ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೋಟಾ ವೈರಾಣು ಲಸಿಕೆಶಿಶುಮರಣ ತಡೆಯತ್ತ ಇನ್ನೊಂದು ಹೆಜ್ಜೆ

Last Updated 30 ಆಗಸ್ಟ್ 2019, 19:30 IST
ಅಕ್ಷರ ಗಾತ್ರ

ಶಿಶುಮರಣವನ್ನು ಉಂಟು ಮಾಡುವ ಹಲವಾರು ಕಾರಣಗಳಲ್ಲಿ ಭೇದಿಯೂ ಒಂದು. ಹಾಗೆಯೇ ವಿಶ್ವದಾದ್ಯಂತ ಪ್ರತಿನಿತ್ಯ ಸುಮಾರು ಎರಡು ಸಾವಿರದಷ್ಟು ಐದು ವರ್ಷದೊಳಗಿನ ಮಕ್ಕಳು ಭೇದಿಯ ಕಾರಣದಿಂದ ಸಾವನ್ನಪ್ಪುತ್ತಿದ್ದಾರೆ ಎಂದು ಅಂದಾಜಿಸಲಾಗಿದೆ. ಹಲವು ಬಗೆಯ ವೈರಾಣು, ಬ್ಯಾಕ್ಟೀರಿಯಾ ಮತ್ತು ಇನ್ನಿತರ ಕಾರಣಗಳಿಂದ ಮಕ್ಕಳಲ್ಲಿ ಭೇದಿ ಸಂಭವಿಸಬಹುದಾದರೂ ಪ್ರತಿಶತ ಸುಮಾರು ಎಪ್ಪತ್ತರಷ್ಟು ಸಂದರ್ಭಗಳಲ್ಲಿ ಇದಕ್ಕೆ ರೋಟಾ ವೈರಾಣು ಕಾರಣವಾಗಿರುತ್ತದೆ. ಈ ರೋಟಾ ವೈರಾಣುವಿನಿಂದಾಗುವ ಭೇದಿಯು ತೀವ್ರ ಸ್ವರೂಪದ್ದಾಗಿರುತ್ತದೆ. ರೋಟಾ ವೈರಾಣುವಿನ ಭೇದಿಯಿಂದ ಉಂಟಾಗುವ ನಿರ್ಜಲತೆಯ ಕಾರಣದಿಂದಾಗಿ ಜಗತ್ತಿನಾದ್ಯಂತ ಇದುವರೆಗೆ ಲಕ್ಷಾಂತರ ಮಕ್ಕಳು ಮರಣವನ್ನಪ್ಪಿದ್ದಾರೆ. ಇದನ್ನು ತಡೆಗಟ್ಟುವ ದಿಸೆಯಲ್ಲಿ ಓಆರ್‌ಎಸ್‌ ದ್ರಾವಣ ಮತ್ತು ರೋಟಾ ವೈರಾಣು ವಿರುದ್ಧದ ಲಸಿಕೆಗಳು ಮಹತ್ವದ ಪಾತ್ರವಹಿಸಿವೆ.

ಲಸಿಕೆಗಳಲ್ಲಿ ಎಷ್ಟು ಬಗೆಗಳಿವೆ?

ಪಶುಜನ್ಯ ಮತ್ತು ಮಾನವಜನ್ಯ ಎಂಬ ಎರಡು ಬಗೆಯ ಲಸಿಕೆಗಳು ಲಭ್ಯವಿದ್ದು, ಇವೆರಡೂ ಅತ್ಯಂತ ಪರಿಣಾಮಕಾರಿ. ಪಶುಜನ್ಯ ಲಸಿಕೆಯಲ್ಲಿ ರೋಟಾ ವೈರಾಣುವಿನ ಐದು ಪ್ರಬೇಧಗಳಿದ್ದರೆ, ಮಾನವಜನ್ಯ ಲಸಿಕೆಯಲ್ಲಿ ಒಂದು ಪ್ರಬೇಧವಿರುತ್ತದೆ. ಸರ್ಕಾರ ಉಚಿತವಾಗಿ ನೀಡಲು ಉದ್ದೇಶಿಸಿರುವ ಲಸಿಕೆ, ಐದು ಪ್ರಬೇಧಗಳನ್ನುಳ್ಳ ಪಶುಜನ್ಯ ಲಸಿಕೆಯಾಗಿರುತ್ತದೆ.

ಎಷ್ಟು ಬಾರಿ ಮತ್ತು ಹೇಗೆ ನೀಡಬೇಕು?

ರೋಟಾ ವೈರಾಣು ವಿರುದ್ಧದ ಲಸಿಕೆಯನ್ನು ಜನಿಸಿದ ಆರು ವಾರಗಳ ನಂತರ ಬಾಯಿಯ ಮುಖಾಂತರ ನೀಡಲಾಗುತ್ತದೆ. ಪಶುಜನ್ಯ ಲಸಿಕೆಯಾಗಿದ್ದರೆ ಮೂರು ಬಾರಿ ಮತ್ತು ಮಾನವಜನ್ಯ ಲಸಿಕೆಯಾಗಿದ್ದರೆ ಎರಡು ಬಾರಿ ಮಗುವಿಗೆ ನೀಡಲಾಗುತ್ತದೆ. ಎರಡು ಡೋಸ್‌ಗಳ ನಡುವೆ ಕನಿಷ್ಠ ನಾಲ್ಕು ವಾರಗಳ ಅಂತರವಿರಬೇಕಾದುದು ಅತ್ಯವಶ್ಯ. ಆರು ವಾರಗಳ ವಯಸ್ಸಿನಲ್ಲಿ ಮಗುವಿಗೆ ಯಾವುದೇ ಕಾರಣದಿಂದ ಈ ಲಸಿಕೆಯನ್ನು ನೀಡಲು‌ ಸಾಧ್ಯವಾಗಿರದಿದ್ದರೆ ಹದಿನೈದು ವಾರಗಳ ಒಳಗೆ ಯಾವಾಗ ಬೇಕಾದರೂ ನೀಡಬಹುದು. ಹದಿನಾರು ವಾರಗಳ ನಂತರ ಮೊದಲ ಡೋಸ್ ಅನ್ನು ಮತ್ತು ಎಂಟು ತಿಂಗಳುಗಳ ನಂತರ ಕಡೆಯ ಡೋಸ್ ನೀಡಬಾರದು. ಈ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸದಿದ್ದರೆ ಪಾರ್ಶ್ವ ಪರಿಣಾಮಗಳು ಉಂಟಾಗುವ ಮತ್ತು ಲಸಿಕೆ ನಿರುಪಯುಕ್ತವಾಗುವ ಸಾಧ್ಯತೆ ಹೆಚ್ಚು.

ಪಾರ್ಶ್ವ ಪರಿಣಾಮಗಳೇನು?

ಸಾಮಾನ್ಯವಾಗಿ ರೋಟಾ ವೈರಾಣು ವಿರುದ್ಧದ ಲಸಿಕೆ ಅತ್ಯಂತ ಸುರಕ್ಷಿತ ಲಸಿಕೆಯಾಗಿದ್ದು, ಯಾವುದೇ ಗಂಭೀರ ಸ್ವರೂಪದ ಪಾರ್ಶ್ವ ಪರಿಣಾಮಗಳು ಇರುವುದಿಲ್ಲ. ತೀರಾ ಅಪರೂಪಕ್ಕೊಮ್ಮೆ ಕರುಳಿನೊಳಗೆ ಕರುಳು ತೂರಿಕೊಳ್ಳುವಂತಹ ಸಮಸ್ಯೆ ಉಂಟಾಗಬಹುದು ಮತ್ತು ನಿಗದಿತ ನಿಯಮಗಳನ್ನು ಪಾಲಿಸದಿದ್ದಾಗ ಇದರ ಸಂಭವನೀಯತೆ ಹೆಚ್ಚು.

ನಿರ್ಬಂಧಗಳಿವೆಯೇ?

ಜ್ವರ, ಕೆಮ್ಮು ಮುಂತಾದ ಯಾವುದೇ ಲಘು ಸ್ವರೂಪದ ಆರೋಗ್ಯ ಸಮಸ್ಯೆಗಳು ಲಸಿಕೆ ನೀಡಲು ಅಡಚಣೆಗಳಲ್ಲ. ಪೆಂಟಾವಲೆಂಟ್, ಪೋಲಿಯೊ ಮುಂತಾದ ಯಾವುದೇ ಲಸಿಕೆಯ ಜೊತೆಜೊತೆಯಲ್ಲಿ ಇದನ್ನು ಸುರಕ್ಷಿತವಾಗಿ ಬಳಸಬಹುದು. ಒಂದು ವೇಳೆ ಲಸಿಕೆಯನ್ನು ನೀಡಿದ ಕೂಡಲೇ ಮಗು ಉಗಿದರೆ ಅಥವಾ ವಾಂತಿಯ ರೂಪದಲ್ಲಿ ಕೊಂಚ ಲಸಿಕೆ ಹೊರಹಾಕಲ್ಪಟ್ಟರೆ ಲಸಿಕೆಯನ್ನು ಪುನರಾವರ್ತಿಸುವ ಅಗತ್ಯವಿರುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT