ಮಧುಮೇಹದ ಹೊಸ್ತಿಲಲ್ಲಿ...

7

ಮಧುಮೇಹದ ಹೊಸ್ತಿಲಲ್ಲಿ...

Published:
Updated:
Deccan Herald

ಕೆಲವು ದಿನಗಳ ಹಿಂದೆ ಕೆಮ್ಮಿನ ಸಮಸ್ಯೆಗೆಂದು ಎಂಬತ್ತಾರು ವರ್ಷದ ನನ್ನ ಅಜ್ಜಿ ಆಸ್ಪತ್ರೆಗೆ ಬಂದಿದ್ದರು. ಅವರನ್ನು ಪರೀಕ್ಷಿಸಿದ ತಜ್ಞವೈದ್ಯರು ಕೆಲವು ರಕ್ತಪರೀಕ್ಷೆಗೆ ಸೂಚಿಸಿದ್ದರು. ಆಕೆ ಕೆಲವು ವರ್ಷಗಳಿಂದ ಅಧಿಕ ರಕ್ತದೊತ್ತಡದ ಸಮಸ್ಯೆಯಿಂದ ಬಳಲುತ್ತಿದ್ದು, ಅದಕ್ಕಾಗಿ ಮಾತ್ರೆಗಳನ್ನು ತೆಗೆದುಕೊಳ್ಳುತ್ತಿದ್ದರು. ಆಕೆಗೆ ಬೇರೆ ಯಾವುದೇ ದೀರ್ಘಕಾಲಿಕ ಆರೋಗ್ಯ ಸಮಸ್ಯೆ ಇರಲಿಲ್ಲ. ಆದರೆ ಈ ಬಾರಿಯ ಅವರ ರಕ್ತದ ಪರೀಕ್ಷೆಯ ವರದಿ ಬಂದಾಗ ಎಲ್ಲರಿಗೂ ದೊಡ್ಡ ಅಚ್ಚರಿ – ಆಘಾತವೇ ಕಾದಿತ್ತು. ಅವರ ರಕ್ತದ ಸಕ್ಕರೆಯ ಅಂಶ ತುಂಬ ಹೆಚ್ಚಿತ್ತು. ಕೇವಲ ಒಂದು ವರ್ಷದ ಹಿಂದೆ ರಕ್ತಪರೀಕ್ಷೆಯನ್ನು ಮಾಡಿಸಿದ್ದಾಗ ಸಕ್ಕರೆಯ ಅಂಶವು ಸಾಮಾನ್ಯಮಟ್ಟದಲ್ಲಿಯೇ ಇತ್ತು. ವೈದ್ಯರು ಅಜ್ಜಿಗೆ ಇತರ ಪರೀಕ್ಷೆಗಳನ್ನು ಮಾಡಿಸಿ ಸೂಕ್ತ ಮಾತ್ರೆಗಳನ್ನು ಸೂಚಿಸಿ ಮನೆಗೆ ಕಳುಹಿಸಿದ್ದರು. ಇದನ್ನೆಲ್ಲ ಸೂಕ್ಷ್ಮವಾಗಿ ಗಮನಿಸಿದ ಸುಮಾರು ಅರವತ್ತೈದು ವರ್ಷದ ಅಜ್ಜಿಯ ತಮ್ಮನಿಗೆ ತಾನೂ ಪರೀಕ್ಷಿಸಿಕೊಂಡರೆ ಒಳಿತು ಎನ್ನಿಸಿ ರಕ್ತದ ಸಕ್ಕರೆ ಅಂಶಕ್ಕಾಗಿ ಪರೀಕ್ಷೆ ಮಾಡಿಸಿದರು. ಅವರ ರಕ್ತಪರೀಕ್ಷೆಯ ವರದಿಯನ್ನು ನೋಡಿದ ನಮ್ಮ ಆಸ್ಪತ್ರೆಯ ಎಂಡೋಕ್ರೈನಾಲಾಜಿಸ್ಟ್ ಹೇಳಿದ್ದು ಅವರು ‘ಪ್ರಿ –ಡಯಾಬಿಟಿಸ್‍’ನಿಂದ ಬಳಲುತ್ತಿದ್ದಾರೆ ಎಂದು.

ಏನಿದು ಪ್ರಿ–ಡಯಾಬಿಟಿಸ್?

ವ್ಯಕ್ತಿಗೆ ಮಧುಮೇಹದ ಯಾವುದೇ ಗುಣಲಕ್ಷಣಗಳಿರದೆ, ಆತನ ರಕ್ತದ ಸಕ್ಕರೆ ಅಂಶವು ಸಾಮಾನ್ಯಕ್ಕಿಂತಲೂ ಸ್ವಲ್ಪ ಹೆಚ್ಚಿದ್ದು, ಆದರೆ ಮಧುಮೇಹ ಎಂದು ಪರಿಗಣಿಸಲು ಬೇಕಾದ ಪ್ರಮಾಣಕ್ಕಿಂತಲೂ ಕಡಿಮೆ ಇದ್ದಾಗ ಅಂತಹ ಸ್ಥಿತಿಯನ್ನು ಮಧುಮೇಹದ ಪೂರ್ವಸ್ಥಿತಿ ಎನ್ನಬಹುದು. ಅಂತರರಾಷ್ಟ್ರೀಯ ಮಧುಮೇಹ ಒಕ್ಕೂಟದ ಅಧ್ಯಯನವು ವಿಶ್ವದ ಇತರ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಅತಿ ಹೆಚ್ಚಿನ ಸಂಖ್ಯೆಯ ಜನರು ಪ್ರಿ–ಡಯಾಬಿಟಿಸ್‍ನಿಂದ ಬಳಲುತ್ತಿದ್ದಾರೆ ಎನ್ನುತ್ತದೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಈ ಸ್ಥಿತಿಯಲ್ಲಿರುವ ವ್ಯಕ್ತಿಯ ಖಾಲಿ ಹೊಟ್ಟೆಯ ರಕ್ತದ ಸಕ್ಕರೆ ಅಂಶವು ಪ್ರತಿ ಡೆಸಿಲೀಟರ್‌ಗೆ 110ರಿಂದ 125ರವರೆಗೂ ಹಾಗೂ ಉಪಹಾರದ ಎರಡು ಗಂಟೆಗಳ ನಂತರದ ರಕ್ತದ ಸಕ್ಕರೆ ಅಂಶವು ಪ್ರತಿ ಡೆಸಿ ಲೀಟರ್‌ಗೆ 140ರಿಂದ 199ರವರೆಗೂ ಇರುತ್ತದೆ. ಅಲ್ಲದೆ, ರಕ್ತದ ಎಚ್ ಬಿ ಎ -1 ಸಿ ( ಗ್ಲೈಕೋಸಿಲೇಟೆಡ್ ಹಿಮೊಗ್ಲೋಬಿನ್) ಅಂಶವು ಶೇ 5.7ರಿಂದ 6.4ರವರೆಗೆ ಇರುತ್ತದೆ. ಈ ಪ್ರಮಾಣದಿಂದ ಅವರನ್ನು ಮಧುಮೇಹಿಗಳೆಂದು ಪರಿಗಣಿಸುವುದು ಸರಿಯಾಗದು. ಇಂತಹ ವ್ಯಕ್ತಿ ಸಾಮಾನ್ಯವಾಗಿ ಅತಿಯಾದ ದೇಹತೂಕ, ಬೊಜ್ಜು, ಹೆಚ್ಚಾದ ಸೊಂಟದ ಸುತ್ತಳತೆ, ರಕ್ತದಲ್ಲಿ ಹೆಚ್ಚಾದ ಕೊಬ್ಬಿನ ಅಂಶ, ಅಧಿಕ ರಕ್ತದೊತ್ತಡವನ್ನು ಹೊಂದಿರುತ್ತಾರೆ. ಈ ಸಮಸ್ಯೆಯಿಂದ ಬಳಲುವವರಲ್ಲಿ ಶೇ 50ರಷ್ಟು ಜನರು ಮುಂದಿನ ಹತ್ತು ವರ್ಷಗಳಲ್ಲಿ ಮಧುಮೇಹದಿಂದ ಬಳಲಬಹುದು. ಆದರೆ, ಇನ್ನು ಕೆಲವರು ಮುಂದಿನ ಮೂರು ವರ್ಷಗಳಲ್ಲಿಯೇ ಮಧುಮೇಹಕ್ಕೆ ತುತ್ತಾಗಬಹುದು. ಆದರೆ, ವಿಶೇಷವೆಂದರೆ ಒಂದಿಷ್ಟು ಜನರು ತಮ್ಮ ಜೀವನಶೈಲಿಯ ಮಾರ್ಪಾಡಿನಿಂದ ಸಕ್ಕರೆ ಅಂಶವನ್ನು ಸಾಮಾನ್ಯ ಮಟ್ಟಕ್ಕೆ ನಿಯಂತ್ರಿಸಿ ಮಧುಮೇಹವನ್ನು ದೂರ ಓಡಿಸಿದ ನಿದರ್ಶನಗಳೂ ಇವೆ.

ಈ ಸ್ಥಿತಿಗೆ ಕಾರಣಗಳೇನು?

ಆನುವಂಶೀಯತೆ, ಅಧಿಕ ರಕ್ತದೊತ್ತಡ, ರಕ್ತದಲ್ಲಿ ಹೆಚ್ಚಾದ ಕೊಬ್ಬಿನ ಅಂಶಗಳು, ಬೊಜ್ಜು, ಅಧಿಕ ದೇಹ ತೂಕ, ಹೆಚ್ಚಾದ ಸೊಂಟದ ಸುತ್ತಳತೆ, ಜಡ ಜೀವನಶೈಲಿ, ಮಹಿಳೆಯರಲ್ಲಿ ಗರ್ಭಾವಸ್ಥೆಯಲ್ಲಿ ಮಧುಮೇಹ, ಪಿಸಿಓಡಿ ಸಮಸ್ಯೆ ಮೊದಲಾದುವು.

ಮಾಡಬೇಕಾದುದೇನು?

ಇಂತಹ ಸ್ಥಿತಿಯಿಂದ ಬಳಲುವವರು ಮಧುಮೇಹದ ಗುಣಲಕ್ಷಣಗಳಿಗಾಗಿ ತಮ್ಮನ್ನು ತಾವು ಸೂಕ್ಷ್ಮವಾಗಿ ಗಮನಿಸಿಕೊಳ್ಳಬೇಕು. ಅತಿಯಾದ ಹಸಿವು, ಅತಿಯಾದ ಬಾಯಾರಿಕೆ, ಪದೇ ಪದೇ ಮೂತ್ರವಿಸರ್ಜನೆ ಮಾಡಬೇಕೆನ್ನಿಸುವುದು, ಹೆಚ್ಚುವ ದೇಹತೂಕ, ದೇಹತೂಕದಲ್ಲಿ ದಿಢೀರ್ ಇಳಿಯುವಿಕೆ, ದೃಷ್ಟಿ ಮಂಜಾಗುವುದು, ಕಾಲುಗಳಲ್ಲಿ ‘ಜುಂ ಜುಂ’ ಎನ್ನಿಸುವುದು, ಕೈಕಾಲುಗಳಲ್ಲಿ ಆದ ಗಾಯಗಳು ವಾಸಿಯಾಗಲು ಹೆಚ್ಚು ಸಮಯ ತೆಗೆದುಕೊಳ್ಳುವುದು, ನಿಶ್ಶಕ್ತಿ, ಆಯಾಸ, ಪದೇ ಪದೇ ಒಸಡು ಮೂತ್ರಚೀಲ ಯೋನಿ ಅಥವಾ ಚರ್ಮದ ಸೋಂಕಿಗೆ ತುತ್ತಾಗುವುದು – ಇಂಥ ಸಮಸ್ಯೆಗಳು ಕಂಡುಬಂದಲ್ಲಿ ಕೂಡಲೇ ತಜ್ಞವೈದ್ಯರನ್ನು ಕಾಣಬೇಕು.
ಅಂತೆಯೇ ಜೀವನಶೈಲಿಯ ಬದಲಾವಣೆ ಹಾಗೂ ಆಹಾರಶೈಲಿಯಲ್ಲಿ ಬದಲಾವಣೆಯತ್ತ ಗಂಭೀರವಾಗಿ ಗಮನ ಹರಿಸಬೇಕು.

ಏನೆಲ್ಲ ಬದಲಾವಣೆ?

 ಆರೋಗ್ಯಕರ ಆಹಾರಸೇವನೆ ತುಂಬ ಮುಖ್ಯ; ಅಧಿಕ ನಾರಿನಾಂಶವಿರುವ ಆಹಾರವನ್ನು ಹೆಚ್ಚು ಬಳಸಬೇಕು. ಅತಿಯಾದ ಸಿಹಿ ಪದಾರ್ಥಗಳು, ಸಿಹಿಯಾದ ಪಾನೀಯಗಳು, ಇಂಗಾಲಯುಕ್ತ ಪಾನೀಯಗಳು, ಅತಿಯಾದ ಉಪ್ಪಿನ ಹಾಗೂ ಎಣ್ಣೆಯ ಅಂಶವಿರುವ ಆಹಾರಪದಾರ್ಥಗಳ ಸೇವನೆಯನ್ನು ಬಿಡಬೇಕು.

 ಕಡ್ಡಾಯವಾಗಿ ನಿಯಮಿತವಾದ ವ್ಯಾಯಾಮ. ದಿನಕ್ಕೆ ಕನಿಷ್ಠ ನಲವತ್ತೈದು ನಿಮಿಷಗಳ ವ್ಯಾಯಾಮ ಸೂಕ್ತ.
ದೇಹದ ತೂಕವನ್ನು ಇಳಿಸಿಕೊಳ್ಳುವುದು. ನಿಮ್ಮ ಇಂದಿನ ತೂಕದ ಶೇ 5ರಿಂದ 10ರಷ್ಟು ಕಡಿಮೆ ಮಾಡುವ ಪ್ರಯತ್ನವಾಗಬೇಕು.

ಹೊಟ್ಟೆಯ ಸ್ನಾಯುಗಳಿಗಾಗಿ ವ್ಯಾಯಾಮ ಹಾಗೂ ಸೊಂಟದ ಸುತ್ತಳತೆಯನ್ನು ಕಡಿಮೆ ಮಾಡಿಕೊಳ್ಳುವುದು. ಪುರುಷರಲ್ಲಿ ನಲವತ್ತು ಇಂಚುಗಳಿಗಿಂತ ಹಾಗೂ ಮಹಿಳೆಯರಲ್ಲಿ ಮೂವತ್ತೈದು ಇಂಚಿಗಿಂತಲೂ ಹೆಚ್ಚಾದ ಸೊಂಟದ ಸುತ್ತಳತೆಯು ಬಹು ಅಪಾಯಕಾರಿ. ಇದು ಮಧುಮೇಹವನ್ನು ಆಹ್ವಾನಿಸುತ್ತದೆ.

ನೀವು ಧೂಮಪಾನಿಗಳಾಗಿದ್ದರೆ ಇಂದಿನಿಂದಲೇ ಅದನ್ನು ಸಂಪೂರ್ಣವಾಗಿ ವರ್ಜಿಸಿ.

ನೀವು ಅಧಿಕ ರಕ್ತದೊತ್ತಡದ ಸಮಸ್ಯೆಯಿಂದ ಬಳಲುತ್ತಿದ್ದರೆ, ಅದನ್ನು ಸೂಕ್ತ ಔಷಧಗಳ ಸಹಾಯದಿಂದ ನಿಯಂತ್ರಣದಲ್ಲಿಡಿ.

ವರ್ಷಕ್ಕೊಮ್ಮೆ ತಪ್ಪದೆ ಪ್ರಯೋಗಾಲಯದಲ್ಲಿ ರಕ್ತದ ಸಕ್ಕರೆ ಅಂಶದ ಪರೀಕ್ಷೆ ಮಾಡಿಸಿಕೊಳ್ಳಿರಿ.

ನೆನಪಿಡಿ: ಇಂತಹ ಸ್ಥಿತಿಯಲ್ಲಿದ್ದಾಗ, ನಿಮ್ಮ ಒಂದು ಕಿಲೋ ತೂಕ ಇಳಿಕೆಯು ನೀವು ಮಧುಮೇಹಿಗಳಾಬಹುದಾದ ಅಪಾಯವನ್ನು ಶೇ 16ರವರೆಗೆ ಕಡಿಮೆ ಮಾಡಬಲ್ಲದು. 

Tags: 

ಬರಹ ಇಷ್ಟವಾಯಿತೆ?

 • 14

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !