ಸೂರ್ಯ ತನ್ನ ಪ್ರಖರತೆ ಹೆಚ್ಚಿಸಿಕೊಳ್ಳುತ್ತಾ ಹೋದಂತೆ ಮಲೆನಾಡಿನ ಮನೆಗಳಲ್ಲಿ ಹಪ್ಪಳ, ಸಂಡಿಗೆ ಮಾಡುವ ಚಟುವಟಿಕೆಗಳೂ ಗರಿಗೆದರುತ್ತವೆ. ಮಾರ್ಚ್– ಏಪ್ರಿಲ್ ತಿಂಗಳು ಮನೆಮನೆಯಲ್ಲೂ ಹಪ್ಪಳ– ಸಂಡಿಗೆಯದ್ದೇ ಸದ್ದು. ಆಗೆಲ್ಲ ಒಟ್ಟು ಕುಟುಂಬದಲ್ಲಿ 30ರಿಂದ 40 ಸೇರು ಅಕ್ಕಿ ನೆನೆಹಾಕಿ ವರ್ಷಕ್ಕಾಗುವಷ್ಟು ‘ಹೊಯ್ಯಪ್ಪಳ’ವನ್ನು ತಿಂಗಳು ಪೂರ್ತಿ ಮಾಡಿಟ್ಟುಕೊಳ್ಳುತ್ತಿದ್ದರು. ಮಧ್ಯರಾತ್ರಿ ಅಥವಾ ಮುಂಜಾವಿನಿಂದಲೇ ಹಪ್ಪಳ ಹೊಯ್ಯುವ ಕಾಯಕಕ್ಕೆ ಮುನ್ನುಡಿ ಬರೆಯುತ್ತಿದ್ದರು.

ತಿನ್ನಲು ರುಚಿಕರವಾದ, ಎಣ್ಣೆಯಲ್ಲಿ ಕರಿದು ಅಥವಾ ಕೆಂಡದಲ್ಲಿ ಸುಟ್ಟು ಬಾಯಲ್ಲಿಟ್ಟರೆ ಕರಗುವ ‘ಹೊಯ್’ ಹಪ್ಪಳದ ತಯಾರಿ ವಾರದಿಂದಲೇ ನಡೆಯುತ್ತದೆ. ಅಮ್ಮ ಹಪ್ಪಳಕ್ಕೆ ಅಕ್ಕಿ ನೆನೆಹಾಕಿದಳೆಂದರೆ ನಮ್ಮದು ಮುತ್ತುಗದ ಎಲೆ ಕೊಯ್ದುಕೊಂಡು ಬರುವ ಕಾಯಕ. ಇಡೀ ಊರಿಗೂರೇ ಈ ಹಪ್ಪಳ ಮಾಡುತ್ತಿದ್ದ ಕಾರಣಕ್ಕೆ, ಆಗತಾನೇ ಗಿಡದಲ್ಲಿ ನೋಡಿದ್ದ ಮುತ್ತುಗದ ಎಲೆ ಮತ್ತೊಂದು ಗಳಿಗೆಗೆ ಮಾಯವಾಗಿರುತ್ತಿತ್ತು. ಹೊಲ– ಗದ್ದೆಗಳನ್ನು ತಿರುಗಿ, ಏರಿ– ಮಟ್ಟಿಗಳನ್ನು ಹತ್ತುತ್ತ ಇಳಿಯುತ್ತ ಮುತ್ತುಗದ ಎಲೆ ಹುಡುಕುವುದೇ ಕೆಲಸ. ಬೆಳಿಗ್ಗೆಯಿಂದ ಸಂಜೆವರೆಗೆ ಅಲೆದಾಡಿ ಅಂತೂ ಒಂದಷ್ಟು ಎಲೆಗಳನ್ನು ಹರಿದುಕೊಂಡು ಮನೆ ತಲುಪುತ್ತಿದ್ದೆವು.

ಮುತ್ತುಗದ ಎಲೆಗೂ ಹೊಯ್ ಹಪ್ಪಳಕ್ಕೂ ಎಲ್ಲಿಲ್ಲದ ನಂಟು. ಒಂದೊಂದು ಹಪ್ಪಳ ಹೊಯ್ದಾಗಲೂ ಒಂದೊಂದು ಮುತ್ತುಗದ ಎಲೆ ಜೊತೆಯಾಗುತ್ತಿತ್ತು. ಹಬೆಯಲ್ಲಿ ಬೆಂದ ಹಪ್ಪಳವನ್ನು ತಟ್ಟೆಯಿಂದ ತೆಗೆದುಹಾಕಿದರೆ ಒಂದಕ್ಕೊಂದು ಅಂಟಿಕೊಂಡು ಹರಿದುಬಿಡುತ್ತವೆ ಎಂಬ ಕಾರಣಕ್ಕೆ ಮುತ್ತಜ್ಜಿಯರು ಈ ಎಲೆಯ ನಂಟು ಬೆಳೆಸಿರಬಹುದು. ಅಗಲಕ್ಕೆ ಹರಡಿಕೊಂಡು ಎರಡು ಅಂಗೈಗಳಿಗಿಂತಲೂ ದೊಡ್ಡದಾಗಿರುತ್ತಿದ್ದ ಮುತ್ತುಗದ ಎಲೆ ಮೇಲೆ ಒಂದು ಹಪ್ಪಳವನ್ನು ಆರಾಮಾಗಿ ಹಾಕಬಹುದಿತ್ತು. ಹಾಗಾಗಿ, ಮುತ್ತಜ್ಜಿಯರ ಈ ಎಲೆಯ ಆಯ್ಕೆಯೂ ತೂಕದ್ದೇ ಆಗಿತ್ತೆನ್ನಿ.

ಮಲೆನಾಡಿನ ಮನೆಗಳಲ್ಲಿ ಹೊಯ್ ಹಪ್ಪಳ, ಅಕ್ಕಿ ಹಪ್ಪಳ, ಹಬೆ ಹಪ್ಪಳ, ಹಸಿ ಹಪ್ಪಳ, ಖಾರದ ಹಪ್ಪಳ, ನೆರೆ ಹಪ್ಪಳ, ಉಗಿ ಹಪ್ಪಳ... ಹೀಗೆ ವಿವಿಧ ನಾಮಾವಳಿಗಳನ್ನು ಹಚ್ಚಿಕೊಂಡು ಬೀಗುತ್ತಿದ್ದ ಈ ಹಪ್ಪಳ ಬೇಕೆಂದಾಗ ದಿಢೀರ್ ಎಂದು ಮಾಡುವಂಥದ್ದಲ್ಲ. ನಾಲ್ಕು ದಿನಗಳ ಹಿಂದೆಯೇ ದೊಡ್ಡ ಸ್ವಾರೆಯಲ್ಲಿ ಅಕ್ಕಿ ನೆನೆಹಾಕಿ, ದಿನವೂ ನೀರು ಬದಲಾಯಿಸುತ್ತ ಮತ್ತೆ ನೀರು ಹಾಕಿ ನೆನೆ ಇಡಬೇಕು (ಕೆಲವರು ಐದು ದಿನ, ಇನ್ನು ಕೆಲವರು ಮೂರು ದಿನ ಅಕ್ಕಿ ನೆನೆಸುತ್ತಾರೆ). ನಾಲ್ಕನೇ ದಿನಕ್ಕೆ ಅಕ್ಕಿ ನುಚ್ಚಿನಂತಾದರೆ ಚೆನ್ನಾಗಿ ನೆನೆದಿದೆ ಎಂದರ್ಥ. ಅದನ್ನು ಒರಳುಕಲ್ಲಿನಲ್ಲಿ ರುಬ್ಬುವುದೇ ಅಮ್ಮಂದಿರಿಗೆ ದೊಡ್ಡ ಕೆಲಸ. ಹಿಟ್ಟು ನುಣುಪಾಗುವಂತೆ ರುಬ್ಬಬೇಕಿದ್ದರಿಂದ ಬೆಳಿಗ್ಗೆಯಿಂದ ಸಂಜೆವರೆಗೂ ಈ ಕಾಯಕ ಸಾಗುತ್ತಿತ್ತು. ಒಮ್ಮೆಗೇ 15ರಿಂದ 20 ಸೇರು ಅಕ್ಕಿ ರುಬ್ಬುತ್ತಿದ್ದ ಅಮ್ಮಂದಿರ ಶ್ರಮಕ್ಕೆ ತಲೆಬಾಗಲೇಬೇಕು.

ಈಗೆಲ್ಲ ಮಿಕ್ಸಿ, ಗ್ರೈಂಡರ್ಗಳು ಈ ಕೆಲಸವನ್ನು ಸುಲಭವಾಗಿಸಿವೆ. ಹಪ್ಪಳ ಹೊಯ್ಯಲು ಅರ್ಧ ದಿನ ಒಲೆಯ ಮುಂದೆಯೇ ಕುಳಿತುಕೊಳ್ಳಬೇಕಾದ ಕಾರಣಕ್ಕೆ ಮುಂಜಾವು ಅಥವಾ ಇಳಿ ಸಂಜೆ ಹೊತ್ತನ್ನೇ ಅಮ್ಮಂದಿರು ಆಯ್ಕೆಮಾಡಿಕೊಳ್ಳುತ್ತಿದ್ದರು.

ಈರುಳ್ಳಿ ಹಪ್ಪಳದ ಗಮ್ಮತ್ತು:ಹಬೆಯಲ್ಲಿ ಬೆಂದ ಹಪ್ಪಳ ಹಸಿಯಾಗಿರುವಾಗಲೇ ತಿನ್ನಲು ಬಲು ರುಚಿ. ಇನ್ನು ಹಪ್ಪಳದ ಹಿಟ್ಟಿಗೆ ಈರುಳ್ಳಿ, ಕೊತ್ತಂಬರಿ ಸೊಪ್ಪು ಹಾಕಿ ಹೊಯ್ದರೆ ಅದರ ಗಮ್ಮತ್ತೇ ಬೇರೆ. ಹಿಟ್ಟು ಇನ್ನೇನು ಖಾಲಿಯಾಗುವ ಹೊತ್ತಿಗೆ ಈರುಳ್ಳಿ ಹಪ್ಪಳದ ಘಮ ಏಳುತ್ತಿತ್ತು. ಈ ಸಮಯಕ್ಕಾಗಿ ಬಕಪಕ್ಷಿಗಳಂತೆ ಕಾಯುತ್ತಿದ್ದ ನಮಗೆ ಅಂದು ಅದೇ ಬೆಳಗಿನ ಉಪಾಹಾರ. ಈಗಲೂ ಹಸಿ ಹಪ್ಪಳ ತಿನ್ನಲೆಂದೇ ಅಕ್ಕಿ ನೆನೆಹಾಕಿ ವರ್ಷಕ್ಕೆರಡು ಬಾರಿಯಾದರೂ ಈರುಳ್ಳಿ ಹಪ್ಪಳ ಸವಿಯುವುದುಂಟು.

ನದಿಯಲ್ಲಿ ಹೊಸ ನೀರು ಹರಿಯುವಂತೆ ಈ ಹಪ್ಪಳ ತಯಾರಿಯಲ್ಲೂ ಬಹಳಷ್ಟು ಬದಲಾವಣೆಯ ಗಾಳಿ ಬೀಸಿದೆ. ಅಂದಿನಂತೆ ಇಂದು ಮುತ್ತುಗದ ಎಲೆಯ ನಂಟನ್ನು ಹಪ್ಪಳ ದೂರ ಮಾಡಿದೆ. ದಿನವಿಡೀ ಹಿಟ್ಟು ರುಬ್ಬುವ ತಾಪತ್ರಯ ಈಗಿಲ್ಲ. ಹತ್ತು– ಇಪ್ಪತ್ತು ಸೇರು ತಯಾರಾಗುತ್ತಿದ್ದ ಜಾಗದಲ್ಲಿ ನಾಲ್ಕೈದು ಸೇರಿನ ಹಪ್ಪಳ ಸಾಕೆನಿಸುತ್ತದೆ. ಹೊಯ್ ಹಪ್ಪಳದ ರುಚಿ ಕಂಡವರಿಗೆ ವರ್ಷಕ್ಕೊಮ್ಮೆಯಾದರೂ ಅದನ್ನು ಸವಿಯಬೇಕೆನ್ನುವ ಇರಾದೆ ಇದ್ದೇ ಇರುತ್ತದೆ. ಬಲ್ಲವರೇ ಬಲ್ಲರು ‘ಹೊಯ್ ಹಪ್ಪಳ’ದ ರುಚಿಯ!

ನೀವೂ ಮಾಡಿನೋಡಿ

ಏನೇನು ಬೇಕು? ಅಕ್ಕಿ ಒಂದು ಸೇರು (ದಪ್ಪ ಅಕ್ಕಿ ಅಥವಾ ರೇಷನ್ ಅಕ್ಕಿ ಬಳಸಿದರೆ ಉತ್ತಮ), ತಲಾ ಮೂರು ಟೀ ಚಮಚ ದನಿಯಾ ಮತ್ತು ಜೀರಿಗೆ, ರುಚಿಗೆ ತಕ್ಕಷ್ಟು ಖಾರದ ಪುಡಿ, ಉಪ್ಪು, ಕರಿಬೇವು, ಒಂದು ದಪ್ಪ ಗೆಡ್ಡೆ ಬೆಳ್ಳುಳ್ಳಿ.

ಹೀಗೆ ಮಾಡಿ: ಅಕ್ಕಿಯನ್ನು ಒಂದು ಪಾತ್ರೆಯಲ್ಲಿ ಚೆನ್ನಾಗಿ ತೊಳೆದು ಮೂರು ದಿನ ನೆನೆಯಲು ಬಿಡಬೇಕು. ಪ್ರತಿದಿನವೂ ನೀರನ್ನು ತೆಗೆದು ಬೇರೆ ನೀರನ್ನು ಹಾಕಿಡಿ. ಮೂರನೇ ದಿನ ಅಕ್ಕಿಯನ್ನು ಮಿಕ್ಸಿಯಲ್ಲಿ ಹಾಕಿ ಸ್ವಲ್ಪವೇ ನೀರು ಹಾಕಿ ನುಣ್ಣಗೆ ರುಬ್ಬಿಕೊಳ್ಳಬೇಕು. ದನಿಯಾ, ಜೀರಿಗೆಯನ್ನು ಒಣಗಿದ ಮಿಕ್ಸಿಯಲ್ಲಿ ಹಾಕಿ ಪುಡಿ ಮಾಡಿಕೊಳ್ಳಬೇಕು. ಬಳಿಕ ಬೆಳ್ಳುಳ್ಳಿ, ಕರಿಬೇವು, ಖಾರದಪುಡಿ, ಉಪ್ಪು, ದನಿಯಾ, ಜೀರಿಗೆ ಪುಡಿಯನ್ನು ಸೇರಿಸಿ ಸ್ವಲ್ಪವೇ ನೀರು ಹಾಕಿ ನುಣ್ಣಗೆ ರುಬ್ಬಿಕೊಂಡು ಅಕ್ಕಿಹಿಟ್ಟಿಗೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಬೇಕು. ದೋಸೆ ಹಿಟ್ಟಿಗಿಂತ ಸ್ವಲ್ಪ ಗಟ್ಟಿಯಾಗಿರಲಿ ಮಿಶ್ರಣ. ಇದನ್ನು ಒಂದು ಪಾತ್ರೆಯಲ್ಲಿ ಹಾಕಿ ಒಂದು ದಿನ ನೆನೆಯಲು ಬಿಡಬೇಕು. ಮಾರನೇ ದಿನ ಹಪ್ಪಳ ಹೊಯ್ಯಬೇಕು.

ಹೀಗೆ ಹೊಯ್ಯಿರಿ: ದಪ್ಪ ತಳವಿರುವ ಅಗಲವಾದ ಪಾತ್ರೆ ಅಥವಾ ದಬರಿಯಲ್ಲಿ ತಳಭಾಗಕ್ಕೆ ಅರ್ಧದಷ್ಟು ನೀರು ಹಾಕಿ. ನೀರು ಕುದಿಯುವಾಗ ಆ ಪಾತ್ರೆ ಹಿಡಿಸುವಷ್ಟು ಅಗಲವಾದ ತಟ್ಟೆಗೆ ಮಧ್ಯದಲ್ಲಿ ಹಿಟ್ಟು ಹಾಕಿ ತಟ್ಟೆ ತುಂಬ ಹರಡಬೇಕು. ಬಳಿಕ ಕುದಿಯುವ ನೀರಿನ ಪಾತ್ರೆ ಮೇಲೆ ಅರ್ಧ ನಿಮಿಷ ಇಟ್ಟು, ಬಳಿಕ ಆ ತಾಟನ್ನು ಬೋರಲು ಹಾಕಬೇಕು. ಎರಡು ನಿಮಿಷ ಬಿಟ್ಟು ತೆಗೆದರೆ ಹಪ್ಪಳ ಸಿದ್ಧ. ತಟ್ಟೆ ಸ್ವಲ್ಪ ತಣಿದ ಬಳಿಕ ನಾಜೂಕಿನಿಂದ ಹಪ್ಪಳವನ್ನು ಬಿಡಿಸಿ ಬಿಸಿಲಿನಲ್ಲಿ ಒಣಗಿಸಬೇಕು.

ಇದೇ ರೀತಿ ನಾಲ್ಕು ತಟ್ಟೆಗಳನ್ನು ಇಟ್ಟುಕೊಂಡು ಒಂದಾದ ಮೇಲೊಂದರಂತೆ ಬೇಯಿಸಬೇಕು. ತಟ್ಟೆಗೆ ಹಾಕಿದ ಹಿಟ್ಟಿನ ಮೇಲೆ ಸಣ್ಣಗೆ ಹೆಚ್ಚಿದ ಈರುಳ್ಳಿ, ಕೊತ್ತಂಬರಿ ಸೊಪ್ಪನ್ನು ಉದುರಿಸಿ ಅಥವಾ ಹಿಟ್ಟಿನಲ್ಲಿ ಮಿಕ್ಸ್ ಮಾಡಿ ಹೊಯ್ದರೆ ರುಚಿಕರ ಈರುಳ್ಳಿ ಹಪ್ಪಳ ಸವಿಯಲು ಸಿದ್ಧ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.