7
ಏನಾದ್ರೂ ಕೇಳ್ಬೋದು

‘ತಂದೆ ತೀರಿಕೊಂಡ ಮೇಲೆ ಜೀವನದ ಗತಿ ಬದಲಾಗಿದೆ’

Published:
Updated:
ಸುನೀತಾ ರಾವ್‌, ಆಪ್ತ ಸಮಾಲೋಚಕಿ

1. ನಾನು ಕಳೆದ ನಾಲ್ಕು ವರ್ಷದಿಂದ ಐಟಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದೆ. ಇತ್ತೀಚೆಗೆ ನಮ್ಮ ತಂದೆ ತೀರಿಕೊಂಡರು. ಆ ಕಾರಣದಿಂದ ಕೆಲಸ ಬಿಟ್ಟೆ. ಈಗ ನನಗೆ ಮೊದಲಿನ ಹಾಗೆ ಕ್ರಿಯಾತ್ಮಕವಾಗಿ ಇರಲು ಸಾಧ್ಯವಾಗುತ್ತಿಲ್ಲ. ಸರಿಯಾಗಿ ನಿದ್ದೆ ಮಾಡಲು ಆಗುತ್ತಿಲ್ಲ. ನನ್ನ ಸಮಸ್ಯೆಗೆ ಪರಿಹಾರ ತಿಳಿಸಿ.

–ರವಿ, ಊರು ಬೇಡ

ದುಃಖವನ್ನು ಭರಿಸುವುದು ನಿಜಕ್ಕೂ ಒಂದು ಅನನ್ಯ ಪ್ರಕ್ರಿಯೆ. ಯಾಕೆಂದರೆ ಪ್ರತಿಯೊಬ್ಬರೂ ದುಃಖವನ್ನು ಬೇರೆ ಬೇರೆ ರೀತಿಯಾಗಿಯೇ ಭರಿಸುತ್ತಾರೆ. ಹಾಗಾಗಿ ನಿಮ್ಮ ಜೀವನದಲ್ಲಿ ಈಗ ಎದುರಾಗಿರುವ ನೋವನ್ನು ಕಡಿಮೆ ಮಾಡಿಕೊಳ್ಳಲು ನಿಮ್ಮದೇ ಆದ ದಾರಿಯನ್ನು ಕಂಡುಕೊಳ್ಳಬೇಕು.

ಮನಸ್ಸು ಸಹಜಸ್ಥಿತಿಗೆ ಮರಳಲು ಇಂತಿಷ್ಟೇ ಸಮಯ ಎಂದು ಇರುವುದಿಲ್ಲ, ಅದು ಒಬ್ಬೊಬ್ಬರಿಗೆ ಒಂದೊಂದು ರೀತಿ ಇರುತ್ತದೆ. ಸಮಯ ವೇಗವಾಗಿ ಸರಿದಂತೆ ಮನಸ್ಸು ಸಹಜಸ್ಥಿತಿಗೆ ಒಗ್ಗಿಕೊಳ್ಳುತ್ತದೆ. ಹಾಗಾಗಿ ನಿಮ್ಮಿಂದ ಆಗದಿರುವುದನ್ನು ಒತ್ತಾಯಪೂರ್ವಕವಾಗಿ ಮಾಡಲು ಹೋಗಬೇಡಿ. ನಿಮ್ಮ ಕೆಲವು ದೈನಂದಿನ ಚಟುವಟಿಕೆಗಳನ್ನು ಮುಂದುವರಿಸಿ, ನೀವು ಕೆಲಸಕ್ಕೆ ಮರಳುವುದರಿಂದ ಕೆಲಸದಲ್ಲಿ ಬ್ಯುಸಿಯಾಗುತ್ತೀರಿ, ಇದರಿಂದ ದುಃಖವನ್ನು ನಿಭಾಯಿಸುವುದು ಸುಲಭವಾಗಬಹುದು.

ಇದರೊಂದಿಗೆ  ಇನ್ನೂ ಕೆಲವು ಮಾರ್ಗಗಳನ್ನು ಕಂಡುಕೊಳ್ಳಬಹುದು. ಬದಲಾವಣೆಯೊಂದಿಗೆ ಒಪ್ಪಂದ ಮಾಡಿಕೊಳ್ಳುವಾಗ ತಪ್ಪು–ಒಪ್ಪುಗಳು ಮುಖ್ಯವಾಗುವುದಿಲ್ಲ. ಆದರೆ ಈಗ ನಿಮಗೆ ಕೆಲಸವಿಲ್ಲ; ಹಾಗಾಗಿ ಮುಂದೇನು ಮಾಡಬೇಕು –  ಎಂಬುದನ್ನು ಯೋಚಿಸಲೇಬೇಕು. ಒಂದನ್ನು ಮನಸ್ಸಿನಲ್ಲಿರಿಸಿಕೊಳ್ಳಿ. ಈಗ ಮನಸ್ಸಿನ ಗೊಂದಲ ಹಾಗೂ ನೋವುಗಳಿಂದ ಜೀವನದಲ್ಲಿ ಏರುಪೇರು ಉಂಟಾಗಿರಬಹುದು. ಆದರೆ ನಿಮ್ಮ ಸುತ್ತಲಿನ ಪ್ರಪಂಚ ಮುಂದೆ ಸಾಗುತ್ತಲೇ ಇರುತ್ತದೆ.

ಹಾಗಾಗಿ ಯಾವಾಗ ನಿಮ್ಮ ಮನಸ್ಸು ಸಹಜಸ್ಥಿತಿಗೆ ಮರಳುವುದೋ ಆಗ ನೀವು ಮುಂದಿನ ಜೀವನದ ಬಗ್ಗೆ ಯೋಜನೆ ರೂಪಿಸುವುದು ಉತ್ತಮ. ನಿಮ್ಮ ಯೋಜನೆಗೆ ನಿಮ್ಮ ಕ್ರಿಯೆ ಏನು ಎಂಬುದನ್ನು ಬರೆದಿಡಿ. ಅದರ ಮೇಲೆ ಕೆಲಸ ಮಾಡಲು ಆರಂಭಿಸಿ ಮತ್ತು ನಿಮಗೆ ಸಹಾಯ ಮಾಡುವ ವ್ಯಕ್ತಿಗಳ ಜೊತೆ ಮಾತನಾಡಿ. ಅವರೊಂದಿಗೆ ನೀವು ಯೋಚಿಸುತ್ತಿದ್ದೀರಿ ಹಾಗೂ ಹೇಗೆ ಸಾಗುತ್ತಿದ್ದೀರಿ ಎಂಬುದರ ಕುರಿತು ಚರ್ಚಿಸಿ.

ನಿಮ್ಮ ದಿನಚರಿಯನ್ನು ಧ್ಯಾನ ಹಾಗೂ ಯೋಗದಿಂದ ಆರಂಭಿಸಿ, ಇದು ನಿಮ್ಮ ಜೀವನದಲ್ಲಿ ಮರಳಿ ಹುರುಪು ಪಡೆಯಲು ಹಾಗೂ ಉತ್ತಮ ನಿದ್ದೆಗೆ ಮರಳಲು ಸಹಾಯ ಮಾಡುತ್ತದೆ. ಇದರಿಂದ ನಿಮ್ಮ ಜೀವನ ನಿಧಾನವಾಗಿ ಸಹಜಸ್ಥಿತಿಗೆ ಮರಳಲು ಸಾಧ್ಯವಾಗುತ್ತದೆ.

**

2. ನಾನು ಕೂಲಿ ಕಾರ್ಮಿಕಳೊಬ್ಬಳ ಮಗ. ಬಿ.ಸಿ.ಎ. ಆಗಿದೆ. ನನಗೆ ಇತ್ತೀಚೆಗೆ ಓದಿನ ಮೇಲೆ ಹೆಚ್ಚು ಗಮನವನ್ನು ನೀಡಲು ಸಾಧ್ಯವಾಗುತ್ತಿಲ್ಲ. ಓದಿ ಏನಾದರೂ ಸಾಧನೆ ಮಾಡಬೇಕು, ಮುಂದೆ ಬರಬೇಕು ಎಂಬ ಆಸೆ ಇದೆ. ಆದರೆ ಪ್ರತಿದಿನ ಓದಲು ಆಗುತ್ತಿಲ್ಲ. ತುಂಬಾ ಓದಬೇಕು ಅಂದುಕೊಳ್ಳುತ್ತೇನೆ, ಆದರೆ ಒಂದು ದಿನ ಓದಿದರೆ ನಾಲ್ಕು ದಿನ ಪುಸ್ತಕ ಮುಟ್ಟುವುದಿಲ್ಲ. ಎಲ್ಲಿಯಾದರೂ ಸ್ಫೂರ್ತಿದಾಯಕ ಮಾತುಗಳನ್ನು ಕೇಳಿದರೆ ಅಂದು ಮಾತ್ರ ಓದುತ್ತೇನೆ. ಮತ್ತೆ ಮರುದಿನ ಓದುವುದೇ ಇಲ್ಲ. ನನ್ನ ಮತ್ತೊಂದು ಸಮಸ್ಯೆ ಎಂದರೆ ನಾನು ಮನಸ್ಸಿನಲ್ಲೇ ಮಾತನಾಡುತ್ತೇನೆ.

–ಸಂಗಮೇಶ, ಮಾದಾಪೂರ

ಕಠಿಣ ಪರಿಶ್ರಮ, ಪ್ರಯತ್ನ, ಸ್ವ–ಮಾರ್ಗದರ್ಶನ ಹಾಗೂ ಪ್ರೇರಣೆಯಿಂದ ನೀವು ಪದವಿಯನ್ನು ಮುಗಿಸಿರುವುದು ಕೇಳಿ ಸಂತಸವಾಯಿತು. ಇನ್ನು ಎರಡು ಮೂರು ವರ್ಷಗಳಲ್ಲಿ ಸ್ನಾತಕೋತ್ತರ ಪದವಿಯನ್ನು ಮುಗಿಸಿಕೊಳ್ಳಬಹುದು, ಹಾಗಾಗಿ ನಾನು ನಿಮಗೆ ಹೇಳಲು ಬಯಸುವುದೇನೆಂದರೆ ನಿಮ್ಮನ್ನು ನೀವು ಪ್ರೇರೇಪಿಸಿಕೊಳ್ಳಿ, ಆಗಾಗ ಸ್ಫೂರ್ತಿ ನೀಡುವ ವಿಡಿಯೊ ಹಾಗೂ ಲೇಖನಗಳನ್ನು ಓದುತ್ತಿರಿ.

ನಿಮ್ಮೊಳಗೆ ನೀವು ಮಾತನಾಡಿಕೊಳ್ಳುವುದು ನಿಮ್ಮನ್ನು ನೀವು ಪ್ರೇರೆಪಿಸಿಕೊಳ್ಳಲು ಇರುವ ಉತ್ತಮ ಮಾರ್ಗ. ಜೀವನದಲ್ಲಿ ಗುರಿ ಸಾಧಿಸಬೇಕು ಎಂದು ಅಂದುಕೊಂಡಿರುವ ಗೆಳೆಯರ ಜೊತೆ ಸಮಯ ಕಳೆಯಿರಿ. ನೀವು ಈಗಾಗಲೇ ಜೀವನದಲ್ಲಿ ತುಂಬಾ ಮುಂದೆ ಬಂದಿದ್ದೀರಿ. ನಿಮ್ಮ ಪೋಷಕರು ಅವರ ಕೈಲಾದಷ್ಟು ನಿಮಗೆ ಬೆಂಬಲವನ್ನು ನೀಡಿದ್ದಾರೆ. ಹಾಗಾಗಿ ಈಗ ನಿಮ್ಮ ಸರದಿ, ಚೆನ್ನಾಗಿ ಓದಿ ಗುರಿ ಸಾಧಿಸಿ.

ಒಂದು ವೇಳಾಪಟ್ಟಿಯನ್ನು ಸಿದ್ಧಪಡಿಸಿಕೊಳ್ಳಿ, ಓದಲು ಲೈಬ್ರರಿಗೆ ಹೋಗಲು ಪ್ರಯತ್ನಿಸಿ, ಆಗ ನಿಮಗೆ ಯಾವುದು ಅಡ್ಡಿಪಡಿಸುವುದು ಅಥವಾ ತೊಂದರೆ ನೀಡುವುದು ಮಾಡುವುದಿಲ್ಲ. ಅದನ್ನು ಪ್ರತಿದಿನ ಪಾಲಿಸಿ, ನಿಮ್ಮ ಪ್ರಾಧ್ಯಾಪಕರ ಜೊತೆ ಮಾತನಾಡಿ, ಅವರಿಂದ ಸಹಾಯ ಪಡೆದುಕೊಳ್ಳಿ. ಅದರೊಂದಿಗೆ ಯಾವಾಗಲೂ ನಿಮ್ಮ ಆರೋಗ್ಯವನ್ನು ಚೆನ್ನಾಗಿ ನೋಡಿಕೊಳ್ಳಿ, ಸದೃಢರಾಗಿರಿ.

**

3. ನನಗೆ 18 ವರ್ಷ. ಓದುವುದು ಎಂದರೆ ತುಂಬಾ ಇಷ್ಟ. ಆದರೆ ಆರೋಗ್ಯ ಸಮಸ್ಯೆಯಿಂದ ಸರಿಯಾಗಿ ಕಾಲೇಜಿಗೆ ಹೋಗಲು ಸಾಧ್ಯವಾಗಲಿಲ್ಲ. ಪರೀಕ್ಷೆಗಳನ್ನು ಚೆನ್ನಾಗಿ ಬರೆಯಲು ಆಗಲಿಲ್ಲ. ಇದರಿಂದ ಖಿನ್ನತೆಗೆ ಒಳಗಾಗಿ ಓದಿನ ಮೇಲೆ ಆಸಕ್ತಿ ಕಳೆದುಕೊಂಡೆ. ಆದರೂ ನನಗೆ ಕೆಲಸ ಮಾಡಿ ಓದು ಮುಂದುವರಿಸಬೇಕು ಎಂಬ ಆಸೆ.

–ಹೆಸರು, ಊರು ಬೇಡ

ನೀವು ಇಲ್ಲಿ ಯಾವ ರೀತಿಯ ಆರೋಗ್ಯಸಮಸ್ಯೆಯನ್ನು ಎದುರಿಸುತ್ತಿದ್ದೀರಿ ಎಂಬುದನ್ನು ತಿಳಿಸಿಲ್ಲ, ಮತ್ತು ಅದಕ್ಕಾಗಿ ವೈದ್ಯರ ಬಳಿಗೆ ಹೋಗಿದ್ದೀರೋ ಇಲ್ಲವೋ – ಎಂಬುದನ್ನು ನಿಮ್ಮ ಪ್ರಶ್ನೆಯಿಂದ ಗೊತ್ತಾಗುತ್ತಿಲ್ಲ. ಯಾಕೆಂದರೆ ಯಾವಾಗಲೂ ನಿಮ್ಮ ಮೊದಲ ಆದ್ಯತೆ ಆರೋಗ್ಯವೇ ಆಗಿರಬೇಕು. ಯಾವಾಗ ನೀವು ಆರೋಗ್ಯವಂತರಾಗುತ್ತೀರೋ ಆಗ ನೀವು ಓದಿನ ಮೇಲೆ ಗಮನ ಹರಿಸಲು ಸಾಧ್ಯವಾಗುವುದು. ನಿಮ್ಮ ಜೀವನದ ಗುರಿಯ ಮೇಲೆ ಗಮನವನ್ನು ಹರಿಸಿ, ಮುಂದೆ ಸಾಗಿ.

ನೀವು ಇನ್ನು ಚಿಕ್ಕ ವಯಸ್ಸಿನವರು. ಆದ್ದರಿಂದ ನಿಮ್ಮ ಪೋಷಕರ ಬಳಿ ಸಮಸ್ಯೆಗಳ ಬಗ್ಗೆ ತಿಳಿಸಿ. ಹೆಚ್ಚಿನ ಸಂದರ್ಭಗಳಲ್ಲಿ ಅವರೇ ನಿಮ್ಮ ಸಮಸ್ಯೆಗಳನ್ನು ಪರಿಹರಿಸಲು ಮಾರ್ಗದರ್ಶನ ನೀಡಲು ಸೂಕ್ತರಾದವರು. ಪ್ರತಿದಿನ ವ್ಯಾಯಾಮ ಮಾಡಿ, ಸಮತೋಲಿತ ಆಹಾರಸೇವನೆಯೊಂದಿಗೆ ನಿಮ್ಮನ್ನು ನೀವು ಆರೋಗ್ಯವಂತರಾಗಿರುವಂತೆ ನೋಡಿಕೊಳ್ಳಿ. ಶಿಕ್ಷಣದ ಮಗಿದಮೇಲೆ ಖಂಡಿತ ನೀವು ಅಂದುಕೊಂಡಂತೆ ನಿಮಗೆ ಸರಿಯಾದ ಕೆಲಸ ದೊರಕುತ್ತದೆ.

ಬರಹ ಇಷ್ಟವಾಯಿತೆ?

 • 1

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !