ಶುಕ್ರವಾರ, ಮಾರ್ಚ್ 5, 2021
27 °C

ಅಡಿಗಡಿಗೆ ಎದುರಾಗುವ ಒತ್ತಡ, ತಾಳ್ಮೆಯಿಂದ ದೊರೆವುದು ದಡ

ಕಾವ್ಯ ಸಮತಳ Updated:

ಅಕ್ಷರ ಗಾತ್ರ : | |

Deccan Herald

ಇತ್ತೀಚೆಗೆ ಮಳೆಯಿಂದಾಗಿ ನಮ್ಮ ‘ಯಜಮಾನ’ ಸಿನಿಮಾದ ಚಿತ್ರೀಕರಣ ನಿಂತುಹೋಗಿತ್ತು. ನಾವಂದುಕೊಂಡ ಸಮಯಕ್ಕೆ ಚಿತ್ರೀಕರಣ ನಡೆಯದೇ ಇದ್ದದ್ದು, ಸೆಲೆಬ್ರಿಟಿಗಳು ಕೊಟ್ಟ ಡೇಟ್ಸ್‌ ಮುಗಿದುಹೋಗಿದ್ದು – ಹೀಗೆ ಚಿಕ್ಕಪುಟ್ಟ ವಿಷಯಗಳಿಂದ ಆರಂಭಗೊಂಡು ಎಲ್ಲವೂ ನಿರ್ಮಾಪಕಿಯಾದ ನನ್ನನ್ನು ಒತ್ತಡಕ್ಕೆ ದೂಡಿದ್ದವು. ಎಲ್ಲವೂ ಸರಿಯಾಯಿತು ಎಂದುಕೊಂಡು ಮತ್ತೆ ಚಿತ್ರೀಕರಣ ಶುರುವಾಗಿ, ನಾಯಕ ನಟ ದರ್ಶನ್‌ ಚಿತ್ರೀಕರಣ ಸೆಟ್‌ಗೆ ಬಂದಿದ್ದರು. ಚಿತ್ರೀಕರಣಕ್ಕೆ ಎಲ್ಲ ತಯಾರಿ ನಡೆದಿತ್ತು. ಆದರೆ ನಡುವೆ ಮೈಕ್‌ ಕೈಕೊಟ್ಟಿತು‌. ಆ ಕ್ಷಣಕ್ಕೆ ಈ ವಿಷಯ ನಮಗೆ ದೊಡ್ಡ ಒತ್ತಡವಾಗಿ ಪರಿಣಮಿಸಿತು. ಈ ಉದಾಹರಣೆಗಳ ಮೂಲಕ ನಾನು ಹೇಳಹೊರಟಿದ್ದು ಇಷ್ಟೇ: ಸಿನಿಮಾ ಚಿತ್ರೀಕರಣದಲ್ಲಿನ ಒತ್ತಡಗಳು ಒಂದಲ್ಲಾ ಎರಡಲ್ಲಾ...

ಒತ್ತಡವನ್ನು ಇದಮಿತ್ಥಂ ಎಂದು ಅರ್ಥೈಸುವುದೂ ಸರಳವಲ್ಲ. ಆಯಾ ಕ್ಷೇತ್ರಕ್ಕೆ, ಸಂದರ್ಭಕ್ಕೆ ತಕ್ಕಂತೆ ಒತ್ತಡ ಉಂಟಾಗುತ್ತದೆ. ನನಗೆ ಅನ್ನಿಸಿದ ಹಾಗೆ ನಮ್ಮೊಳಗಿರುವ ಅಗಾಧ ಬಯಕೆಗಳು ಅಂದುಕೊಂಡ ಸಮಯಕ್ಕೆ ಈಡೇರದೇ ಇದ್ದಾಗ ನಾವು ನಿರಾಶರಾಗುತ್ತೇವೆ. ಇದೇ ಕೊನೆಗೆ ಒತ್ತಡವಾಗಿ ಬದಲಾಗುತ್ತದೆ. ಮನೆ ಮತ್ತು ವೃತ್ತಿಪರ ಬದುಕನ್ನು ನಿರ್ವಹಣೆ ಮಾಡುವಾಗ, ನಮ್ಮ ಗುರಿಯತ್ತ ನಡೆವಾಗ, ಆರ್ಥಿಕ ವಿಷಯಗಳಿಗೆ, ಸಾಮಾಜಿಕ ವಿಷಯಗಳಿಗೆ... ಹೀಗೆ ಹಲವಾರು ಕಾರಣಗಳಿಂದ ಒತ್ತಡ ಉಂಟಾಗಬಹುದು. 

ನಾನು ಕಲಾವಿದೆ, ನಿರ್ಮಾಪಕಿ, ನಿರ್ದೇಶಕಿ ಆಗಿರುವುದರಿಂದ ಈ ಕ್ಷೇತ್ರಗಳಲ್ಲಿರುವ ಸಾಮಾನ್ಯ ಒತ್ತಡಗಳು ನಮ್ಮನ್ನು ಆವರಿಸಿರುತ್ತವೆ. ನಾನು ಮಹಿಳೆ ಎಂಬ ಕಾರಣಕ್ಕೆ ಈ ಸಮಾಜ ನನ್ನನ್ನು ಮತ್ತು ನನ್ನ ಕೆಲಸಗಳನ್ನು ಪರಿಗಣಿಸುವುದು ಕೂಡ ಅಷ್ಟು ಸರಳವಾದ ವಿಷಯವಲ್ಲ. ಯಾವುದೇ ಕ್ಷೇತ್ರದಲ್ಲಿ, ಮಹಿಳೆ ಯಶಸ್ಸು ಗಳಿಸಿ ಮುಂದೆ ಬರಬೇಕೆಂದರೆ ಎದುರಾಗುವ ಎಲ್ಲ ರೀತಿಯ ಒತ್ತಡಗಳನ್ನು ಧೈರ್ಯದಿಂದ ಹಾಗೂ ಸರಿಯಾದ ದಾರಿಯಲ್ಲಿ ನಿರ್ವಹಿಸಬೇಕಿರುತ್ತದೆ. ಒತ್ತಡಗಳನ್ನು ಸಕರಾತ್ಮಕ ರೀತಿಯಲ್ಲಿ ಗ್ರಹಿಸಿಕೊಂಡು ಮುಂದುವರಿಯಬೇಕಾಗುತ್ತದೆ.

ನಾನೊಬ್ಬ ಮಹಿಳೆ ಎಂಬುದು ಒತ್ತಡವಲ್ಲ. ಇಂದಿನ ಸಮಾಜ ಮಹಿಳೆಯನ್ನು ಪುರುಷರಿಗೆ ಸರಿಸಮವಾಗಿ ನೋಡುವುದಿಲ್ಲ. ಹಾಗಾಗಿ ಪ್ರತಿ ಕ್ಷೇತ್ರದಲ್ಲೂ, ಪ್ರತಿ ವಿಷಯಕ್ಕೂ ‘ನಾನು ಇದ್ದೇನೆ’ ಎಂಬುದನ್ನು ಸಾಬೀತುಪಡಿಸಬೇಕಾಗುತ್ತದೆ. ಸಾಮಾನ್ಯ ಮಹಿಳೆಗೂ ಇದೇ ಸಮಸ್ಯೆ ಇರುತ್ತದೆ ಎಂಬುದು ನನ್ನ ಅನುಭವ.

ಒಂದು ಧಾರಾವಾಹಿ ಚಿತ್ರೀಕರಣ ಸಂದರ್ಭದಲ್ಲಿ ನಿರ್ದೇಶಕರು, ‘ಕೊಟ್ಟಿದ ಡೈಲಾಗ್‌ ಹೇಳಬೇಕು’ ಎಂದು ತಿಳಿಸಿದ್ದರು. ‘ಹೆಣ್ಣಿಗೆ ಹೆಣ್ಣೇ ಶತ್ರು’ ಎನ್ನುವ ಸಂಭಾಷಣೆಯದು. ಮಹಿಳೆಯಾಗಿ ಆ ಮಾತನ್ನು ನಾನು ಒಪ್ಪುವುದಿಲ್ಲ. ಹಾಗಾಗಿ, ಆ ಸಂಭಾಷಣೆಯನ್ನು ಹೇಳುವುದಿಲ್ಲ ಎಂದು ವಾದಿಸಿದೆ. ಸ್ವಲ್ಪ ಸಮಯದ ನಂತರ ನಿರ್ದೇಶಕರು ‘ಸರಿ’ ಎಂದು ತಲೆದೂಗಿದರು. ಹೀಗೆ ಹಲವಾರು ಬಾರಿ ನನಗೆ ಆಗದೇ ಇರುವುದನ್ನು ಸಾಧ್ಯವಿಲ್ಲ ಎಂದು ಹೇಳಿ ಒತ್ತಡದಿಂದ ದೂರ ಉಳಿಯುವುದನ್ನು ರೂಢಿಸಿಕೊಂಡಿದ್ದೇನೆ. ನನ್ನಂತೆ ಕೆಲವು ಕಲಾವಿದರಿಗೂ  ಇಂತಹ ಸಮಸ್ಯೆ ಎದುರಾಗಿರುತ್ತದೆ. ಅಂತಹ ಸಮಯದಲ್ಲಿ ಒತ್ತಡಕ್ಕೆ ಒಳಗಾಗದೇ ‘ಸಾಧ್ಯವಿಲ್ಲ’ ಎಂಬುದನ್ನು ದೃಢವಾಗಿ ಹೇಳುವುದನ್ನು ಕಲಿಯಬೇಕು. 

ನಾವು ಒಂದು ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಿರುತ್ತೇವೆ. ನಮ್ಮೊಟ್ಟಿಗೆ ಇರುವವರು ಅದನ್ನು ಅರ್ಥ ಮಾಡಿಕೊಂಡ ಬಗೆ ಹಾಗೂ ಬೇರೆಯವರಿಗೆ ಅರ್ಥೈಸುವ ರೀತಿ ಬದಲಾಗಬಹುದು. ನಾನು ನನ್ನ ಮಗಳಿಗೆ ಇವುಗಳ ಬಗ್ಗೆ ಹೇಳುತ್ತಿರುತ್ತೇನೆ. ಏಕೆಂದರೆ ಮುಂದೆ ಅವಳಿಗೂ ಹೀಗೆ ಒತ್ತಡ ಉಂಟಾಗಬಹುದು. ಮಕ್ಕಳು ಸಂದರ್ಭವನ್ನು ಸರಿಯಾಗಿ ನಿಭಾಯಿಸುವುದನ್ನು ಹೇಳಿಕೊಡಬೇಕಾಗುತ್ತದೆ. ಇದು ನಮ್ಮ ಜವಾಬ್ದಾರಿಯು ಹೌದು. 

ಅತಿಯಾದ ಒತ್ತಡದಿಂದ ನಲುಗಿ ಹೊರಬರಲಾಗದೇ ಒದ್ದಾಡಿದ ಸಂದರ್ಭವೂ ಇದೆ. ಅಂತಹ ಎಲ್ಲಾ ಸಮಯದಲ್ಲಿ ನನ್ನ ಕುಟುಂಬದವರು ನನ್ನೊಟ್ಟಿಗಿದ್ದರು. ಇಂದಿಗೂ ಇದ್ದಾರೆ. ಇದು ನನಗೆ ಆತ್ಮಸ್ಥೈರ್ಯವನ್ನು ತಂದುಕೊಟ್ಟಿದೆ, ಖಿನ್ನತೆಯಿಂದ ಹೊರಬರುವ ದಾರಿಯನ್ನು ಯೋಚಿಸಲು ಸಾಧ್ಯವಾಗಿದೆ. 

ದಿನಪ್ರತಿ ಒತ್ತಡಗಳು ಇರುತ್ತದೆ. ಅದಕ್ಕಾಗಿ ಬೇಸರಿಸಿಕೊಳ್ಳಬಾರದು‌. ಆ ಸಂದರ್ಭಗಳಿಂದ ಹೊರಬರಲು ಪ್ರಯತ್ನಿಸಬೇಕು. ಒತ್ತಡವು ನಾವು ದೈಹಿಕವಾಗಿ ಹಾಗೂ ಮಾನಸಿಕವಾಗಿ ನರಳುವಂತೆ ಮಾಡುತ್ತದೆ. ಯಾವುದೇ ಸಮಯದಲ್ಲಿ ಖಿನ್ನತೆಗೆ ಒಳಗಾಗುವುದಕ್ಕಿಂತ ಸಮಾಧಾನದಿಂದ ಒಂದೆಡೆ ಕೂತು ಯೋಚಿಸಿ ನಿರ್ಧಾರ ತೆಗೆದುಕೊಳ್ಳುವುದು ಉತ್ತಮವಾದ ಮಾರ್ಗ. ಇವತ್ತಿನ ಜೀವನಶೈಲಿಗೆ ಒತ್ತಡ ಎನ್ನುವುದು ರಕ್ತಸಂಚಾರದಷ್ಟೇ ಸಹಜವಾದ ಕ್ರಿಯೆ ಆಗಿದೆ.

ಹತ್ತು ವರ್ಷಗಳ ಹಿಂದೆ ಶಾಲೆ, ಕಾಲೇಜು, ಸ್ನೇಹಿತರು ಪರೀಕ್ಷೆ – ಇಷ್ಟೇ ನಮ್ಮ ಜಗತ್ತಾಗಿತ್ತು. ಅಲ್ಲಿ ಪರೀಕ್ಷೆಗಳು ಒತ್ತಡವಾಗಿರುತ್ತಿದ್ದವು. ವೃತ್ತಿಪರ ಜೀವನಕ್ಕೆ ಕಾಲಿರಿಸಿದ ಮೇಲೆ ಪ್ರತಿದಿನವೂ ಪರೀಕ್ಷೆ.

ಕಾಲ ಮುಂದೆ ಓಡುತ್ತಿದೆ. ಮೊದಲಿದ್ದ ಸಮಸ್ಯೆಗಳಿಗೂ ಈಗಿರುವ ಸಮಸ್ಯೆಗಳಿಗೂ ಅಗಾಧವಾದ ಬದಲಾವಣೆ. ತಂತ್ರಜ್ಞಾನದ ಅಭಿವೃದ್ಧಿ ಒತ್ತಡಗಳಿಗೆ ಪೂರಕ ಮತ್ತು ಮಾರಕವಾಗಿಯೂ ಇದೆ ಎಂಬುದನ್ನು ನಾವು ಗಮನಿಸಬೇಕು. ಸಿನಿಮಾ ಕ್ಷೇತ್ರದಲ್ಲಿ ನಾನು ತೊಡಗಿಕೊಂಡಿರುವುದರಿಂದ ತಂತ್ರಜ್ಞಾನ ನಮ್ಮ ಕ್ಷೇತ್ರಕ್ಕೆ ಹತ್ತಾರು ರೀತಿಗಳಲ್ಲಿ ಅನುಕೂಲಕರವಾಗಿದೆ. ಹಾಗೆಯೇ ಪೈರಸಿ ಸಮಸ್ಯೆ, ಸುಳ್ಳುಸುದ್ದಿಗಳ ಸಮಸ್ಯೆ – ಇವೆಲ್ಲವೂ ತಂತ್ರಜ್ಞಾನದಿಂದ ನಮಗಾಗುತ್ತಿರುವ ತೊಂದರೆಗಳಾಗಿವೆ. ಕೆಲವು ಸಲ ಮೊದಲಿದ್ದ ಹಾಗೆ ಪತ್ರಿಕೆಗಳೊಂದಿಗಿನ ಸಂಬಂಧವೇ ಸುಂದರವಾಗಿತ್ತು ಎನ್ನಿಸಿರುವುದು ಉಂಟು. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು