ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusives| ಸ್ಥೂಲಕಾಯ ಮತ್ತು ಸಾಮಾಜಿಕ ಅವಹೇಳನ

Last Updated 10 ಡಿಸೆಂಬರ್ 2020, 11:09 IST
ಅಕ್ಷರ ಗಾತ್ರ

ಮೊನ್ನೆ ಗೆಳತಿ ಅತ್ತುಕೊಂಡು ಕರೆ ಮಾಡಿದ್ದಳು. 'ಯಾಕೆ, ಏನಾಯಿತು' ಎಂದು ವಿಚಾರಿಸಿದೆ. ಅದು ‘ತೂಕ’ದ ಮಾತಾಗಿತ್ತು. ಅಂದರೆ, ಆಕೆ ಸ್ವಲ್ಪ ಹೆಚ್ಚಿಗೆಯೇ ತೂಕ ಇದ್ದಳು. ತೂಕ ಇದ್ದ ಕಾರಣಕ್ಕಾಗಿಯೇ ಆಕೆ ಖಿನ್ನತೆಗೆ ಒಳಗಾಗಿದ್ದಳು. ಕುಟುಂಬದವರು, ಸಂಬಂಧಿಕರು, ಮಿತ್ರರು–ಹೀಗೆ ಮನೆಗೆ ಬಂದ ಎಲ್ಲವರೂ ಈಕೆಯ ತೂಕ ಕುರಿತೇ ಮಾತನಾಡತೊಡಗಿದ್ದರು. ಇದು ಪರಾಕಾಷ್ಠೆ ತಲುಪಿದಾಗ ಈಕೆಯ ತಂದೆ, ತಾಯಿಗೂ ಇದೊಂದು ಅವಮಾನಕರ ವಿಚಾರವಾಗಿ ತೋರಲಾರಂಭಿಸಿತು.

ಇದು ನನ್ನ ಗೆಳತಿಯ ದುಃಖದ ಕಾರಣ. ಆಕೆ ಎಷ್ಟು ಮನನೊಂದಿದ್ದಳು ಎಂದರೆ, ‘ನನಗೆ ಸಾಯಬೇಕು ಅನ್ನಿಸ್ತಾ ಇದೆ ಕಣೆ. ಮನೆಗೆ ಬಂದವರು, ಹೋದವರು ಏನಿದು ಇಷ್ಟು ದಪ್ಪ ಆಗಿದ್ದೀಯಾ ಅನ್ನುತ್ತಾರೆ. ಯಾರದ್ದಾದರು ಮನೆಗೆ ಹೋದರೆ, ಆರಾಮಿದ್ದೀರಾ, ಒಳಗೆ ಬನ್ನಿ ಎನ್ನುವುದಕ್ಕೂ ಮೊದಲು ನನ್ನ ತೂಕದ ಬಗ್ಗೆ ಮಾತನಾಡುತ್ತಾರೆ. ನನಗೆ ಬೇರೆ ಅಸ್ತಿತ್ವ, ವ್ಯಕ್ತಿತ್ವ ಇಲ್ಲವೇನೋ ಅನ್ನಿಸುವಷ್ಟು ಕುಗ್ಗಿ ಹೋಗಿದ್ದೇನೆ’ ಎನ್ನುತ್ತಾ ಅಳತೊಡಗಿದಳು.

‘ನಾನು ಏನು ಕೆಲಸ ಮಾಡುತ್ತೇನೆ ಅಥವಾ ನನ್ನ ಓದು, ವಿಚಾರ ಬೇರೆ ಯಾವುದೂ ನನ್ನ ಕುರಿತ ಚರ್ಚೆ ವಿಚಾರ ಆಗುವುದಿಲ್ಲ. ನಾನು ಇಷ್ಟು ದಪ್ಪ ಇದ್ದೇನೆ, ನನ್ನ ಯಾರು ಮದುವೆ ಆಗುತ್ತಾರೆ ಎನ್ನುವ ಚರ್ಚೆ, ನನ್ನ ದೇಹದ ಯಾವುದೋ ಭಾಗ ಹಾಗೆ ಇದೆ, ಹೀಗೆ ಇದೆ ಎನ್ನುವ ಚರ್ಚೆ, ತೆಳ್ಳ ಆಗಲು ಏನು ಮಾಡಬೇಕು, ವ್ಯಾಯಾಮ ಏನು ಮಾಡಬೇಕು, ಏನು ತಿನ್ನಬಾರದು, ಏನು ತಿನ್ನಬೇಕು ಎನ್ನುವ ಚರ್ಚೆ. ಕೇವಲ ಇವೆ ಚರ್ಚೆ ನನ್ನ ಕಿವಿಯ ಸುತ್ತ ಸುತ್ತುತ್ತಿದೆ. ಕನ್ನಡಿಯಲ್ಲಿ ನನ್ನ ದೇಹವನ್ನು ನಾನೇ ನೋಡಿಕೊಳ್ಳುವುದಕ್ಕೆ ಅಸಹ್ಯ ಪಡುವಂಥ ಸ್ಥಿತಿ ತಲುಪಿದ್ದೇನೆ. ದೇವರು ನನಗೆ ಯಾಕಾದರೂ ಇಂಥ ದೇಹ ಕೊಟ್ಟನೋ ಎಂದು ದೇವರನ್ನು ಪ್ರತಿ ಕ್ಷಣ ದೂಷಿಸುತ್ತೇನೆ’ ಎಂದು ಹೇಳಿದಳು.

ಈ ಚರ್ಚೆ ನಾವು ತೀರಾ ತೆಳ್ಳಿದ್ದರೂ ನಡೆಯುತ್ತದೆ. ಚರ್ಮದ ಬಣ್ಣದ ಕುರಿತು ಇದೇ ರೀತಿಯ ಸ್ವಲ್ಪ ಭಿನ್ನವಾದ ಚರ್ಚೆಯೂ ನಡೆಯುತ್ತದೆ. ಜತೆಗೆ ಬಹಳ ಮುಖ್ಯವಾಗಿ ಹೆಣ್ಣು ಮಕ್ಕಳ ಕುರಿತು ಮಾತ್ರ ಈ ಚರ್ಚೆ ನಡೆಯುತ್ತವೆ. ದೇಹದ ಆಕಾರ, ದಪ್ಪ ಇರುವುದು ಅಥವಾ ತೆಳ್ಳಗಿರುವುದು ಆರೋಗ್ಯದ ವಿಚಾರವಾಗಿ ಮಾತ್ರ ಉಳಿದಿಲ್ಲ; ಅದೊಂದು ಸಾಮಾಜಿಕ ಅಸಮಾನತೆಗೂ ಕಾರಣವಾಗಿದೆ.

ಈ ಕುರಿತು ಜಗತ್ತಿನ ಹಲವು ವಿಶ್ವವಿದ್ಯಾಲಯಗಳು ಅಧ್ಯಯನ ಮಾಡಿವೆ. ಕುಟುಂಬಸ್ಥರಿಂದ, ಸಮಾಜದಲ್ಲಿ, ಕೆಲಸದ ಸ್ಥಳದಲ್ಲಿ ಹೀಗೆ ಎಲ್ಲೆಡೆ ಸ್ಥೂಲಕಾಯ ಇರುವವರು ಅವಮಾನ, ಅಸಮಾನತೆಗಳನ್ನು ಅನುಭವಿಸಿದ್ದಾರೆ. ಅಧ್ಯಯನವೊಂದರ ಪ್ರಕಾರ, ದಪ್ಪ ಇರುವವರಿಗಿಂತ ಹೆಚ್ಚು ಆದಾಯವನ್ನು ತೆಳ್ಳ ಇರುವವರು ಪಡೆದುಕೊಳ್ಳುತ್ತಾರಂತೆ. ಚುನಾವಣೆಯಲ್ಲಿ ದಪ್ಪ ಇರುವ ಅಭ್ಯರ್ಥಿಗಳಿಗಿಂತ ತೆಳ್ಳಗೆ ಇರುವ ಅಭ್ಯರ್ಥಿಗಳಿಗೇ ಹೆಚ್ಚು ಮತ ಬರುತ್ತವಂತೆ– ಇದನ್ನು ಅಮೆರಿಕದಲ್ಲಿ ನಡೆದ ಒಂದು ಅಧ್ಯಯನದಲ್ಲಿ ಹೇಳಲಾಗಿದೆ.

ಆಗಲೇ ಹೇಳಿದ ಹಾಗೆ, ಮದುವೆ ವಯಸ್ಸಿಗೆ ಬಂದ ಹೆಣ್ಣು ಮಕ್ಕಳಿದ್ದರೆ, ದಪ್ಪ ಇರುವುದು ಮತ್ತೆ ತೆಳ್ಳಗೆ ಇರುವುದು ಎರಡೂ ಚರ್ಚೆಯ ವಸ್ತು. ‘ಜಿಮ್‌ಗೆ ಹೋಗುತ್ತಿದ್ದೇನೆ’ ಎಂದು ಯಾರ ಬಳಿಯಾದರೂ ಹೇಳಿದರೆ, ‘ಮತ್ತೆನು ವಿಶೇಷ, ಗಂಡು ಗೊತ್ತಾಯಿತಾ’ ಎಂದು ಕೇಳುತ್ತಿದ್ದೇವೆ. ಮದುವೆ ಆಗಬೇಕಾದರೆ, ಹೆಣ್ಣು ಮಕ್ಕಳು ತೆಳ್ಳಗೇ ಇರಬೇಕು ಎನ್ನುವ ಯೋಚನೆ ನಮ್ಮ ಮನಗಳಲ್ಲಿ ಹೊಕ್ಕುಬಿಟ್ಟಿದೆ.

ಬ್ರೆಜಿಲ್‌ನ ವಿಶ್ವವಿದ್ಯಾಲಯವೊಂದು ನಡೆಸಿದ ಅಧ್ಯಯನದಲ್ಲಿ ಒಬ್ಬ ಹೆಣ್ಣು ಮಗಳು ತನ್ನ ಅಭಿಪ್ರಾಯವನ್ನು ಹಂಚಿಕೊಂಡಿದ್ದಾಳೆ. ‘ನಾನು ಕೆಲಸದ ಸಂದರ್ಶನಕ್ಕೆ ಹೋಗಿದ್ದೆ. ಅವರಿಗೆ ನನ್ನ ಪ್ರೊಫೈಲ್‌ ಇಷ್ಟ ಆಯಿತು. ಅದನ್ನು ಬಾಯಿಬಿಟ್ಟು ಹೇಳಿದರೂ ಕೂಡ. ಆದರೂ, ನನಗೆ ಕೆಲಸ ಸಿಗಲಿಲ್ಲ. ಏಕೆಂದರೆ ಅವರ ಕಂಪನಿಯ ನಿಯಮಗಳ ಪ್ರಕಾರ ದಪ್ಪ ಇರುವವರನ್ನು ಕೆಲಸಕ್ಕೆ ತೆಗೆದುಕೊಳ್ಳುವುದಿಲ್ಲವಂತೆ. ಇದೆಂಥ ನಿಯಮ?’ ಎಂದು ಆಕೆ ಪ್ರಶ್ನೆ ಬೇಸರಿಸುತ್ತಾರೆ. ‘ನನ್ನ ಗೆಳತಿಯೊಬ್ಬಳನ್ನು ದಪ್ಪ ಇರುವ ಕಾರಣ ಕೆಲಸದಿಂದ ತೆಗೆದಿರುವ ಪ್ರಸಂಗವೂ ಇದೆ’ ಎಂದು ಆಕೆ ಹೇಳುತ್ತಾಳೆ.

ಇದೇ ಅಧ್ಯಯನದಲ್ಲಿ ಮದುವೆ ಆಗಿರುವ ಮಹಿಳೆಯೊಬ್ಬರು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ‘ನಾನು ಇತ್ತೀಚೆಗೆ ನನ್ನ ಗಂಡನೊಂದಿಗೆ ಎಲ್ಲೂ ಹೋಗಲು ಬಯಸುವುದಿಲ್ಲ. ನಾನು ದಪ್ಪ ಇದ್ದೇನೆ ಎನ್ನುವುದು ನನ್ನ ಗಂಡನಿಗೆ ಅವಮಾನಕರ. ನನಗೆ ಅವಮಾನ ಆಗುತ್ತದೆ ಎಂದು ಆತ ಬಾಯಿಬಿಟ್ಟು ನನ್ನ ಬಳಿ ಹೇಳಿಲ್ಲ. ಆದರೆ, ಆತನಿಗೆ ಅವಮಾನ ಆಗುತ್ತಿದೆ ಎನ್ನುವುದನ್ನು ಆತನ ಮುಖಭಾವದಿಂದಲೇ ನಾನು ಗ್ರಹಿಸಿದ್ದೇನೆ. ಆದ್ದರಿಂದ ಮನೆಯಲ್ಲೇ ಒಬ್ಬಳೆ ಇದ್ದು ಬಿಡುತ್ತೇನೆ. ಆದರೆ, ಇದು ನನಗೆ ತ್ರಾಸದಾಯಕ. ಹೀಗೆ ಒಂಟಿಯಾಗಿರುವುದು ನನಗೆ ಭಯ ತರಿಸುತ್ತದೆ’ ಎಂದು ಅವರು ಹೇಳಿಕೊಂಡಿದ್ದಾರೆ.

ದಪ್ಪ ಇರುವುದೇ ವ್ಯಕ್ತಿಯ ಗುರುತು ಎನ್ನುವಂತೆ ಸಮಾಜ ನಡೆದುಕೊಳ್ಳುತ್ತಿದೆ. ದಪ್ಪ ಇರುವುದು ಅಥವಾ ತೆಳ್ಳಗೆ ಇರುವುದು ಎನ್ನುವುದು ಕೇವಲ ಆರೋಗ್ಯದ ಸಮಸ್ಯೆ ಅಷ್ಟೆ. ನಮ್ಮ ದೇಹದ ಆಕಾರಕ್ಕಾಗಿ ಯಾರೂ ಅವಮಾನಿತರಾಗಬೇಕಾಗಿಲ್ಲ. ದಪ್ಪ ಇದ್ದಾರೆ, ಕಪ್ಪು ಇದ್ದಾರೆ ಎನ್ನುವುದು ವ್ಯಕ್ತಿಯನ್ನು ನಾವು ನೋಡುವ ದೃಷ್ಟಿಕೋನವನ್ನು ಬದಲಾಯಿಸಬಾರದು. ಸಿನಿಮಾ, ಧಾರಾವಾಹಿ, ಜಾಹೀರಾತುಗಳು ಇಂಥ ವಿಚಾರದಲ್ಲಿ ನಮ್ಮನ್ನು ವಿವೇಚನಾರಹಿತರನ್ನಾಗಿ ಮಾಡಿದೆ. ತೆಳ್ಳಗೆ ಇರುವುದು, ಬೆಳ್ಳಗೆ ಇರುವುದು ಎನ್ನುವುದೇ ವ್ಯಕ್ತಿ ಘನತೆಯ ಮಾನದಂಡ ಆಗಿರುವುದು ವಿಪರ್ಯಾಸವೇ ಸರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT