ಮಂಗಳವಾರ, ಏಪ್ರಿಲ್ 13, 2021
23 °C

Pv Web Exclusive: ಕಂದನಿರುವ ಮನೆಯಲ್ಲಿ ತಾಜಾ ಗಾಳಿ ಸುಳಿದಾಡಲಿ...

ಸುಶೀಲಾ ಡೋಣೂರ Updated:

ಅಕ್ಷರ ಗಾತ್ರ : | |

Prajavani

ಹುಟ್ಟಿದ ಕಂದ ಮನೆ ಸೇರುವ ಮುನ್ನವೇ ನಿಮ್ಮ ಮನೆಯೊಳಗಿನ ವಾತಾವರಣವನ್ನು ಶುದ್ಧಗೊಳಿಸಿ. ಮನೆಯೊಳಗಿನ ಮಾಲಿನ್ಯವೂ ನಿಮ್ಮ ಕಂದನ ಸೂಕ್ಷ್ಮ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು ಎನ್ನುವುದು ತಿಳಿದಿರಲಿ...

***

ಹುಟ್ಟುವ ಕಂದ ಹರ್ಷಚಿತ್ತವಾಗಿರಬೇಕು, ಆರೋಗ್ಯವಾಗಿರಬೇಕು. ಅದಕ್ಕಾಗಿ ನೀವು ಏನೆಲ್ಲಾ ಮಾಡುತ್ತೀರಿ. ಗರ್ಭದಲ್ಲಿರುವಾಗಲೇ ಅದಕ್ಕೆ ಹಿತವೆನಿಸುವ ಖಾದ್ಯಗಳನ್ನೇ ಸೇವಿಸುತ್ತೀರಿ. ಅದಕ್ಕೆ ಹಿತವಾದ ವಾತಾವರಣ ಸಿಗುವಂತೆ ಮಾಡಲು ಶ್ರಮಿಸುತ್ತೀರಿ. ಇನ್ನೇನು ನಿಮ್ಮ ಕನಸಿನ ಕೂಸು ಮಡಿಲು ತುಂಬುವ ಗಳಿಗೆ ಸನ್ನಿಹಿತವಾಗಿದೆ ಎನ್ನುತ್ತಿದ್ದಂತೆ ಮನೆಯವರು ಅದರ ಸ್ವಾಗತಕ್ಕೆ ಎಲ್ಲಾ ವ್ಯವಸ್ಥೆಗಳನ್ನು ಮಾಡುತ್ತಾರೆ. ಹಾಸಿಗೆ, ಹೊದಿಕೆಯನ್ನು ವ್ಯವಸ್ಥೆಗೊಳಿಸುವುದು, ಬಾಣಂತಿ ಕೋಣೆಯನ್ನು ಒಪ್ಪಗೊಳಿಸುವುದು ಎಲ್ಲವೂ...

ಆದರೆ ಎಳೇ ಮಕ್ಕಳಿರುವ ಮನೆಯನ್ನು ಮಾಲಿನ್ಯದಿಂದ ಮುಕ್ತವಾಗಿಡುವುದು ಹೇಗೆಂದು ಅನೇಕರಿಗೆ ತಿಳಿದಿರುವುದೇ ಇಲ್ಲ. ಮನೆಯ ದೂಳು ತೆಗೆದು, ಗುಡಿಸಿ–ಒರೆಸಿ ಸ್ವಚ್ಛವಾಗಿಟ್ಟರೆ ಸಾಕು ಎಂದುಕೊಳ್ಳುತ್ತಾರೆ. ಇದಷ್ಟೇ ಅಲ್ಲ, ನವಜಾತ ಶಿಶು ಇರುವ ಮನೆಯಲ್ಲಿ ಇನ್ನೂ ಹೆಚ್ಚಿನ ಕಾಳಜಿ ವಹಿಸುವ ಅಗತ್ಯವಿದೆ ಎನ್ನುತ್ತಾರೆ ಅಪೊಲೊ ಕ್ರೆಡಲ್‌ನ ಮಕ್ಕಳ ತಜ್ಞೆ ಡಾ.ಸೌಮ್ಯಾ ಸಿ.ಸಿ.

ಮಾಲಿನ್ಯಕ್ಕೆ ಹಗಲು–ರಾತ್ರಿ ಎನ್ನುವ ವ್ಯತ್ಯಾಸವೇ ಇಲ್ಲ. ರಾತ್ರಿ ನಾವು ಮಲಗಿ ನಿದ್ರಿಸುವಾಗಲೂ ಮಾಲಿನ್ಯ ನಮ್ಮ ಮೇಲೆ ದಾಳಿ ನಡೆಸುತ್ತಲೇ ಇರುತ್ತದೆ. ಅದರಲ್ಲೂ ನವಜಾತ ಶಿಶು ಮನೆಯಲ್ಲಿರುವಾಗ ನಾವು ಒಳಾಂಗಣ ಮಾಲಿನ್ಯದ ಬಗ್ಗೆ ಎಷ್ಟು ತಿಳಿದುಕೊಂಡರೂ ಕಡಿಮೆಯೇ. ಕಂದನ ಮೇಲೆ ಮಾಲಿನ್ಯದಿಂದ ದುಷ್ಪರಿಣಾಮ ಉಂಟಾಗಿದೆ ಎನ್ನುವುದನ್ನು ತಿಳಿದುಕೊಳ್ಳುವುದು ಹೇಗೆ, ಮಗು ಇರುವ ಮನೆಯನ್ನು ಮಾಲಿನ್ಯದಿಂದ ರಕ್ಷಿಸುವುದು ಹೇಗೆ, ಪೋಷಕರು ಮಾಲಿನ್ಯದ ಹಾನಿಕಾರಕ ಪರಿಣಾಮಗಳಿಂದ ನವಜಾತ ಶಿಶುಗಳನ್ನು ಹೇಗೆ ರಕ್ಷಿಸಬೇಕೆನ್ನುವ ಬಗ್ಗೆ ಮಾಹಿತಿ ನೀಡಿದ್ದಾರೆ ಡಾ.ಸೌಮ್ಯಾ.

‘ನವಜಾತ ಶಿಶುಗಳ  ಪ್ರತಿರಕ್ಷಣಾ ವ್ಯವಸ್ಥೆ, ಶ್ವಾಸಕೋಶಗಳು ಮತ್ತು ಮೆದುಳು ಬಹಳ ಸೂಕ್ಷ್ಮವಾಗಿರುತ್ತವೆ. ಅವು ಇನ್ನೂ ಪೂರ್ಣಪ್ರಮಾಣದಲ್ಲಿ ಬೆಳವಣಿಗೆ ಆಗಿರುವುದಿಲ್ಲ. ಅಲ್ಲದೆ, ಶಿಶುಗಳು  ವಯಸ್ಕರಿಗಿಂತ ಹೆಚ್ಚು ವೇಗವಾಗಿ ಉಸಿರಾಡುತ್ತವೆ, ಹೀಗಾಗಿ ಅವು ಅತ್ಯಂತ ವೇಗವಾಗಿ ಮಾಲಿನ್ಯಕ್ಕೆ ಒಡ್ಡಿಕೊಳ್ಳುತ್ತವೆ.

ನಿಮ್ಮ ಕಂದನಿಗೆ ಮಾಲಿನ್ಯದಿಂದ ಅಲರ್ಜಿ ಉಂಟಾಗಿದೆ ಎನ್ನುವುದನ್ನು ಕೆಲ ಮುನ್ಸೂಚನೆಗಳಿಂದ ತಿಳಿದುಕೊಳ್ಳಬಹುದು. ಅಂತಹ ಲಕ್ಷಣಗಳಲ್ಲಿ ಮೂಗು ಸೋರುವುದು, ನೆಗಡಿ, ಸೀನುವಿಕೆ, ಕೆಮ್ಮು, ಕಣ್ಣುಗಳಲ್ಲಿ ನೀರಾಡುವುದು, ಕಿರಿಕಿರಿ ಮತ್ತು ಚರ್ಮದ ದದ್ದುಗಳು... ನವಜಾತ ಶಿಶುವಿಗೆ ಅಲರ್ಜಿ ಅಥವಾ ಆಸ್ತಮಾದಂತಹ ಉಸಿರಾಟದ ತೊಂದರೆಗಳಿದ್ದರೆ ಈ ಲಕ್ಷಣಗಳು ಹೆಚ್ಚು ತೀವ್ರವಾಗಿರುತ್ತವೆ.

ನವಜಾತ ಶಿಶುವನ್ನು ಮಾಲಿನ್ಯದಿಂದ ರಕ್ಷಿಸಲು ಇಲ್ಲಿವೆ ಕೆಲವು ಸಲಹೆಗಳು:

ಧೂಮಪಾನವನ್ನು ತಪ್ಪಿಸಿ ಮತ್ತು ಧೂಮಪಾನಿಗಳಿಂದ ದೂರವಿರಿ

ಮನೆಯಲ್ಲಿ ಗಾಳಿಯ ಗುಣಮಟ್ಟವನ್ನು ಉತ್ತಮಗೊಳಿಸುವುದು ಬಹಳ ಮುಖ್ಯ. ಅದಕ್ಕಾಗಿ ಧೂಮಪಾನವನ್ನು ಸಂಪೂರ್ಣ ನಿಷೇಧಿಸಿ. ಮನೆಯಲ್ಲಿ ಯಾರೂ ಧೂಮಪಾನ ಮಾಡದಂತೆ ನೋಡಿಕೊಳ್ಳಿ. ಧೂಮಪಾನದಿಂದಾಗಿ ಕೊಳಕು ತುಂಬಿದ ಗಾಳಿಯನ್ನು ಉಸಿರಾಡುವುದರಿಂದ ನವಜಾತ ಶಿಶುವಿನ ಮೇಲೆ ಗಂಭೀರ ಪರಿಣಾಮ ಉಂಟಾಗುತ್ತದೆ.

ಏರ್ ಪ್ಯೂರಿಫೈಯರ್ /ವಾಯು ಶುದ್ಧೀಕರಣ  ಬಳಸಿ

ಒಳಾಂಗಣದಲ್ಲಿ ಏರ್ ಪ್ಯೂರಿಫೈಯರ್ /ವಾಯು ಶುದ್ಧೀಕರಣ/ಶುದ್ಧಿಕಾರಕಗಳನ್ನು ಬಳಸಿ. ಇವು ಹವಾಮಾನದಲ್ಲಿನ ಬ್ಯಾಕ್ಟೀರಿಯಾವನ್ನು ತೊಡೆದುಹಾಕುವ ಮೂಲಕ ಗಾಳಿಯ ಗುಣಮಟ್ಟವನ್ನು ಸುಧಾರಿಸಲು ಸಹಾಯ ಮಾಡುತ್ತವೆ.

ಸುಗಂಧಭರಿತ ಉತ್ಪನ್ನಗಳು ಬೇಡ

ಶಿಶುಗಳಿರುವ ಮನೆಯಲ್ಲಿ ಏರ್ ಫ್ರೆಶ್ನರ್‌ಗಳು, ಪರಿಮಳಯುಕ್ತ ಮೇಣದ ಬತ್ತಿಗಳು ಮತ್ತು ಸುಗಂಧ ದ್ರವ್ಯಗಳ ಬಳಕೆಯನ್ನು ತಪ್ಪಿಸಿ. ಅಷ್ಟೇ ಅಲ್ಲ, ಮಗು ಇರುವ ಮನೆಯಲ್ಲಿ ಕೀಟನಾಶಕಗಳನ್ನು ಸಹ ಬಳಸಬೇಡಿ. ಇದರ ಸೂಕ್ಷ್ಮಕಣಗಳು ಗಾಳಿಯಲ್ಲಿ ಸೇರಿ ಮನೆಯ ವಾತಾವರಣದಲ್ಲಿ ವಿಷ ತುಂಬುತ್ತವೆ. ಫ್ಲೋರ್‌ ಕ್ಲೀನರ್‌, ಬಾತ್‌ರೂಮ್‌ ಕ್ಲೀನರ್‌ಗಳ ಬಳಕೆಯೂ ಅಷ್ಟೇ ಹಾನಿಕಾರಕ. ಇದರಿಂದ ಅಲರ್ಜಿ, ಉಸಿರಾಟದ ತೊಂದರೆ, ಕಣ್ಣಿನಲ್ಲಿ ಕಿರಿಕಿರಿ ಮುಂತಾದ ಲಕ್ಷಣಗಳು ಕಾಣಿಸಿಕೊಳ್ಳಬಹುದು.

ಮನೆಯೊಳಗೆ ಇರಿ

ಹೊರಗಿನ ವಾತಾವರಣದಲ್ಲಿ ಹೆಚ್ಚು ಮಾಲಿನ್ಯವಿರುತ್ತದೆ. ಅದರಲ್ಲೂ ಮೆಟ್ರೊ ನಗರಗಳಲ್ಲಿ ಇದರ ದುಷ್ಪರಿಣಾಮ ಇನ್ನೂ ಹೆಚ್ಚು. ಹೀಗಾಗಿ ನವಜಾತ ಶಿಶುವನ್ನು ಅನಾವಶ್ಯಕವಾಗಿ ಹೊರಗೆ ಕರೆದೊಯ್ಯಬೇಡಿ. ಮಾಲ್‌, ಸಿನಿಮಾ ಮಂದಿರ, ಹೋಟೆಲ್, ಪಾರ್ಟಿಗಳನ್ನು ಕೆಲ ಸಮಯ   ತಪ್ಪಿಸಿ.

ಸ್ತನ್ಯಪಾನ

ತಾಯಿಯ ಎದೆ ಹಾಲುಣ್ಣುವ ಶಿಶುಗಳು ಮಾಲಿನ್ಯದೊಂದಿಗೆ ಹೋರಾಡುವ ಪ್ರತಿರಕ್ಷಣಾ ವ್ಯವಸ್ಥೆಯನ್ನು ಬೆಳೆಸಿಕೊಳ್ಳುತ್ತವೆ. ಸ್ತನ್ಯಪಾನವು ಅವರ ರೋಗನಿರೋಧಕ ಶಕ್ತಿಯನ್ನು ಸುಧಾರಿಸುತ್ತದೆ. ಎದೆ ಹಾಲುಣುವ ಶಿಶುಗಳಿಗೆ ಹೋಲಿಸಿದರೆ ಸ್ತನ್ಯಪಾನದಿಂದ ವಂಚಿತರಾದ ಶಿಶುಗಳು ಮಾಲಿನ್ಯದ ದುಷ್ಪರಿಣಾಮಗಳಿಗೆ ಒಡ್ಡಿಕೊಳ್ಳುವ ಸಾಧ್ಯತೆ ಹೆಚ್ಚು.

ಸ್ವಚ್ಛತೆ ಕಾಪಾಡಿ

ಶಿಶುವಿನ ಹತ್ತಿರ ಹೋಗುವ ಮೊದಲು ಪ್ರತಿಯೊಬ್ಬರೂ ಕೈ ಮತ್ತು ಮುಖವನ್ನು ಚೆನ್ನಾಗಿ ತೊಳೆದುಕೊಳ್ಳಬೇಕು. ತಾಯಿಯೂ ಸಹ ಹಾಲುಣಿಸುವಾಗ ಕೈ, ಮುಖ ಮತ್ತು ಸ್ತನಗಳನ್ನು ತೊಳೆದುಕೊಳ್ಳಬೇಕು. ಮಗುವಿಗೂ ಸಹ ಪ್ರತಿದಿನ ಸ್ನಾನ ಮಾಡಿಸಿ, ಎರಡು ಬಾರಿ ಬಟ್ಟೆ ಬದಲಿಸಬೇಕು.

ಒಳಾಂಗಣ ಸಸ್ಯಗಳು

ಮನಿ ಪ್ಲಾಂಟ್, ಅಲೋವೆರಾ, ಲೆಮನ್‌ ಗ್ರಾಸ್‌, ಪೀಸ್ ಲಿಲಿ ಮತ್ತು ಬಿದಿರಿನ ಪಾಮ್‌ನಂತಹ ಸಸ್ಯಗಳು ನೈಸರ್ಗಿಕವಾದ ವಾಯು ಶುದ್ಧೀಕಾರಕಗಳಾಗಿವೆ. ನಮ್ಮಿಂದ ಹೊರಹಾಕಲ್ಪಟ್ಟ ಇಂಗಾಲದ ಡೈಆಕ್ಸೈಡ್ ಅನ್ನು ಈ ಸಸ್ಯಗಳು ತಾಜಾ ಆಮ್ಲಜನಕವಾಗಿ ಪರಿವರ್ತಿಸುತ್ತವೆ. ಅವು ಮನೆಯಲ್ಲಿ ತಾಜಾ ಗಾಳಿಯನ್ನು ಉಳಿಸುತ್ತವೆ. ಆದ್ದರಿಂದ ನವಜಾತ ಶಿಶು ಇರುವ ಮನೆಯೊಳಗೆ ಇಂತಹ ಸಸ್ಯಗಳನ್ನು ಬೆಳೆಸುವುದು ಒಳ್ಳೆಯದು.

ನವಜಾತ ಶಿಶುಗಳಿಗೆ ಶುದ್ಧ, ತಾಜಾ ವಾತಾವರಣವನ್ನು ಖಚಿತಪಡಿಸುವುದು ಎಲ್ಲರ ಹೊಣೆ. ಅದಕ್ಕಾಗಿ ಮಗು ಮನೆಯನ್ನು ಪ್ರವೇಶಿಸುವ ಮುನ್ನವೇ ನಿಮ್ಮ ತಯಾರಿ ಸಾಗಲಿ.


ಡಾ.ಸೌಮ್ಯಾ ಸಿ.ಸಿ

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು