೆ ಒಳಗಾಗದೇ ಉತ್ತಮ ನಡವಳಿಕೆ ರೂಢಿಸಿಕೊಳ್ಳುವುದು ಮುಖ್ಯ’ ಎಂದು ಮನಃಶಾಸ್ತ್ರಜ್ಞೆ ಡಾ. ಜಯಶ್ರೀ ಎಸ್. ರೆಡ್ಡಿ ಹೇಳುತ್ತಾರೆ.

‘ಪೋಷಕರ ಕೆಟ್ಟ ನಡವಳಿಕೆ ಮತ್ತು ಜೀವನಶೈಲಿಯು ಮಕ್ಕಳ ಮೇಲೆ ದುಷ್ಪರಿಣಾಮ ಬೀರುತ್ತವೆ. ಉತ್ತಮ ಗುಣ ಮತ್ತು ಸಕಾರಾತ್ಮಕ ಆಲೋಚನೆಗಳಿಂದ ಮಕ್ಕಳನ್ನು ಬೆಳೆಸಬೇಕೇ ಹೊರತು ಅವರನ್ನು ಮಾನಸಿಕವಾಗಿ ಕುಗ್ಗಿಸುವಂತಹ ವಾತಾವರಣ ಸೃಷ್ಟಿಸಬಾರದು’ ಎಂಬ ಅಭಿಪ್ರಾಯ ಅವರದ್ದು.

‘ನನ್ನ ಅಧ್ಯಯನದ ಪ್ರಕಾರ, ಅತಿಯಾದ ಮೊಬೈಲ್‌ ಬಳಕೆಯಿಂದ ಅನೇಕ ಮಕ್ಕಳು ಶಿಕ್ಷಣದಲ್ಲಿ ಹಿಂದುಳಿದಿದ್ದಾರೆ. ಇದರಿಂದ ದೂರವಿರಿಸುವುದರ ಜೊತೆಗೆ ಅವರಲ್ಲಿ ಮೂಡುವ ಹೊಸ ಆಲೋಚನೆ ಮತ್ತು ಕುತೂಹಲಗಳಿಗೆ ಸಮಾಧಾನವಾಗಿ ಸ್ಪಂದಿಸುವ ಮನೋಭಾವವನ್ನು ಪೋಷಕರು ಬೆಳೆಸಿಕೊಳ್ಳಬೇಕು’ ಎನ್ನುತ್ತಾರೆ ಅವರು. ‘ಕ್ರೀಡೆ ಸೇರಿದಂತೆ ದೈಹಿಕ ಶ್ರಮ ಬಯಸುವ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತೆ ಮಕ್ಕಳನ್ನು ಪ್ರೋತ್ಸಾಹಿಸಬೇಕು’ ಎಂದು ಅವರು ಸಲಹೆ ನೀಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT