ಸೋಮವಾರ, ಏಪ್ರಿಲ್ 19, 2021
23 °C

PV Web Exclusive | W.H.O ಜನ್ಮದಿನ: ಆರೋಗ್ಯ ಕ್ಷೇತ್ರದಲ್ಲಿ ಸವಾಲುಗಳ ಸುಳಿ

ಸ್ಮಿತಾ ಶಿರೂರ Updated:

ಅಕ್ಷರ ಗಾತ್ರ : | |

Prajavani

ಈಚೆಗೆ ಸ್ಪೈನಲ್‌ ಮಸ್ಕ್ಯುಲರ್‌ ಅಟ್ರೋಫಿ ಕಾಯಿಲೆಯಿಂದ ಬಳಲುತ್ತಿದ್ದ ಮುಂಬೈ ಹಾಗೂ ಭಟ್ಕಳದ ಪುಟ್ಟ ಮಕ್ಕಳಿಗೆ ₹ 16 ಕೋಟಿ ಮೌಲ್ಯದ (ತೆರಿಗೆ ಸೇರಿ ₹ 22 ಕೋಟಿ) ಔಷಧ ಬೇಕಾಯಿತು. ಒಂದು ಮಗುವಿನ ಪೋಷಕರು ಸಾಮಾಜಿಕ ಜಾಲತಾಣಗಳಲ್ಲಿ ಮನವಿ ಮಾಡಿದ ಕಾರಣ ಕ್ರೌಡ್‌ ಫಂಡಿಂಗ್‌ ಮೂಲಕ ಧನಸಹಾಯ ಒದಗಿತು. ಇನ್ನೊಂದು ಮಗುವಿನ ಪೋಷಕರಿಗೆ ಲಾಟರಿ ಮೂಲಕ ಅಗತ್ಯ ಹಣ ಲಭಿಸಿದೆ ಎಂದು ವರದಿಯಾಯಿತು.

ಈ ಕಾಯಿಲೆಗೆ ಬೇಕಾದ ಔಷಧದ ಬೆಲೆ ಕೇಳಿ ಹೈರಾಣಾದ ಜನರೇ ಹೆಚ್ಚು. ಅಲ್ಲಿಯವರೆಗೆ ಅಂಥದ್ದೊಂದು ಕಾಯಿಲೆ, ಅದಕ್ಕೆ ಬೇಕಾದ ಔಷಧ ಅಷ್ಟು ದುಬಾರಿ ಎಂದು ಹೆಚ್ಚಿನವರಿಗೆ ಗೊತ್ತಿಲ್ಲ. ಇಂಥ ಎಷ್ಟೋ ಕಾಯಿಲೆಗಳ ಚಿಕಿತ್ಸೆಗಳು ದುಬಾರಿ. ಎಷ್ಟು ಜನರು ಇಂಥವುಗಳ ಬೆನ್ನುಹತ್ತಿ ಆರೋಗ್ಯ ಸೇವೆ ಪಡೆಯಲು ಸಾಧ್ಯ?

ದೇಶದ ಆರೋಗ್ಯ ಕ್ಷೇತ್ರದ ಸ್ಥಿತಿ ಈಗ ಇದೇ ಆಗಿದೆ. ಚಿಕಿತ್ಸೆ ಲಭ್ಯವಿದೆ. ಆದರೆ ಹಣ ಸಾಕಷ್ಟು ಇದ್ದರಷ್ಟೇ ಅವರಿಗೆ ಸಿಗುತ್ತದೆ. ಇಲ್ಲದಿದ್ದರೆ ಸಿಗುವುದು ಬಹಳ ಅಪರೂಪ. ಉಚಿತವಾಗಿ ಆರೋಗ್ಯ ಸೇವೆ ಇರುವ ಸರ್ಕಾರಿ ಆಸ್ಪತ್ರೆಗಳಲ್ಲಿ ಒಂದಿದ್ದರೆ ಒಂದಿಲ್ಲ. ಉಪಕರಣಗಳ ಕೊರತೆ, ವೈದ್ಯರು–ನರ್ಸ್‌ಗಳ ಕೊರತೆ, ಔಷಧ ಕೊರತೆ, ನೀರು, ಶೌಚಾಲಯ ಹೀಗೆ ಅಗತ್ಯ ಸಾಮಗ್ರಿಗಳೂ ಅಲ್ಲಿ ಸರಿಯಾಗಿ ಸಿಗುವುದಿಲ್ಲ ಎಂಬ ದೂರುಗಳೇ ಹೆಚ್ಚಾಗಿ ಕೇಳಿ ಬರುತ್ತವೆ. ಸ್ವಚ್ಛತೆಯ ಕೊರತೆಯಂತೂ ಕಣ್ಣಿಗೆ ಕಟ್ಟುವಂತಿದ್ದರೂ ಅಧಿಕಾರದಲ್ಲಿ ಇರುವವರು ಜಾಣ ಕುರುಡುತನ ಪ್ರದರ್ಶಿಸುತ್ತಾರೆ. ಹೀಗಿರುವಾಗಿ ಕೋವಿಡ್‌ ಆರೋಗ್ಯ ಕ್ಷೇತ್ರಕ್ಕೆ ದೊಡ್ಡ ಸವಾಲನ್ನೇ ಒಡ್ಡಿದೆ.

ಆರೋಗ್ಯ ದಿನದ ಸಂದೇಶ

ಏಪ್ರಿಲ್ 7 ವಿಶ್ವ ಆರೋಗ್ಯ ಸಂಸ್ಥೆಯ ಜನ್ಮದಿನ. ಜಗತ್ತಿನ ರಾಷ್ಟ್ರಗಳಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಸುಧಾರಣೆ, ಪರಸ್ಪರ ಸಹಕಾರ ಮೂಡಿಸುವ ಉದ್ದೇಶದಿಂದ 1948ರಲ್ಲಿ ಈ ಸಂಸ್ಥೆಯ ಉದಯವಾಯಿತು. ಜಿನೆವಾದಲ್ಲಿ ಕೇಂದ್ರ ಕಚೇರಿ ಹೊಂದಿರುವ ವಿಶ್ವ ಆರೋಗ್ಯ ಸಂಸ್ಥೆಯು ಕೋವಿಡ್ ಸಂದರ್ಭದಲ್ಲಿ ನಿರಂತರವಾಗಿ ಜಾಗೃತಿ ಮೂಡಿಸುತ್ತಿದೆ. ಸದಸ್ಯ ರಾಷ್ಟ್ರಗಳಿಗೆ ಸಲಹೆ-ಸೂಚನೆ ನೀಡುತ್ತಿದೆ. ಈ ಬಾರಿ ವಿಶ್ವ ಆರೋಗ್ಯ ದಿನದ ಸಂದೇಶ: ‘ಪ್ರತಿಯೊಬ್ಬರಿಗೂ ಉತ್ತಮ ಹಾಗೂ ಆರೋಗ್ಯಕರ ಜಗತ್ತನ್ನು ಕಟ್ಟಿಕೊಡುವುದು’.

ವಿಶ್ವ ಆರೋಗ್ಯ ಸಂಸ್ಥೆ ಗುರುತಿಸಿರುವಂತೆ 20 ವರ್ಷಗಳ ಅವಧಿಯಲ್ಲಿ ಮೊದಲ ಬಾರಿಗೆ ಕೋವಿಡ್ ಕಾರಣದಿಂದ ವಿಶ್ವದ ಬಡತನದ ಮಟ್ಟ ಹೆಚ್ಚಳವಾಗಿದೆ. ಕೆಲವು ದೇಶಗಳಲ್ಲಿ ಶೇ 60ರಷ್ಟು ಮಂದಿಗೆ ಸೂಕ್ತ ಆರೋಗ್ಯ ಸೇವೆ ಸಿಗುತ್ತಿಲ್ಲ. ಸ್ಲಂಗಳಲ್ಲಿರುವ 100 ಕೋಟಿ ಜನರಿಗೆ ಕೊರೊನಾ ವೈರಸ್ ಹೊಸ ಸವಾಲುಗಳನ್ನು ತಂದೊಡ್ಡಿದೆ. ಶೈಕ್ಷಣಿಕ ಚಟುವಟಿಕೆಗಳಿಗೆ ತೀವ್ರ ಹೊಡೆತ ಬಿದ್ದಿದೆ. ಕೋಟಿಗಟ್ಟಲೇ ಮಕ್ಕಳು ಶಾಲೆ ಬಿಡುವ ಪರಿಸ್ಥಿತಿ ಬಂದಿದೆ.

ವಿಶ್ವ ಆರೋಗ್ಯ ದಿನದಂದು ಈ ಬಾರಿ ಎಲ್ಲ ದೇಶಗಳಲ್ಲೂ ಕೋವಿಡ್‌ ಹೇಗೆ ಹೊಡೆದೋಡಿಸುವುದು ಎಂಬ ಚಿಂತೆಯೇ ತುಂಬಿದೆ. ಲಸಿಕೆ ನೀಡುವ ಕಾರ್ಯ ಹಲವು ದೇಶಗಳಲ್ಲಿ ಶುರುವಾಗಿರುವುದರಿಂದ ನಿಟ್ಟುಸಿರು ಬಿಡುವ ಕಾಲವೂ ಬಂದಿದೆ. ಆದರೂ ಆರೋಗ್ಯ ಕ್ಷೇತ್ರದ ಸವಾಲುಗಳು ಹನುಮಂತನ ಬಾಲದಂತೆ ಬೆಳೆಯುತ್ತಿವೆ.

ಆರೋಗ್ಯ ಕ್ಷೇತ್ರದಲ್ಲಿ ಎಷ್ಟೇ ಆವಿಷ್ಕಾರಗಳಾಗಿದ್ದರೂ, ಆರೋಗ್ಯ ಕ್ಷೇತ್ರಗಳಲ್ಲಿ ಸುಧಾರಣೆ ಕಂಡಿದ್ದರೂ, ಹೊಸ ಹೊಸ ಸವಾಲುಗಳು ಎದುರಾಗುತ್ತಲೇ ಇವೆ. ಇನ್ನು ಬಡವರ ಕೈಗೆಟುಕದ ಚಿಕಿತ್ಸೆಗಳೂ ನೂರಾರು ಇವೆ. ಕೆಲವರಿಗೆ ಸಾರ್ವಜನಿಕ ಸಹಾಯ ಸಿಗುತ್ತಿದ್ದರೆ, ಇನ್ನು ಕೆಲವರು ಅದೂ ಇಲ್ಲದೇ, ರೋಗದಿಂದ ನರಳಿ ಸಾಯುವ ಸ್ಥಿತಿಯೂ ಇದೆ.

ದೇಶದ ಗ್ರಾಮೀಣ ಪ್ರದೇಶಗಳಲ್ಲಿ ಆರೋಗ್ಯ ಕ್ಷೇತ್ರ ಕೊರತೆಗಳ ರೋಗದಿಂದ ನರಳುತ್ತಿದೆ. ವೈದ್ಯರು ಇಲ್ಲ ಅಥವಾ ವೈದ್ಯರ ಕೊರತೆ ಎಂಬುದಂತೂ ಬಹುತೇಕ ಗ್ರಾಮಗಳಿಂದ ಕೇಳಿಬರುವ ಸಾಮಾನ್ಯ ದೂರು. ಇಂಥ ದೂರುಗಳಿಗೆ ಆಗಿಂದಾಗ ಸ್ಪಂದಿಸುವ ರಾಜಕಾರಣಿಗಳು, ಅಧಿಕಾರಿಗಳು ಬಹಳ ವಿರಳ. ಗ್ರಾಮಗಳಲ್ಲಿ ಉಳಿದುಕೊಳ್ಳಲು ಸೂಕ್ತ ವಸತಿ, ಸೌಲಭ್ಯಗಳು ಇಲ್ಲ ಎಂಬ ಕಾರಣ ನೀಡಿ ಗ್ರಾಮಗಳಲ್ಲಿ ಸೇವೆ ನಿರಾಕರಿಸುವ ವೈದ್ಯರು ಹಾಗೂ ನರ್ಸ್‌ಗಳೇ ಹೆಚ್ಚು ಮಂದಿ. ಕೆಲವು ಗ್ರಾಮಗಳಲ್ಲಿ ವಸತಿನಿಲಯ ಇದ್ದರೂ ಅವು ಪಾಳು ಬೀಳುವುದೇ ಹೆಚ್ಚು. ಹೀಗಾಗಿ ಹೆಚ್ಚಿನ ಹಳ್ಳಿಗಳ ಜನತೆ ಆರೋಗ್ಯ ರಕ್ಷಣೆಗಾಗಿ ಈಗಲೂ ನಗರಗಳತ್ತ ಮುಖ ಮಾಡಬೇಕಿದೆ.

ಜಗತ್ತಿನಲ್ಲೇ ಎರಡನೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ನಮ್ಮ ದೇಶದಲ್ಲಿ ಆರೋಗ್ಯ ಕ್ಷೇತ್ರ ಸವಾಲಿನದ್ದು ಎಂಬುದು ಅಚ್ಚರಿಯೇನಲ್ಲ. ಕಳೆದ ದಶಕದಲ್ಲಿ ಆರ್ಥಿಕ ಅಭಿವೃದ್ಧಿ ವೇಗ ಪಡೆದುಕೊಂಡಿದ್ದರೂ, ಆರೋಗ್ಯ ಕ್ಷೇತ್ರದ ಸುಧಾರಣೆ ಸಮಾಧಾನಕರವಾಗಿಲ್ಲ ಎಂಬುದು ತಜ್ಞರ ಅಭಿಮತ. ವರ್ಲ್ಡ್‌ ಬ್ಯಾಂಕ್ ವರದಿಯ ಪ್ರಕಾರ ದೇಶದಲ್ಲಿ ಶಿಶು ಮರಣ ಪ್ರಮಾಣ 1000ಕ್ಕೆ 66 ಇದ್ದುದು ಈಚೆಗೆ 38ಕ್ಕೆ ಇಳಿದಿದೆ. (2000ದಿಂದ 2015ರವರೆಗೆ). ಜನರ ಜೀವಿತಾವಧಿ ಸರಾಸರಿ 63 ವರ್ಷಗಳಿದ್ದುದು 68 ವರ್ಷಗಳಿಗೆ ಏರಿಕೆಯಾಗಿದೆ. ಹೆರಿಗೆ ಸಂದರ್ಭದಲ್ಲಿ ತಾಯಿ ಮರಣ ಪ್ರಮಾಣ 1 ಲಕ್ಷಕ್ಕೆ 374 ಇದ್ದುದು 174ಕ್ಕೆ ಇಳಿದಿದೆ. ಆದರೂ ಆರ್ಥಿಕ ಹಿಂದುಳಿದವರಿಗೆ ಸಿಗಬೇಕಾದ ಆರೋಗ್ಯ ಸೇವೆ ಇನ್ನಷ್ಟು ಸುಧಾರಣೆ ಕಾಣಬೇಕಿದೆ. ಮಕ್ಕಳಲ್ಲಿ ಅಪೌಷ್ಟಿಕತೆಯ ಸಮಸ್ಯೆ, ಕಡಿಮೆ ತೂಕದ ಸಮಸ್ಯೆ ನಿವಾರಣೆಯಾಗಿಲ್ಲ.

ಬೊಜ್ಜು, ಮಧುಮೇಹ, ತಂಬಾಕಿನಿಂದ ಉಂಟಾಗುವ ಸಮಸ್ಯೆಗಳು, ಕ್ಯಾನ್ಸರ್ ಪ್ರಕರಣಗಳು ಆರೋಗ್ಯ ಕ್ಷೇತ್ರವನ್ನು ನಡುಗಿಸುತ್ತಿವೆ. ಅಪಘಾತದಲ್ಲಿ ಆಗುವ ಸಾವಿನ ಪ್ರಮಾಣವೂ ನಮ್ಮ ದೇಶದಲ್ಲಿಯೇ ಹೆಚ್ಚು. ಒಂದೆಡೆ ಉಳ್ಳವರಿಗೆ ಗುಣಮಟ್ಟದ ಆರೋಗ್ಯ ಸೇವೆ ಸಿಗತ್ತಿದ್ದರೆ, ಆರ್ಥಿಕವಾಗಿ ಹಿಂದುಳಿದವರು ಆರೋಗ್ಯ ಸೇವೆ ಪಡೆಯಲು ಕಷ್ಟಪಡಬೇಕಿದೆ. ಸಿಕ್ಕರೂ ಅಲ್ಲಿ ಅವಮಾನ, ನಿರ್ಲಕ್ಷ್ಯವೇ ಎದ್ದು ಕಾಣುತ್ತದೆ.

ಪೋಲಿಯೊ, ಧನುರ್ವಾಯು ಸೇರಿ ಕೆಲವು ರೋಗಗಳನ್ನು ದೇಶದಲ್ಲಿ ಯಶಸ್ವಿಯಾಗಿ ಹಿಮ್ಮೆಟ್ಟಿಸಲಾಗಿದೆ. ಅವುಗಳ ಬೆನ್ನಹಿಂದೆಯೇ ಎಚ್ಐವಿ, ಕ್ಷಯ, ಮಲೇರಿಯಾ, ಡೆಂಗಿಗಳು ಕಾಡತೊಡಗಿವೆ. ದೇಶದಲ್ಲಿ ಪ್ರತಿ ವರ್ಷ ಆಗುತ್ತಿರುವ ಸಾವುಗಳಲ್ಲಿ ಅಸಾಂಕ್ರಾಮಿಕ ರೋಗಗಳಿಂದಲೇ ಶೇ 60ರಷ್ಟು ಆಗುತ್ತಿವೆ ಎಂಬ ವರದಿಗಳಿವೆ. ಹೃದ್ರೋಗ, ಕ್ಯಾನ್ಸರ್‌, ಮಧುಮೇಹ ಹಾಗೂ ಶ್ವಾಸಕೋಶ ಸಂಬಂಧಿ ಕಾಯಿಲೆಗಳ ಪ್ರಮಾಣವೂ ಹೆಚ್ಚಾಗಿವೆ. ತಂಬಾಕಿನ ಬಳಕೆ, ಅನಾರೋಗ್ಯಕರ ಆಹಾರ ಪದ್ಧತಿ, ಅಲ್ಕೋಹಾಲ್‌ನ ಮಿತಿಮೀರಿದ ಬಳಕೆ, ವ್ಯಾಯಾಮದ ಕೊರತೆಯಿಂದ ಇವು ಕಂಡು ಬರುತ್ತಿವೆ. ಹೀಗಾಗಿ ಬಾಲ್ಯದಿಂದಲೇ ಆರೋಗ್ಯಕರ ಜೀವನ ಪದ್ಧತಿ ರೂಢಿಸುವುದು ಅತ್ಯಗತ್ಯ ಎನಿಸುತ್ತಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು