ಮಲೆನಾಡು ವೈವಿಧ್ಯಮಯ ಅಡುಗೆಗಳ ತವರೂರು. ಇಲ್ಲಿನ ಪ್ರತಿ ಮನೆಯಲ್ಲೂ ನೆಲದ ಗೆಡ್ಡೆಯಿಂದ ಹಿಡಿದು ಮರದ ಸೊಪ್ಪಿನವರೆಗೆ ಏನೆಲ್ಲವನ್ನೂ ಬಳಸಿ ದಿನವೂ ಬಿಸಿಬಿಸಿ ಅಡುಗೆ ತಯಾರಾಗುತ್ತದೆ. ಅದರಲ್ಲೂ ಮಳೆಗಾಲ ಬಂತೆಂದರೆ ಮಲೆನಾಡಿಗರ ಮನೆಯ ಹಿತ್ತಲಿನಲ್ಲಿ ಕೆಸುವಿನ ಎಲೆಗಳು ಹಸಿರಿನಿಂದ ನಳನಳಿಸುತ್ತಿರುತ್ತವೆ. ಈ ಋತುವಿನಲ್ಲಿ ಸಿಗುವ ಅಪರೂಪದ ಕೆಸುವಿಗಾಗಿ ವರ್ಷಗಟ್ಟಲೇ ಕಾಯುವ ಜನ, ಇದರಿಂದ ತಯಾರಾಗುವ ಒಂದು ವಿಶೇಷ ಬಗೆಯ ಖಾದ್ಯವನ್ನು ಖುಷಿಯಿಂದ ಸವಿಯುತ್ತಾರೆ. ಅದುವೇ ಮಲೆನಾಡು ಹಾಗೂ ಕರಾವಳಿ ಭಾಗದ ವಿಶೇಷ ಖಾದ್ಯ ಪತ್ರೊಡೆ.

ಹೌದು, ಮುಂಗಾರು ಭೂಮಿಗೆ ಮುತ್ತಿಡುತ್ತಿದ್ದಂತೆ ನೆಲದಲ್ಲಿ ಅಡಗಿದ್ದ ಕೆಸುವಿನ ಗೆಡ್ಡೆಗೆ ಜೀವಕಳೆ ಬರುತ್ತದೆ. ಈ ಹಸಿರು ಕೋಮಲೆ ‘ಕೆಸ’ ಭೋಜನಪ್ರಿಯರ ಬಾಯಲ್ಲಿ ನೀರೂರಿಸುತ್ತಾಳೆ. ಇಲ್ಲಿನ ಮಂದಿಗೆ ಸೂಪರ್ ಮಾರ್ಕೆಟ್ಗಳಲ್ಲಿ ಸಿಗುವ ಎಷ್ಟೋ ಆಹಾರ ಪದಾರ್ಥಗಳ ಪರಿಚಯವೇ ಇರುವುದಿಲ್ಲ. ಅಕ್ಕಪಕ್ಕ ಸಿಗುವ ಗೆಡ್ಡೆ, ಗೆಣಸು, ಪೋಷಕಾಂಶಯುಕ್ತ ಎಲೆಗಳೇ ಇವರ ಅಡುಗೆಮನೆಯ ಕಾಯಂ ತರಕಾರಿಗಳು. ಅದೇ ರೀತಿ ಮಳೆಗಾಲದಲ್ಲಿ ಮಾತ್ರ ಗರಿ ಬಿಚ್ಚಿದ ನವಿಲಿನಂತೆ ನಳನಳಿಸುವ ಕೆಸುವಿನ ಎಲೆಗಳಿಂದ ತಯಾರಾಗುವ ಪತ್ರೊಡೆ ಎಂದರೆ ಇನ್ನಿಲ್ಲದ ಅಚ್ಚುಮೆಚ್ಚು, ಒಂದು ಬಗೆಯ ‘ಹುಚ್ಚು’!

ಪತ್ರೊಡೆ ಬರೀ ಒಂದು ಅಡುಗೆಯಲ್ಲ. ಅದು ಮಲೆನಾಡು ಮತ್ತು ಕರಾವಳಿಯ ಸಾಂಸ್ಕೃತಿಕ ಅಸ್ಮಿತೆ ಸಹ. ಕಾಫಿ–ಅಡಿಕೆ ತೋಟಗಳ ಅಂಚಿನಲ್ಲಿ, ಹಳ್ಳ–ಕೊಳ್ಳಗಳ ಮಗ್ಗುಲಲ್ಲಿ ಬೆಳೆಯುವ ನೆಲಕೆಸು ಹಾಗೂ ಬೃಹತ್ ಮರಗಳ ಮೇಲೆ ಆನೆ ಕಿವಿಯಂತೆ ಅಗಲವಾಗಿ ಹರಡಿ ನಿಲ್ಲುವ ನಾನಾ ವಿಧದ ಕೆಸುಗಳು ಮಳೆಗಾಲದ ಆಗಮನವನ್ನು ಸಾರುತ್ತವೆ. ಈ ಎಲೆಗಳಿಂದ ಸಾಂಪ್ರದಾಯಿಕ ವಿಧಾನದಲ್ಲಿ ತಯಾರಾಗುವ ಪತ್ರೊಡೆ ಮಲೆನಾಡಿಗರು ಪ್ರಕೃತಿ ಮಾತೆಗೆ ಅರ್ಪಿಸುವ ಒಂದು ಕೃತಜ್ಞತೆಯ ಅಡುಗೆ. ಸಂಸ್ಕೃತಿ ಮತ್ತು ಪ್ರಕೃತಿಯ ಸಂಗಮದಂತಿರುವ ‘ಪತ್ರೊಡೆ’ಗೆ ಇಲ್ಲಿ ಭಾವನಾತ್ಮಕ ಸ್ಥಾನವಿದೆ. ಆಷಾಢದ ಮಳೆ ಧೋ... ಎಂದು ಸುರಿಯುವಾಗ ದೇಹದ ಉಷ್ಣಾಂಶವನ್ನು ಸಮತೋಲನದಲ್ಲಿ ಇಡಲು ಈ ಖಾದ್ಯ ರಾಮಬಾಣ.

ಏನಂಥ ವಿಶೇಷ?

ಪತ್ರೊಡೆ ಮಾಡುವುದೆಂದರೆ ತಾಳ್ಮೆಯ ಕೆಲಸ. ಕಾಡಿನ ಅಥವಾ ಹಿತ್ತಲ ಹಳ್ಳಗಳ ಪಕ್ಕದಲ್ಲಿ ಬೆಳೆಯುವ ಎಳೆಯ ಕೆಸುವಿನ ಎಲೆಗಳನ್ನು ಕಿತ್ತು ತಂದು, ಚೆನ್ನಾಗಿ ತೊಳೆದು, ಅದರ ಹಿಂಭಾಗದ ನಾರುಗಳನ್ನು ಜಾಗರೂಕವಾಗಿ ತೆಗೆಯಬೇಕು.

ನಂತರ ಅಕ್ಕಿ, ತೆಂಗಿನತುರಿ, ಒಣಮೆಣಸಿನಕಾಯಿ, ಜೀರಿಗೆ, ಕೊತ್ತಂಬರಿ ಸೇರಿಸಬೇಕು. ಮುಖ್ಯವಾಗಿ ಹುಣಸೆಹಣ್ಣು ಮತ್ತು ಬೆಲ್ಲ ಬೆರೆಸುವುದನ್ನು ಮರೆಯುವಂತಿಲ್ಲ. ಈ ಮಸಾಲೆಯನ್ನು ಎಲೆಗಳ ಮೇಲೆ ಒಂದರ ಮೇಲೊಂದರಂತೆ ಹಚ್ಚಿ, ನಂತರ ಅದನ್ನು ಸುರುಳಿ ಆಕಾರದಲ್ಲಿ ಕಡುಬಿನ ರೀತಿಯಲ್ಲಿ ಸುತ್ತಿಕೊಳ್ಳಬೇಕು. ಹೀಗೆ ತಯಾರಿಸಿದ ಸುರುಳಿಗಳನ್ನು ಇಡ್ಲಿ ಪಾತ್ರೆಯಲ್ಲಿಟ್ಟು ಹಬೆಯಲ್ಲಿ ಹದಕ್ಕೆ ತಕ್ಕಂತೆ ಬೇಯಿಸಿಕೊಳ್ಳಬೇಕು. ಚೆನ್ನಾಗಿ ಬೆಂದ ಈ ಕಡುಬುಗಳನ್ನು ಬಿಲ್ಲೆಗಳಂತೆ ಕತ್ತರಿಸಿ, ತೆಂಗಿನ ಎಣ್ಣೆಯಲ್ಲಿ ಕರಿಯಬಹುದು ಅಥವಾ ಸಾಸಿವೆ– ಕರಿಬೇವು ಹಾಕಿ ಒಗ್ಗರಣೆ ಕೊಟ್ಟು ಪಲ್ಯವನ್ನು ಕೂಡ ಮಾಡಿಕೊಳ್ಳಬಹುದು.

ಪತ್ರೊಡೆ ತಯಾರಿಕೆಯಲ್ಲಿ ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ, ಕೆಸುವಿನ ಎಲೆಯಲ್ಲಿ ‘ಕ್ಯಾಲ್ಸಿಯಂ ಆಕ್ಸಲೇಟ್’ ಎಂಬ ಅಂಶವಿರುತ್ತದೆ. ಇದು ಗಂಟಲಿನಲ್ಲಿ ಕೆರೆತ ಉಂಟುಮಾಡಬಹುದು. ಇದನ್ನು ಹೋಗಲಾಡಿಸಲು ಆಮ್ಲೀಯ ಗುಣವಿರುವ ಹುಣಸೆಹಣ್ಣನ್ನು ಬಳಸಲಾಗುತ್ತದೆ. ಇದು ನಮ್ಮ ಪೂರ್ವಜರ ಆಹಾರ ವಿಜ್ಞಾನಕ್ಕೆ ಸಾಕ್ಷಿ.

ಪತ್ರೊಡೆ ನಾಲಿಗೆ ಚಪಲಕ್ಕಷ್ಟೇ ಅಲ್ಲ, ಆರೋಗ್ಯದ ದೃಷ್ಟಿಯಿಂದಲೂ ಅಮೂಲ್ಯವಾಗಿದೆ. ಈ ಎಲೆಯಲ್ಲಿ ವಿಟಮಿನ್ ಎ, ಬಿ ಮತ್ತು ಸಿ ಅಂಶಗಳು ಹೇರಳವಾಗಿದ್ದು, ಇದು ಮಳೆಗಾಲದಲ್ಲಿ ಕಾಡುವ ಸಣ್ಣಪುಟ್ಟ ಕಾಯಿಲೆಗಳ ವಿರುದ್ಧ ಹೋರಾಡಲು ರೋಗನಿರೋಧಕ ಶಕ್ತಿ ನೀಡುತ್ತದೆ. ಇದರಲ್ಲಿ ಹೇರಳವಾದ ನಾರಿನಂಶ ಇರುವುದರಿಂದ ಜೀರ್ಣಕ್ರಿಯೆ ಸರಾಗವಾಗುತ್ತದೆ. ಜೊತೆಗೆ ಕಬ್ಬಿಣದಂಶ ಅಧಿಕವಾಗಿರುವ ಕಾರಣ ರಕ್ತಹೀನತೆ ಇರುವವರಿಗೆ ಅತ್ಯುತ್ತಮ ಆಹಾರ.

ಒಂದು ಕಾಲದಲ್ಲಿ ಕರಾವಳಿ ಮತ್ತು ಮಲೆನಾಡಿಗೆ ಸೀಮಿತವಾಗಿದ್ದ ಪತ್ರೊಡೆ ಇಂದು ಬೆಂಗಳೂರು, ಮೈಸೂರು ಸೇರಿದಂತೆ ಇಡೀ ಕರ್ನಾಟಕದ ನೆಚ್ಚಿನ ಖಾದ್ಯವಾಗಿಬಿಟ್ಟಿದೆ. ಹುಳಿ, ಸಿಹಿ, ಖಾರ ಮತ್ತು ಉಪ್ಪಿನ ಸಮತೋಲನವಿರುವ ಪತ್ರೊಡೆಯ ರುಚಿ ಎಲ್ಲರನ್ನೂ ಸೆಳೆಯುತ್ತಿದೆ.

ಇಂದಿನ ಜಂಕ್ಫುಡ್ ಯುಗದಲ್ಲಿ ಇಂತಹ ಸಾಂಪ್ರದಾಯಿಕ ಹಾಗೂ ಆರೋಗ್ಯಕರ ಆಹಾರಗಳನ್ನು ಉಳಿಸಿ ಬೆಳೆಸುವ ಅಗತ್ಯವಿದೆ. ಇಂದು ನಾವು ಪಿಜ್ಜಾ, ಬರ್ಗರ್ಗಳತ್ತ ಮುಖ ಮಾಡುತ್ತಿದ್ದೇವೆ. ಆದರೆ, ಮಳೆಗಾಲದ ಆ ಅಬ್ಬರದ ನಡುವೆ, ಮನೆಯ ಹೆಂಚಿನ ಮೇಲೆ ಮಳೆಯ ಹನಿಗಳು ಬೀಳುವ ಶಬ್ದವನ್ನು ಕೇಳುತ್ತಾ, ಅಮ್ಮ ಮಾಡಿದ ಬಿಸಿಬಿಸಿ ಪತ್ರೊಡೆಯನ್ನು ತೆಂಗಿನ ಎಣ್ಣೆ ಹಾಕಿಕೊಂಡು ತಿನ್ನುವ ಸುಖ ಬೇರೆಲ್ಲೂ ಸಿಗಲಾರದು. ಇದು ನಮ್ಮ ಮಣ್ಣಿನ ರುಚಿ, ನಮ್ಮ ಪರಂಪರೆಯ ಹೆಮ್ಮೆ. ಪತ್ರೊಡೆ ಬರೀ ಹೊಟ್ಟೆ ತುಂಬಿಸುವ ಆಹಾರವಲ್ಲ, ಇದು ಮಲೆನಾಡಿನ ಪ್ರೀತಿಯ ಸಾರ. v

ಹೀಗೂ ಸವಿಯಿರಿ

ಪತ್ರೋಡೆ ಪ್ರೈ (ತವಾ ಪ್ರೈ): ಹಬೆಯಲ್ಲಿ ಬೆಂದ ಪತ್ತೊಡೆ ಬಿಲ್ಲೆಗಳನ್ನು ರವೆ ಅಥವಾ ಅಕ್ಕಿಹಿಟ್ಟಿನಲ್ಲಿ ಅದ್ದಿ ತೆಂಗಿನ ಎಣ್ಣೆಯಲ್ಲಿ ಕೆಂಪಗೆ ಕರಿದು ತಟ್ಟೆಗೆ ಬಡಿಸಿದರೆ ತಿಂದವರು ಅಬ್ಬಾ ಎಂಥಾ ರುಚಿ ಎನ್ನದೇ ಇರಲಾರರು.

ಒಗ್ಗರಣೆ ಪತ್ರೋಡೆ: ಬೆಂದ ಪತ್ತೊಡೆಯನ್ನು ಪುಡಿಪುಡಿ ಮಾಡಿ ಸಾಸಿವೆ, ಹಸಿಮೆಣಸಿನಕಾಯಿ ಮತ್ತು ತೆಂಗಿನತುರಿಯೊಂದಿಗೆ ಒಗ್ಗರಣೆ ಹಾಕಿಕೊಟ್ಟರೆ ಮನೆಮಂದಿ ಚಪ್ಪರಿಸಿಕೊಂಡು ತಿನ್ನುತ್ತಾರೆ.

ಪತ್ರೋಡೆ ಗಸಿ (ಕರಿ): ತೆಂಗಿನಹಾಲಿನ ಸಾರಿನಲ್ಲಿ ಪತ್ತೊಡೆ ಚೂರುಗಳನ್ನು ಬೇಯಿಸಿ ಅನ್ನದೊಂದಿಗೆ ಸವಿಯುವುದು ಕರಾವಳಿ ಭಾಗದ ಶೈಲಿ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260516-51-283437563

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.