ಶುಕ್ರವಾರ, ಡಿಸೆಂಬರ್ 4, 2020
24 °C

ಅವಧಿಪೂರ್ವ ಶಿಶುವಿನ ಆರೈಕೆ ಹೇಗೆ?

ಡಾ. ಶ್ರೀನಾಥ್ ಮಣಿಕಂತಿ Updated:

ಅಕ್ಷರ ಗಾತ್ರ : | |

Prajavani

ಅವಧಿಪೂರ್ವ ಮಗು ಜನಿಸಿದರೆ ಅದನ್ನು ಆರೈಕೆ ಮಾಡುವುದು ಸ್ವಲ್ಪ ಕಠಿಣವೇ. ಜನಿಸಿದ ಒಂದೆರಡು ತಿಂಗಳುಗಳ ಕಾಲ (ಇದು ಶಿಶು ಎಷ್ಟನೇ ತಿಂಗಳಲ್ಲಿ ಜನಿಸಿದೆ ಹಾಗೂ ಎಷ್ಟು ಬೆಳವಣಿಗೆ ಹೊಂದಿದೆ ಎಂಬುದನ್ನು ಅವಲಂಬಿಸಿರುತ್ತದೆ) ಆಸ್ಪತ್ರೆಯಲ್ಲಿ ಆರೈಕೆ ಮಾಡಿ ನಂತರ ಮನೆಯಲ್ಲಿ ಈ ಆರೈಕೆ ಮುಂದುವರಿಸಬೇಕಾಗುತ್ತದೆ. ಸೂಕ್ತ ಮಾಹಿತಿ ಪಡೆದುಕೊಂಡು, ವೈದ್ಯರ ಸಲಹೆಗಳನ್ನು ಅನುಸರಿಸಿದರೆ ಅವಧಿಪೂರ್ವ ಜನಿಸಿದ ಶಿಶುವನ್ನು ಹೆಚ್ಚಿನ ಸಮಸ್ಯೆ ಇಲ್ಲದೇ ಸಲಹಬಹುದು.

ಸರಿಯಾದ ತಾಪಮಾನ: ಮಗು ಹಿತವಾದ ಮತ್ತು ಸುರಕ್ಷಿತ ಉಷ್ಣಾಂಶವಿರುವ ಪರಿಸರದಲ್ಲಿರಬೇಕು. ಹೆಚ್ಚು ತಾಪಮಾನ ಅಗತ್ಯವಿದ್ದಾಗ ಬಟ್ಟೆಯ ಪದರಗಳನ್ನು ಸೇರಿಸಬೇಕು ಹಾಗೂ ಇದು ಜಾಸ್ತಿ ಎನಿಸಿದರೆ ಅವುಗಳನ್ನು ತೆಗೆದುಹಾಕಬೇಕು. ಹಾಸಿಗೆಯಲ್ಲಿ ಹೆಚ್ಚು ಹೊದಿಕೆಗಳನ್ನು ಪೇರಿಸಬೇಡಿ. ಇದು ತಾಪಮಾನವನ್ನು ಅಗತ್ಯಕ್ಕಿಂತ ಹೆಚ್ಚಿಸಿ ಮಗುವಿನ ಆರೋಗ್ಯಕ್ಕೆ ಕುತ್ತಾಗಬಹುದು. ಒಂದು ಒಳ್ಳೆಯ ಡಿಜಿಟಲ್ ಥರ್ಮಾಮೀಟರ್ ಖರೀದಿಸಿ ಮತ್ತು ಮಗುವಿನ ಆಕ್ಸಿಲರಿ ತಾಪಮಾನವನ್ನು 36.5- 37.3 ಸಿ (97.6-99.1 ಎಫ್) ಇರುವಂತೆ ನೋಡಿಕೊಳ್ಳಬೇಕು. ಹಾಗೆಯೇ ಕೋಣೆಯ ಉಷ್ಣತೆಯು 20-23 ಸೆಲ್ಸಿಯಸ್‌ ಇರಲಿ.

ಮಗು ನಿದ್ರೆಗೆ ಭಂಗ ತರಬೇಡಿ: ಕೋಣೆಯಲ್ಲಿ ಯಾವುದೇ ಸದ್ದು– ಗದ್ದಲ ಇರದಂತೆ ನೋಡಿಕೊಳ್ಳಿ. ಬೆಚ್ಚಗಿನ ಮತ್ತು ಮಂದ ಬೆಳಕಿರುವ ಪರಿಸರವಿರಲಿ. ಇದರಿಂದ ಶಿಶು ಚೆನ್ನಾಗಿ ನಿದ್ರಿಸುತ್ತದೆ. ಜೊತೆಗೆ ರಾತ್ರಿ ಆಗಾಗ ಹಾಲು ಕುಡಿಸುತ್ತಿರಬೇಕಾಗುತ್ತದೆ. ಆಗಲೂ ಅದರ ನಿದ್ರೆಗೆ ಹೆಚ್ಚು ಭಂಗ ಬರದಂತೆ ನೋಡಿಕೊಳ್ಳಿ. ಅಂದರೆ ಅದು ಹಸಿವಿನಿಂದ ಅತ್ತು ನಿದ್ರೆಗೆಡದಂತೆ ಜಾಗರೂಕತೆ ವಹಿಸಿ.

ಹಿತವಾದ ಸ್ನಾನ: ಮಗುವಿಗೆ ಸುರಕ್ಷಿತವಾಗಿ ಸ್ನಾನ ಮಾಡಿಸಿ. ನೀರು ಹೆಚ್ಚು ಬಿಸಿಯಾಗಿರಬಾರದು, ಬದಲಿಗೆ ಬೆಚ್ಚಗಿದ್ದರೆ ಸಾಕು. ಕೂದಲನ್ನು ಬರೀ ನೀರಿನಿಂದ ಮಾತ್ರ ತೊಳೆಯಿರಿ. ಅಂದರೆ ಸ್ನಾನದ ನೀರಿಗೆ ಯಾವುದೇ ಶಾಂಪೂ ಅಥವಾ ಕ್ಲೆನ್ಸರ್‌ ಸೇರಿಸಬೇಡಿ. ಮೊದಲ ತಿಂಗಳಲ್ಲಂತೂ ಮಗುವಿನ ತ್ವಚೆಗೆ ಸೋಪ್‌ ಕೂಡ ತಾಗಿಸಬೇಡಿ. ಮಗು 2.5 ಕೆ.ಜಿ ತಲುಪುವವರೆಗೆ ಸ್ಪಾಂಜ್ ಸ್ನಾನ ಮಾಡಿಸಿದರೆ ಒಳಿತು. ಮಗುವಿಗೆ ಕನಿಷ್ಠ ಒಂದು ತಿಂಗಳಾಗುವವರೆಗೆ ಯಾವುದೇ ಲೋಷನ್ ಅಥವಾ ಎಣ್ಣೆಯನ್ನು ಬಳಸಬೇಡಿ.

ಹಠಾತ್ ಶಿಶು ಮರಣ ಸಿಂಡ್ರೋಮ್ (ಎಸ್‌ಐಡಿಎಸ್‌): ಈ ಸಿಂಡ್ರೋಮ್‌ ಲಕ್ಷಣವೆಂದರೆ ಆರೋಗ್ಯವಂತ ಶಿಶು ಕೂಡ ನಿದ್ರೆಯಲ್ಲಿ ಸಾಯಬಹುದು. ಸಾಮಾನ್ಯವಾಗಿ ಹುಟ್ಟಿದ ಮೊದಲ 6 ತಿಂಗಳಲ್ಲಿ ಅವಧಿಪೂರ್ವ ಶಿಶುಗಳಲ್ಲಿ ಈ ಅಪಾಯ ಹೆಚ್ಚು. ಇದಕ್ಕೆ ಕಾರಣವೇನು ಎಂಬುದು ಇನ್ನೂ ನಿಖರವಾಗಿ ತಿಳಿದಿಲ್ಲ, ಆದರೆ ಎಸ್‌ಐಡಿಎಸ್‌ ಅನ್ನು ತಡೆಗಟ್ಟಲು ಈ ಕೆಳಗಿನ ಕ್ರಮಗಳನ್ನು ಅನುಸರಿಸಬಹುದು.

1. ಮಗುವನ್ನು ಹೊಟ್ಟೆ ಕವುಚಿ ಮಲಗಿಸಬೇಡಿ. ಇದರಿಂದ ಉಸಿರಾಟದ ತೊಂದರೆಗಳು ತಲೆದೋರುತ್ತವೆ. ಉಸಿರಾಟದ ತೊಂದರೆ ತಲೆದೋರಿದರೆ ಎಚ್ಚರಿಸುವಷ್ಟು ಮೆದುಳು ಬೆಳವಣಿಗೆಯಾಗಿರುವುದಿಲ್ಲ. ಹೀಗಾಗಿ ಬೆನ್ನು ಕೆಳಗೆ ಬರುವಂತೆ ಮಲಗಿಸಿ. ಇದರಿಂದ ಮಗುವಿನ ಉಸಿರಾಟಕ್ಕೆ ತಾಜಾ ಗಾಳಿ ಸಿಗುವುದಲ್ಲದೇ ದೇಹ ಹೆಚ್ಚು ಬಿಸಿಯಾಗದಂತೆ ತಡೆಯುತ್ತದೆ. ದೇಹ ಅತಿಯಾಗಿ ಬಿಸಿಯಾಗುವುದು ಎಸ್‌ಐಡಿಎಸ್‌ಗೆ ಒಂದು ಪ್ರಮುಖ ಕಾರಣ ಎನ್ನಲಾಗಿದೆ.

2. ಮಗ್ಗುಲಾಗಿ ಮಲಗಿಸುವುದೂ ಅಷ್ಟು ಸುರಕ್ಷಿತವಲ್ಲ. ಅಧ್ಯಯನಗಳ ಪ್ರಕಾರ ಮಗುವನ್ನು ಮಗ್ಗುಲಾಗಿ ಮಲಗಿಸುವುದರಿಂದಲೂ ಎಸ್‌ಐಡಿಎಸ್‌ ಅಪಾಯ ಹೆಚ್ಚು.

3. ಹಾಸಿಗೆಯಲ್ಲಿ ಹೊದಿಕೆ ಬಿಟ್ಟು ಬೇರೆ ಏನನ್ನೂ ಸೇರಿಸಬೇಡಿ. ಅಂದರೆ ಯಾವುದೇ ದಿಂಬುಗಳು ಅಥವಾ ಕಂಬಳಿಗಳು ಅಥವಾ ಆಟಿಕೆಗಳು ಮಗುವಿನ ಉಸಿರಾಟಕ್ಕೆ ಅಡ್ಡಿ ಉಂಟು ಮಾಡಬಹುದು.

4. ನಿಮ್ಮ ಹಾಸಿಗೆಯಲ್ಲಿ ಮಲಗಿಸಿಕೊಳ್ಳುವುದನ್ನು ಸ್ವಲ್ಪ ದಿನಗಳ ಕಾಲ ಬಿಡುವುದು ಸೂಕ್ತ. ನೀವು ಹೊದ್ದುಕೊಂಡ ರಗ್ಗು ಮಗುವಿನ ಮೇಲೆ ಬಿದ್ದು ಉಸಿರುಗಟ್ಟಿಸಬಹುದು.

5. ನಿಮ್ಮ ಹಾಸಿಗೆಯಲ್ಲಿ ಮಲಗಿಸಿಕೊಳ್ಳುವುದನ್ನು ಸ್ವಲ್ಪ ದಿನಗಳ ಸಾಧ್ಯವಾದಷ್ಟು ಸಲ ಶಿಶುವಿಗೆ ಸ್ತನ್ಯಪಾನ ಮಾಡಿ.

ಹೊರಗಡೆ ಕರೆದುಕೊಂಡು ಹೋಗುವುದನ್ನು ತಪ್ಪಿಸಿ
ಅವಧಿಪೂರ್ವ ಜನಿಸಿದ ಮಗುವಿಗೆ ಸೋಂಕು ತಗುಲುವ ಸಾಧ್ಯತೆ ಹೆಚ್ಚು. ಜನಸಂದಣಿ ಇರುವ ಕಡೆ ಎತ್ತಿಕೊಂಡು ಹೋಗಬೇಡಿ. ಹಾಗೆಯೇ ಮನೆಗೆ ಇತರರು ಭೇಟಿ ನೀಡಿದಾಗ ಅವರು ಎತ್ತಿಕೊಳ್ಳದಂತೆ ಎಚ್ಚರಿಕೆ ವಹಿಸಿ. ಅದರಲ್ಲೂ ಅನಾರೋಗ್ಯದಿಂದ ಬಳಲುತ್ತಿರುವವರನ್ನು ಶಿಶುವಿನ ಬಳಿ ಹೋಗಲು ಬಿಡಬೇಡಿ.

ಕಾಂಗರೂ ಆರೈಕೆಯನ್ನು ಅಭ್ಯಾಸ ಮಾಡಿ. ಮಗುವಿಗೆ ಡಯಾಪರ್‌ ಮಾತ್ರ ಹಾಕಿ. ಮನೆಯಲ್ಲಿ ಬೆಚ್ಚಗಿನ ಕೋಣೆಯಲ್ಲಿ ಮಗುವನ್ನು ನಿಮ್ಮ ಎದೆಯ ಮೇಲೆ ಮಲಗಿಸಿಕೊಳ್ಳಿ. ನಿಮ್ಮ ತ್ವಚೆಗೆ ಮಗುವಿನ ತ್ವಚೆ ಸಂಪರ್ಕಕ್ಕೆ ಬರುವಂತೆ ನೋಡಿಕೊಳ್ಳಿ. ಇದಕ್ಕೆ ಕಾಂಗರೂ ಆರೈಕೆ ಎನ್ನುವರು. ಇದನ್ನು ಸಾಧ್ಯವಾದಷ್ಟು ಕಾಲ ಅಭ್ಯಾಸ ಮಾಡಿಸಿ. ಅವಧಿಪೂರ್ವ ಶಿಶುಗಳಲ್ಲಿ ಕಾಂಗರೂ ಆರೈಕೆ ಪೋಷಕ-ಶಿಶು ಬಂಧವನ್ನು ಹೆಚ್ಚಿಸುತ್ತದೆ, ಶಿಶುವಿನ ಉಸಿರಾಟ ಸರಾಗವಾಗಲು ಪ್ರಚೋದಿಸುತ್ತದೆ. ದೇಹದ ಉಷ್ಣತೆಯನ್ನು ನಿಯಂತ್ರಿಸುತ್ತದೆ ಮತ್ತು ಬೆಳವಣಿಗೆಯನ್ನು ಉತ್ತೇಜಿಸುತ್ತದೆ ಎಂದು ಸಂಶೋಧನೆ ದೃಢಪಡಿಸಿದೆ.

ಶಿಶುವಿನ ಆರೋಗ್ಯದಲ್ಲಿ ಏರುಪೇರಾದರೆ ತಕ್ಷಣ ಆಸ್ಪತ್ರೆಗೆ ಕರೆದೊಯ್ಯಿರಿ.

(ಲೇಖಕ: ಹಿರಿಯ ಸಲಹೆಗಾರರು, ನಿಯೋನೇಟಾಲಜಿಸ್ಟ್ ಫೋರ್ಟಿಸ್ ಲಾ ಫೆಮ್ಮೆ ಆಸ್ಪತ್ರೆ, ಬೆಂಗಳೂರು)

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು