ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive | ಬೀಚ್‌ ಥೆರಪಿ: ಅಲೆ ಬಂದು ಕರೆದಿಹುದು...

Last Updated 5 ಜನವರಿ 2021, 5:30 IST
ಅಕ್ಷರ ಗಾತ್ರ

‘ಕಳೆದ ಎಷ್ಟೋ ದಿನಗಳಿಂದ ಸರಿಯಾಗಿ ನಿದ್ದೆ ಹತ್ತುತ್ತಿಲ್ಲ. ತಲೆಯೆಲ್ಲ ಭಾರ. ಕೆಲಸದ ಒತ್ತಡದಿಂದ ದಣಿವು. ಮುಂದೆ ಏನು ಮಾಡಬೇಕು ಎಂದು ಗೊತ್ತಾಗುತ್ತಿಲ್ಲ...’

ಹೀಗಾದಾಗ ಅಶ್ವಿನಿಗೆ ನೆನಪಾದದ್ದು ಹಳ್ಳಿಯ ಸಮುದ್ರ ತೀರ. ವಿಶ್ರಾಂತಿ ಬೇಕೆನಿಸಿದಾಗ ನೆನಪಾದದ್ದು ಕಡಲ ತಡಿ. ಮುಂದಿನ ಒಂದು ವಾರ ರಜೆ ಹಾಕಿ ಹಳ್ಳಿಗೆ ಧಾವಿಸಿದಳು. ಲಗೇಜ್‌ ಅಜ್ಜಿಯ ಮನೆಯಲ್ಲಿ ಒಗೆದು ಸಮುದ್ರದ ತೀರದಲ್ಲಿ ಬಂದು ಮರಳಲ್ಲಿ ಮೈಚಾಚಿದಾಗಲೇ ಅವಳಿಗೆ ಸಮಾಧಾನದ ಸಿಂಚನವಾಗಿತ್ತು. ಸಮುದ್ರದ ಮೊರೆತ ಮನಸ್ಸಿನ ದುಗುಡ ಕಳೆದು ಚಲನಶೀಲವಾಗಿಸಿತ್ತು.

ಬೆಂಗಳೂರಿನಲ್ಲಿ ಉದ್ಯಮ ನಡೆಸುತ್ತಿದ್ದ ಜನಾರ್ದನ್‌ಗೆ ಈಚೆಗೆ ಆರ್ಥಿಕ–ಕೌಟುಂಬಿಕ ಸಮಸ್ಯೆಗಳಿಂದ ವಿಪರೀತ ಮಾನಸಿಕ ಒತ್ತಡ ಉಂಟಾಗಿತ್ತು. ಹೇಗಾದರೂ ಈ ಒತ್ತಡದಿಂದ ಹೊರಬಂದು ಕ್ರಿಯಾಶೀಲನಾಗಬೇಕು ಎಂಬ ಹಂಬಲದಲ್ಲಿದ್ದಾಗ ಸ್ನೇಹಿತರು ನೀಡಿದ ಸಲಹೆ ಎಂದರೆ ಸಮುದ್ರ ತೀರಕ್ಕೆ ನಡೆ ಎಂದು. ಸರಿ ಎಂದು ಬಂದದ್ದಾಯ್ತು. ಬೆಳಿಗ್ಗೆ ಸಮುದ್ರದ ದಂಡೆಗೆ ಹಾಜರಾದಾಗ ಅಲ್ಲಿಯ ಸುಂದರ ಪರಿಸರ ಖುಷಿ ನೀಡಿತು. ಬಹಳ ಹೊತ್ತು ನೀರಿನಲ್ಲಿ ಆಡಿದ ನಂತರ ಮರಳ ದಂಡೆಯಲ್ಲಿ ಕಾಲು ಚಾಚಿ ಸಮುದ್ರವನ್ನೇ ನಿಟ್ಟಿಸುತ್ತ ಕುಳಿತ. ಹಾಗೆಯೇ ಎಷ್ಟು ಹೊತ್ತು ಕುಳಿತಿದ್ದನೋ ಅವನಿಗೇ ಗೊತ್ತಿಲ್ಲ. ದಂಡೆಗೆ ಬಂದಪ್ಪಳಿಸುವ ನೀರಿನ ಅಲೆಗಳ ಸೌಂದರ್ಯ, ನಿರಂತರವಾಗಿ ಕೇಳುವ ನೀರಿನ ಸದ್ದು ಕ್ರಮೇಣ ಧ್ಯಾನಸ್ಥ ಸ್ಥಿತಿಯನ್ನು ಕರುಣಿಸಿತು.

ಹೀಗೆ, ಕಡಲ ತಡಿಗೆ ಹೋದ ಯಾರೇ ಹೋಗಲಿ ಮನಸ್ಸಿನ ತುಂಬ ಖುಷಿಯ ಅಲೆಗಳನ್ನು ಹೊತ್ತು ಬರುತ್ತಾರೆ. ಮೈಮನಸ್ಸಿಗೆ ಟಾನಿಕ್‌ನಂತೆ ಕೆಲಸ ಮಾಡುವುದರಿಂದ ಇದು ‘ಬೀಚ್‌ ಥೆರಪಿ’ ಅಥವಾ ‘ಓಷಿಯನ್‌ ಥೆರಪಿ’. ತಲೆಗೆ ಶಾಖ ನೀಡುವ ಸೂರ್ಯ, ಮನಸ್ಸನ್ನೂ ತಟ್ಟಿ ಸಮಾಧಾನಗೊಳಿಸುವ ಸಮುದ್ರದ ಅಲೆಗಳ ರಭಸ, ಕಾಲಿಗೆ ಕಚಗುಳಿಯಿಡುವ ಮರಳ ರಾಶಿ... ಇವಿಷ್ಟು ಸಾಕು ಮನಸ್ಸು ರಿಲ್ಯಾಕ್ಸ್‌ ಆಗಲು.

ಗೋವಾದ ಕಾಂಡೋಲಿಮ್‌ ಬೀಚ್‌.
ಗೋವಾದ ಕಾಂಡೋಲಿಮ್‌ ಬೀಚ್‌.

ಈಚೆಗೆ ಹಲವು ಸಿನಿ ತಾರೆಯರು ಮಾಲ್ಡೀವ್ಸ್‌ನ ಸಮುದ್ರತೀರದಲ್ಲಿ ಸಮಯ ಕಳೆದ ಬಂದಿದ್ದು ಸುದ್ದಿಯಾಯಿತು. ಒತ್ತಡದಿಂದ ದೂರವಾಗಲು ಹೆಚ್ಚಿನ ತಾರೆಯರು ಮೊರೆಹೋಗುವುದು ಈ ಬೀಚ್‌ ಥೆರಪಿಗೆ. ಇದಕ್ಕಾಗಿ ವಿದೇಶಗಳಿಗೆ ಮೊರೆಹೋಗುವ ಅವಶ್ಯಕತೆಯೇನೂ ಇಲ್ಲ. ನಮ್ಮ ಅಕ್ಕಪಕ್ಕದಲ್ಲೇ ಸುಂದರ ಕಡಲತಡಿಗಳು ಕೈಬೀಸಿ ಕರೆಯುತ್ತಿವೆ. ದುಃಖ–ದುಮ್ಮಾನ–ಕಷ್ಟ–ಖಿನ್ನತೆ ಆವರಿಸಿದಾಗ ಕೊರಗುತ್ತ ಕೂಡದೇ ಕಡಲತಡಿಯ ಸಾನ್ನಿಧ್ಯ ಅರಸಿ ಹೋಗುವುದೇ ಉತ್ತಮ ಮಾರ್ಗ.

ಈ ಥೆರಪಿಯಲ್ಲಿ ಯಾರದ್ದೇ ಸಲಹೆ– ಉಪಚಾರದ ಅಗತ್ಯವಿಲ್ಲ. ಎಲ್ಲವನ್ನೂ ಸಮುದ್ರವೇ ನೀಡುತ್ತದೆ. ಮನಸ್ಸು, ದೇಹ, ಆತ್ಮಗಳಿಗೆ ಮದ್ದರೆಯುವ ಸಾಗರ, ತಲೆಯಲ್ಲಿ ತುಂಬಿಕೊಂಡ ಚಿಂತೆಗಳ ಸಿಕ್ಕುಗಳನ್ನು ಬಿಡಿಸಿ, ಆಲೋಚನೆಗಳಿಗೆ ಹೊಸ ಆಯಾಮ ನೀಡುತ್ತದೆ. ಹೊಸ ಚಿಂತನೆಗಳಿಗೆ ದಾರಿ ಮಾಡಿಕೊಡುತ್ತದೆ. ವಿಶಾಲ ಪರಿಸರವು ಅಭದ್ರತೆಯ ಭಾವವನ್ನು ದೂರ ಸರಿಸುತ್ತದೆ.

ಸಮುದ್ರದ ಅಗಾಧತೆಯು ನಮ್ಮ ಬಗ್ಗೆ ನಾವು ಮರುಚಿಂತನೆ ಮಾಡುವಂತೆ ಪ್ರಚೋದಿಸುತ್ತದೆ. ಅಂತರಾಳದ ಭಾವಗಳನ್ನು ಬಗೆದು ಹೊರತರುವ ಶಕ್ತಿಯೂ ಇಲ್ಲಿಯ ಪರಿಸರಕ್ಕಿದೆ. ಸೂರ್ಯ ಉದಯಿಸುವ ಅಥವಾ ಮುಳುಗುವ ನೈಸರ್ಗಿಕ ಪರಿಣಾಮಗಳನ್ನು ನೋಡುತ್ತ ಕುಳಿತುಕೊಳ್ಳುವುದೇ ಮಹದಾನಂದ. ಜವಾಬ್ದಾರಿಗಳ ಮೂಟೆ ಹೊತ್ತು ಸಾಗುವ ಬದುಕಿನಲ್ಲಿ ಆಗಾಗ ಚಿಂತೆಯ ಕಾರ್ಮೋಡ ಕವಿಯುವುದು ಸಹಜ. ಸಮುದ್ರದ ಜಲರಾಶಿಯು ನಾವು ಎಲ್ಲವನ್ನೂ ಮರೆಯುವಂತೆ ಮಾಡುತ್ತದೆ. ಅದರ ಅಗಾಧತೆಯಲ್ಲೇ ಮುಳುಗಿದಾಗ ನಮಗರಿವಿಲ್ಲದೆಯೇ ಚಿಂತೆಯ ಕಾರ್ಮೋಡ ಕಳೆದಿರುತ್ತದೆ.

ನಾಲ್ಕು ಗೋಡೆಗಳಿಂದ ಈಚೆ ಬಂದರೆ ಜಗತ್ತು ಎಷ್ಟು ಸುಂದರವಾಗಿದೆ ಎಂದು ಅರಿಯಬಹುದು. ವೇಗವಾಗಿ ಸಾಗುತ್ತಿರುವ ಜನರ ಬದುಕಿನಲ್ಲಿ ಈಗ ಒತ್ತಡವೇ ದೊಡ್ಡ ಶತ್ರುವಿನಂತಾಗಿದೆ. ನೀಲಿ ಆಗಸ, ತಿಳಿಹಳದಿ ಬಣ್ಣದ ಮರಳು, ಸದಾ ಚಲನಶೀಲವಾದ ವಿಶಾಲ ಜಲರಾಶಿ ಮನಸ್ಸು–ಆತ್ಮವನ್ನು ಶುದ್ಧೀಕರಿಸುವುದನ್ನು ಸ್ವತಃ ಕಂಡುಕೊಳ್ಳಬಹುದು.

ದೈಹಿಕವಾಗಿಯೂ ಸಮುದ್ರವಿಹಾರ ಉಪಯುಕ್ತ. ನೈಸರ್ಗಿಕ ವಿಟಮಿನ್‌ ‘ಡಿ’ ದೇಹಕ್ಕೆ ಸಾಕಷ್ಟು ಪ್ರಮಾಣದಲ್ಲಿ ಲಭ್ಯವಾಗುತ್ತದೆ. ಸಮುದ್ರದ ನೀರು ಚರ್ಮ, ಕೂದಲು, ಉಗುರುಗಳನ್ನು ಸ್ವಚ್ಛಗೊಳಿಸಿ ಹೊಸ ಕಾಂತಿ ನೀಡುತ್ತದೆ. ಮರಳಲ್ಲಿ ಓಡಾಡುವುದೇ ದೇಹಕ್ಕೆ ಚೈತನ್ಯದಾಯಕ. ಉಪ್ಪು ನೀರು ನಂಜು ನಿರೋಧಕವೂ ಆಗಿರುವುದರಿಂದ ಸಮುದ್ರಸ್ನಾನ ಅತ್ಯುಪಯುಕ್ತ.

ರಾತ್ರಿ ನಿದ್ದೆ ಬರದೇ ಒದ್ದಾಡುವವರೂ ಒಂದು ದಿನ ಸಮುದ್ರತೀರದಲ್ಲಿ ಕಳೆದರೆಂದರೆ ಆ ರಾತ್ರಿ ಗಾಢ ನಿದ್ದೆ ಆವರಿಸುವುದನ್ನು ಕಾಣಬಹುದು. ಹಾರ್ಮೋನ್‌ ಅಸಮತೋಲನವನ್ನೂ ಇದು ಸರಿಪಡಿಸುವುದಲ್ಲದೇ ಉದ್ವೇಗವನ್ನು ಕಡಿಮೆ ಮಾಡುವುದನ್ನು ವೈಜ್ಞಾನಿಕವಾಗಿ ಕಂಡುಕೊಳ್ಳಲಾಗಿದೆ.

ಸ್ಪರ್ಧಾತ್ಮಕ ಜಗತ್ತಿನಲ್ಲಿ ಮೇಲೆರಲು ಒತ್ತಡದಲ್ಲಿರುವ ಮಕ್ಕಳು, ಮನೆಯ ಕೆಲಸಗಳ ಏಕತಾನತೆಯಿಂದ ಬೆಂದ ಅಮ್ಮಂದಿರು, ಕಚೇರಿ–ಮನೆ ಎರಡನ್ನೂ ಬ್ಯಾಲೆನ್ಸ್‌ ಮಾಡಲು ಪರದಾಡುವ ಪತಿ–ಪತ್ನಿ, ಕೆಲಸದ ಒತ್ತಡದಲ್ಲಿ ನೆಮ್ಮದಿಗಾಗಿ ಹಂಬಲಿಸುವ ಅಪ್ಪ–ಅಣ್ಣ–ಅಕ್ಕಂದಿರೆಲ್ಲರಿಗೂ ಸಮುದ್ರವೆಂದರೆ ಇಷ್ಟ ಇದೇ ಕಾರಣಕ್ಕೆ. ಚಿಣ್ಣರಿಗೂ ಸಮುದ್ರದ ಮರಳಿನಲ್ಲಿ ಆಟ ಶುರುವಾಯಿತೆಂದರೆ ಅದಕ್ಕೆ ಮುಕ್ತಾಯವೆಂಬುದಿಲ್ಲ.

ರಜೆಯ ದಿನಗಳನ್ನು ಕಳೆಯಲು ಹಲವರು ಗೋವಾಕ್ಕೆ ಹೋಗುವುದಿದೆ. ಕಾರಣ ಅಲ್ಲಿಯ 45ಕ್ಕೂ ಹೆಚ್ಚು ಸುಂದರ ಕಡಲತೀರಗಳು. ಕರ್ನಾಟಕದ ಪ್ರಸಿದ್ಧ ಸಮುದ್ರದಂಡೆಗಳಲ್ಲೂ ಸದಾ ಜನಜಂಗುಳಿ ತುಂಬಿರುತ್ತದೆ. ಅವರಲ್ಲಿ ನೆಮ್ಮದಿಯರಸಿ ಬರುವವರು ನೂರಾರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT