ಅತ್ತೆಯ ಬೈಗುಳ ಹಿಂಸೆ ಎನಿಸುತ್ತಿದೆಯೇ?

7

ಅತ್ತೆಯ ಬೈಗುಳ ಹಿಂಸೆ ಎನಿಸುತ್ತಿದೆಯೇ?

Published:
Updated:

1. ನನಗೆ ಮದುವೆಯಾಗಿ ಒಂದು ಮಗುವಿದೆ. ಅತ್ತೆ ನನಗೆ ತುಂಬಾ ಹಿಂಸೆ ಕೊಡುತ್ತಾರೆ. ನನ್ನ ಗಂಡ ಏನಾದರೂ ಹೇಳಲು ಹೋದರೆ ಮಾವ, ಮೈದುನ, ಅತ್ತೆ ಎಲ್ಲರೂ ಸೇರಿಕೊಂಡು ಜಗಳಕ್ಕೆ ಬರುತ್ತಾರೆ. ನಾನು ಮನೆ ಚೊಕ್ಕ ಮಾಡಿದರೆ ಅತ್ತೆ ಇನ್ನೊಮ್ಮೆ ಮಾಡುತ್ತಾರೆ. ನಾನು ಏನೇ ಕೆಲಸ ಮಾಡಿದರು, ಎಷ್ಟೇ ಚೆನ್ನಾಗಿ ಮಾಡಿದರು ಅವರಿಗೆ ಸಮಾಧಾನ ಇರುವುದಿಲ್ಲ. ಅವರು ವ್ಯಾಪಾರಕ್ಕೆ ಹೋಗುತ್ತಾರೆ. ಬಂದ ಕೂಡಲೇ ಬೈಯಲು ಆರಂಭಿಸುತ್ತಾರೆ. ಇದರಿಂದ ಜೀವನವೇ ಜಿಗುಪ್ಸೆ ಎನ್ನಿಸುತ್ತಿದೆ, ಸಾಯಬೇಕು ಅನ್ನಿಸುತ್ತದೆ. ನಾನು ಬೇರೆ ಮನೆ ಮಾಡಿಕೊಂಡು ಹೋಗೋಣ ಎಂದರೆ ಗಂಡನ ಸಂಬಳವೂ ಕಡಿಮೆ.
ಹೆಸರು, ಊರು ಬೇಡ

ಅವಿಭಕ್ತ ಕುಟುಂಬದಲ್ಲಿ ಜೀವನ ನಡೆಸುವಾಗ ಅನುಕೂಲವೂ ಇದೆ, ಅನಾನುಕೂಲವೂ ಇದೆ. ಅವಿಭಕ್ತ ಕುಟುಂಬದಲ್ಲಿ ರಾಜಿ ಹಾಗೂ ಹೊಂದಾಣಿಕೆಯಿಂದ ಮಾತ್ರ ಯಾವುದೇ ಸಮಸ್ಯೆ ಇಲ್ಲದೇ ಸುಂದರವಾಗಿ ಜೀವನ ನಡೆಸಲು ಸಾಧ್ಯ ಮತ್ತು ಸಧ್ಯದ ಪರಿಸ್ಥಿತಿಯಲ್ಲಿ ನೀವು ಅತ್ತೆಮನೆಯಿಂದ ದೂರ ಇರುವಷ್ಟು ಶಕ್ತರಲ್ಲ ಎಂಬುದನ್ನು ನೀವೇ ತಿಳಿಸಿದ್ದೀರಿ. ಅವಿಭಕ್ತ ಕುಟುಂಬವನ್ನು ನೀವು ಸಕಾರಾತ್ಮಕವಾಗಿ ತೆಗೆದುಕೊಳ್ಳಿ, ನಿಮ್ಮ ಮಗು ಅಜ್ಜ–ಅಜ್ಜಿಯೊಂದಿಗೆ ಬೆಳೆಯುತ್ತಿದೆ. ದಿನದಲ್ಲಿ ಕೆಲ ಗಂಟೆಗಳ ಕಾಲ ಮಗು ಅಜ್ಜ–ಅಜ್ಜಿಯೊಂದಿಗೆ ಕಾಲ ಕಳೆಯುತ್ತಿದೆ. ಅದು ತುಂಬಾ ಮುಖ್ಯ. ಈಗ ನಿಮ್ಮ ಅತ್ತೆ ತಮ್ಮ ವ್ಯವಹಾರದ ಮೇಲೆ ಕೆಲ ಗಂಟೆಗಳ ಕಾಲ ಹೊರಗಡೆ ಹೋಗುತ್ತಿದ್ದಾರೆ. ಆ ಸಮಯದಲ್ಲಿ ನೀವು ನಿಮ್ಮ ಮನಸ್ಸಿಗೆ ಬಂದಂತೆ ಬದುಕಬಹುದು ಮತ್ತು ಮಗುವಿನೊಂದಿಗೆ ಸಮಯ ಕಳೆಯಬಹುದು ಮತ್ತು ಮಗುವಿಗೆ ಪ್ರಾಶಸ್ತ್ಯ ನೀಡಬಹುದು. ಕುಟುಂಬದ ಇತರ ಸದಸ್ಯರ ನಕಾರಾತ್ಮಕ ಮಾತುಗಳಿಗೆ ಕಿವಿಗೊಡಬೇಡಿ. ನೀವು ನಿಮ್ಮ ಕೆಲಸವನ್ನು ಮಾಡುತ್ತಿರಿ, ನಿಮ್ಮ ಮನೆಯವರು ಹೊಗಳುತ್ತಾರೋ ತೆಗಳುತ್ತಾರೋ ಅದರ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ. ನಿಮ್ಮ ಅತ್ತೆಯವರ ಯಾವುದೇ ಮಾತಿಗೆ ‍ಪ್ರತಿಕ್ರಿಯಿಸಬೇಡಿ, ನಿರ್ಲಕ್ಷ್ಯ ಮಾಡಿ. ಕೆಲ ಸಮಯದ ನಂತರ ಅವರೇ ಸುಮ್ಮನಾಗುತ್ತಾರೆ. ಸಮಯ ಸರಿದಂತೆ ಎಲ್ಲವೂ ಸರಿದಾರಿಗೆ ಬರುತ್ತದೆ. ನೀವು ತಾಳ್ಮೆಯಿಂದ ಇರುವುದು ತುಂಬಾ ಮುಖ್ಯ. 

2. ನನಗೆ 32 ವರ್ಷ. ನಾನು ಸೇಲ್ಸ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ನನಗೆ ಭಯ ಜಾಸ್ತಿ. ಕೆಲಸದಲ್ಲೂ ಒತ್ತಡ ಜಾಸ್ತಿ. ಮನೆಯಲ್ಲಿ ಸ್ವಲ್ಪ ಕಷ್ಟ ಇದೆ. ಇದರಿಂದಲೂ ಒತ್ತಡವಿದೆ. ಒತ್ತಡವೇ ನನಗೆ ಭಯವಾಗಿ ಕಾಡುತ್ತದೆ. ಭಯ ಕಡಿಮೆಯಾಗಲು ಏನು ಮಾಡಬೇಕು?
ವಸಂತ್, ಊರು ಬೇಡ

ನಿಮ್ಮ ಭಯದಿಂದ ನೀವು ಹೊರ ಬರಲು ಇರುವ ಒಂದೇ ಒಂದು ದಾರಿಯೆಂದರೆ ಪರಿಸ್ಥಿತಿಯನ್ನು ಎದುರಿಸುವುದು. ಎಷ್ಟು ಕೆಟ್ಟ ಪರಿಸ್ಥಿತಿ ಎದುರಾಗಲು ಸಾಧ್ಯ ಅಷ್ಟರವರೆಗಗೆ ಯೋಚಿಸಿ, ಎದುರಿಸಲು ಸಿದ್ಧರಾಗಿ. ಆಗ ನಿಮಗೆ ಅರಿವಾಗುತ್ತದೆ, ಇದು ಕೇವಲ ನಿಮ್ಮ ಆತಂಕ ಮತ್ತು ಯಾವುದು ನಿಮ್ಮನ್ನು ಏನೂ ಮಾಡಲು ಸಾಧ್ಯವಿಲ್ಲ ಎಂಬುದು. ಬೇರೆಯವರು ನಿಮ್ಮನ್ನು ಎಲ್ಲಿಯವರೆಗೆ ಸಮಾಧಾನ ಮಾಡಬಹುದು ಹಾಗೂ ನಿಮ್ಮೊಂದಿಗೆ ಆಪ್ತಸಮಾಲೋಚನೆ ನಡೆಸಬಹುದು? ನೀವೇ ಮುಂದೆ ಹೆಜ್ಜೆ ಇಡಬೇಕು ಮತ್ತು ಭಯವನ್ನು ಎದುರಿಸಬೇಕು. ಹಾಗಾಗಿ ಭಯವನ್ನು ಒಪ್ಪಿಕೊಳ್ಳಿ. ಅದರ ವಿರುದ್ಧ ಹೋರಾಡುವುದು ಹಾಗೂ ತಪ್ಪಿಸಿಕೊಂಡು ಓಡುವುದು ಮಾಡಬಾರದು. ಯಾವಾಗ ನಿಮ್ಮಲ್ಲಿ ಭಯ ಕಾಣಿಸಿಕೊಳ್ಳುವುದೋ ಆಗ ದೀರ್ಘ ಉಸಿರು ತೆಗೆದುಕೊಳ್ಳಿ, ಅದು ನಿಮ್ಮ ಆತಂಕವನ್ನು ಕಡಿಮೆ ಮಾಡುತ್ತದೆ. ಪ್ರತಿದಿನ ಧ್ಯಾನ ಮಾಡಲು ಆರಂಭಿಸಿ, ಅದಕ್ಕಾಗಿ ಒಂದು ನಿರ್ದಿಷ್ಟ ಸಮಯವನ್ನು ಇರಿಸಿಕೊಳ್ಳಿ. ಈ ಅಭ್ಯಾಸ ಹೆಚ್ಚಿನ ಕಾಲ ಮುಂದುವರಿದರೆ ಖಂಡಿತ ಉತ್ತಮ ಫಲಿತಾಂಶ ದೊರಕುತ್ತದೆ. ನಿಮಗೆ ತಿಳಿದಿರುವ ಮಂತ್ರಗಳನ್ನು ಅಥವಾ ಶ್ಲೋಕಗಳನ್ನು ಪಠಿಸಿ. ಭಯ ನಿಮ್ಮಲ್ಲಿ ಕಾಣಿಸಿಕೊಂಡ ತಕ್ಷಣ ಇದನ್ನು ಮಾಡುವುದರಿಂದ ನಿಮಗೆ ಮಾನಸಿಕ ಧೈರ್ಯ ಸಿಗುವಂತಾಗಬಹುದು. ಹೀಗೆ ನೀವು ರೂಢಿಸಿಕೊಳ್ಳುವ ಒಳ್ಳೆಯ ಹವ್ಯಾಸಗಳು ನಿಮ್ಮ ಕಚೇರಿಯ ಒತ್ತಡಗಳ ನಡುವೆ ನಿಮಗೆ ಶಾಂತತೆಯನ್ನೂ ಸಮತೋಲನವನ್ನೂ ಒದಗಿಸಲು ಸಹಕರಿಸುವುದು.

3. ನನಗೆ 24 ವರ್ಷ. ನನ್ನ ಮನಸ್ಸು ನನ್ನ ನಿಯಂತ್ರಣದಲ್ಲಿರುವುದಿಲ್ಲ. ಏನೇನೋ ಕೆಟ್ಟ ಯೋಚನೆ ಮಾಡುತ್ತಿರುತ್ತದೆ. ಪದೇ ಪದೇ ಮನಸ್ಸು ದೇವರಿಗೆ ಬಯ್ಯುತ್ತದೆ. ಅದೆಲ್ಲ ತಪ್ಪು, ಹಾಗೆಲ್ಲ ದೇವರಿಗೆ ಬಯ್ಯಬಾರದು ಎಂದುಕೊಂಡರೂ ಅದನ್ನು ನಿಲ್ಲಿಸಲು ಸಾಧ್ಯವಾಗುತ್ತಿಲ್ಲ. ಏನು ಮಾಡಲಿ?
ರಾಜು, ಊರು ಬೇಡ

ನೀವು ಓದುತ್ತಿದ್ದೀರಾ ಅಥವಾ ಕೆಲಸ ಮಾಡುತ್ತಿದ್ದೀರಾ ಎಂಬುದನ್ನು ಇಲ್ಲಿ ತಿಳಿಸಿಲ್ಲ. ಈಗ ನಿಮಗೆ ತಿಳಿದಿರುವಂತೆ ಮತ್ತು ನೀವೇ ಹೇಳಿದಂತೆ ನಿಮ್ಮ ಮನಸ್ಸಿನಲ್ಲಿ ಬರುವ ಆಲೋಚನೆಗಳೆಲ್ಲವೂ ಸರಿಯಲ್ಲ ಮತ್ತು ಅದನ್ನು ನಿಲ್ಲಿಸಲು ಪ್ರಯತ್ನಿಸುತ್ತಿದ್ದೀರಿ. ಅದೇ ಮೊದಲ ಸಕಾರಾತ್ಮಕ ಹೆಜ್ಜೆ. ಬೇರೆ ಬೇರೆ ಚಟುವಟಿಕೆಗಳಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಲು ಪ್ರಯ್ನತಿಸಿ. ಆಗ ನಿಮಗೆ ನಕಾರಾತ್ಮಕವಾಗಿ ಯೋಚಿಸಲು ಸಮಯವೇ ಸಿಗುವುದಿಲ್ಲ. ಒಳ್ಳೆಯ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವ ಸ್ನೇಹಿತರ ಜೊತೆ ಬೆರೆಯಿರಿ. ವಾರದಲ್ಲಿ ಒಂದು ದಿನವಾದರೂ ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗವಹಿಸಿ. ನಿಮ್ಮನ್ನು ನೀವು ಬ್ಯುಸಿ ಆಗಿರಿಸಿಕೊಳ್ಳಲು ಅನೇಕ ದಾರಿಗಳಿವೆ. ನಿಮ್ಮ ದಿನಚರಿಯಲ್ಲಿ ಯೋಗ ಹಾಗೂ ಧ್ಯಾನ ಮಾಡುವುದನ್ನು ರೂಢಿಸಿಕೊಳ್ಳಿ. ಇದು ನಿಮ್ಮ ಮನಸ್ಸನ್ನು ಶಾಂತವಾಗಿರಿಸಲು ಸಹಾಯ ಮಾಡುತ್ತದೆ ಹಾಗೂ ಸಕಾರಾತ್ಮಕ ಯೋಚನೆಗಳ ಪರಿಧಿಯನ್ನು ವಿಸ್ತರಿಸುವಂತೆ ಮಾಡುತ್ತದೆ. ನಿಮ್ಮ ಜೀವನ ನಿಮ್ಮದು, ಇಲ್ಲಿ ಸಕಾರಾತ್ಮಕವಾಗಿ ಯೋಚಿಸಲು ಹಾಗೂ ಸಂತೋಷದಿಂದ ಇರಲು ನಿಮ್ಮಿಂದ ಮಾತ್ರ ಸಾಧ್ಯ.

ಬರಹ ಇಷ್ಟವಾಯಿತೆ?

 • 5

  Happy
 • 7

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !