ಶುಕ್ರವಾರ, ಮಾರ್ಚ್ 31, 2023
22 °C
ಬಿ ಪಾಸಿಟಿವ್‌; ಕ್ಯಾನ್ಸರ್‌ ನೆಗೆಟಿವ್‌...

ಕ್ಯಾನ್ಸರ್‌ ಜಯಿಸಲು ಸಕಾರಾತ್ಮಕ ಮನೋಭಾವ ಇರಲಿ

ಕೃಷ್ಣಿ ಶಿರೂರ Updated:

ಅಕ್ಷರ ಗಾತ್ರ : | |

Prajavani

ತೀರಾ ಇತ್ತೀಚಿನ ದಿನಗಳವರೆಗೂ ಅಲ್ಲೊಂದು ಇಲ್ಲೊಂದು ಕ್ಯಾನ್ಸರ್‌ ಪ್ರಕರಣಗಳನ್ನು ಕೇಳುತ್ತಿದ್ದೇವು. ಕೆಲವೇ ದಿನಗಳಲ್ಲಿ ಅವರು ಕಾಲವಾದರು ಎಂಬ ದುಃಖದ ಸಂಗತಿಯನ್ನೂ ಕೇಳುತ್ತಿದ್ದೇವು. ಆದರೆ ಇತ್ತೀಚಿನ ದಿನಗಳಲ್ಲಿ ಕ್ಯಾನ್ಸರ್‌ ಬಿಪಿ, ಶುಗರ್‌ನಂತೆ ಸಾಮಾನ್ಯ ಕಾಯಿಲೆಯಾಗಿ ಕಂಡುಬರುತ್ತಿದೆ. ಮನೆಮನೆಗಳಲ್ಲೂ ಕ್ಯಾನ್ಸರ್‌ ರೋಗಿಗಳನ್ನು ಕಾಣುವಂತಾಗಿದೆ. 

ಕ್ಯಾನ್ಸರ್‌ ಅನ್ನೋ ಮೂರಕ್ಷರಕ್ಕೆ ಬೆಚ್ಚಿ ಬೀಳುವ ಮಂದಿ, ತಮಗೇ ಕಾಯಿಲೆ ಬಂತೆಂದರೆ ಭಯಕ್ಕೆ ಬಿದ್ದು ಅರಗಿಸಿಕೊಳ್ಳಲಾಗದೆ ಖಿನ್ನತೆಗೆ ಜಾರಿ ಜೀವನವನ್ನು ಅಂತ್ಯವಾಗಿಸಿಕೊಳ್ಳುತ್ತಿದ್ದಾರೆ. ಆದರೆ ಇದೇ ಕ್ಯಾನ್ಸರ್‌ ಕಾಯಿಲೆಯನ್ನು ಧೈರ್ಯ, ಆತ್ಮವಿಶ್ವಾಸದಿಂದ ಹಿಮ್ಮೆಟ್ಟಿಸಿ, ಎಲ್ಲರಂತೆ ಸಾಮಾನ್ಯ ಜೀವನ ನಡೆಸಬಹುದು ಎಂಬುದಕ್ಕೆ ಸಾಕಷ್ಟು ನಿದರ್ಶನಗಳೂ ನಮ್ಮ ಮುಂದಿವೆ. ಕ್ಯಾನ್ಸರ್‌ ಪಾಸಿಟಿವ್‌ ಎಂಬ ವರದಿಯನ್ನು ‍ಪಾಸಿಟಿವ್‌ ಆಗಿಯೇ ಸ್ವೀಕರಿಸಿ, ಅದನ್ನು ಒಪ್ಪಿಕೊಂಡು, ಕಿಮೋ, ವಿಕಿರಣ ಚಿಕಿತ್ಸೆಯ ಅಡ್ಡ ಪರಿಣಾಮಗಳನ್ನೂ ಧೈರ್ಯವಾಗಿ ಎದುರಿಸಿ, ಕ್ಯಾನ್ಸರ್‌ಅನ್ನು ಜಯಿಸಿದವರಿವರು. ಕ್ಯಾನ್ಸರ್‌ ಬಂದು ಹೋದ ನಂತರ ಇವರು ಬದುಕುತ್ತಿರುವ ಬಗೆಯೂ ಸಮಾಜದ ಎಲ್ಲ ಕ್ಯಾನ್ಸರ್‌ ರೋಗಿಗಳಿಗೆ ಸ್ಫೂರ್ತಿದಾಯಕ. ಅಂಥ ಕೆಲವು ಕ್ಯಾನ್ಸರ್‌ ವಾರಿಯರ್‌ ಇಲ್ಲಿದ್ದಾರೆ.

ಇವರು ಫರಿದಾ ರಿಜ್ವಾನ್‌. ಬೆಂಗಳೂರಿನವರು. ಇವರಿಗೆ ಸ್ತನ ಕ್ಯಾನ್ಸರ್‌ ಪಾಸಿಟಿವ್‌ ಆದಾಗ ವಯಸ್ಸು ಕೇವಲ 29. ಅದು ಕೂಡ ಮೂರನೇ ಹಂತ. ಆ ಸಮಯದಲ್ಲಿ ಅವರಿಗೆ ಇಬ್ಬರು ಮಕ್ಕಳು. ಒಂದಕ್ಕೆ 4 ವಯಸ್ಸು. ಮತ್ತೊಂದು ಹಾಲುಣ್ಣುವ 11 ತಿಂಗಳು ಕೂಸು. ಅಂಥ ಸಂದರ್ಭದಲ್ಲೂ ಎದೆಗುಂದದೆ ಸ್ತನ ಛೇದನ, ಕಿಮೋಥೆರಪಿಗೆ ಒಳಗಾಗಿ ಚಿಕಿತ್ಸೆ ಪಡೆದರ ಪರಿಣಾಮ ಕ್ಯಾನ್ಸರ್‌ ಮುಕ್ತ ಜೀವನ ಆರಂಭಿಸಿ 27 ವರ್ಷಗಳೇ ಕಳೆದಿವೆ. ಸುಂದರ ಜೀವನ ತಮ್ಮದಾಗಿಸಿಕೊಂಡಿದ್ದಾರೆ.

ಸವಾಲುಗಳೊಂದಿಗೆ ಉರುಳುತ್ತಿದ್ದ ಬದುಕಿನಲ್ಲಿ ಹಣಕಾಸು ನಿರ್ವಹಣೆ ದೊಡ್ಡ ಸವಾಲಾಗಿತ್ತು. ಆದರೆ ಕಠಿಣ ಸಮಯಗಳು  ಇನ್ನಷ್ಟು ಗಟ್ಟಿಗೊಳಿಸುತ್ತವೆ. ಜೀವನವನ್ನು ಸವಾಲಾಗಿ ಸ್ವೀಕರಿಸಲು ಪ್ರೇರೇಪಿಸುತ್ತವೆ ಎಂಬುದಕ್ಕೆ ಇವರು ಸ್ಪಷ್ಟ ಉದಾಹರಣೆ. ಅದೇ ನಿಟ್ಟಿನಲ್ಲಿ ಕೌನ್ಸೆಲಿಂಗ್ ಮತ್ತು ಸೈಕೋಥೆರಪಿಯಲ್ಲಿ ಸ್ನಾತಕೋತ್ತರ ಪದವಿ ಮುಗಿಸಿ ವೃತ್ತಿ ಜೀವನ ಆರಂಭಿಸಿದರು.  ಶೈಕ್ಷಣಿಕ ಅಪ್ಲಿಕೇಶನ್‌ನೊಂದಿಗೆ ಪಠ್ಯಕ್ರಮ ಡೆವಲಪರ್ ಆಗಿ ಕೆಲಸ ಮಾಡುತ್ತಿರುವ ಇವರು ಪ್ರಿಸ್ಕೂಲ್ ಮತ್ತು ಡೇಕೇರ್ ಸೆಂಟರ್ - ಮೈ ಗಿಗಲ್ ಗಾರ್ಡನ್ ಅನ್ನು ನಡೆಸುತ್ತಿದ್ದಾರೆ. ತಮ್ಮ ವಿಶೇಷಚೇತನ ಮಗಳ ಆರೈಕೆ ನಡೆಸುತ್ತಲೇ ಹೂಟ್ಟೂರು ಶಿರೂರಿನಲ್ಲಿರುವ ವಿಶೇಷ ಶಿಕ್ಷಣ ಮತ್ತು ಪುನರ್ವಸತಿ ಕೇಂದ್ರದ ಶಾಲೆಗೆ ಶೈಕ್ಷಣಿಕ ನಿರ್ದೇಶಕನಾಗಿ ದೂರದಿಂದಲೇ ಕೆಲಸ ಮಾಡುತ್ತಿದ್ದಾರೆ. ಇವೆಲ್ಲ ಆಗಿರುವುದು ಫರಿದಾ ಅವರಿಗೆ ಕ್ಯಾನ್ಸರ್‌ ಬಂದು ಹೋದ ನಂತರ.

‘ಚಿಕಿತ್ಸೆಯಿಲ್ಲದೆ ಸಕಾರಾತ್ಮಕ ಮನೋಭಾವ ಸಹಾಯ ಮಾಡುತ್ತದೆ ಎಂದು ನಾನು ಹೇಳಲಾರೆ. ಆದರೆ ಬದುಕುವ ಇಚ್ಛೆಯೊಂದಿಗೆ ಸರಿಯಾದ ಚಿಕಿತ್ಸೆಯ ಮೂಲಕ ಹೋದರೆ ಮತ್ತು ನಿಮ್ಮ ದೇಹವು ಹಾದುಹೋಗುವ ಬದಲಾವಣೆಗಳಿಂದ ತಲೆಕೆಡಿಸಿಕೊಳ್ಳದಿದ್ದರೆ, ಅದು ಖಂಡಿತವಾಗಿಯೂ ಸಹಾಯ ಮಾಡುತ್ತದೆ’ ಎಂಬುದು ಇವರ ಅಭಿಪ್ರಾಯ.

ಕ್ಯಾನ್ಸರ್‌ನೊಂದಿಗಿನ ನನ್ನ ಅನುಭವಗಳನ್ನು ತಮಾಷೆಯಾಗಿ ತೆಗೆದುಕೊಳ್ಳುವ ಮೂಲಕ ಜನರನ್ನು ನಗಿಸುತ್ತಾರೆ. ಕ್ಯಾನ್ಸರ್‌ ರೋಗಿಗಳ ಪಾಲಿಗೆ ಸ್ಫೂರ್ತಿಯಾಗಿದ್ದಾರೆ.

 ****

ಇವರು, ಸಂತೋಷ ವೇದಮಠ.

ಹುಬ್ಬಳ್ಳಿಯವರಾದ ಇವರಿಗೆ 39ರ ಹರಯದಲ್ಲಿ ಕ್ಯಾನ್ಸರ್‌ ಪಾಸಿಟಿವ್‌ ಬಂದಿತು. ಆದರೆ ಅದನ್ನು ಪಾಸಿಟಿವ್‌ ಆಗಿ ಸ್ವೀಕರಿಸಿದ ಪರಿಣಾಮ ಇಂದು ಮೊದಲಿಗಿಂತಲೂ ಉತ್ತಮ ಜೀವನ ನಡೆಸಲು ಸಾಧ್ಯವಾಯಿತು ಎನ್ನುತ್ತಾರೆ.

ಇವರ ಕ್ಯಾನ್ಸರ್ ವಿರುದ್ಧದ ಹೋರಾಟ ಕಠಿಣವಾಗಿತ್ತು. ಒಂದಲ್ಲ; ಎರಡಲ್ಲ. ಮೂರು ಬಾರಿ ಶಸ್ತ್ರಚಿಕಿತ್ಸೆಗೆ ಒಳಗಾದರು. ಎಂಟು ಕಿಮೋಗಳ ಜೊತೆಗೆ ಒಂದು ತಿಂಗಳ ವಿಕಿರಣ ಚಿಕಿತ್ಸೆಯನ್ನೂ ಪಡೆದರು. ಕ್ಯಾನ್ಸರ್‌ನಿಂದ ಹೊರಬರಲು ಚಿಕಿತ್ಸೆಯ ಜೊತೆಗೆ ಆತ್ಮವಿಶ್ವಾಸ, ಸಕಾರಾತ್ಮಕ ಮನೋಭಾವ ತೀರಾ ಅಗತ್ಯ ಎಂಬ ಸಲಹೆ ಸಂತೋಷ ಅವರದ್ದು. ಅಲ್ಲದೆ ಕ್ಯಾನ್ಸರ್‌ ತಮ್ಮ ತಾಳ್ಮೆಯ ಮಟ್ಟವನ್ನು ಹೆಚ್ಚಿಸಿದೆ. ಎಲ್ಲ ವಿಷಯಗಳ ಬಗ್ಗೆ ವಿಭಿನ್ನ ದೃಷ್ಟಿಕೋನ ಹೊಂದಲು ಕಾರಣವಾಗಿದೆ ಎನ್ನುತ್ತಾರೆ.

ಮನದಲ್ಲಿ ಸಕಾರಾತ್ಮಕ ಮನೋಭಾವವಿದ್ದಲ್ಲಿ ಸುಂದರ ಬದುಕನ್ನು ತಮ್ಮದಾಗಿಸಿಕೊಳ್ಳಬಹುದು ಎಂಬುದನ್ನು ಒತ್ತಿ ಹೇಳುವ ಇವರು, ಕ್ಯಾನ್ಸರ್‌ನಿಂದ ಮುಕ್ತರಾದ ಮೇಲೆ ಸಾಮಾಜಿಕವಾಗಿ ಕ್ಯಾನ್ಸರ್‌ ಜಾಗೃತಿ ಕಾರ್ಯಕ್ರಮಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.  ಅಖಿಲ ಭಾರತೀಯ ತೇರಪಂಥ ಮಹಿಳಾ ಮಂಡಳದ ಕಾರ್ಯಕಾರಿ ಸಮಿತಿಯಲ್ಲಿದ್ದು, ಮಕ್ಕಳು ಮತ್ತು ವಯಸ್ಕರಿಗೆ ಅಗತ್ಯ ಸಾಮಾಜಿಕ ಅಭಿಯಾನಗಳನ್ನು ನಡೆಸುತ್ತಿದ್ದಾರೆ.  ‌

ಕ್ಯಾನ್ಸರ್‌ ರೋಗಿಗಳಿಗೆ ಆತ್ಮ ವಿಶ್ವಾಸ, ಸಕಾರಾತ್ಮಕ ಮನೋಭಾವವಿದ್ದಲ್ಲಿ ಅದರಿಂದ ಸುಲಭವಾಗಿ ಹೊರಬರಲು ಸಾಧ್ಯ ಎಂಬುದು ಇವರು ಹೇಳುವ ಉಪಯುಕ್ತ ಸಲಹೆ.

****

ಇವರು ಡಾ.ತೇಜಸ್ವಿನಿ ಹಿರೇಮಠ. ಹುಬ್ಬಳ್ಳಿಯ ಕಿಮ್ಸ್‌ನಲ್ಲಿ ವೈದ್ಯಕೀಯ ಪದವಿ ಶಿಕ್ಷಣ ಮುಗಿಸಿರುವ ಇವರು ಗದಗಿನಲ್ಲಿ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞೆ. 

ಕಾಯಿಲೆ ಆರಂಭಿಕ ಹಂತದಲ್ಲೇ ಕಂಡುಬಂದಲ್ಲಿ, ತಕ್ಷಣ ಚಿಕಿತ್ಸೆ ಪಡೆದುಕೊಂಡರೆ ಕಡಿಮೆ ಖರ್ಚು ಹಾಗೂ ಕಡಿಮೆ ಸಮಯದಲ್ಲಿ ಕ್ಯಾನ್ಸರ್‌ನಿಂದಲೂ ಮುಕ್ತಗೊಳ್ಳಬಹುದು ಎಂಬುದಕ್ಕೆ ಇವರು ಉತ್ತಮ ಉದಾಹರಣೆ.

ಇವರು ತಮಗೆ ಕ್ಯಾನ್ಸರ್‌ ಲಕ್ಷಣ ಕಂಡು ಬಂದು ತಪಾಸಣೆಗೆ ಒಳಪಟ್ಟಿಲ್ಲ. ಮುಂಜಾಗ್ರತೆಯ ಹಿನ್ನೆಲೆಯಲ್ಲಿ ಕಳೆದ ಸೆಪ್ಟೆಂಬರ್‌ನಲ್ಲಿ ನಿಯಮಿತ ಚಿಕಿತ್ಸೆಗೊಳಪಟ್ಟ ಸಂದರ್ಭದಲ್ಲಿ ಇವರಿಗೆ ಬಲ ಸ್ತನದಲ್ಲಿ ಆರಂಭಿಕ ಹಂತದ ಕ್ಯಾನ್ಸರ್‌ ಇರುವುದು ಪತ್ತೆಯಾಯಿತು. ಅದು ಸಂದೇಹಾಸ್ಪದ ವರದಿಯಿದ್ದಾಗಲೂ ಸಮಯ ವ್ಯರ್ಥ ಮಾಡದೆ ಪೆಟ್‌ ಸ್ಕ್ಯಾನ್‌ಗೊಳಪಟ್ಟರು. ಕ್ಯಾನ್ಸರ್‌ ದೃಢಪಟ್ಟಾಗ ಮನಸ್ಸು ಕಸಿವಿಸಿಗೊಂಡು, ಮನದಲ್ಲಿ ಗೊಂದಲ ಎದ್ದರೂ ದೃಢಚಿತ್ತರಾಗಿ ಅದನ್ನು ಒಪ್ಪಿಕೊಂಡರು. ನಾಲ್ಕು ಕಿಮೋ, ರೆಡಿಯೋಥೆರಪಿಗೊಳಪಟ್ಟು ಕೇವಲ ನಾಲ್ಕೇ ತಿಂಗಳಲ್ಲಿ ತಮ್ಮ ಕರ್ತವ್ಯಕ್ಕೆ ಹಾಜರಾದರು. ಅವರೀಗ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞೆಯಾಗಿರುವ ಜತೆಗೆ ಮಹಿಳೆಯರಿಗೆ ಕ್ಯಾನ್ಸರ್‌ ಜಾಗೃತಿ ಮೂಡಿಸುತ್ತಿದ್ದಾರೆ. ಕಾಲಕಾಲಕ್ಕೆ ಮ್ಯಾಮೊಗ್ರಾಂ ಮಾಡಿಸಿಕೊಳ್ಳುವುದರಿಂದ ಎಷ್ಟೊಂದು ಪ್ರಯೋಜನವಿದೆ, ಪಾಪ್‌ಸ್ಮೀಯರ್‌ ಎಷ್ಟು ಅಗತ್ಯ ಎಂಬುದನ್ನು ಮನವರಿಕೆ ಮಾಡುತ್ತಿದ್ದಾರೆ.

 

ಇವರು ಶಿಲ್ಪಾ ದಾನಿ, ಬೆಂಗಳೂರಿನವರು.

2019ರ ಆಗಸ್ಟ್‌ನಲ್ಲಿ ಕ್ಯಾನ್ಸರ್‌ ಕಾಡಿದಾಗ ಇವರಿಗೆ 32 ವರ್ಷ. ಕ್ಯಾನ್ಸರ್‌ ಪಾಸಿಟಿವ್‌ ಎಂಬ ಸಂಗತಿ ದೃಢಗೊಳ್ಳುತ್ತಲೇ ಇವರ ಮನಸ್ಸು ಘಾಸಿಗೊಂಡಿತು. ಮನಸ್ಸು ಧ್ವಂಸಗೊಂಡಿತು. ನಿಧಾನವಾಗಿ ಸಮಾಧಾನ ತಂದುಕೊಂಡ ಶಿಲ್ಪಾ, ತಾವು ಓದಿಕೊಂಡ ಬಯೋಟೆಕ್ನಾಲಜಿಗೂ ಬದುಕಿಗೂ ಅಜಗಜಾಂತರ ಎಂಬ ವಾಸ್ತವ ಸತ್ಯವನ್ನು ಮನಗಂಡರು. ಸಿದ್ಧಾಂತವು ಪ್ರಯೋಗಕ್ಕಿಂತ ಸಂಪೂರ್ಣ ಭಿನ್ನ ಎಂಬುದನ್ನು ಅವರು ಕ್ಯಾನ್ಸರ್‌ನಿಂದ ಕಲಿತ ಮೊದಲ ಪಾಠ. ಎರಡು ಆಸ್ಪತ್ರೆಗಳಲ್ಲಿ ಎರಡು ಶಸ್ತ್ರಚಿಕಿತ್ಸೆಗೆ ಒಳಗಾದರು. 

ಕ್ಯಾನ್ಸರ್‌ ಅನ್ನು ಧೈರ್ಯವಾಗಿ ಎದುರಿಸಿ, ಅದರಿಂದ ಹೊರಬರಲು ಶಿಲ್ಪಾ ಅವರಿಗೆ ಕುಟುಂಬದ ಬೆಂಬಲ ಸಿಕ್ಕಿತು. ವಿಶೇಷವಾಗಿ ಪತಿಯ ಪ್ರೀತಿ,ಬೆಂಬಲ, ಮಾನಸಿಕ ಸ್ಥೈರ್ಯ ಕ್ಯಾನ್ಸರ್‌ನಿಂದ ಬಹು ಬೇಗ ಚೇತರಿಸಿಕೊಳ್ಳುವಂತೆ ಸಹಕರಿಸಿತು.  ಸಕಾರಾತ್ಮಕ ಮನೋಭಾವ, ಆರೋಗ್ಯಕರ ಜೀವನ ಶೈಲಿ ಸಂತೋಷದ ಜೀವನಕ್ಕೆ ದಾರಿ ಮಾಡಿಕೊಟ್ಟಿದೆ. 

ಆರ್ಟ್ ಥೆರಪಿಯಲ್ಲಿ ತರಬೇತಿ ಪಡೆದಿರುವ ಇವರು ಶ್ರೀ ಶಂಕರ ಆಸ್ಪತ್ರೆಯ ಪಿಡಿಯಾಟ್ರಿಕ್ ಆಂಕೊ ರೋಗಿಗಳೊಂದಿಗೆ ಅದನ್ನು ಬಳಸಿದ್ದಾರೆ. ವಯಸ್ಕ ರೋಗಿಗಳು, ಹಾಸ್ಪೈಸ್ ಕೇರ್ ಸೆಂಟರ್, ಕರುಣಾಶ್ರಯ, ಕರುಣಾಶ್ರಯದ ಆರೈಕೆ ಮಾಡುವ ಶುಶ್ರೂಷಾ ಸಿಬ್ಬಂದಿಗೆ ಸ್ವಯಂ ಆರೈಕೆಗಾಗಿ ಆರ್ಟ್ ಥೆರಪಿ ಸೆಷನ್ ತೆಗೆದುಕೊಳ್ಳಲು ಅವಕಾಶ ಮಾಡಿಕೊಟ್ಟಿದ್ದಾರೆ. 

ಕ್ಯಾನ್ಸರ್ ಅನ್ನು ಎದುರಿಸಲು ಸಮಗ್ರ ವಿಧಾನವು ಉತ್ತಮ ಮಾರ್ಗ ಎಂಬ ಬಲವಾದ ನಂಬಿಕೆ ಇವರದ್ದು. ಕ್ಯಾನ್ಸರ್‌ ರೋಗಿಗಳಿಗೆ ಕೌನ್ಸೆಲಿಂಗ್ ನೀಡುವ ತಂಡ ಕ್ಯಾನ್ಸರ್ ಗೆದ್ದವರನ್ನು ಒಳಗೊಳ್ಳುವುದು ಅಗತ್ಯ ಎಂಬುದು ಶಿಲ್ಪಾ ಅವರ ಅನಿಸಿಕೆ.

*****

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು