ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರಳ ವ್ಯಾಯಾಮಕ್ಕೆ ಸುಲಭ ಮಾರ್ಗ ರಝಿಸ್ಟನ್ಸ್‌ ಬ್ಯಾಂಡ್‌

ದೇಹವನ್ನು ಸ್ಟ್ರೇಚ್‌ ಮಾಡಿ ಉಲ್ಲಾಸದಿಂದ ಇರಿ
Last Updated 23 ಜೂನ್ 2019, 20:00 IST
ಅಕ್ಷರ ಗಾತ್ರ

ವಿಪರೀತ ನಗರೀಕರಣದಿಂದಾಗಿ ಉಸಿರಾಡಲು ಶುದ್ಧವಾದ ಗಾಳಿ ಸಿಗುವುದು ಕಷ್ಟವಾಗಿರುವ ಈ ದಿನಮಾನದಲ್ಲಿ; ಮೈದಾನಗಳನ್ನು ಹುಡುಕಿಕೊಂಡು ವಾಕಿಂಗ್‌, ರನ್ನಿಂಗ್ ಮಾಡಿ ದೈಹಿಕವಾಗಿ ಫಿಟ್‌ ಆಗಿರುವುದು ಗಗನ ಕುಸುಮವಾಗಿದೆ. ಇಂತಹ ಸನ್ನಿವೇಶವನ್ನೇ ಬಂಡವಾಳವನ್ನಾಗಿ ಮಾಡಿಕೊಂಡು ನಗರಗಳಲ್ಲಿ ಹೆಚ್ಚು ಜಿಮ್‌, ಏರೋಬಿಕ್ಸ್‌ ಸೆಂಟರ್‌ಗಳು ತಲೆಎತ್ತುತ್ತಿವೆ.

ಕಚೇರಿ ಕೆಲಸದ ಒತ್ತಡದಲ್ಲಿಯೂ ನೀವು ದಿನವಿಡೀ ಉಲ್ಲಾಸದಿಂದ ಇರಲು ಈಗ ಮೈಲಿ ದೂರದಲ್ಲಿರುವ ಮೈದಾನಕ್ಕೆ, ಉದ್ಯಾನಕ್ಕೆ ತೆರಳಬೇಕೆಂದೇನಿಲ್ಲ; ಮನೆಯ ಮಾಳಿಗೆ ಮೇಲೆಯೇ ಯಾರ ಸಹಾಯವೂ ಇಲ್ಲದೇ ನಿಮ್ಮಷ್ಟಕ್ಕೆ ನೀವೆ ಸರಳವಾದ ವ್ಯಾಯಾಮಗಳನ್ನು ಮಾಡಿ ಸದಾ ಫಿಟ್‌ ಆಗಿರಬಹುದು.

ಮಾರುಕಟ್ಟೆಯಲ್ಲಿ ಅತಿ ಕಡಿಮೆ ಬೆಲೆಯಲ್ಲಿ ಸಿಗುವ ರಝಿಸ್ಟೆನ್ಸ್‌ ಬ್ಯಾಂಡ್‌ (ಥೆರಾ ಬ್ಯಾಂಡ್‌) ಖರೀದಿಸಿ ಸರಳವಾದ ವ್ಯಾಯಾಮಗಳನ್ನು ಕಡಿಮೆ ಸಮಯದಲ್ಲಿಯೇ ಮನೆಯಲ್ಲಿಯೇ ಮಾಡಬಹುದು.

ರಝಿಸ್ಟನ್ಸ್‌ ಬ್ಯಾಂಡ್‌ ಅಂದರೇನು?

ರಝಿಸ್ಟನ್ಸ್‌ ಬ್ಯಾಂಡ್‌ ಇದು ಒಂದು ರಬ್ಬರ್‌ ಬ್ಯಾಂಡ್‌ (ಪಟ್ಟಿ). ಇದರ ಎರಡು ಬದಿಯ ತುದಿಗೆ ಮುಷ್ಟಿಯಲ್ಲಿ ಹಿಡಿದುಕೊಳ್ಳಲು ಅನುಕೂಲವಾಗುವಂತೆ ಗಟ್ಟಿಯಾದ ಪ್ಲಾಸ್ಟಿಕ್‌ ಹಿಡಿಕೆಗಳು ಇರುತ್ತವೆ. ಇದರ ರಬ್ಬರ್‌ ಟ್ಯೂಬ್‌ ನೀವು ಎಳೆಯುವ ಒತ್ತಡವನ್ನು ತಡೆದುಕೊಳ್ಳುವಂತದ್ದು ಆಗಿರುತ್ತದೆ.

ನಿಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಬ್ಯಾಂಡ್‌ ವಿಧಗಳು

ಇದರಲ್ಲಿ ಹಲವಾರು ವಿಧದ ಬ್ಯಾಂಡ್‌ಗಳಿವೆ. ಒಂದು ಎಳೆ ಎರಡು, ಮೂರು... ಹೀಗೆ ಅವರವರ ದೈಹಿಕ ಸಾಮರ್ಥ್ಯಕ್ಕೆ ತಕ್ಕಂತೆ ಬ್ಯಾಂಡ್‌ಗಳನ್ನು ಉಪಯೋಗಿಸಬಹುದು. ರನ್ನಿಂಗ್‌ ಮಾಡುವವರಿಗೆ ದಪ್ಪವಾದ ಬ್ಯಾಂಡ್‌ ಹಾಗೂ ಜಿಮ್‌ನಲ್ಲಿ ದೇಹವನ್ನು ಹುರಿಗೊಳಿಸುವ ಬಾಡಿಬಿಲ್ಡರ್‌ಗಳು ಹೆಚ್ಚು ಬಿಗಿಯಾಗಿರುವ ಬ್ಯಾಂಡ್‌ಗಳನ್ನು ಉಪಯೋಗಿಸುತ್ತಾರೆ.

ಇದು ತುಂಬ ಹಗುರವಾಗಿರುವುದರಿಂದ ಸುಲಭವಾಗಿ ನೀವು ಬ್ಯಾಗ್‌ನಲ್ಲಿ ತೆಗೆದುಕೊಂಡು ಹೋಗಬಹುದು. ಮತ್ತು ತುಂಬ ಅಗ್ಗವಾದ ದರದಲ್ಲಿ (₹ 500) ದೊರೆಯುತ್ತದೆ.

ರಝಿಸ್ಟನ್ಸ್‌ ಬ್ಯಾಂಡ್‌ನ ಉಪಯೋಗಗಳು

ನೀವು ಜಿಮ್‌ಗೆ ಹೋಗಿ ತಲಾ 10 ಕೆ.ಜಿ.ಯ ಡಂಬೆಲ್ಸ್‌ಗಳನ್ನು ಮುಷ್ಟಿಯಲ್ಲಿ ಎತ್ತಿ ನಿಮ್ಮ ತೋಳು ಹಾಗೂ ಮುಂಗೈಗಳನ್ನು ಬಲಗೊಳಿಸಬೇಕಾಗಿಲ್ಲ. ಆದರೆ ಅದೇ ರೀತಿಯ ಮತ್ತು ಅಷ್ಟೇ ಪರಿಣಾಮಕಾರಿಯಾಗಿ ನಿಮ್ಮ ತೋಳುಗಳ ಸ್ನಾಯುಗಳನ್ನು ಬಲಗೊಳ್ಳಿಸಬಹುದು. ಹೇಗೆಂದರೆ ರಝಿಸ್ಟನ್ಸ್‌ ಬ್ಯಾಂಡ್‌ಅನ್ನು ನೆಲದ ಮೇಲೆ ನೇರವಾಗಿ ಹಾಸಿ ಮಧ್ಯಭಾಗದಲ್ಲಿ ಅದರ ಮೇಲೆ ನಿಂತು ಹಿಡಿಕೆಗಳನ್ನು ಮುಷ್ಟಿಯಲ್ಲಿ ಹಿಡಿದು ಡಂಬೆಲ್ಸ್‌ ಎತ್ತುವ ರೀತಿಯಲ್ಲಿಯೇ ಒಂದೊಂದೇ ಮುಷ್ಟಿಗಳನ್ನು ಭುಜದವರೆಗೆ ತಂದು ಹತ್ತು ಸೆಕೆಂಡುಗಳ ಕಾಲ ಒತ್ತಡವನ್ನು ತಡೆದುಕೊಂಡು ಅದೇ ಸ್ಥಿತಿಯಲ್ಲಿರಬೇಕು. ನಂತರ ನಿಧಾನವಾಗಿ ಕೆಳಗಿಳಿಸಬೇಕು. ಇದೇ ರೀತಿ ದಿನಕ್ಕೆ ಐದು ಬಾರಿ ವ್ಯಾಯಾಮದ ಸಮಯದಲ್ಲಿ 10 ರೌಂಡ್‌ಗಳನ್ನು ಮಾಡಬೇಕು.

ಇದನ್ನು ಕಂಬಕ್ಕೆ ಸುತ್ತುವರಿಸಿ, ಇಲ್ಲವೇ ನಿಮ್ಮ ಮನೆಯ ಕಿಟಕಿಯ ಸರಳುಗಳಿಗೆ (ಗ್ರಿಲ್‌ಗಳಿಗೆ) ಸಿಕ್ಕಿಸಿ ನಿಮ್ಮ ಎದೆ, ಭುಜ, ಕಾಲುಗಳ ಮೀನಖಂಡ, ತೊಡೆ ಭಾಗದ ಸ್ನಾಯುಗಳಿಗೆ ಒಳ್ಳೆಯ ವ್ಯಾಯಾಮ ನೀಡಿ ಬಲಗೊಳಿಸಬಹುದು. ಹಲವಾರು ಸರಳ ವ್ಯಾಯಾಮಗಳನ್ನು ಇದರ ಸಹಾಯದಿಂದ ಮಾಡಬಹುದು. ಕ್ರಿಕೆಟ್‌ ಆಟಗಾರರು ಇದನ್ನು ಹೆಚ್ಚು ಬಳಸುತ್ತಾರೆ. ಬೌಲರ್‌ಗಳ ಕಿಟ್‌ಬ್ಯಾಗ್‌ನಲ್ಲಿ ಬ್ಯಾಟ್‌ ಇರುತ್ತೋ ಇಲ್ಲವೊ, ರಝಿಸ್ಟನ್ಸ್‌ ಬ್ಯಾಂಡ್‌ ಇದ್ದೇ ಇರುತ್ತೆ. ಕ್ರಿಕೆಟಿಗರು ವೇಗವಾಗಿ ಚೆಂಡನ್ನು ಎಸೆಯಲು ಅವರ ಫೋರ್‌ಆರ್ಮ್‌ ಹೆಚ್ಚು ಬಲಿಷ್ಠವಾಗಿರಬೇಕು. ಅದಕ್ಕೆ ಅವರು ಈ ರಝಿಸ್ಟನ್ಸ್‌ ಬ್ಯಾಂಡ್‌ಅನ್ನು ನೆಟ್‌ನ ಪೋಲ್‌ಗೆ ಕಟ್ಟಿ, ದಿನವೂ ಬಲವಾಗಿ ಎಳೆದು ರೂಡಿ ಮಾಡಿಕೊಳ್ಳುತ್ತಾರೆ.ದಕ್ಷಿಣ ಆಫ್ರಿಕಾದ ವೇಗಿ ಡೇಲ್‌ ಸ್ಟೇನ್‌ ಗಂಟೆಗೆ 145 ಕಿ.ಮೀ ಸರಾಸರಿಯಂತೆ ಬೌಲಿಂಗ್‌ ಮಾಡಲು ಅವರ ಬಲಿಷ್ಟವಾದ ಭುಜ ಮತ್ತು ತೋಳುಗಳ ಸ್ನಾಯುಗಳ ಬಲವೇ ಕಾರಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT