ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಗಳು ಇನ್ನೂ ದೊಡ್ಡವಳಾಗಿಲ್ಲ..!

Last Updated 26 ಫೆಬ್ರುವರಿ 2020, 5:01 IST
ಅಕ್ಷರ ಗಾತ್ರ

ಸಿಂಧು ಪ್ರಥಮ ಪಿಯುಸಿಯಲ್ಲಿ ಓದುತ್ತಿರುವ 16ರ ಹರೆಯದ ಹುಡುಗಿ. ಆ ವಯಸ್ಸಿನಲ್ಲಿ ಸಹಜವಾದ ಬೆಳವಣಿಗೆಯಿಲ್ಲದೇ ಪೀಚುಪೀಚಾಗಿ ಕಾಣುವ ದೇಹ. ಸ್ತನದ ಬೆಳವಣಿಗೆ ಇನ್ನೂ ಆರಂಭವೇ ಆಗಿರಲಿಲ್ಲ. ಋತುಸ್ರಾವವೂ ಕಾಣಿಸಿಕೊಳ್ಳದಿದ್ದಾಗ ಆತಂಕಗೊಂಡ ಸಿಂಧುವಿನ ತಾಯಿ ಪ್ರಸೂತಿ ತಜ್ಞೆಯ ಬಳಿ ಕರೆದುಕೊಂಡು ಬಂದಿದ್ದರು. ತಪಾಸಣೆ ಮಾಡಿದ ವೈದ್ಯರು ಇದು ವಿಳಂಬ ಪ್ರೌಢಾವಸ್ಥೆ ಎಂದು ಹಾರ್ಮೋನ್‌ ಪರೀಕ್ಷೆ ಮಾಡಿಸುವಂತೆ ಸಲಹೆ ನೀಡಿದರು.

ಸಿಂಧುವಿನಂತೆ ಹಲವು ಹುಡುಗಿಯರನ್ನು ಆತಂಕಕ್ಕೆ ಈಡುಮಾಡುವ ಈ ವಿಳಂಬ ಪ್ರೌಢಾವಸ್ಥೆ ಎಂದರೇನು?

ಹುಡುಗಿಯರು ಸಾಮಾನ್ಯವಾಗಿ ಪ್ರೌಢಾವಸ್ಥೆ ತಲುಪುವುದು 8– 13 ವರ್ಷಗಳೊಳಗೆ. ಈ ಅವಧಿಯಲ್ಲಿ ಶೇ 95ರಷ್ಟು ಹೆಣ್ಣುಮಕ್ಕಳ ದೇಹದಲ್ಲಿ ಲೈಂಗಿಕ ಹಾರ್ಮೋನ್‌ಗಳ ಬಿಡುಗಡೆ ಆರಂಭವಾಗುತ್ತದೆ. ಆದರೆ ಕೆಲವು ಹುಡುಗಿಯರಿಗೆ 16 ವರ್ಷಗಳಾದರೂ ಪ್ರೌಢಾವಸ್ಥೆಯ ಚಿಹ್ನೆಗಳು ಕಾಣಿಸಿಕೊಳ್ಳುವುದಿಲ್ಲ. ಅಂದರೆ ಹುಡುಗಿಗೆ 14 ವರ್ಷಗಳಾದರೂ ಸ್ತನಗಳ ಬೆಳವಣಿಗೆ ಆರಂಭವಾಗದೇ ಇರುವುದು, 16ರ ನಂತರವೇ ಪ್ರಥಮ ಋತುಸ್ರಾವ ಕಾಣಿಸಿಕೊಳ್ಳುವುದು.. ಇವೆಲ್ಲ ಪ್ರೌಢಾವಸ್ಥೆ ತಡವಾಗುತ್ತಿರುವ ಲಕ್ಷಣಗಳು ಎನ್ನಬಹುದು. ಇದರಿಂದ ಅಂತಹ ಹೆಣ್ಣುಮಕ್ಕಳ ಪೋಷಕರು ಆತಂಕಗೊಳ್ಳುವುದು ಸಹಜವೇ.

ವಿಳಂಬ ಪ್ರೌಢಾವಸ್ಥೆಯ ಕಾರಣಗಳು

ಪ್ರೌಢಾವಸ್ಥೆ ವಿಳಂಬವಾದ ಬಹುತೇಕ ಪ್ರಕರಣಗಳಲ್ಲಿ ತಪಾಸಣೆ ಮಾಡಿದರೆ ಯಾವುದೇ ನಿಖರ ಕಾರಣ ಇರುವುದಿಲ್ಲ. ಸಹಜವಾಗಿಯೇ ಕೆಲವರಿಗೆ ತಡವಾಗಬಹುದು. ಕೆಲವರಿಗೆ ಅನುವಂಶೀಯವಾಗಿರಬಹುದು. ಒಮ್ಮೆ ಪ್ರೌಢಾವಸ್ಥೆಯ ಲಕ್ಷಣಗಳು ಗೋಚರವಾಗಲು ಶುರುವಾದರೆ, ಮುಂದೇನೂ ತೊಂದರೆ ಉದ್ಭವಿಸದು.

ಕೆಲವರಿಗೆ ದೇಹದಲ್ಲಿ ಕೊಬ್ಬಿನಂಶ ಕಡಿಮೆ ಇದ್ದರೆ ಅಂಥವರಿಗೆ ಪ್ರೌಢಾವಸ್ಥೆ ವಿಳಂಬವಾಗಬಹುದು. ಶರೀರ ತೀರಾ ಬಡಕಲಾಗಿದ್ದರೆ ದೇಹದಲ್ಲಾಗುವ ಸಹಜ ಪ್ರಕ್ರಿಯೆಗಳಿಗೆ ತಡೆಯುಂಟಾಗಬಹುದು. ಪೌಷ್ಟಿಕಾಂಶದ ಕೊರತೆ, ಕಡಿಮೆ ಆಹಾರ ಸೇವಿಸುವ ಅನರೆಕ್ಸಿಯ ಸಮಸ್ಯೆ, ಹಾಗೆಯೇ ಹೆಚ್ಚು ತಿನ್ನುವ ಬುಲಿಮಿಯ ತೊಂದರೆ ಇದಕ್ಕೆ ಕಾರಣವಿರಬಹುದು. ಹೆಚ್ಚು ಕ್ರೀಡಾ ಚಟುವಟಿಕೆಗಳಲ್ಲಿ, ಅದರಲ್ಲೂ ಅಥ್ಲೆಟಿಕ್ಸ್‌, ಜಿಮ್ನಾಸ್ಟಿಕ್ಸ್‌ಗಳಲ್ಲಿ ತೊಡಗಿಕೊಳ್ಳುವ, ಈಜಿನ ಸ್ಪರ್ಧೆಯಲ್ಲಿ ಭಾಗವಹಿಸುವ ಹುಡುಗಿಯರಿಗೆ ಇದು ತಲೆದೋರಬಹುದು. ಜೊತೆಗೆ ಕ್ಷಯ ಕೂಡ ವಿಳಂಬ ಪ್ರೌಢಾವಸ್ಥೆಗೆ ಪ್ರಮುಖ ಕಾರಣ.

ಅಂಡಾಶಯ ಬೆಳವಣಿಗೆಯಾಗದ ಟರ್ನರ್‌ ಸಿಂಡ್ರೋಮ್‌ ಎಂಬ ಜೆನೆಟಿಕ್‌ ಸಮಸ್ಯೆ, ಹೈಪೊಥೈರಾಯ್ಡ್‌, ಪಿಚ್ಯುಟರಿ ಗ್ರಂಥಿ ಹಾಗೂ ಮೆದುಳಿನಲ್ಲಿರುವ ಗಡ್ಡೆಗಳು ಕೂಡ ಇದಕ್ಕೆ ಕಾರಣ.

ಗರ್ಭಾಶಯ ಹಾಗೂ ಜನನಾಂಗದ ಅಸಹಜ ಬೆಳವಣಿಗೆ.

ಪತ್ತೆ ವಿಧಾನ

ವಿಳಂಬ ಪ್ರೌಢಾವಸ್ಥೆಯ ಜೊತೆಗೆ ಹುಡುಗಿಯರಲ್ಲಿ ಸ್ತನ ಬೆಳವಣಿಗೆಯಾಗದಿರುವುದು, ಕುಬ್ಜತನ, ಕಂಕುಳು ಹಾಗೂ ಜನನಾಂಗ ಪ್ರದೇಶದಲ್ಲಿ ಕೂದಲು ಹುಟ್ಟದಿರುವ ಲಕ್ಷಣಗಳಿದ್ದರೆ ತಜ್ಞರು ಇದು ಅನುವಂಶೀಯವೇ ಎಂದು ಮೊದಲು ಮಾಹಿತಿ ಪಡೆಯುತ್ತಾರೆ. ಹಾರ್ಮೋನ್‌ ಪರೀಕ್ಷೆ ಮಾಡಿಸಬಹುದು. ಥೈರಾಯ್ಡ್‌ ಹಾರ್ಮೋನ್‌ ಹಾಗೂ ಎಫ್‌ಎಸ್‌ಎಚ್‌ (ಫಾಲಿಕ್ಯುಲರ್‌ ಸ್ಟಿಮ್ಯುಲೇಟಿಂಗ್‌ ಹಾರ್ಮೋನ್‌), ಲ್ಯುಟಿನೈಜಿಂಗ್‌ ಹಾರ್ಮೋನ್‌, ಎಸ್ಟ್ರಾಡಿಯಲ್‌ ಮಟ್ಟವನ್ನು ಪರೀಕ್ಷೆ ಮಾಡಿಸಬಹುದು. ಅಲ್ಟ್ರಾಸೌಂಡ್‌ ಸ್ಕ್ಯಾನಿಂಗ್‌ ಮತ್ತು ಎಂಆರ್‌ಐ ಕೂಡ ಮಾಡಿಸಲು ಸಲಹೆ ನೀಡಬಹುದು.

ಚಿಕಿತ್ಸೆ

ಪೌಷ್ಟಿಕಾಂಶದ ಕೊರತೆಯಿದ್ದರೆ ಟಾನಿಕ್‌ ಹಾಗೂ ಹಾರ್ಮೋನ್‌ ಕೊರತೆಯಿದ್ದರೆ ಈಸ್ಟ್ರೋಜೆನ್‌ನಂತ ಹಾರ್ಮೋನ್‌ ಮಾತ್ರೆಗಳನ್ನು ನೀಡಬಹುದು. ಥೈರಾಯ್ಡ್‌ ಹಾರ್ಮೋನ್‌ ಕೊರತೆಯಿದ್ದರೆ ಚಿಕಿತ್ಸೆ ಬೇಕಾಗುತ್ತದೆ. ಅಸಹಜ ಕನ್ಯಾಪೊರೆಯಂತಹ ದೈಹಿಕ ಸಮಸ್ಯೆಗಳಿದ್ದರೆ ಸರಿಪಡಿಸಲು ಶಸ್ತ್ರಚಿಕಿತ್ಸೆಯ ಅಗತ್ಯ ಬೀಳುತ್ತದೆ.

ವಿಳಂಬ ಪ್ರೌಢಾವಸ್ಥೆಯ ಲಕ್ಷಣಗಳು

* ಆ ವಯಸ್ಸಿಗೆ ಎಷ್ಟು ಎತ್ತರ ಬೆಳೆಯಬೇಕೋ ಅಷ್ಟು ಬೆಳೆಯದೇ ಕುಬ್ಜರಾಗಿರುತ್ತಾರೆ.

* ಕಂಕುಳು, ಜನನಾಂಗ ಪ್ರದೇಶದಲ್ಲಿ ಕೂದಲಿನ ಬೆಳವಣಿಗೆ ತಡವಾಗುವುದು.

* ಸ್ತನದ ಬೆಳವಣಿಗೆ ವಿಳಂಬವಾಗುವುದು.

* ದೇಹದ ಬೆಳವಣಿಗೆಯ ವೇಗ ಕುಂದುವುದು.

* ಎಲುಬಿನ ಬೆಳವಣಿಗೆಯೂ ಸಮರ್ಪಕವಾಗಿರುವುದಿಲ್ಲ.

* ಜನನಾಂಗ, ಮೂತ್ರ ವಿಸರ್ಜನಾ ಮಾರ್ಗಗಳ ಬೆಳವಣಿಗೆಯಲ್ಲಿ ದೋಷ.

(ಲೇಖಕಿ ಕನ್ಸಲ್ಟೆಂಟ್‌ ಪ್ರಸೂತಿ ತಜ್ಞೆ,
ವಿಕ್ರಂ ಆಸ್ಪತ್ರೆ, ಬೆಂಗಳೂರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT